‘ಕಿಮ್’ ನೀನು ಕೆಮ್ಮಂಗಿಲ್ಲ ಅಂತಿದ್ದಾರೆ ದಕ್ಷಿಣ ಕೊರಿಯಾ ಅಧ್ಯಕ್ಷ!
ಅದೇನು ದ್ವೇಷವೋ.. ಅದೆಷ್ಟು ಆಕ್ರೋಶವೋ.. ಒಟ್ನಲ್ಲಿ ದಕ್ಷಿಣ ಕೊರಿಯಾ & ಉತ್ತರ ಕೊರಿಯಾ ಕಿತ್ತಾಟ ಜಗತ್ತನ್ನ ವಿನಾಶದ ಅಂಚಿಗೆ ತಳ್ಳುತ್ತಿದೆ. ಒಂದು ಕಡೆ ಉಕ್ರೇನ್ ಮತ್ತು ರಷ್ಯಾ ಹಲ್ಲು ಕಚ್ಚಿಕೊಂಡು ಒಬ್ಬರ ಮೆಲೊಬ್ಬರು ಬಾಂಬ್ & ಕ್ಷಿಪಣಿ ಎಸೆಯುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ನಡುವೆ ಮುಕ್ಕಾಲು ಶತಮಾನದ ನಂತರ ಭೀಕರ ಯುದ್ಧ ಮತ್ತೊಮ್ಮೆ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇಟ್ಟ ಬೆಂಕಿಯ ಕಿಡಿ ಈಗ ಜ್ವಾಲೆ ಸ್ವರೂಪ ಪಡೆಯುತ್ತಿದೆ. ರಷ್ಯಾಗೆ ಸರ್ವಾಧಿಕಾರಿ ಭೇಟಿ ಕೊಟ್ಟು ಬಂದ ನಂತರ ದಕ್ಷಿಣದ ಭಾಗ ಉರಿದು ಬೀಳುತ್ತಿದೆ. ಎಲ್ಲಿ ನಮ್ಮ ಮೇಲೆ ಕಿಮ್ ಜಾಂಗ್ ಉನ್ ದಾಳಿ ಮಾಡ್ತಾನೋ ಅಂತಾ ದಕ್ಷಿಣ ಕೊರಿಯಾ ರೊಚ್ಚಿಗೆದ್ದಿದೆ. ಅದರಲ್ಲೂ ತನ್ನ ಸೇನಾ ದಿನಾಚರಣೆಯ ದಿನ ಭರ್ಜರಿ ಪರೇಡ್ ನಡೆಸಿದ್ದ ದಕ್ಷಿಣ ಕೊರಿಯಾ, ಇದೀಗ ನೇರವಾಗಿ ಕಿಮ್‌ಗೆ ಖಡಕ್ ಉತ್ತರ ಕೊಟ್ಟಿದೆ. ದಕ್ಷಿಣ ಕೊರಿಯಾ ಅಧ್ಯಕ್ಷರು, 'ಕಿಮ್' ನೀನು ಕೆಮ್ಮಂಗಿಲ್ಲ ಅಂತಿದ್ದಾರೆ.

ನ್ಯೂಕ್ಲಿಯರ್ ಬಾಂಬ್ ಬಳಸಿದರೆ ಉಡೀಸ್!
ಹೌದು, ದಕ್ಷಿಣ ಕೊರಿಯಾ 75ನೇ ಸೇನಾ ದಿನಾಚರಣೆ ಹಿನ್ನೆಲೆ ತನ್ನ ರಾಜಧಾನಿ ಸೋಲ್‌ನಲ್ಲಿ ಅದ್ಧೂರಿಯಾಗಿ ಸೇನಾ ಪರೇಡ್ ನಡೆಸಿತ್ತು. ಹೀಗೆ ಸೇನಾ ಕವಾಯತು ವೇಳೆ ದ.ಕೊರಿಯಾ ತನ್ನ ಉಗ್ರಾಣದಲ್ಲಿ ಇಟ್ಟಿದ್ದ ಭಯಾನಕ ಅಸ್ತ್ರಗಳನ್ನ ತೆಗೆದು ಕಿಮ್‌ಗೆ ವಾರ್ನಿಂಗ್ ಕೊಟ್ಟು ಗುಡುಗಿದೆ. ಇದಿಷ್ಟೇ ಅಲ್ಲದೆ ಖುದ್ದು ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ನೇರವಾಗಿ ಕಿಮ್ ಜಾಂಗ್ ಉನ್‌ಗೆ ವಾರ್ನ್ ಮಾಡಿದ್ದಾರೆ. ಅಕಸ್ಮಾತ್ ಉತ್ತರ ಕೊರಿಯಾದ ಸರ್ವಾಧಿಕಾರಿ ಪರಮಾಣು ಬಾಂಬ್ ಬಳಸಿದರೆ, ಆ ಕ್ಷಣವೇ ಅವನ ಅಧಿಕಾರ ಕೊನೆಯಾಗಿ ಆಡಳಿತ ನಾಶವಾಗುತ್ತೆ ಎಂದಿದ್ದಾರೆ ದಕ್ಷಿಣ ಕೊರಿಯಾ ಅಧ್ಯಕ್ಷ.
ಅಬ್ಬಬ್ಬಾ ಹೇಗಿದೆ ದ.ಕೊರಿಯಾ ಪವರ್?
ಇನ್ನು ಆಧುನಿಕ ಅಸ್ತ್ರಗಳ ಬಂಡಾರವನ್ನೇ ದಕ್ಷಿಣ ಕೊರಿಯಾ ಸಂಗ್ರಹ ಮಾಡಿಟ್ಟುಕೊಂಡಿದೆ ಅಂತಾ ಹೇಳಲಾಗಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಎಂದಿಗೂ ಅವುಗಳನ್ನು ಹೊರಗಡೆ ತೆಗೆದು ದಕ್ಷಿಣ ಕೊರಿಯಾ ಜಗತ್ತಿಗೆ ತೋರಿಸಿರಲಿಲ್ಲ. ಆದ್ರೆ ಯಾವಾಗ ಕಿಮ್ ಜಾಂಗ್ ಉನ್ ರಷ್ಯಾಗೆ ಹೋಗಿ ಬಂದನೋ, ಆ ದಿನದಿಂದಲೇ ತೊಡೆತಟ್ಟಿ ಅಖಾಡಕ್ಕೆ ಧುಮುಕಿತ್ತು ಈ ದಕ್ಷಿಣ ಕೊರಿಯಾ. ಹೀಗೆ ದಿನದಿಂದ ದಿನಕ್ಕೆ ತನ್ನ ಕೋಪ ಹೆಚ್ಚಿಸಿಕೊಳ್ಳುತ್ತಿದ್ದ ದಕ್ಷಿಣದ ನಾಯಕರು, ಇದೀಗ ನೇರವಾಗಿ ತಮ್ಮಲ್ಲಿರುವ ಎಲ್ಲಾ ಅಸ್ತ್ರಗಳನ್ನು ಪ್ರದರ್ಶನ ಮಾಡುವ ಮೂಲಕ ಕಿಮ್‌ಗೆ ಸೈಲೆಂಟ್ ಆಗಿರುವಂತೆ ಎಚ್ಚರಿಕೆ ನೀಡಿದ್ದಾರೆ.

ದ.ಕೊರಿಯಾ ಬಳಿ ಇರುವ ಅಸ್ತ್ರಗಳು
ಆಧುನಿಕ ಕಾಲದಲ್ಲಿ ದಕ್ಷಿಣ ಕೊರಿಯಾ ಕೂಡ ಹೈಫೈ ಆಗಿದ್ದು, ದಕ್ಷಿಣ ಕೊರಿಯಾ ಸೇನೆ ಈ ಪರೇಡ್‌ಗೆ ಸಾಕಷ್ಟು ಸಿದ್ಧತೆ ನಡೆಸಿದಂತೆ ಕಾಣುತ್ತಿದೆ. ಹೀಗಾಗಿ ಉತ್ತರ ಕೊರಿಯಾ ಅಕಸ್ಮಾತ್ ತಮ್ಮ ವಿರುದ್ಧ ಯುದ್ಧಕ್ಕೆ ಬಂದರೆ ತಾವು ಎಲ್ಲ ರೀತಿ ಸಿದ್ಧ ಎಂಬುದನ್ನು ತೋರಿಸಿದೆ. ಉತ್ತರ ಕೊರಿಯಾ ವಿರುದ್ಧ ಹೋರಾಡಬಲ್ಲ ಅತ್ಯಾಧುನಿಕ ಟ್ಯಾಂಕರ್, ಫಿರಂಗಿ ವ್ಯವಸ್ಥೆ, ಡ್ರೋನ್ & ಶಕ್ತಿಶಾಲಿ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಮೆರವಣಿಗೆ ಮೂಲಕ ತಕ್ಕ ಉತ್ತರ ಕೊಟ್ಟಿದೆ. ಸುಮಾರು 4 ಸಾವಿರಕ್ಕೂ ಹೆಚ್ಚು ದಕ್ಷಿಣ ಕೊರಿಯಾ ಸೈನಿಕರು ಈ ಪರೇಡ್‌ನಲ್ಲಿ ಭಾಗವಹಿಸಿದ್ದು ಅಮೆರಿಕದ 300 ಸೈನಿಕರು ಕೂಡ ಇದ್ದರು.
ಹೀಗೆ ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ನಡುವೆ ಕಾಡ್ಗಿಚ್ಚೇ ಹೊತ್ತಿದೆ. ಇದನ್ನು ತಣ್ಣಗಾಗಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಬಿಡಿ. ಏಕೆಂದರೆ ಒಂದು ಕಡೆ ಉತ್ತರದಲ್ಲಿ ಕೂತಿರುವ ಸರ್ವಾಧಿಕಾರಿ ಕಿಮ್ ಮಾತು ಕೇಳಲ್ಲ, ಇದನ್ನು ನೋಡಿ ನೋಡಿ ರೊಚ್ಚಿಗೆದ್ದ ದಕ್ಷಿಣ ಕೊರಿಯಾ ಕೂಡ ಈಗ ಸೈಲೆಂಟ್ ಆಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಜಗತ್ತಿಗೆ ಮತ್ತೊಂದು ತಲೆನೋವು ಶುರುವಾಗಿದೆ.












Click it and Unblock the Notifications