ಮೊದಲ ಕಪ್ಪು ರಂಧ್ರಕ್ಕೆ 'ಪೊವೇಹಿ' ಎಂದು ನಾಮಕರಣ
ಹವಾಯಿ, ಏಪ್ರಿಲ್ 13: ಜಗತ್ತಿನಾದ್ಯಂತ ಸಂಚಲನ ಮೂಡಿಸಿರುವ ಕಪ್ಪುಕುಳಿಯ ಮೊದಲ ಚಿತ್ರಕ್ಕೆ 'ಪೊವೇಹಿ' ಎಂದು ನಾಮಕರಣ ಮಾಡಲಾಗಿದೆ.
ಈ ಯೋಜನೆಯಲ್ಲಿ ಗಗನಯಾತ್ರಿಗಳ ಜತೆಗೆ ಕೆಲಸ ಮಾಡಿದ್ದ ಹವಾಯಿಯ ಪ್ರೊಫೆಸರ್ ಲಾರಿ ಕಿಮುರಾ ಈ ನಾಮಕರಣ ಮಾಡಿದ್ದಾರೆ.
'ಪೊವೇಹಿ' ಎನ್ನುವುದು ಹವಾಯಿ ಪದವಾಗಿದ್ದು, ಸೃಷ್ಟಿಯ ಕುರಿತಾದ ಕಥೆಯನ್ನು ವಿವರಿಸುವ 18ನೇ ಶತಮಾನದ ಹವಾಯ್‌ನ ಮಂತ್ರ 'ಕುಮುಲಿಪೊ'ದಲ್ಲಿ ಇದರ ಉಲ್ಲೇಖವಿದೆ. ಇದು ಎರಡು ಪ್ರತ್ಯೇಕ ಪದಗಳಿಂದ ಹುಟ್ಟಿರುವುದು. 'ಪೊ' ಎಂದರೆ ಅಂತ್ಯವಿಲ್ಲದ ಸೃಷ್ಟಿಯ ಅಗಾಧ ಕತ್ತಲಿನ ಮೂಲ. 'ವೇಹಿ' ಎನ್ನುವುದು ಮಂತ್ರದಲ್ಲಿ 'ಪೊ'ವನ್ನು ವಿವರಿಸಿರುವ ಹಲವು ಬಗೆಗಳಲ್ಲಿ ಒಂದು.

'ಕುಮುಲಿಪೊ'ದ 2,102 ಸಾಲುಗಳಲ್ಲಿ ಜಪಿಸುವ ಅಮೂಲ್ಯ ಪರಂಪರೆಯ ಪದವನ್ನು ನಮ್ಮ ಇಂದಿನ ಜೀವನದೊಳಗೆ ತರುವ ಮೂಲಕ ಪುರಾತನ ಸಂಸ್ಕೃತಿಯೊಂದಕ್ಕೆ ಬೆಸೆದುಕೊಳ್ಳುತ್ತಿರುವುದಕ್ಕೆ ಹವಾಯಿಯನ್ನನಾಗಿ ಹೆಮ್ಮೆಯಾಗುತ್ತಿದೆ ಎಂದು ಹವಾಯಿ ವಿಶ್ವವಿದ್ಯಾಲಯದ ಪ್ರೊಫೆಸರ್ ಕಿಮುರಾ ತಿಳಿಸಿದ್ದಾರೆ.
'ಕಪ್ಪು ರಂಧ್ರಕ್ಕೆ ಹವಾಯಿಯ ಹೆಸರನ್ನು ಇರಿಸುವ ಅವಕಾಶ ದೊರೆತಿದ್ದು ನನ್ನ ಸೌಭಾಗ್ಯ. ಈ ಹೆಸರು ಹೆಚ್ಚು ಅರ್ಥಪೂರ್ಣವಾಗಿ ನನಗೆ ಕಂಡಿದೆ. ಹವಾಯಿ ಗಗನಯಾತ್ರಿಗಳಿಂದ ಭವಿಷ್ಯದಲ್ಲಿಯೂ ಕಪ್ಪು ರಂಧ್ರಗಳಿಗೆ ನಾಮಕರಣ ಮಾಡಲು ನಮಗೆ ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ' ಎಂದು ಹೇಳಿದ್ದಾರೆ.












Click it and Unblock the Notifications