ಆಸ್ಟ್ರೇಲಿಯಾದಲ್ಲಿ ಅಚ್ಚರಿ; ಮೂರು ಕಣ್ಣಿನ ಹಾವು ಪತ್ತೆ, ಆದರೆ...
ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ಈಚೆಗೆ ಹೆದ್ದಾರಿಯೊಂದರಲ್ಲಿ ಮೂರು ಕಣ್ಣಿನ ಹಾವು ಪತ್ತೆಯಾಗಿದೆ. ಅದರ ಫೋಟೋಗಳು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ. ಮೂರು ಕಣ್ಣಿರುವ ಹಾವಿನ ಫೋಟೋಗಳನ್ನು ನಾರ್ಥನ್ ಟೆರಿಟರಿ ಪಾರ್ಕ್ಸ್ ಮತ್ತು ವೈಲ್ಡ್ ಲೈಫ್ ತನ್ನ ಫೇಸ್ ಬುಕ್ ನಲ್ಲಿ ಬುಧವಾರ ಹಂಚಿಕೊಂಡಿದ್ದು, ಅದೀಗ ಆನ್ ಲೈನ್ ನಲ್ಲಿ ವೈರಲ್ ಆಗಿದೆ.
ಈ ಹಾವಿಗೆ ಮೂರು ತಿಂಗಳು ಆಗಿರುವಾಗ ಕಳೆದ ಮಾರ್ಚ್ ನಲ್ಲಿ ಸಿಕ್ಕಿತ್ತು. ಇದು ಕಂಡುಹಿಡಿದ ಒಂದೇ ವಾರಕ್ಕೆ ದುರದೃಷ್ಟವಶಾತ್ ಮೃತಪಟ್ಟಿತು. ಈ ಹಾವು ಅರ್ನ್ ಹೆಮ್ ಹೆದ್ದಾರಿಯಲ್ಲಿ ಪತ್ತೆಯಾಗಿತ್ತು. ಅದು ಬದುಕುವ ಎಲ್ಲ ಸಾಧ್ಯತೆ ಇತ್ತು. ಆದರೆ ಆಹಾರ ಸೇವಿಸಲು ಅದು ವಿಫಲವಾದ ಹಿನ್ನೆಲೆಯಲ್ಲಿ ಕಳೆದ ವಾರ ಮೃತಪಟ್ಟಿತು ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಮೂರನೇ ಕಣ್ಣು ಕೂಡ ಕೆಲಸ ನಿರ್ವಹಿಸುತ್ತಿತ್ತು. ಅದು ಸಹಜವಾಗಿಯೇ ರೂಪುಗೊಂಡಂತೆ ಇತ್ತು. ಎಕ್ಸ್ ರೇಯಲ್ಲಿ ಗೊತ್ತಾದ ಸಂಗತಿ ಏನೆಂದರೆ, ಇದಕ್ಕೆ ಪ್ರತ್ಯೇಕವಾದ ಎರಡು ತಲೆ ಇರಲಿಲ್ಲ. ಅದರ ಬದಲಿಗೆ ಒಂದೇ ತಲೆಯಿತ್ತು. ಆದರೆ ಕೆಲಸ ನಿರ್ವಹಿಸುತ್ತಿದ್ದ ಮೂರು ಕಣ್ಣುಗಳು ಇದ್ದವು ಎನ್ನಲಾಗಿದೆ.
ಈ ಫೇಸ್ ಬುಕ್ ಪೋಸ್ಟ್ ಗೆ ಎಂಟು ಸಾವಿರಕ್ಕೂ ಹೆಚ್ಚು ಕಾಮೆಂಟ್ಸ್ ಬಂದಿದ್ದು, ಹದಿಮೂರು ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. "ಈ ರೀತಿ ವಿಲಕ್ಷಣವಾಗಿ ಜನ್ಮ ತಳೆಯುವ ಹಾವುಗಳು ಸಾಮಾನ್ಯ" ಎಂದು ವನ್ಯಜೀವಿ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಅಕ್ಟೋಬರ್ ನಲ್ಲಿ ಕೆಂಟುಕಿಯ ದಂಪತಿಗೆ ಎರಡು ತಲೆಯ ಹಾವು ಕಂಡುಬಂದಿತ್ತು.












Click it and Unblock the Notifications