Snow Storm: ಭೀಕರ ಹಿಮ ಬಿರುಗಾಳಿಗೆ 60 ಜನ ಬಲಿ, ಅಮೆರಿಕದಲ್ಲಿ ಚಳಿಗಾಲ ಮತ್ತಷ್ಟು ಗಂಭೀರ
ಪ್ರಕೃತಿ ಮಾತೆಯ ಏಟಿಗೆ ಸಿಲುಕಿ ನಲುಗಿ ಹೋಗಿರುವ ಅಮೆರಿಕದಲ್ಲಿ ಕ್ಷಣಕ್ಷಣಕ್ಕೂ ಚಳಿಗಾಲದ ಸ್ಥಿತಿ ಕೈಮೀರಿ ಹೋಗುತ್ತಿದೆ. ಕಳೆದ 1 ವಾರದಿಂದ ನಿರಂತರವಾಗಿ ಭೀಕರ ಹಿಮ ಪ್ರವಾಹಕ್ಕೆ ಸಿಲುಕಿರುವ ಅಮೆರಿಕ ಅದರಿಂದ ಸುಧಾರಿಸಿಕೊಂಡು ಹೊರಗೆ ಬರಲು ಆಗುತ್ತಿಲ್ಲ. ಸಾಲು ಸಾಲು ಸಾವುಗಳ ಜೊತೆ ಮೂಲಸೌಕರ್ಯ ವ್ಯವಸ್ಥೆ ಕೂಡ ಹಾಳಾಗಿ ಹೋಗುತ್ತಿದೆ. ಹೀಗಿದ್ದಾಗ ಜನರು ಮನೆಯಲ್ಲಿ ನರಳುತ್ತಾ ಇದ್ದು, ಹೊರಗೆ ಕೂಡ ಬರಲು ಆಗದೆ ಒದ್ದಾಡುತ್ತಿದ್ದಾರೆ. ಸರ್ಕಾರ ಕೂಡ ಜನಗಳಿಗೆ ತಮ್ಮ, ತಮ್ಮ ಮನೆಗಳಲ್ಲೇ ಬೆಚ್ಚಗೆ ಇರಲು ಸಲಹೆ ನೀಡಿದೆ. ಹೀಗಿದ್ದರೂ ಈವರೆಗೆ ಭೀಕರ ಹಿಮ ಬಿರುಗಾಳಿಗೆ 60 ಜನ ಬಲಿಯಾಗಿದ್ದಾರೆ ಅಮೆರಿಕದಲ್ಲಿ.
ಜನವರಿ 23 ಶುಕ್ರವಾರ ತೀವ್ರಗೊಂಡ ಹಿಮ ಬಿರುಗಾಳಿ ಮುಂದೆ ಅಮೆರಿಕದ ಬಹುತೇಕ ಭಾಗಕ್ಕೆ ತೀವ್ರ ರೀತಿಯಲ್ಲಿ ಆವರಿಸಿತ್ತು. ಕೊನೆಗೆ ನೋಡ ನೋಡುತ್ತಲೇ ಸಾವಿನ ಸಂಖ್ಯೆ ಕೂಡ ತೀವ್ರಗೊಂಡು, ಈ ಹಿಮ ಬಿರುಗಾಳಿ ಪರಿಣಾಮ ತುರ್ತು ಪರಿಸ್ಥಿತಿ ಕೂಡ ಘೋಷಣೆ ಮಾಡಲಾಗಿತ್ತು. ಇದೀಗ, ಎಲ್ಲವೂ ಹಿಡಿತಕ್ಕೆ ಸಿಕ್ಕಿದ್ದರೂ ಹಿಮ ಬಿರುಗಾಳಿ ಮಾಡಿರುವ ಹಾನಿಯಿಂದ ಸುಧಾರಿಸಿಕೊಳ್ಳಲು ಅಮೆರಿಕ ಈಗ ಪರದಾಡುತ್ತಿದೆ. ಜನರು ಕೂಡ ನಿಧಾನವಾಗಿ ಮತ್ತೆ ದೈನಂದಿನ ಜೀವನ ಶುರು ಮಾಡಿದ್ದು, ಪ್ರಕೃತಿ ಮಾತೆಯ ಮುನಿಸಿನಿಂದ ಸಿಕ್ಕಿರುವ ಪೆಟ್ಟು ಸುಧಾರಿಸಿಕೊಳ್ಳುತ್ತಿದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟು ಬಲಿ?
ಹಿಮ ಬಿರುಗಾಳಿಯ ಏಟಿಗೆ ಸಿಲುಕಿ ಇದೀಗ ಮೃತಪಟ್ಟಿರುವ ಜನರಲ್ಲಿ ಅತಿಹೆಚ್ಚು ಜನ ಬಲಿಯಾಗಿದ್ದು ನ್ಯೂಯಾರ್ಕ್ ನಗರದಲ್ಲಿ. ಇಲ್ಲಿ 10 ಜನರು ಹಿಮ ಬಿರುಗಾಳಿಗೆ ಬಲಿಯಾಗಿದ್ದಾರೆ. ಇಂಡಿಯಾನಾ ಕೂಡ 9 ಜನರನ್ನು ಕಳೆದುಕೊಂಡಿದೆ, ಹಾಗೇ ಲೂಸಿಯಾನ ರಾಜ್ಯದಲ್ಲಿ 8, ಟೆನ್ನೆಸ್ಸಿ ಮತ್ತು ಟೆಕ್ಸಾಸ್ ರಾಜ್ಯ ಕೂಡ ತಲಾ 8 ಜನರನ್ನು ಹಿಮ ಬಿರುಗಾಳಿಗೆ ಕಳೆದುಕೊಂಡಿದೆ. ಇನ್ನುಳಿದಂತೆ, ಮಿಸ್ಸಿಸ್ಸಿಪ್ಪಿ ಮತ್ತು ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ತಲಾ 4 ಜನರು ಹಿಮ ಬಿರುಗಾಳಿಗೆ ಬಲಿಯಾಗಿದ್ದಾರೆ. ಇದರ ಜೊತೆಗೆ ಅರ್ಕಾನ್ಸಾಸ್ ಮತ್ತು ಮ್ಯಾಸಚೂಸೆಟ್ಸ್ ಭಾಗದಲ್ಲಿ ತಲಾ ಇಬ್ಬರು ಬಲಿಯಾಗಿದ್ದು, ಕಾನ್ಸಾಸ್, ಕೆಂಟಕಿ, ಮಿಚಿಗನ್, ನ್ಯೂಜೆರ್ಸಿ, ಓಹಿಯೋ & ಸೌತ್ ಕರೋಲಿನಾ ಭಾಗದಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.
ಅಮೆರಿಕದಲ್ಲಿ ಶಾಲೆಗಳು ಮತ್ತೆ ಓಪನ್
ಹಿಮಪಾತ ಹೆಚ್ಚಾದ ಕಾರಣಕ್ಕೆ ಅಮೆರಿಕದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿತ್ತು, ಇನ್ನೂ ಕೆಲವು ರಾಜ್ಯಗಳಲ್ಲಿ ಆನ್‌ಲೈನ್ ಕ್ಲಾಸ್ ನಡೆಸಲಾಗಿತ್ತು. ಆದರೆ ಇದೀಗ ಹಿಮಪಾತ ಒಂದಷ್ಟು ಕಮ್ಮಿ ಆಗಿರುವ ಹಿನ್ನೆಲೆಯಲ್ಲಿ ಶಾಲೆಗಳ ಬಾಗಿಲು ಮತ್ತೆ ತೆರೆದಿವೆ, ಹಾಗೇ ವಿದ್ಯಾರ್ಥಿಗಳು ಕೂಡ ಶಾಲೆಗಳಿಗೆ ವಾಪಸ್ ಬರುತ್ತಿದ್ದಾರೆ. ಮತ್ತೊಂದು ಕಡೆ ರಸ್ತೆಗಳಲ್ಲಿ ಬಿದ್ದಿರುವ ಹಿಮ ತೆರವು ಕಾರ್ಯಾಚರಣೆ ಕೂಡ ವೇಗವಾಗಿ ಸಾಗಿದ್ದು, ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಇಷ್ಟುದಿನ ಮನೆಯ ಒಳಗೆ ಕೂತು ಕೂತು ಸಾಕಾಗಿದ್ದ ಜನರು ಈಗ ಹೊರಗೆ ಬಂದು ಒಂದಷ್ಟು ಓಡಾಟ ನಡೆಸುತ್ತಿದ್ದಾರೆ.












Click it and Unblock the Notifications