ಭಾರತ ಸೇರಿ 7 ದೇಶಗಳಿಗೆ ಉಚಿತ ಪ್ರವಾಸಿ ವೀಸಾ ನೀಡಲು ಶ್ರೀಲಂಕಾ ಸರ್ಕಾರ ತೀರ್ಮಾನ- ಯಾವ ದೇಶಗಳು ತಿಳಿಯಿರಿ
ಕೊಲೊಂಬೊ, ಅಕ್ಟೋಬರ್ 24: ಭಾರತ ಸೇರಿದಂತೆ ಜಗತ್ತಿನ ಆರು ದೇಶಗಳಿಗೆ ಉಚಿತ ಪ್ರವಾಸಿ ವೀಸಾ ನೀಡಲು ಶ್ರೀಲಂಕಾ ಸರ್ಕಾರ ತೀರ್ಮಾನಿಸಿದೆ. ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ ದೇಶಗಳ ಪ್ರಯಾಣಿಕರಿಗೆ ಐದು ತಿಂಗಳ ಕಾಲ ಉಚಿತ ವೀಸಾ ನೀಡುವ ಪ್ರಸ್ತಾವನೆಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಈ ವಿಚಾರವನ್ನು ಶ್ರೀಲಂಕಾದ ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಮಂಗಳವಾರ ಬಹಿರಂಗಪಡಿಸಿದ್ದಾರೆ.

ಸಬ್ರಿ ಪ್ರಕಾರ, ಉಚಿತ ವೀಸಾ ಪ್ರಯಾಣವು ಪ್ರಾಯೋಗಿಕ ಯೋಜನೆಯಾಗಿ ತಕ್ಷಣದಿಂದಲೇ ಜಾರಿಗೆ ಬರಲಿದೆ. ಇದು ಮಾರ್ಚ್ 31 ರ ವರೆಗೆ ಮುಂದುವರಿಯುತ್ತದೆ.
ಶ್ರೀಲಂಕಾದ ಪ್ರವಾಸೋದ್ಯಮ ಸಚಿವಾಲಯದ ಪ್ರಕಾರ, ದೇಶಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುವುದು ಈ ಕ್ರಮದ ಉದ್ದೇಶವಾಗಿದೆ.
'ಮುಂಬರುವ ವರ್ಷಗಳಲ್ಲಿ ಪ್ರವಾಸಿಗರ ಆಗಮನವನ್ನು ಐದು ಮಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ' ಎಂದು ಸಚಿವಾಲಯವು ಹೇಳಿದೆ.
ಈ ಕ್ರಮವು ಪ್ರಯಾಣಿಕರಿಗೆ ವೀಸಾ ಪಡೆಯಲು ಖರ್ಚು ಮಾಡುವ ಹಣ ಮತ್ತು ಸಮಯವನ್ನು ಉಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕಳೆದ ವಾರ, ಐದು ದೇಶಗಳ ಪ್ರಯಾಣಿಕರಿಗೆ ಉಚಿತ ಪ್ರವಾಸಿ ವೀಸಾವನ್ನು ನೀಡುವ ಪ್ರಸ್ತಾವನೆಯನ್ನು ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವಾಲಯವು ಘೋಷಿಸಿತು.
ಕ್ಯಾಬಿನೆಟ್ ತೀರ್ಮಾನವನ್ನು ಅನ್ನು ಶ್ರೀಲಂಕಾದ ಪ್ರಧಾನಿ ದಿನೇಶ್ ಗುಣವರ್ಧನಾ, ಪ್ರವಾಸೋದ್ಯಮ ಮತ್ತು ಭೂ ಸಚಿವ ಹರಿನ್ ಫೆರ್ನಾಂಡೋ, ಸಾರ್ವಜನಿಕ ಭದ್ರತಾ ಸಚಿವ ತಿರಾನ್ ಅಲ್ಲೆಸ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಅಲಿ ಸಬ್ರಿ ಜಂಟಿಯಾಗಿ ಮಂಡಿಸಿದ್ದಾರೆ ಎಂದು ವರದಿಯಾಗಿದೆ.
ಮುಂದಿನ ದಿನಗಳಲ್ಲಿ ದೇಶದ ಹೆಚ್ಚಿನ ಪ್ರವಾಸಿ ತಾಣಗಳಿಗೆ ಇ-ಟಿಕೆಟಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ಸಂಪುಟವು ಪ್ರಸ್ತಾಪಿಸಿದೆ ಎಂದು ಸಚಿವಾಲಯ ತಿಳಿಸಿದೆ. ಈ ಕುರಿತು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.












Click it and Unblock the Notifications