ಟೈಟಾನಿಕ್-2 ಹಡಗು ಬರ್ತಾಯಿದೆ, ಪ್ರಯಾಣ ಬೆಳೆಸಲು ಸಿದ್ಧರಾಗಿ
ವಾಷಿಂಗ್ಟನ್, ಫೆಬ್ರವರಿ, 11: ಹಡಗು ಪ್ರಯಾಣ ಪ್ರಿಯರಿಗೆ ಸಿಹಿ ಸುದ್ದಿ. ಪ್ರಪಂಚದ ಅತ್ಯಂತ ಸುಂದರ, ಐಷರಾಮಿ ಟೈಟಾನಿಕ್-2 ಎಂಬ ಹೊಸ ಹಡಗು ಸಿದ್ಧವಾಗುತ್ತಿದೆ. ಅಂದುಕೊಂಡಂತೆ ಎಲ್ಲಾ ಕಾರ್ಯಗಳು ನಡೆದರೆ 2018ರ ವೇಳೆಗೆ ಅದು ಚೀನಾದಿಂದ ದುಬೈಗೆ ತನ್ನ ಮೊದಲ ಪ್ರಯಾಣ ಆರಂಭಿಸಲಿದೆ.
ಟೈಟಾನಿಕ್ ಹಡಗು ಮುರಿದು 106 ವರ್ಷಗಳ ಬಳಿಕ ಆಸ್ಟ್ರೇಲಿಯಾದ ಶ್ರೀಮಂತ ಉದ್ಯಮಿ ಕ್ಲೈವ್ ಪಾಮರ್ ಅವರ ಬ್ಲೂಸ್ಟಾರ್ ಲೈನ್ ಕಂಪನಿ ಟೈಟಾನಿಕ್- 2 ಹಡಗಿನ ತಯಾರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಇದರಲ್ಲಿ ತಂತ್ರಜ್ಞಾನದಿಂದ ಹಿಡಿದು ಪ್ರತಿಯೊಂದರಲ್ಲಿಯೂ ಮೊದಲ ಟೈಟಾನಿಕ್ ಹಡಗಿಗಿಂತ ಹೆಚ್ಚಿನ ಭದ್ರತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೊಸದಾಗಿ ರೂಪುಗೊಳ್ಳುವ ಟೈಟಾನಿಕ್ ಹಡಗು ಟರ್ಕಿಶ್ ಸ್ನಾನ ಗೃಹ, ವ್ಯಾಯಾಮ ಶಾಲೆ, ಈಜುಕೊಳವನ್ನು ಒಳಗೊಳ್ಳಲಿದೆ ಎಂದು ಹಡಗಿನ ರೂಪುರೇಷೆ ಕುರಿತು ಉದ್ಯಮಿ ಕ್ಲೈವ್ ಪಾಮರ್ ಮಾಹಿತಿ ನೀಡಿದ್ದಾರೆ. [ಭಾರತೀಯ ನೌಕಾಪಡೆಯ ಐಎಫ್ಆರ್ ಸಂಭ್ರಮದ ಮಧುರ ಕ್ಷಣಗಳು]
ಮೊದಲ ಟೈಟಾನಿಕ್ ಹಡಗು 1912ರಲ್ಲಿ ಇಂಗ್ಲೆಂಡ್ ನ ಸೌತ್ ಹ್ಯಾಂಪ್ಟನ್ ನಿಂದ ನ್ಯೂಯಾರ್ಕ್ ಗೆ ಹೊರಟಿತ್ತು. ಆಗ ದೈತ್ಯಾಕಾರದ ಮಂಜುಗಡ್ಡೆಗೆ ಡಿಕ್ಕಿ ಹೊಡೆದು1500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಇದೀಗ ಹೊಸ ಟೈಟಾನಿಕ್ ಎಲ್ಲರಲ್ಲೂ ಬಹಳ ಕುತೂಹಲ, ನಿರೀಕ್ಷೆ ಹುಟ್ಟಿಸಿದ್ದು, ಅದನ್ನು ಕಾಣಲು ಪ್ರತಿಯೊಬ್ಬರು ಕಾತರರಾಗಿದ್ದಾರೆ. ಟೈಟಾನಿಕ್-2 ಹಡಗಿನ ರೂಪುರೇಷೆ ಹೀಗಿದೆ ನೋಡಿ.

ಟೈಟಾನಿಕ್- 2 ಹಡಗಿಗೆ ತಗಲು ವೆಚ್ಚ ಎಷ್ಟು?
ಟೈಟಾನಿಕ್-2 ಮೊದಲ ಹಡಗಿನ ರೂಪು ರೇಷೆಯನ್ನೇ ಒಳಗೊಳ್ಳಲಿದ್ದು, ಇದಕ್ಕೆ 3250 ಕೋಟಿ ರೂ ವೆಚ್ಚ ತಗಲುತ್ತದೆ ಎಂದು ಬ್ಲೂ ಸ್ಟಾರ್ ಲೈನ್ ಕಂಪನಿ ಹೇಳಿದೆ.

ಟೈಟಾನಿಕ್- 2 ಹಡಗಿನ ಎತ್ತರ?
ಟೈಟಾನಿಕ್- 2 ಹಡಗು 4,000 ಟನ್ ತೂಕವಿದ್ದು, ಇದು 270ಮೀ. ಉದ್ದ, 53ಮೀ. ಎತ್ತರವಿರುತ್ತದೆ. ಇದರ ನಿರ್ವಹಣೆ ಅಂದರೆ ಹಡಗಿನ ಚಾಲನೆ, ನಿರ್ವಹಣೆ, ಪ್ರಯಾಣಿಕರಿಗೆ ಸೇವೆ ಒದಗಿಸಲು 900 ನೌಕಾ ಸಿಬ್ಬಂದಿ ಇರುವರು.

ಟೈಟಾನಿಕ್- 2 ಹಡಗಿನಲ್ಲಿ ಎಷ್ಟು ಮಂದಿ ಪ್ರಯಾಣ ಬೆಳೆಸಬಹುದು?
ಟೈಟಾನಿಕ್- 2 ಹಡಗಿನಲ್ಲಿ ಸುಮಾರು 2400 ಮಂದಿ ಪ್ರಯಾಣ ಬೆಳೆಸಲು ಅವಕಾಶವಿದ್ದು, ಇದರಲ್ಲಿ 9 ಅಂತಸ್ತುಗಳು ಹಾಗೂ 840 ಕೋಣೆಗಳು ಇರಲಿವೆ.

ಮೊದಲ ಟೈಟಾನಿಕ್ ಗಿಂತ ಹೆಚ್ಚಿನ ಭದ್ರತೆ ಇರಲಿದೆ?
ಟೈಟಾನಿಕ್ 2 ಹಡಗು ಹೆಚ್ಚಿನ ಸೆಟಲೈಟ್ ನಿಯಂತ್ರಣಗಳು, ಡಿಜಿಟಲ್ ದಿಕ್ಸೂಚಿ, ರಾಡಾರ್ ವ್ಯವಸ್ಥೆ ಒಳಗೊಳ್ಳಲಿದೆ. ಸಾವಿರಕ್ಕೂ ಹೆಚ್ಚು ಲೈಫ್ ಜಾಕೆಟ್ ಗಳು ಇರುತ್ತವೆ. ಆಧುನಿಕ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಮೊದಲ, ಎರಡನೇ, ಮೂರನೇ ದರ್ಜೆಯ ಕೋಣೆಗಳು ಮೊದಲ ಟೈಟಾನಿಕ್ ಹಡಗಿನ ರೂಪವನ್ನು ಹೋಲುತ್ತದೆ.












Click it and Unblock the Notifications