Taiwan VS China: ತೈವಾನ್ ವಿರುದ್ಧ ಸಿಡಿದೆದ್ದ ಚೀನಾ ಸೇನೆ, ಸೈಲೆಂಟ್ ಸೈಲೆಂಟ್ ಅಂತು ಅಮೆರಿಕ!
ದಕ್ಷಿಣ ಚೀನಾ ಸಮುದ್ರದ ಪರಿಸ್ಥಿತಿ ದಿನದಿನಕ್ಕೂ ಮತ್ತಷ್ಟು ಸೂಕ್ಷ್ಮವಾಗುತ್ತಿದೆ. ಅದರಲ್ಲೂ ತೈವಾನ್ ಮತ್ತು ಚೀನಾ ನಡುವೆ ಬೆಂಕಿ ಹೊತ್ತಿಕೊಂಡಿದ್ದು, ಇಬ್ಬರ ಶತ್ರುತ್ವ ಆತಂಕವನ್ನ ಸೃಷ್ಟಿಮಾಡಿದೆ. ಕಿಡಿ ಬಿದ್ದಾಗಲೇ ತೈವಾನ್ ಉಪಾಧ್ಯಕ್ಷರಾದ ವಿಲಿಯಂ ಲಾಯ್ ಅಮೆರಿಕಗೆ ಭೇಟಿ ನೀಡುತ್ತಿದ್ದು, ಈ ಬಗ್ಗೆ ಆಕ್ರೋಶಗೊಂಡ ಚೀನಾ ತೈವಾನ್ ಸುತ್ತಮುತ್ತ ಮತ್ತೆ ಸೇನಾ ಕವಾಯತು ಆರಂಭಿಸಿದೆ. ಇದು ಯುದ್ಧದ ಮುನ್ಸೂಚನೆ ನೀಡಿದಂತಿದೆ.
ಹೌದು, ತೈವಾನ್ ಅಮೆರಿಕದ ಜೊತೆ ಸ್ನೇಹ ಅಥವಾ ಸಂಬಂಧ ಬೆಸೆಯಲು ಮುಂದಾದರೆ ತಕ್ಷಣ ಚೀನಾ ಪ್ರತಿಕ್ರಿಯೆ ನೀಡುತ್ತದೆ. ಅದರಲ್ಲೂ ದ್ವೀಪ ರಾಷ್ಟ್ರ ತೈವಾನ್ ಸುತ್ತಮುತ್ತಲು ತನ್ನ ಸೇನೆ ನುಗ್ಗಿಸುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಮತ್ತಷ್ಟು ಭೀಕರವಾಗಿದ್ದು, ಚೀನಾ ಸಮುದ್ರಗಸ್ತು ಪಡೆ, ನೌಕಾಪಡೆ & ವಾಯುಪಡೆ ಕವಾಯತು ಆರಂಭಿಸಿದೆ. ಚೀನಾ ಸೇನೆಯ ಈಸ್ಟರ್ನ್ ಥಿಯೇಟರ್ ಕಮಾಂಡ್ ವಕ್ತಾರ ಶಿ ಇಯಿ ಖಡಕ್ ಎಚ್ಚರಿಕೆ ಕೊಟ್ಟಿದ್ದು, ಅಮೆರಿಕ ಮತ್ತು ತೈವಾನ್ ನಡುವಿನ ಸಂಬಂಧಕ್ಕೆ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಇದೀಗ ಚೀನಾದ ಈ ನಡೆ ತೈವಾನ್ ನಾಯಕರಲ್ಲಿ ಭಯ ಹುಟ್ಟಿಸಿದೆ.

ತೈವಾನ್ ವಿರುದ್ಧ ಚೀನಾ ತಯಾರಿ ಭರ್ಜರಿ
ಈಗ ಚೀನಾ ತನ್ನ ಶತ್ರು ತೈವಾನ್ ವಿರುದ್ಧ ಗುಡುಗುತ್ತಿರುವ ರೀತಿಯೇ ಭಯ ಹುಟ್ಟಿಸಿದೆ. ಅದರಲ್ಲೂ ತೈವಾನ್ ಸುತ್ತ ನುಗ್ಗಿಸಿರುವ ಯುದ್ಧ ನೌಕೆಗಳು ಹಾಗೂ ಯುದ್ಧ ವಿಮಾನಗಳ ಪರಿಸ್ಥಿತಿ ಇನ್ನೂ ಭಯಾನಕ. ಕ್ಷಿಪಣಿಗಳಿಂದ ಸಜ್ಜುಗೊಂಡ ನೌಕೆ ಹಾಗೂ ಯುದ್ಧವಿಮಾನ ಸಮರಾಭ್ಯಾಸದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಖಡಕ್ ರಿಯಾಕ್ಷನ್ ಕೊಟ್ಟಿರುವ ತೈವಾನ್, ತಾವು ಕೂಡ ಯುದ್ಧಕ್ಕೆ ಸಿದ್ಧ ಎಂಬ ರೀತಿ ಮೆಸೇಜ್ ಕೊಟ್ಟಿದೆ. ತೈವಾನ್ ಜಲಸಂಧಿಯಲ್ಲಿ ಚೀನಾ ಸೇನೆ ಪ್ರಚೋದನಕಾರಿ ನಡೆಯನ್ನ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಯುದ್ಧ ವಿಮಾನ ಮತ್ತು ಸಮರನೌಕೆ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದಿದೆ ತೈವಾನ್.
ಸೈಲೆಂಟ್ ಸೈಲೆಂಟ್ ಅಂತು ಅಮೆರಿಕ!
ಚೀನಾ ಸೇನೆ ಈಗ ತೈವಾನ್‌ಗೆ ಖಡಕ್ ವಾರ್ನಿಂಗ್ ಕೊಡುವಾಗಲೇ ಅಮೆರಿಕ ಮಧ್ಯಪ್ರವೇಶ ಮಾಡಿದೆ. ತಾಳ್ಮೆ ವಹಿಸುವಂತೆ ಎರಡೂ ದೇಶಗಳಿಗೆ ಸಲಹೆ ನೀಡಿದೆ ಅಮೆರಿಕ. ಇದರ ಜೊತೆ ತೈವಾನ್ ಉಪಾಧ್ಯಕ್ಷ ಲಾಯ್ ಅಮೆರಿಕ ಭೇಟಿ ಸಾಮಾನ್ಯ ಪ್ರಯಾಣವಾಗಿತ್ತು ಎಂದಿದೆ. ಆದರೆ ಚೀನಾ ಮತ್ತೆ ವಾರ್ನಿಂಗ್ ಕೊಟ್ಟಿದ್ದು, ತೈವಾನ್‌ಗೆ ಎಚ್ಚರಿಕೆ ಕೊಡುವ ಉದ್ದೇಶಕ್ಕೆ ಇದೀಗ ತೈವಾನ್ ಸುತ್ತಲೂ ತನ್ನ ಸೇನೆ ನಿಯೋಜಿಸಿ ಕವಾಯತು ನಡೆಸುತ್ತಿದೆ. ಎರಡೂ ದೇಶಗಳ ಮಧ್ಯೆ ಈ ಉದ್ವಿಗ್ನ ಸ್ಥಿತಿ ಯುದ್ಧ ವಾತಾವರಣ ಸೃಷ್ಟಿಸುತ್ತಿರುವ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಎಚ್ಚರಿಕೆ ಕೊಟ್ಟಿದ್ದ ಚೀನಾ
ತೈವಾನ್ ಬಗ್ಗೆ ಅಮೆರಿಕ ಅಥವಾ ಅಮೆರಿಕ ಸ್ನೇಹಿತರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಚೀನಾ ಸದಾ ವಿರೋಧ ವ್ಯಕ್ತಪಡಿಸುತ್ತಿದೆ. ಜೊತೆಗೆ ತೈವಾನ್ ವಿಚಾರ ಪ್ರಸ್ತಾಪ ಮಾಡುತ್ತಲೇ ಚೀನಾದ ವಿರುದ್ಧ ಷಡ್ಯಂತ್ರ ಹೆಣೆಯುತ್ತಿರುವ ಆರೋಪವನ್ನು ಕೂಡ ಚೀನಾ ಮಾಡಿತ್ತು. ಈ ಹೊತ್ತಲ್ಲೇ ತೈವಾನ್ ಬಗ್ಗೆ ಮತ್ತೊಮ್ಮೆ ತನ್ನ ನಿಲುವನ್ನು ಚೀನಾ ಬಹಿರಂಗಪಡಿಸಿತ್ತು. ರಷ್ಯಾ ರಾಜಧಾನಿ ಮಾಸ್ಕೋದ ಕುಬಿಂಕಾದಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಭದ್ರತೆ ಕುರಿತಾದ 11ನೇ ಮಾಸ್ಕೋ ಸಮ್ಮೇಳನದಲ್ಲಿ ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್ಫು ನೇರ ಸಂದೇಶ ನೀಡಿದ್ದರು. ಆ ನಂತರ ತೈವಾನ್ ಸಮುದ್ರದಲ್ಲಿ ಈ ಬೆಳವಣಿಗೆ ನಡೆದಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ.

ಒಟ್ನಲ್ಲಿ ಅಮೆರಿಕ ಮತ್ತು ತೈವಾನ್ ಸ್ನೇಹ ಚೀನಾಗೆ ಸಿಟ್ಟು ತರಿಸುತ್ತಿದ್ದು, ಎಚ್ಚರಿಸುತ್ತಿದೆ. ಅಮೆರಿಕ ಸೇನೆ ತೈವಾನ್ ಪರ ನಿಂತಿದೆ. ಚೀನಾ ಅದೇ ವಿಚಾರ ಹಿಡಿದು ತೈವಾನ್ ನಾಯಕರಿಗೆ ಎಚ್ಚರಿಕೆ ನೀಡುತ್ತಿದೆ. ಬೀಜಿಂಗ್ (Beijing) ಪದೇ ಪದೆ ತೈವಾನ್‌ಗೆ ಎಚ್ಚರಿಕೆ ನೀಡುತ್ತಲೇ ಬಂದಿದೆ. ಇದೇ ಸಂದರ್ಭದಲ್ಲಿ ತೈವಾನ್‌ಗೆ ಅಮೆರಿಕ ಸಹಾಯ ಮಾಡುತ್ತಾ, ವ್ಯಾಪಾರದಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿದೆ. ಚೀನಾ ಮೈಕೊಡವಿ ನಿಂತು ಯುದ್ಧಕ್ಕೆ ಸಿದ್ಧ ಎಂಬ ಸಂದೇಶ ಕಳುಹಿಸಿದೆ. ಮುಂದೆ ಏನಾಗುತ್ತೋ ಕಾದು ನೋಡಬೇಕಿದೆ.












Click it and Unblock the Notifications