ಬಲವಂತದ ಮದುವೆ, ಮತಾಂತರ: 13 ವರ್ಷದ ಬಾಲಕಿಯನ್ನು ಗಂಡನ ವಶಕ್ಕೆ ಒಪ್ಪಿಸಿದ ಕೋರ್ಟ್
ಇಸ್ಲಾಮಾಬಾದ್, ನವೆಂಬರ್ 2: ಅಪಹರಣಕ್ಕೆ ಒಳಗಾಗಿ, ಬಲವಂತವಾಗಿ ಮತಾಂತರಗೊಂಡು ಮದುವೆಯಾಗಿದ್ದ ಪಾಕಿಸ್ತಾನದ 13 ವರ್ಷದ ಕ್ರೈಸ್ತ ಬಾಲಕಿ ಅರ್ಜೂ ರಾಜಾಳನ್ನು ಆಕೆಯ ಗಂಡನ ವಶಕ್ಕೆ ಒಪ್ಪಿಸಿ ಸಿಂಗ್ ಹೈಕೋರ್ಟ್ ಆದೇಶಿಸಿದೆ. ಬಾಲಕಿ ಸ್ವ ಇಚ್ಛೆಯಿಂದ ಇಸ್ಲಾಂಅನ್ನು ಅಂಗೀಕರಿಸಿದ್ದಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.
ತಾನು ಇಷ್ಟದಿಂದಲೇ ಇಸ್ಲಾಂ ಮತವನ್ನು ಸ್ವೀಕಾರ ಮಾಡಿರುವುದಾಗಿ ಹೇಳಿರುವ ಅರ್ಜೂ, ತನ್ನನ್ನು ಯಾರೂ ಅಪಹರಣ ಮಾಡಿಲ್ಲ ಮತ್ತು ಬಲವಂತದಿಂದ ಮದುವೆ ಮಾಡಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾಳೆ.
ಬಾಲಕಿಯ ಕುಟುಂಬದವರು ಆಕೆಗೆ ಸತ್ಯ ಹೇಳುವಂತೆ ಹಾಗೂ ತಮ್ಮೊಂದಿಗೆ ಮನೆಗೆ ಬರುವಂತೆ ಮನವೊಲಿಸಲು ಪ್ರಯತ್ನಿಸುವ ಮತ್ತು ಅಂಗಲಾಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ತಾನು ತನ್ನ ಇಚ್ಛೆಯಂತೆ ಮದುವೆಯಾಗಿದ್ದಾಗಿ ಹಾಗೂ ಹಣದ ದುರಾಸೆಗೆ ಒಳಪಟ್ಟಿಲ್ಲ ಎಂದೇ ಬಾಲಕಿ ಹೇಳಿದ್ದಾಳೆ.

ಬಾಲಕಿಯ ಮದುವೆ ಬಲವಂತದಿಂದ ನಡೆಯದೆಯೇ ಹೋದರೂ ಆಕೆ ಅಪ್ರಾಪ್ತ ವಯಸ್ಸಿನವಳಾದ ಕಾರಣ ಮದುವೆ ಕಾನೂನುಬಾಹಿರವಾಗಿದೆ. ಸಿಂಧ್ ಹೈಕೋರ್ಟ್‌ನ ಆದೇಶವನ್ನು ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪ್ರಶ್ನಿಸಿದ್ದಾರೆ. 'ಪಾಕಿಸ್ತಾನದ ನ್ಯಾಯಾಂಗ ವ್ಯವಸ್ಥೆಯ ಉಲ್ಲಂಘನೆ ಮಾಡುವಂತಹ ನ್ಯಾಯಾಧೀಶರ ಉನ್ನತ ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ಗೌರವಾನ್ವಿತ ಸಿಜೆಐ ಕೂಲಂಕಷ ತನಿಖೆ ನಡೆಸಬೇಕಿದೆ' ಎಂದು ಅವರು ಹೇಳಿದ್ದಾರೆ.
ಕರಾಚಿಯ 44 ವರ್ಷದ ಅಲಿ ಅಜರ್ ಎಂಬಾತ 13 ವರ್ಷದ ಕ್ರೈಸ್ತ ಬಾಲಕಿ ಅರ್ಜೂ ರಾಜಾಳನ್ನು ಬಲವಂತವಾಗಿ ಅಪಹರಿಸಿ ಇಸ್ಲಾಂಗೆ ಮತಾಂತರಿಸಿದ್ದಲ್ಲದೆ ಮದುವೆಯಾಗಿದ್ದ ಎಂದು ವರದಿಯಾಗಿತ್ತು. ಇದರ ವಿರುದ್ಧ ಮಾನವಹಕ್ಕುಗಳ ಸಂಘಟನೆಗಳು ನ್ಯಾಯಾಂಗ ಹೋರಾಟಕ್ಕೆ ಇಳಿದಿದ್ದವು.
ಸಿಂಧ್ ಹೈಕೋರ್ಟ್‌ನಲ್ಲಿ ನಮೂದಾಗಿರುವ ಅರ್ಜೂಳ ವೈಯಕ್ತಿಕ ವಿವರಗಳಲ್ಲಿ ಆಕೆಯ ವಯಸ್ಸು ಸೇರಿದಂತೆ ಎಲ್ಲವನ್ನೂ ತಪ್ಪಾಗಿ ತಿದ್ದಲಾಗಿದೆ. ಆಕೆಯ ವಯಸ್ಸು 18 ಎಂದು ದಾಖಲಿಸಲಾಗಿದೆ. ಆದರೆ ಆಕೆಯ ಶಾಲಾ ದಾಖಲೆಗಳಲ್ಲಿ ವಾಸ್ತವ ಮಾಹಿತಿ ಇದೆ. ನ್ಯಾಯಾಲಯದ ಆದೇಶ ತೀವ್ರ ಟೀಕೆಗೆ ಒಳಗಾಗಿದೆ.












Click it and Unblock the Notifications