ಹನುಮಾನ್ ಚಾಲೀಸಾ ಶರವೇಗದಲ್ಲಿ ಪಠಿಸಿ ಕನ್ನಡಿಗರು ಸೇರಿ ಭಾರತೀಯರ ಮನಗೆದ್ದ ಅಮೆರಿಕದ ವ್ಯಕ್ತಿ! ವಿಡಿಯೋ ವೈರಲ್
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ, ಇದೀಗ ಅಮೆರಿಕದ ಟೆಕ್ಸಾಸ್ ಮೂಲದ ವ್ಯಕ್ತಿಯೊಬ್ಬರು ಹಿಂದೂಗಳ ಪವಿತ್ರ ಸ್ತೋತ್ರವಾದ ಹನುಮಾನ್ ಚಾಲೀಸಾವನ್ನ ಅತ್ಯಂತ ವೇಗವಾಗಿ ಮತ್ತು ಸ್ಪಷ್ಟವಾಗಿ ಪಠಿಸಿರುವ ವಿಡಿಯೋವೊಂದು ಸೋಶಿಯಲ್ ಮಿಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಮೆರಿಕದವರ ಈ ಭಕ್ತಿ ಮತ್ತು ಉಚ್ಚಾರಣೆಯ ಸ್ಪಷ್ಟತೆ ಕಂಡು ಭಾರತೀಯರು ಮೂಕವಿಸ್ಮಿತರಾಗಿದ್ದಾರೆ.
ಯಾರು ಈ ನಿಕ್ ಡಿಯರ್ಮನ್?
ಅಮೆರಿಕದ ಟೆಕ್ಸಾಸ್‌ನಲ್ಲಿ ಜನಿಸಿರುವ ನಿಕ್ ಡಿಯರ್ಮನ್ (Nick Dearman) ವೃತ್ತಿಯಲ್ಲಿ ಒಬ್ಬ ಸಮಗ್ರ ಆರೋಗ್ಯ ತರಬೇತುದಾರರಾಗಿದ್ದಾರೆ (Holistic health coach). ಇವರು ತಮ್ಮನ್ನು ತಾವು ಕಟ್ಟಾ ಹನುಮ ಭಕ್ತ ಎಂದು ಕರೆದುಕೊಳ್ಳುತ್ತಾರೆ.

ಕಳೆದ ತಿಂಗಳು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದ ಅವರು, "ಇಂದು ಬೆಳಿಗ್ಗೆ ನಾನು ಎದ್ದೇಳುವುದು ಸ್ವಲ್ಪ ತಡವಾಯಿತು. ಹೀಗಾಗಿ ನಾನು ಹನುಮಾನ್ ಚಾಲೀಸಾದ ಸ್ಪೀಡಾಗಿ ಪಠಿಸಬೇಕಾಗಿದೆ, ನೀವೂ ನನ್ನೊಂದಿಗೆ ಕೈಜೋಡಿಸಿ" ಎಂದು ಹೇಳಿದ್ದಾರೆ. ಬಳಿಕ ಅವರು ಶರವೇಗದಲ್ಲಿ, ಯಾವುದೇ ತಪ್ಪುಗಳಿಲ್ಲದೆ, ಅಚ್ಚುಕಟ್ಟಾಗಿ ಹನುಮಾನ್ ಚಾಲೀಸಾವನ್ನ ಪಠಿಸಿದ್ದಾರೆ. ಅವರ ಈ ನಿರರ್ಗಳ ಪಠಣ ನೋಡುಗರನ್ನ ಬೆರಗುಗೊಳಿಸಿದೆ.
ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ
ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದು, ಬರೋಬ್ಬರಿ 1.4 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನ ಪಡೆದುಕೊಂಡಿದೆ. ಅಲ್ಲದೆ, 2 ಲಕ್ಷಕ್ಕೂ ಅಧಿಕ ಕಾಮೆಂಟ್‌ಗಳು ಬಂದಿವೆ. ಬಹುತೇಕ ಭಾರತೀಯರು ನಿಕ್ ಅವರ ಭಕ್ತಿಗೆ ತಲೆದೂಗಿದ್ದಾರೆ. "ಬಿಳಿಯ ವ್ಯಕ್ತಿಯೊಬ್ಬರು ಹನುಮಾನ್ ಚಾಲೀಸಾ ಪಠಿಸುವುದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಇವರು ನನಗಿಂತಲೂ ಉತ್ತಮವಾಗಿ ಹನುಮಾನ್ ಚಾಲೀಸಾ ಪಠಿಸುತ್ತಾರೆ" ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ನಿಮ್ಮ ಭಕ್ತಿ ನೋಡಿ ನನ್ನ ಹೃದಯ ತುಂಬಿಬಂತು" ಎಂದು ಅನೇಕರು ಶ್ಲಾಘಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ ನಿಕ್, "ನನ್ನ ಆರಾಧ್ಯ ದೈವ, ನನ್ನೆಲ್ಲಾ ಭಕ್ತಿಪೂರ್ವಕ ಪೂಜೆಯ ಕೇಂದ್ರ ಹನುಮಂತ" ಎಂದು ಹೇಳಿಕೊಂಡಿದ್ದಾರೆ.
ಹನುಮಾನ್ ಚಾಲೀಸಾ ಎಂದರೇನು? ಅದರ ಮಹತ್ವವೇನು?
ಹನುಮಾನ್ ಚಾಲೀಸಾ ಎನ್ನುವುದು ಭಗವಾನ್ ಹನುಮಂತನಿಗೆ ಸಮರ್ಪಿತವಾದ ಹಿಂದೂ ಭಕ್ತಿ ಸ್ತೋತ್ರವಾಗಿದೆ. ರಾಮಾಯಣದ ಪ್ರಮುಖ ವ್ಯಕ್ತಿ ಮತ್ತು ಶ್ರೀರಾಮನ ಪರಮ ಭಕ್ತನಾದ ಹನುಮಂತನನ್ನು ಇದರಲ್ಲಿ ಸ್ತುತಿಸಲಾಗಿದೆ. ಕವಿ-ಸಂತ ತುಳಸಿದಾಸ್ ಅವರು ಅವಧಿ ಭಾಷೆಯಲ್ಲಿ ರಚಿಸಿರುವ ಈ ಸ್ತೋತ್ರದಲ್ಲಿ 40 ಚೌಪಾಯಿಗಳು (ನಾಲ್ಕು ಸಾಲುಗಳ ಪದ್ಯಗಳು) ಇವೆ. 'ಚಾಲೀಸ್' ಎಂದರೆ ಹಿಂದಿಯಲ್ಲಿ ನಲವತ್ತು ಎಂದರ್ಥ. ಈ ಸ್ತೋತ್ರದ ಮೂಲಕ ಭಕ್ತರು ಹನುಮಂತನ ಶಕ್ತಿ, ಧೈರ್ಯ, ಭಕ್ತಿ ಮತ್ತು ದೈವಿಕ ಗುಣಗಳನ್ನ ಹೊಗಳಿ, ಆತನ ರಕ್ಷಣೆಗಾಗಿ ಪ್ರಾರ್ಥಿಸುತ್ತಾರೆ.
ಸಂಕಷ್ಟದಲ್ಲಿ ರಕ್ಷಿಸಿದ ಹನುಮಾನ್ ಚಾಲೀಸಾ
ಇದೇ ವೇಳೆ ಹನುಮಾನ್ ಚಾಲೀಸಾದ ಶಕ್ತಿಗೆ ಸಂಬಂಧಿಸಿದ ಮತ್ತೊಂದು ರೋಚಕ ಘಟನೆ ಬೆಳಕಿಗೆ ಬಂದಿದೆ. ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ 'ಫ್ಲೈದುಬೈ' ವಿಮಾನದ ಸಹ-ಪೈಲಟ್‌ನಿಂದ ಚಾಕು ಇರಿತಕ್ಕೊಳಗಾಗಿ ಗಾಯಗೊಂಡಿದ್ದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ.
ಈ ಭಾವನಾತ್ಮಕ ಸಂಭಾಷಣೆಯಲ್ಲಿ, ವಿಮಾನದಲ್ಲಿ ಆ ಕಷ್ಟಕರ ಪರಿಸ್ಥಿತಿಯನ್ನ ಎದುರಿಸುವಾಗ ತಾವು ಹನುಮಾನ್ ಚಾಲೀಸಾವನ್ನ ಪಠಿಸುತ್ತಿದ್ದೆ ಎಂದು ಅವರು ನೆನಪಿಸಿಕೊಂಡಿದ್ದಾರೆ. "ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ಹನುಮಾನ್ ಚಾಲೀಸಾವನ್ನ ಮಾತ್ರ ಹೇಳುತ್ತೇನೆ.
ಆ ಘಟನೆಯ ಸಮಯದಲ್ಲೂ ನಾನು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ. ಹನುಮಂತ ಕೇವಲ ದೇವರಲ್ಲ, ಆತ ನನ್ನ ರಕ್ಷಕ" ಎಂದು ಸ್ಮಿತ್ ಮಚ್ಚರ್ ಮೋದಿಯವರ ಬಳಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.


Click it and Unblock the Notifications
