Zain Nadella: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲರ 26 ವರ್ಷದ ಪುತ್ರ ವಿಧಿವಶ
ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯ ನಾದೆಲ್ಲಾ ಮತ್ತು ಅವರ ಪತ್ನಿ ಅನು ಅವರ ಪುತ್ರ ಝೈನ್ ನಾದೆಲ್ಲಾ ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ ಎಂದು ಮೈಕ್ರೋಸಾಫ್ಟ್ ಕಾರ್ಪೊರೇಷನ್ ತಿಳಿಸಿದೆ. ಸತ್ಯ ನಾದೆಲ್ಲಾರ ಪುತ್ರ ಝೈನ್ ನಾಡೆಲ್ಲಾ 26 ವರ್ಷ ಪ್ರಾಯದವರಾಗಿದ್ದರು ಎಂದು ವರದಿ ಆಗಿದೆ.
ಝೈನ್ ನಾದೆಲ್ಲಾಗೆ ಹುಟ್ಟುವಾಗಲೇ ಸೆರೆಬ್ರಲ್ ಪಾಲ್ಸಿ ಸಮಸ್ಯೆ ಇತ್ತು ಎಂದು ಮಾಹಿತಿ ಲಭ್ಯವಾಗಿದೆ. ಮೈಕ್ರೋಸಾಫ್ಟ್ ತನ್ನ ಸಿಬ್ಬಂದಿಗಳಿಗೆ ಇಮೇಲ್ ಮೂಲಕ ಸಿಇಒ ರ ಪುತ್ರ ಝೈನ್ ನಾದೆಲ್ಲಾ ನಿಧನವಾಗಿರುವ ಬಗ್ಗೆ ಮಾಹಿತಿ ನೀಡಿದೆ. ಈ ದುಃಖವನ್ನು ಭರಿಸುವುದಕ್ಕೆ ಕುಟುಂಬದ ಆಲೋಚನೆ ಮತ್ತು ಪ್ರಾರ್ಥನೆಗೆ ಖಾಸಗಿತನದ ಅವಶ್ಯಕತೆ ಇದ್ದು, ಅದಕ್ಕೆ ಅವಕಾಶ ನೀಡಬೇಕು ಎಂದು ಕೂಡಾ ಸಂಸ್ಥೆಯು ಮನವಿ ಮಾಡಿದೆ.
2014 ರಲ್ಲಿ ಸಿಇಒ ಪಾತ್ರವನ್ನು ವಹಿಸಿಕೊಂಡಾಗಿನಿಂದ, ವಿಕಲಾಂಗ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ನಾಡೆಲ್ಲ ಕಂಪನಿಯನ್ನು ಕೇಂದ್ರೀಕರಿಸಿದ್ದಾರೆ. ಜೈನ್ ಅನ್ನು ಬೆಳೆಸುವ ಮತ್ತು ಬೆಂಬಲಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಣೆ ಮಾಡಿದ್ದರು.

ಮಕ್ಕಳ ಆಸ್ಪತ್ರೆಯಾದ ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೇನ್ ರಿಸರ್ಚ್‌ನಲ್ಲಿ ಸತ್ಯ ನಾಡೆಲ್ಲರ ಪುತ್ರ ಝೈನ್ ನಾಡೆಲ್ಲಾ ಹೆಚ್ಚಿನ ಚಿಕಿತ್ಸೆಯನ್ನು ಪಡೆದಿದ್ದು, ಕಳೆದ ವರ್ಷ ಪೀಡಿಯಾಟ್ರಿಕ್ ನ್ಯೂರೋಸೈನ್ಸ್‌ನಲ್ಲಿ ಝೈನ್ ನಾಡೆಲ್ಲಾ ಎಂಡೋವ್ಡ್ ಚೇರ್ ಅನ್ನು ಸ್ಥಾಪಿಸಿದೆ. ಇದಕ್ಕೆ ನಾಡೆಲ್ಲ ಜೊತೆಯಾಗಿದ್ದಾರೆ.
ಝೈನ್ ನಿಧನಕ್ಕೆ ಮಕ್ಕಳ ಆಸ್ಪತ್ರೆಯ ಸಿಇಒ ಜೆಫ್ ಸ್ಪೆರಿಂಗ್ ತಮ್ಮ ಮಂಡಳಿಗೆ ಸಂದೇಶದಲ್ಲಿ ಬರೆದಿದ್ದಾರೆ. " ಝೈನ್ ಅವರಿಗೆ ಸಂಗೀತದಲ್ಲಿ ಅತೀವ ಆಸಕ್ತಿ, ಅಭಿರುಚಿ ಇತ್ತು. ಅವರ ಪ್ರಕಾಶವಾದ ನಗುವು ಎಂದಿಗೂ ಚಿರ," ಎಂದು ತಿಳಿಸಿದ್ದಾರೆ. ಅಕ್ಟೋಬರ್ 2017 ರಲ್ಲಿ, ನಾದೆಲ್ಲಾ ತನ್ನ ಮಗನ ಜನನದ ಬಗ್ಗೆ ಬರೆದುಕೊಂಡಿದ್ದರು.
ಈ ಹಿಂದೆ ಮಗನ ಜನನದ ಬಗ್ಗೆ ಬರೆದುಕೊಂಡಿದ್ದ ನಾದೆಲ್ಲಾ
"ಒಂದು ರಾತ್ರಿ, ತನ್ನ ಗರ್ಭಾವಸ್ಥೆಯ ಮೂವತ್ತಾರನೇ ವಾರದಲ್ಲಿ, ಮಗು ತನಗೆ ಅಭ್ಯಾಸವಾದಷ್ಟು ಚಲಿಸುತ್ತಿಲ್ಲ ಎಂದು ಅನು ಗಮನಿಸಿದಳು. ಆದ್ದರಿಂದ ನಾವು ಬೆಲ್ಲೆವ್ಯೂನಲ್ಲಿರುವ ಸ್ಥಳೀಯ ಆಸ್ಪತ್ರೆಯ ತುರ್ತಾಗಿ ಅವಳನ್ನು ದಾಖಲಿಸಿದೆವು. ಅದರಲ್ಲಿ ಏನು ತೊಂದರೆ ಇಲ್ಲ ಎಂದು ನಾವು ಭಾವಿಸಿದೆವು. ವಾಡಿಕೆಯ ತಪಾಸಣೆ, ಹೊಸ ಪೋಷಕರ ಆತಂಕಕ್ಕಿಂತ ಸ್ವಲ್ಪ ಹೆಚ್ಚು ನಮಗಾಗಿತ್ತು. ನಾವು ತುರ್ತು ಕೋಣೆಯಲ್ಲಿ ಕಾಯುವುದೆ ಕಿರಿಕಿರಿ ಉಂಟು ಮಾಡಿತು. ನನಗೆ ಸ್ಪಷ್ಟವಾಗಿ ನೆನಪಿದೆ. ಆದರೆ ಪರೀಕ್ಷೆಯ ನಂತರ, ವೈದ್ಯರು ತುರ್ತು ಸಿಸೇರಿಯನ್ ವಿಭಾಗಕ್ಕೆ ಕರೆದೊಯ್ಯಲು ಆದೇಶ ನೀಡಿದರು. ಗಾಬರಿಯಾಯಿತು. ಝೈನ್ ಜನಿಸಿದ. ಆಗಸ್ಟ್ 13, 1996 ರಂದು ರಾತ್ರಿ 11:29 ಕ್ಕೆ ಝೈನ್ ಜನಿಸಿದ. ಮೂರು ಪೌಂಡ್ ಇದ್ದ. ಆದರೆ ಅಲಲಿಲ್ಲ," ಎಂದು ವಿವರಸಿದ್ದರು.
"ಝೈನ್ ಅನ್ನು ಬೆಲ್ಲೆವ್ಯೂನಲ್ಲಿರುವ ಆಸ್ಪತ್ರೆಯಿಂದ ವಾಷಿಂಗ್ಟನ್ ಸಿಯಾಟಲ್ ಮಕ್ಕಳ ಆಸ್ಪತ್ರೆಗೆ ಅದರ ಅತ್ಯಾಧುನಿಕ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಸಾಗಿಸಲಾಯಿತು. ಅನು ಚೇತರಿಸಿಕೊಳ್ಳಲು ಪ್ರಾರಂಭಿಸಿದಳು. ನಾನು ಆಸ್ಪತ್ರೆಯಲ್ಲಿ ಅವಳೊಂದಿಗೆ ರಾತ್ರಿ ಕಳೆದೆ. ಮರುದಿನ ಬೆಳಗ್ಗೆ ಝೈನ್ನನ್ನು ನೋಡಲು ಹೋದೆ. ನಮ್ಮ ಜೀವನವು ಎಷ್ಟು ಗಾಢವಾಗಿ ಬದಲಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಮುಂದಿನ ಒಂದೆರಡು ವರ್ಷಗಳಲ್ಲಿ ನಾವು ಗರ್ಭಾಶಯದ ಉಸಿರುಕಟ್ಟುವಿಕೆಯಿಂದ ಉಂಟಾದ ಹಾನಿಯ ಬಗ್ಗೆ ಹೆಚ್ಚು ಕಲಿತಿದ್ದೇವೆ. ಝೈನ್ ವೀಲ್‌ಚೇರ್ ಅಗತ್ಯವಾಗಿದೆ. ತೀವ್ರವಾದ ಸೆರೆಬ್ರಲ್ ಪಾಲ್ಸಿಯಿಂದಾಗಿ ನಮ್ಮ ಮೇಲೆ ಅವಲಂಬಿತವಾಗಿದ್ದಾನೆ," ಎಂದು ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯ ನಾದೆಲ್ಲಾ ಬರೆದುಕೊಂಡಿದ್ದರು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications