ಬೀದಿ ನಾಯಿಯೊಂದು ಬಾಹ್ಯಾಕಾಶದಲ್ಲಿ ಜೀವ ತೆತ್ತ ಕಥೆ: ಪ್ರವರ ಕೊಟ್ಟೂರು ಬರಹ
ಬೀದಿ ನಾಯಿಯೊಂದು ಬಾಹ್ಯಾಕಾಶದಲ್ಲಿ ಜೀವ ತೆತ್ತ ಕಥೆ ಬರಹಗಾರ ಪ್ರವರ ಕೊಟ್ಟೂರು ಅವರ ಬರಹ ಇಲ್ಲಿದೆ. ಎರಡನೆ ಮಹಾಯುದ್ಧದ ಕಾರಣ ಜಗತ್ತು ಸಾಕಷ್ಟು ಸಾವು, ನೋವುಗಳ ಅನುಭವಿಸಿಯಾಗಿತ್ತು. ಹಿಟ್ಲರ್‌ನ ಸಾವಿನ ನಂತರದ ಜರ್ಮನಿ ಸೋಲಿನ ಕಾರಣದಿಂದಾಗಿ ಶತ್ರು ರಾಷ್ಟ್ರಗಳಿಗೆ ವಿರೋಧಿಯಾಗಿ ಉಳಿದಿರಲಿಲ್ಲ. ಹಾಗಾದರೆ ಜಗತ್ತನ್ನು ಮುಂದಿನ ದಿನಗಳಲ್ಲಿ ಆಳಬಹುದಾದ ಶಕ್ತಿ ಯಾರಿಗಿದೆ ? ತಂತ್ರಜ್ಞಾನ ಯಾರ ಬಳಿ ಇದೆಯೋ ಅವರೇ ಜಗತ್ ಜಟ್ಟಿಗಳು ಅವರ ಮುಂದೆ ಮಿಕ್ಕೆಲ್ಲರ ಮೀಸೆ ಮಣ್ಣಾದಂತೆಯೇ.
ಅಮೆರಿಕಾ ಮತ್ತು ರಷ್ಯಾಗಳ ಹೊರತಾಗಿ ಮಿಕ್ಕೆಲ್ಲವು ಯುದ್ಧದಿಂದಾದ ಗಾಯಗಳಿಗೆ ಮುಲಾಮು ಹಚ್ಚಿಕೊಳ್ಳುವಲ್ಲಿ ನಿರತರಾದರೆ, ಇನ್ನೊಂದಷ್ಟು ದೇಶಗಳು ಸ್ವಾತಂತ್ರ ಸಿಕ್ಕು ತಮ್ಮದೇ ರೀತಿಯಲ್ಲಿ ಅಭಿವೃದ್ದಿ ಹೊಂದುವ ಕಡೆ ಗಮನ ಹರಿಸುತ್ತಿದ್ದವು. ಹಿರೋಷಿಮಾ - ನಾಗಸಾಕಿ ಮೇಲೆ ಅಣುಬಾಂಬ್ ಉದುರಿಸಿ ಲಕ್ಷಗಟ್ಟಲೇ ಜನಗಳನ್ನು ಕ್ಷಣಮಾತ್ರದಲ್ಲೇ ನಿರ್ನಾಮವಾಗಿಸಿದ ಅಮೆರಿಕ ಆ ಕ್ಷಣದವರೆಗೂ ದೊಡ್ಡಣ್ಣ ಅಂತಲೇ ಬೀಗುತ್ತಿತ್ತು. ನೋಡು ನೋಡುತ್ತಿದ್ದಂತೆ 1957ರಲ್ಲಿ ರಷ್ಯಾ ಮೊತ್ತ ಮೊದಲಬಾರಿಗೆ ʼಸ್ಪುಟ್ನಿಕ್ʼ ಎಂಬ ಹೆಸರಿನ ಮಾನವ ನಿರ್ಮಿತ ಉಪಗ್ರಹವೊಂದನ್ನು ಬಾಹ್ಯಾಕಾಷಕ್ಕೆ ಕಳಿಸಿಬಿಟ್ಟಿತು.

ಹೋ ನೆಲದ ಮೇಲೆ ನಾವು ಪಾರುಪಥ್ಯ ಸಾಧಿಸಿದರೆ ಇವರು ಆಕಾಶಕ್ಕೆ ಲಗ್ಗೆ ಇಡುತ್ತಿದ್ದಾರೆ ಅಂತ ಅಮೆರಿಕಾ ಕೈ ಕೈ ಹಿಸುಕಿಕೊಂಡಿತು. ವಿಮಾನದ ಮೂಲಕ ನಾವು ಅಣುಬಾಂಬುಗಳ ಎಸೆದರೆ ಇವರು ರಾಕೇಟಿನ ಮೂಲಕ ಅಣುಬಾಂಬುಗಳ ಎಸೆದಾರು ಅಂತ ಒಳಗೊಳಗೆ ಭಯಪಡಲಿಕ್ಕೆ ಶುರುವಿಟ್ಟರು. ಕಳಿಸಿದ್ದ ʼಸ್ಪುಟ್ನಿಕ್ʼ ಬಾಹ್ಯಾಕಾಶದಿಂದ ಒಂದಷ್ಟು ಸಿಗ್ನಲ್ಲುಗಳ ಕಳಿಸಿ ಇಡೀ ಜಗತ್ತನ್ನು ತನ್ನತ್ತ ತಿರುಗಿನೋಡುವಂತೆ, ತನ್ನ ಬಗ್ಗೆಯೇ ಮಾತನಾಡುವಂತೆ ಮಾಡಿತು. ರಷ್ಯಾ ತನ್ನ ಮೊದಲ ಯಶಸ್ಸನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಯೋಚನೆಯಲ್ಲಿತ್ತು. ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳಿಸಿದರೆ ಹೇಗೆ ? ಎಂಬ ಆಲೋಚನೆ ಮಾಡಲಿಕ್ಕೆ ಶುರುವಿಟ್ಟಿತು. ಅಲ್ಲಿ ಗುರುತ್ವವಿಲ್ಲ, ಆಮ್ಲಜನಕವಿಲ್ಲ ಇಂಥದ್ದೊಂದು ಅಪರಿಚಿತ ಜಾಗಕ್ಕೆ ಮನುಷ್ಯರನ್ನು ಕಳಿಸುವ ಮೊದಲು ಬೇರೆ ಪ್ರಾಣಿಗಳ ಕಳಿಸಿ ಪ್ರಯೋಗ ಮಾಡಬೇಕು ಅಂತನ್ನೊ ಅಲೋಚನೆ ಶುರುವಾಯ್ತು. ಯೋಜ್ದ್ ಆಫ್ಸ್ಕಿ ಈ ಹಿರಿದಾದ ಯೋಜನೆಯ ಸಾರಥ್ಯ ವಹಿಸಿಕೊಳ್ಳುತ್ತಾನೆ. ಇದು ಹಿಂದಿನ ಯೋಜನೆಯ ಮುಂದುವರಿದ ಭಾಗವಾದ್ದರಿಂದ ʼಸ್ಪುಟ್ನಿಕ್-೨ʼ ಎಂಬ ಹೆಸರಿಂದ ಕರೆದರು.
ಮೊದಲು ಮಂಗಗಳ ಬಗ್ಗೆ ಯೋಚನೆ ಬಂತಾದರೂ ಅವುಗಳನ್ನು ಟ್ರೇನ್ ಮಾಡುವುದು ಅಷ್ಟು ಸುಲಭದ ಕೆಲಸವಂತೂ ಅಲ್ಲ, ಹಾಗಾದರೆ ಬೇರಾವ ಪ್ರಾಣಿಗಳನ್ನು ಕಳಿಸಬಹುದು ಎಂಬ ಪ್ರಶ್ನೆ ಎದುರಾದಾಗ ನೆನಪಾಗಿದ್ದೇ ಶ್ವಾನಗಳು. ಅವುಗಳನ್ನು ಬಲು ಬೇಗ ಪಳಗಿಸಬಹುದು ಹೇಳಿದಂತೆ ಕೇಳುವ ಹಾಗೆ ಮಾಡುವುದು ಬಲು ಸುಲಭ. ಇದಕ್ಕಾಗಿ ನಾಯಿಗಳ ಹುಡುಕಾಟದಲ್ಲಿ ತೊಡಗಿದರು. ಸಾಕು ನಾಯಿಗಳಿಗಿಂತ ಬೀದಿನಾಯಿಗಳಾದರೆ ಬಾಹ್ಯಾಕಾಶಕ್ಕೆ ಕಳಿಸುವುದು ಹೆಚ್ಚು ಸೂಕ್ತ, ಯಾಕೆಂದರೆ ಅವುಗಳು ಹೆಚ್ಚು ಕಾಲ ಹಸಿವೆ ತಡೆದುಕೊಂಡಿರಬಲ್ಲವು, ಹೆಚ್ಚೆಚ್ಚು ಒತ್ತಡಕ್ಕೆ ಒಳಗಾಗಬಲ್ಲವು, ತಾಪಮಾನ ಆಚೀಚೆಯಾದರೂ ತಡೆದುಕೊಳ್ಳುವ ಸಾಮರ್ಥ್ಯ ಉಳ್ಳವು.
ಅಂದುಕೊಂಡ ಹಾಗೆ ಮೊದಲಿಗೆ ಎಲ್ಲಾ ರೀತಿಯಿಂದಲೂ ಯೋಗ್ಯವಾಗಿರುವ ಮೂರು ನಾಯಿಗಳ ಪ್ರಯೋಗಾಲಯಕ್ಕೆ ತರಲಾಗುತ್ತದೆ. ಈ ಬಾಹ್ಯಾಕಾಶ ಯೋಜನೆಗೆ ಹೆಣ್ಣು ಶ್ವಾನವನ್ನೇ ಬಳಸಲು ಹಲವು ಕಾರಣಗಳಿದ್ದವು ಅವುಗಳಲ್ಲಿ ಹೆಣ್ಣು ಶ್ವಾನಗಳು ಗಂಡು ಶ್ವಾನಗಳಿಗೆ ಹೋಲಿಸಿದರೆ ಕೊಂಚ ಶಾಂತ ಸ್ವಭಾವದವು, ಸುಲಭವಾಗಿ ಟ್ರೇನ್ ಮಾಡಬಹುದು, ಅವುಗಳ ಆಲೋಚನ ಕ್ರಮ, ಕಷ್ಟಕರ ಸಂದರ್ಭಗಳಲ್ಲಿ ಸ್ಥೈರ್ಯ ಕಳೆದುಕೊಳ್ಳದೇ ಇರುವುದು ಹೀಗೆ. ಈ ಶ್ವಾನಗಳನ್ನು ಸಾಕಷ್ಟು ವೇಗದಲ್ಲಿ ಹೋಗುವ ರಾಕೇಟ್ ಗಳು, ಶೂನ್ಯ ಗುರುತ್ವ, ಸೆಂಟ್ರಿಫ್ಯೂಗಲ್ ಫೋರ್ಸ್(ಸಾಕಷ್ಟು ವೇಗವಾಗಿ ವೃತ್ತಾಕಾರದಲ್ಲಿ ತಿರುಗಿಸುವುದು) ಹೀಗೆ ಹಲವು ರೀತಿಯಲ್ಲಿ ಪ್ರಯೋಗಕ್ಕೊಳಪಡಿಸಲಾಯ್ತು. ಅದರಲ್ಲಿ ಅತ್ಯಂತ ಗಮನಾರ್ಹ ರೀತಿಯಲ್ಲಿ ಸ್ಪಂದಿಸಿ ಮೊದಲಿಗೆ ಆಯ್ಕೆ ಆಗಿದ್ದು ʼಅಲೆನʼ ಎಂಬ ನಾಯಿ.
ಈ ಯೋಜನೆಯ ರುವಾರಿಯಾದ ಯೋಜ್ದ್ ಆಫ್ಸ್ಕಿ ಗೆ ಇಲ್ಲಿಂದ ಕಳಿಸುವ ಶ್ವಾನ ಜೀವಂತವಾಗಿ ವಾಪಾಸು ಬರಲಾರದು ಅಂತ ಮನಗಂಡಿದ್ದ. ಆದರೂ ಅನೂಹ್ಯವಾಗಿರುವ ಅಪರಿಚಿತ ಬಾಹ್ಯಾಕಾಶಕ್ಕೆ ಶ್ನಾನದಂಥಾ ಪ್ರಾಣಿಯನ್ನು ಕಳಿಸಿ ಅದರಿಂದ ಸಿಕ್ಕುವ ಫಲಿತಾಂಶ ಮುಂದೆ ಕಳಿಸಲಿರುವ ಮನುಷ್ಯರನ್ನು ವಾಪಾಸು ಕರೆತರಲು ಸಹಕಾರಿಯಾದೀತು ಎನ್ನುವುದು ಅವನ ಯೋಚನೆ. ಎರಡು ತಿಂಗಳ ನಂತರ ಅಲೆನ ಮೂರು ಮರಿಗಳಿಗೆ ಜನ್ಮವಿಟ್ಟಿತು. ಅಲೆನಳನ್ನು ರಾಕೇಟಿನಲ್ಲಿ ಕಳಿಸಿ ಮರಿಗಳನ್ನು ಅನಾಥ ಮಾಡುವುದು ಕ್ರೌರ್ಯವೆಂದು ಯೋಚಿಸಿದ ಯೋಜ್ದ್ ನಂತರ ಸ್ಥಾನದಲ್ಲಿದ್ದ ʼಲೈಕಾʼಳನ್ನು ಯೋಜನೆಗೆ ಆಯ್ಕೆ ಮಾಡುತ್ತಾನೆ.
ಲೈಕಾ ಸ್ವಭಾವದಲ್ಲಿ ಬಲು ಸಾಧು, ಹಸಿವನ್ನು ಆರಾಮಾಡಿ ತಡೆದುಕೊಳ್ಳಬಲ್ಲ ಒಟ್ಟಿನಲ್ಲಿ ಒರಟು ಒರಟಾದ ವಾತಾವರಣಕ್ಕೆ ಹೊಂದಿಕೊಳ್ಳಬಲ್ಲ ಶ್ವಾನ. ʼಸ್ಪುಟ್ನಿಕ್-೨ʼ ನಿಗಧಿತ ಕಕ್ಷೆಯನ್ನು ಸೇರಿದ ನಂತರ ಭೂಮಿಯನ್ನು ಸೆಕೆಂಡಿಗೆ ಎಂಟು ಕಿಲೋಮೀಟರ್ ಅಂದರೆ ಒಂದು ಗಂಟೆಗೆ ಹದಿನೆಂಟು ಸಾವಿರ ಕಿಲೋಮೀಟರ್ ವೇಗವಾಗಿ ಸುತ್ತು ಹಾಕಬೇಕು. ಅಂದುಕೊಂಡಂತೆ ಅದನ್ನು ವಾಪಾಸು ಕರೆತರಬೇಕು. ಆದರೆ ಇದೆಲ್ಲದರ ನಂತರ ಆಹಾರದ ಸಮಸ್ಯೆಯಾಗಿಯೋ, ಉಸಿರಾಟದ ತೊಂದರೆ, ವಿಕಿರಣದ ಸಮಸ್ಯೆಯಾಗಿಯೋ ʼಲೈಕಾʼ ಜೀವಂತವಾಗಿ ವಾಪಾಸು ಬರಲಾರಳು ಎಂಬುಂದು ಮನದಟ್ಟಾಗಿದ್ದ ಯೋಜ್ದ್ ಕೊನೆಯದಾಗಿ ʼಲೈಕಾʼಳಿಗೆ ಕುಟುಂಬದ ಪ್ರೀತಿ ಸಿಕ್ಕಬೇಕೆನ್ನುವ ಕಾರಣಕ್ಕೆ ಎಲ್ಲಾ ನಿಯಮಗಳ ನಡುವೆಯೂ ಮನೆಗೆ ಕರೆದೊಯ್ದು ಮಕ್ಕಳೊಟ್ಟಿಗೆ ಆಡಲು ಬಿಡುತ್ತಾನೆ. ಅದಕ್ಕೆ ತಾನು ಭೂಮಿ ಗುರುತ್ವ ದಾಟಿಕೊಂಡು ಆಕಾಶಕ್ಕೆ ಹೋಗುತ್ತೇನೆ ಎಂಬುವ ಯಾವುದೇ ಅಂದಾಜು ಇಲ್ಲದೇ ಬಲು ಖುಷಿಯಿಂದ ಅಲ್ಲಿ ಕೊನೆಯ ಖುಷಿಯ ಚಣಗಳ ಕಳೆಯುತ್ತದೆ.
ನವೆಂಬರ್ ಮೂರು ಐವತ್ತೇಳು ರಾಕೇಟ್ ಗಗನಕ್ಕೆ ಚಿಮ್ಮುವ ಕಾಲ ನಿಗಧಿಪಡಿಸುತ್ತಾರೆ. ಭೂಮಿಯ ಗುರುತ್ವ ಮೀರಿ ಹಾರುವುದಂದರೆ ಅಷ್ಟು ಸುಲಭದ ಮಾತಲ್ಲ, ಸಾವಿರಾರು ಲೀಟರ್ ಇಂಧನ ಉರಿಸಬೇಕಾಗುತ್ತದೆ ಗುರುತ್ವ ವಿಮೋಚನ ವೇಗದಲ್ಲಿ(ಎಸ್ಕೇಪ್ ವೆಲಾಸಿಟಿ) ಆಕಾಶಕ್ಕೆ ಹಾರಬೇಕಾಗುತ್ತದೆ. ಈ ಸಮಯದಲ್ಲಿ ಏನು ಬೇಕಾದರೂ ಘಟಿಸಬಹುದು. ಒಂದು ಸಣ್ಣ ಅಚಾತುರ್ಯವಾದರೂ ಇಡೀ ಯೋಜನೆ ಬೂದಿಯಾಗುತ್ತದೆ. ಜಗತ್ತು ತನ್ನೆಡೆ ತಿರುಗಿ ನೋಡುವಂತೆ ಮಾಡಬೇಕಾದಲ್ಲಿ, ಅಮೆರಿಕಾಗೆ ಸೆಡ್ಡು ಹೊಡೆದು ನಿಲ್ಲಬೇಕಾದಲ್ಲಿ ಜೀವಿಯೊಂದನ್ನು ಬಾಹ್ಯಾಕಾಶದಲ್ಲಿ ಕೂಡಿಸಲು ಈ ಯೋಜನೆ ಅತೀ ಮಹತ್ವದ್ದು.
ಲೈಕಾಳನ್ನು ಬಾಹ್ಯಕಾಶಕ್ಕೆ ಸೇರಿಸಿದ ಮೇಲೆ ಅವಳು ಜೀವಂತವಿದ್ದಾಳೆ ಎಂಬುದನ್ನು ಖಾತ್ರಿ ಮಾಡಿಕೊಳ್ಳುವ ಸಲುವಾಗಿ ಒಂದು ವಿಶೇಷವಾದ ಸೂಟ್ ಅನ್ನು ತಯಾರಿಸಲಾಗುತ್ತದೆ. ಹೆಚ್ಚು ಆಚೀಚೆ ಅಲುಗಾಡದಂತೆ ವ್ಯವಸ್ಥೆ ಮಾಡಲಾಗಿದೆ. ಪ್ರಯಾಣದ ದಿನಗಳ ಮುಗಿಸಿ ವಾಪಾಸುಬರುವವರೆಗೂ ಅಷ್ಟೂ ದಿನಗಳಿಗೆ ಸಾಕಾಗುವಷ್ಟು ಆಹಾರ ನೀರಿನ ವ್ಯವಸ್ಥೆ, ಅದು ವಿಸರ್ಜಿಸಿದ್ದನ್ನು ಸಂಗ್ರಹಿಸುವ ಚೀಲವೂ ವಿಶೇಷ ಸೂಟಿಗೆ ಅಟ್ಯಾಚ್ ಮಾಡಲಾಗಿದೆ. ಭವಿಷ್ಯದಲ್ಲಿ ಮನುಷ್ಯ ಬಾಹ್ಯಾಕಾಶ ಯಾನ ಮಾಡಬೇಕಾದಲ್ಲಿ ಲೈಕಾ ಅಲ್ಲಿಂದ ಕಳಿಸುವ, ಹೊತ್ತು ತರುವ ಫಲಿತಾಂಶ ಅತೀ ಮುಖ್ಯವಾದ್ದು. ಅಲ್ಲಿನ ಶೂನ್ಯ ಗುರುತ್ವ, ಅಪಾಯಕಾರಿ ವಿಕಿರಣಗಳು, ಶಾಖ ಹೀಗೆ ಹಲವು ವಿಷಯಗಳನ್ನು ಅರಿಯಲು ಇದೊಂದು ಮಹತ್ತರ ಹೆಜ್ಜೆ.
ಆಕಾಶಕ್ಕೆ ಮುಖ ಮಾಡಿ ನಿಂತಿರುವ ರಾಕೇಟಿನ ತುದಿಯಲ್ಲಿ ಲೈಕಾ ಒಂಟಿಯಾಗಿ ಮುದುಡಿ ಕೂತಿದ್ದಾಳೆ. ಸುಮಾರು ಐದು ಇಂಚಿನಷ್ಟು ದುಂಡನೆಯ ಕಿಡಕಿಯಲ್ಲಿ ಕೊನೆಯ ಬಾರಿ ಭೂಮಿಯನ್ನು ನೋಡುತ್ತಿದ್ದಾಳೆ. ಭಯಾನಕವಾದ ಜ್ವಾಲೆಗಳ ಉಗುಳುತ್ತಾ ರಾಕೇಟ್ ಯಾವುದೇ ಅಡೆತಡೆ ಇಲ್ಲದೇ ಜಿಗಿಯುತ್ತದೆ. ʼಸ್ಪುಟ್ನಿಕ್-೨ʼ ಸೇರಬೇಕಾದ ಕಕ್ಷೆಯನ್ನು ಆರಾಮವಾಗಿ ಸೇರುತ್ತದೆ. ರಷ್ಯಾ ತಾನು ಸಾಧಿಸಿದ ಮಹಾತ್ಕಾರ್ಯನ್ನು ಜಗತ್ತಿಗೆ ತಿಳಿಯುವಂತೆ ಗಟ್ಟಿಯಾಗಿ ಘೋಷಿಸುತ್ತದೆ. ಎಲ್ಲಾ ಮಾಧ್ಯಮಗಳಲ್ಲಿ ಈ ಸುದ್ದಿ ಜಗಮಗಿಸುತ್ತದೆ. ರಷ್ಯಾದ ಇಂಥದ್ದೊಂದು ಸಾಧನೆಯನ್ನು ಅಮೆರಿಕಾದ ಹೊರತು ಮಿಕ್ಕೆಲ್ಲ ರಾಷ್ಟ್ರಗಳು ಹಾಡಿ ಹೊಗಳುತ್ತವೆ. ಮಾನವನ ಇತಿಹಾಸದಲ್ಲೇ ಮೊದಲ ಬಾರಿಗೆ ಜೀವಂತ ಪ್ರಾಣಿಯೊಂದನ್ನು ಬಾಹ್ಯಾಕಾಶಕ್ಕೆ ಕಳಿಸಿದ್ದು ಸಾಮಾನ್ಯ ವಿಷಯವೇನು ಆಗಿರಲಿಲ್ಲ.
ಒಟ್ಟು ನೂರ ಅರವತ್ತೆರಡು ದಿನಗಳು, ಎರಡುವರೆ ಸಾವಿರ ಸಲ ಭೂಮಿಯನ್ನು ಸುತ್ತು ಹಾಕಿದ ನಂತರ ಸ್ಪುಟ್ನಿಕ್ ವಾಪಾಸು ಬರುವಾದ ಭೂಮಿಯ ವಾತಾವರಣದೊಟ್ಟಿಗೆ ಘರ್ಷಣೆ ಉಂಟಾಗಿ ಉರಿದು ಹೋಗುತ್ತದೆ. ಆಗಿನ್ನೂ ಪ್ಯಾರಾಚೂಟ್ ಗಳ ಮೂಲಕ ಕ್ಯಾಪ್ಸೂಲ್‌ಗಳ ವಾಪಾಸು ತರುವ ತಂತ್ರಜ್ಞಾನ ಇರಲಿಲ್ಲ. ರಾಕೇಟಿನ ಭಾಗಗಳ ಉರಿದು ಉಳಿದ ಭಾಗಗಳು ದೂರ ದೂರಕ್ಕೆ ಹೋಗಿ ಬೀಳುತ್ತದೆ.
ಕಳಿಸಿದ್ದ ಶ್ವಾನ ಎಷ್ಟು ದಿನ ಜೀವಂತವಾಗಿತ್ತು ಎಂದು ಕೇಳಲು ಹಲವಾರು ದಿನಗಳ ಕಾಲ ಜೀವಂತವಾಗಿಯೇ ಇತ್ತು. ಆಮ್ಲಜನಕ ಮುಗಿದು ಹೋಗಿ ಕೊನೆಗೆ ಅಸು ನೀಗಿದ್ದು ಎಂದು ಹೇಳುತ್ತಾರೆ. ಅಸಲಿಗೆ ಕಳಿಸಿದ ಏಳೆಂಟು ಗಂಟೆಗಳಲ್ಲೇ ಥರ್ಮಲ್ ಶೀಲ್ಡ್ ಸರಿಯಾಗಿ ಕೆಲಸ ಮಾಡದ ಕಾರಣಕ್ಕೆ ಶಾಖ ಹೆಚ್ಚಾಗಿ ಸಾವಿಗೀಡಾಗುತ್ತದೆ. ಅದರ ಹೃದಯ ಬಡಿತ ಅರಿಯಿವ ಸಲುವಾಗಿ ಅಳವಡಿಸಿದ್ದ ಸಾಧನವಾಗಲೇ ಸಿಗ್ನಲ್ ಕಳಿಸುವುದನ್ನು ನಿಲ್ಲಿಸಿ, ಲೈಕಾಳ ಸಾವಿನ ಸುದ್ದಿ ಮುಟ್ಟಿಸಿತ್ತು (ಲೈಕಾಳ ಸಾವಿನ ನಿಜವಾದ ವಿಷಯವನ್ನು 2002 ರಲ್ಲಿ ಬಿಚ್ಚಿಡುತ್ತಾರೆ).
ಸ್ವಾರ್ಥಕ್ಕಾಗಿ ಒಂದು ಪ್ರಾಣಿಯನ್ನು ನಿರ್ದಯವಾಗಿ ಬಾಹ್ಯಕಾಶ ಪ್ರಯೋಗದಲ್ಲಿ ಕೊಂದುಬಿಟ್ಟಿರಿ ಎಂದು ಜಗತ್ತಿನ ಹಲವು ಕಡೆ ರಷ್ಯಾದ ವಿರುದ್ಧ ಪ್ರತಿಭಟನೆ ಮಾಡಲಾಯ್ತು. ಲೈಕಾ ಜೀವಂತವಾಗಿ ಉಳಿದ ಅಷ್ಟೂ ಸಮಯವೂ ಮನುಷ್ಯ ಕುಲಕ್ಕೆ ಬೇಕಿದ್ದ ಸಾಕಷ್ಟು ವಿಷಯಗಳನ್ನು ಪಡೆಯುವಲ್ಲಿ ಸಹಕಾರಿಯಾಗಿದ್ದಳು. ಇಂಥದ್ದೊಂದು ಮಹಾಯಾನದಲ್ಲಿ ಬಲಿಯಾದ ಲೈಕಾ ಳ ಹೆಸರಿನಲ್ಲಿ ರಷ್ಯಾ ಅಂಚೆಚೀಟಿಯನ್ನು ಬಿಡುಗಡೆ ಮಾಡಿ ನೆನಪಿಸಿಕೊಂಡಿತು.












Click it and Unblock the Notifications