Elon Musk : ಟ್ವಿಟರ್ ಮಂಡಳಿಗೆ ಸೇರುವುದಿಲ್ಲ ಟೆಸ್ಲಾ ಸಿಇಓ ಎಲೋನ್ ಮಸ್ಕ್
ನವದೆಹಲಿ, ಏಪ್ರಿಲ್ 11: ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಟ್ವಿಟರ್ ಮಂಡಳಿಯ ಭಾಗವಾಗಿರುವುದಿಲ್ಲ ಎಂದು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪರಾಗ್ ಅಗರವಾಲ್ ಹೇಳಿದ್ದಾರೆ. ಕಳೆದ ವಾರವಷ್ಟೇ ಎಲೋನ್ ಮಸ್ಕ್ ಟ್ವಿಟರ್ ಮಂಡಳಿಯ ಭಾಗವಾಗಲಿದ್ದಾರೆ ಎಂದು ಘೋಷಿಸಿದ್ದರು.
ಒಂದು ವಾರದಲ್ಲೇ ತಮ್ಮ ನಿರ್ಧಾರವನ್ನು ಬದಲಿಸಿರುವ ಬಗ್ಗೆ ಪರಾಗ್ ಅಗರವಾಲ್, ಎಲೋನ್ ಮಸ್ಕ್ ಟ್ವಿಟರ್ ಮಂಡಳಿಯ ಭಾಗವಾಗಿ ಇರುವುದಿಲ್ಲ, ಆದರೆ ಟ್ವಿಟ್ಟರ್ ಅನ್ನು ಮುನ್ನಡೆಸುವ ನಿಟ್ಟಿನಲ್ಲಿ ಅವರೂ ಸಹ ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ ಎಂದರು. "ಎಲೋನ್ ನಮ್ಮ ಅತಿದೊಡ್ಡ ಷೇರುದಾರರಾಗಿದ್ದಾರೆ. ಅವರ ಸಲಹೆ ಸೂಚನೆಗಳಿಗೆ ನಾವು ಮುಕ್ತವಾಗಿರುತ್ತೇವೆ," ಎಂದು ಅಗರವಾಲ್ ಟ್ವೀಟ್ ಮಾಡಿದ್ದಾರೆ.
"ನಮ್ಮ ಮಂಡಳಿಗೆ ಸೇರದಿರಲು ಎಲೋನ್ ಮಸ್ಕ್ ನಿರ್ಧರಿಸಿದ್ದಾರೆ. ಅಸಲಿಗೆ ಏನಾಯಿತು ಎಂಬುದರ ಕುರಿತು ನಾನು ಇಲ್ಲಿ ಹಂಚಿಕೊಳ್ಳುತ್ತೇನೆ. ಮಂಡಳಿಗೆ ಎಲೋನ್ ಸೇರ್ಪಡೆಯ ಬಗ್ಗೆ ನಾನು ಮತ್ತು ಅವರ ಜೊತೆ ಅನೇಕ ಬಾರಿ ನೇರವಾಗಿ ಚರ್ಚಿಸಿದ್ದೇನೆ. ಅಪಾಯವನ್ನು ನಿವಾರಿಸಿ ಸಹಕಾರ ನೀಡುವುದಕ್ಕೆ ನಾವು ಉತ್ಸುಕರಾಗಿದ್ದೇವೆ. ಎಲ್ಲಾ ಮಂಡಳಿಯ ಸದಸ್ಯರಂತೆ ಅವರು ಕಂಪನಿಯ ಮತ್ತು ನಮ್ಮ ಎಲ್ಲಾ ಷೇರುದಾರರ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾದ ಕಂಪನಿಯ ವಿಶ್ವಾಸಾರ್ಹರಾಗಿ ಎಲೋನ್ ಅವರನ್ನು ಹೊಂದಿರುವುದು ಉತ್ತಮ ಮಾರ್ಗವಾಗಿದೆ ಎಂದು ನಾವು ನಂಬಿದ್ದೇವೆ. ಈ ಹಿನ್ನೆಲೆ ಮಂಡಳಿಯಲ್ಲಿ ಅವರಿಗೊಂದು ಸ್ಥಾನವನ್ನು ನೀಡಲು ಬಯಸಿದ್ದೇವು," ಎಂದು ಅಗರವಾಲ್ ಟ್ವೀಟ್ ಮಾಡಿದ್ದಾರೆ.

ಟ್ವಿಟ್ಟರ್ ಮಂಡಳಿಗೆ ಸೇರುವುದಿಲ್ಲ ಎಲೋನ್:
"ಟ್ವಿಟ್ಟರ್ ಮಂಡಳಿಗೆ ಎಲೋನ್ ಮಸ್ಕ್ ಸೇರ್ಪಡೆಯಿಂದ ಅಧಿಕೃತವಾಗಿ 4/9 ಪರಿಣಾಮಕಾರಿ ಆಗಬೇಕಿತ್ತು, ಆದರೆ ಅದೇ ದಿನ ಬೆಳಗ್ಗೆ ಎಲೋನ್ ಅವರು ತಾವು ಮಂಡಳಿಗೆ ಸೇರುವುದಿಲ್ಲ ಎಂದು ಘೋಷಿಸಿದರು. ಇದು ಅತ್ಯುತ್ತಮವಾದ ಬೆಳವಣಿಗೆ ಎಂದು ನಾನು ನಂಬುತ್ತೇನೆ. ನಮ್ಮ ಷೇರುದಾರರು ನಮ್ಮ ಬೋರ್ಡ್‌ನಲ್ಲಿದ್ದರೂ, ಇಲ್ಲದಿದ್ದರೂ ನಾವು ಯಾವಾಗಲೂ ಅವರ ಸಲಹೆ ಸೂಚನೆಗಳು ಮೌಲ್ಯಯುತವಾಗಿರುತ್ತೇವೆ. ಎಲೋನ್ ನಮ್ಮ ಅತಿದೊಡ್ಡ ಷೇರುದಾರರಾಗಿದ್ದಾರೆ. ಅವರ ಅಭಿಪ್ರಾಯಗಳನ್ನು ನಾವು ಮುಕ್ತವಾಗಿ ಸ್ವೀಕರಿಸುತ್ತೇವೆ," ಎಂದು ಟ್ವಿಟ್ಟರ್ ಸಿಇಓ ಪರಾಗ್ ಅಗರವಾಲ್ ಹೇಳಿದ್ದಾರೆ.
ಟ್ವಿಟ್ಟರ್ ಬಗ್ಗೆ ಎಲೋನ್ ಮಸ್ಕ್ ಹೇಳಿದ್ದೇನು?:
ಇತ್ತೀಚಿನ ಸರಣಿ ಟ್ವೀಟ್‌ಗಳಲ್ಲಿ ಬ್ಲೂ ಬಳಕೆದಾರರಿಗೆ ಎಲೋನ್ ಮಸ್ಕ್ ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ. ಟ್ವೀಟ್‌ಗಳಲ್ಲಿ ಅತಿಹೆಚ್ಚು ಫಾಲೋವರ್ಸ್ ಅನ್ನು ಹೊಂದಿರುವವರು ತೀರಾ ಕಡಿಮೆ ಟ್ವೀಟ್ ಮಾಡುವುದರಿಂದ ಟ್ಟಿಟ್ಟರ್ ಹಿಂದೆ ಬೀಳುತ್ತಿದೆ ಎಂದು ಟೆಸ್ಲಾ ಸಿಇಓ ಮಸ್ಕ್ ಹೇಳಿದ್ದಾರೆ.

"ಮುಂದೆ ಸಾಕಷ್ಟು ಗೊಂದಲಗಳಿದ್ದರೂ, ನಮ್ಮ ಗುರಿ ಮತ್ತು ಆದ್ಯತೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ನಾವು ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ಅದನ್ನು ಹೇಗೆ ಕಾರ್ಯಗತಗೊಳಿಸುತ್ತೇವೆ ಎಂಬುದು ನಮ್ಮ ಕೈಯಲ್ಲಿದೆಯೇ ವಿನಃ ಬೇರೆಯವರ ಕೈಯಲ್ಲಿ ಇರುವುದಿಲ್ಲ," ಎಂದು ಇತ್ತೀಚಿನ ಬೆಳವಣಿಗೆಗಳನ್ನು ಪರಿಗಣಿಸಿ ಟ್ವಿಟ್ಟರ್ ಸಿಇಓ ಪರಾಗ್ ಅಗರವಾಲ್ ಹೇಳಿದರು. ಎಲೋನ್ ಮಸ್ಕ್ ಅವರು ಕಂಪನಿಯ ಅತಿದೊಡ್ಡ ಷೇರುದಾರರೇ ಆಗಿದ್ದರೂ ಸಹ ಟ್ವಿಟರ್ ಯಾವುದೇ ರೀತಿ ಬದಲಾವಣೆಗಳನ್ನು ತರುವುದಿಲ್ಲ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ ಎಂದಿದ್ದಾರೆ.
ಶೇ.14.90ರಷ್ಟು ಷೇರು ಹೊಂದುವಂತಿಲ್ಲ:
ಟ್ವಿಟರ್ ಮಂಡಳಿಯ ಸದಸ್ಯರಾಗಿ ಹಾಗೂ ಗುಂಪಿಗೆ ಸೇರ್ಪಡೆಯಾದ ನಂತರದಲ್ಲಿ ಎಲೋನ್ ಮಸ್ಕ್ ಒಬ್ಬರೇ ಶೇ.14.90ಕ್ಕಿಂತ ಹೆಚ್ಚು ಷೇರುಗಳನ್ನು ಹೊಂದುವುದಕ್ಕೆ ಅನುಮತಿ ನೀಡಲಾಗುವುದಿಲ್ಲ. 80 ಮಿಲಿಯನ್ ಟ್ವಿಟರ್ ಅನುಯಾಯಿಗಳನ್ನು ಹೊಂದಿರುವ ಮಸ್ಕ್, ಸುಮಾರು 3 ಬಿಲಿಯನ್ ಡಾಲರ್ ಮೌಲ್ಯದ 73.5 ಮಿಲಿಯನ್ ಷೇರುಗಳನ್ನು ಖರೀದಿಸಿದ್ದರು.












Click it and Unblock the Notifications