Russia Ukraine War: ಉಕ್ರೇನಿನಲ್ಲಿ ರಷ್ಯಾದ ಅಪಾಯಕಾರಿ ಕಾರ್ಯತಂತ್ರ: ಫುಟ್ಬಾಲ್ ಆಟದ ಅಂತಿಮ ಕ್ಷಣಗಳನ್ನು ಹೋಲುತ್ತಿರುವ ಯುದ್ಧ
ಯಾರಾದರೂ ಫುಟ್ಬಾಲ್ ಆಟವನ್ನು ನೋಡುತ್ತಾರಾದರೆ, ಅದನ್ನು ಇಷ್ಟ ಪಡುತ್ತಾರಾದರೆ, ಆ ಆಟದ ನಿಜವಾದ ರೋಚಕತೆ ಅದರ ಅಂತಿಮ ಐದು ನಿಮಿಷಗಳ ಅವಧಿಯಲ್ಲಿ ಇರುತ್ತದೆ ಎಂಬುದು ತಿಳಿದಿರುತ್ತದೆ. ಆ ವೇಳೆಗೆ ಉಭಯ ತಂಡಗಳಿಗೂ ಪಂದ್ಯ ಇನ್ನೇನು ಮುಕ್ತಾಯದ ಹಂತ ತಲುಪುತ್ತಿದೆ ಎನ್ನುವುದು ಅರಿವಿಗೆ ಬಂದಿರುತ್ತದೆ. ಆದ್ದರಿಂದ ಎರಡೂ ತಂಡಗಳು ಹೆಚ್ಚು ಹೆಚ್ಚು ಗೋಲು ಗಳಿಸಲು ಪ್ರಯತ್ನ ನಡೆಸಲಾರಂಭಿಸುತ್ತವೆ. ಆಟಗಾರರು ಮೈದಾನದಾದ್ಯಂತ ಹರಡಿಕೊಂಡು, ದೂರ ದೂರದ ಪಾಸ್ ನಡೆಸಿ, ಹೆಚ್ಚು ಧೈರ್ಯಶಾಲಿ ಹೊಡೆತಗಳಿಗೆ ಪ್ರಯತ್ನ ನಡೆಸಿ, ಬಹುತೇಕ ಬಾರಿ ಹೆಚ್ಚು ಗೋಲುಗಳನ್ನೂ ಗಳಿಸುತ್ತಾರೆ.
ಈ ಮಾಹಿತಿಯನ್ನು ಪುಷ್ಟೀಕರಿಸುವಂತಹ ಅಂಕಿ ಅಂಶಗಳೂ ಲಭ್ಯವಿವೆ. ಜಿಝೀರೋ ಮೀಡಿಯಾ ಎಂಬ ಸಂಶೋಧನಾ ಸಂಸ್ಥೆ 19ನೇ ಶತಮಾನದ ಬಳಿಕ ಅಂತಾರಾಷ್ಟ್ರೀಯ ಫುಟ್‌ಬಾಲ್ ಪಂದ್ಯಗಳಲ್ಲಿ ದಾಖಲಾಗಿರುವ 40,000ಕ್ಕೂ ಹೆಚ್ಚು ಗೋಲುಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಅದರ ಅಧ್ಯಯನದ ಪ್ರಕಾರ, ತಂಡಗಳು ಆಟದ ಅಂತಿಮ ಕ್ಷಣಗಳಲ್ಲಿ ಹೆಚ್ಚು ಗೋಲುಗಳನ್ನು ದಾಖಲಿಸಿವೆ. ಆಟದ ಅಂತಿಮ ಹಂತಗಳಲ್ಲಿ ತಂಡಗಳಿಗೆ ಕಳೆದುಕೊಳ್ಳುವುದು ಏನೂ ಇಲ್ಲದಿರುವುದರಿಂದ, ಅವು ಗೋಲು ಗಳಿಸಲು ಸಂಪೂರ್ಣ ಪರಿಶ್ರಮ ವಹಿಸುತ್ತವೆ.

ಪ್ರಸ್ತುತ ಉಕ್ರೇನ್ ಯುದ್ಧದಲ್ಲೂ ಇಂತಹದ್ದೇ ಚಿತ್ರಣ ಕಂಡುಬರುತ್ತಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಅಪ್ರಚೋದಿತ, ಪೂರ್ಣ ಪ್ರಮಾಣದ ಯುದ್ಧ ಆರಂಭಿಸಿ ಈಗಾಗಲೇ ಸಾವಿರ ದಿನಗಳು ಕಳೆದಿವೆ. ಯುದ್ಧದ ಈ ಹಂತ ಈಗ ಮುಕ್ತಾಯದ ಘಟ್ಟ ತಲುಪಿದ್ದು, ಡೊನಾಲ್ಡ್ ಟ್ರಂಪ್ ಅವರು ಮತ್ತೊಂದು ಅವಧಿಗೆ ಅಮೆರಿಕಾ ಅಧ್ಯಕ್ಷರಾಗಿ ಜನವರಿ 20, 2025ರಂದು ಶ್ವೇತ ಭವನ ಪ್ರವೇಶಿಸುವ ಮೊದಲು ಇದು ಪೂರ್ಣಗೊಳ್ಳುವ ಸಾಧ್ಯತೆಗಳಿವೆ.
ಅಮೆರಿಕಾ ಈ ಯುದ್ಧದಲ್ಲಿ ಉಕ್ರೇನ್‌ಗೆ ಭಾರೀ ಬೆಂಬಲ ನೀಡಿದ್ದು, ಇದನ್ನು ಡೊನಾಲ್ಡ್ ಟ್ರಂಪ್ ಅವರು ಟೀಕಿಸಿದ್ದಾರೆ. ತಾನು ಅಧಿಕಾರಕ್ಕೆ ಬಂದರೆ ಯುದ್ಧವನ್ನು ಕೇವಲ 24 ಗಂಟೆಗಳ ಒಳಗೆ ಮುಗಿಸುವುದಾಗಿ ಟ್ರಂಪ್ ಹೇಳಿಕೆ ನೀಡಿದ್ದರು.
ಆದರೆ ಟ್ರಂಪ್ ಹೇಳಿಕೆಯ ನಿಜವಾದ ಅರ್ಥವೇನು ಎನ್ನುವುದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಜನವರಿ ಮಧ್ಯದ ವೇಳೆಗೆ ಯುದ್ಧ ರಂಗದಲ್ಲಿ ಎಂತಹ ಪರಿಸ್ಥಿತಿ ಇದ್ದರೂ, ಅದು ಡೊನಾಲ್ಡ್ ಟ್ರಂಪ್ ಅವರು ಕೈಗೊಳ್ಳುವ ಕ್ರಮಕ್ಕೆ ಆರಂಭಿಕ ಹಂತವಾಗಲಿದೆ.
ಈ ಕಾರಣದಿಂದಲೇ ಕಳೆದ ಒಂದು ವಾರದ ಅವಧಿಯಿಂದ ನಡೆಯುತ್ತಿರುವ ಉಕ್ರೇನ್ ಯುದ್ಧ ಟೈ ಆದ ವಿಶ್ವಕಪ್ ಫುಟ್ಬಾಲ್ ಪಂದ್ಯದ ಅಂತಿಮ ಕ್ಷಣಗಳಂತೆ ತೋರುತ್ತಿದೆ. ಉಭಯ ಬದಿಗಳೂ ತಮ್ಮಿಂದ ಸಾಧ್ಯವಾದಷ್ಟೂ ಭೂಮಿಯನ್ನು ವಶಪಡಿಸಿಕೊಂಡು, ತಮ್ಮ ಸಾಮರ್ಥ್ಯ ತೋರಿಸಿ ಶತ್ರು ದೇಶವನ್ನು ಬೆದರಿಸಲು ಪ್ರಯತ್ನ ನಡೆಸುತ್ತಿವೆ.
ಹಲವು ತಿಂಗಳುಗಳ ಕಾಲ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿದ ಬಳಿಕ, ಅಮೆರಿಕಾ ಮತ್ತು ಯುಕೆಗಳು ಕಡೆಗೂ ರಷ್ಯಾದಲ್ಲಿನ ಗುರಿಗಳ ಮೇಲೆ ಪಾಶ್ಚಾತ್ಯ ನಿರ್ಮಿತ ದೂರ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಲು ಉಕ್ರೇನ್‌ಗೆ ಅನುಮತಿ ನೀಡಿವೆ. ಆ ಮೂಲಕ ಉಕ್ರೇನ್ ರಷ್ಯಾದ ಒಳಗಿರುವ ಮಿಲಿಟರಿ ನೆಲೆಗಳ ಮೇಲೂ ದಾಳಿ ನಡೆಸಬಹುದಾಗಿದೆ.
ಅಮೆರಿಕಾ ಸಹ ಉಕ್ರೇನ್‌ಗೆ ಆ್ಯಂಟಿ - ಪರ್ಸನಲ್ ಲ್ಯಾಂಡ್ ಮೈನ್‌ಗಳನ್ನು ಕಳುಹಿಸಲಾರಂಭಿಸಿದೆ. ಇವುಗಳ ನೆರವಿನಿಂದ ಉಕ್ರೇನ್ ಮೈನ್‌ಗಳನ್ನು ತನ್ನ ಪ್ರದೇಶದಲ್ಲಿ ಅಳವಡಿಸಿ, ಪ್ರತಿದಿನವೂ ನಿಧಾನವಾಗಿ ಮುಂದೊತ್ತಿ ಬರುತ್ತಿರುವ ರಷ್ಯನ್ ಪಡೆಗಳನ್ನು ತಡೆಯಲು ಪ್ರಯತ್ನ ನಡೆಸಬಹುದಾಗಿದೆ.
ಅನುಮತಿ ಲಭಿಸಿದ ತಕ್ಷಣವೇ ಉಕ್ರೇನ್ ಪಾಶ್ಚಾತ್ಯ ಆಯುಧಗಳನ್ನು ಬಳಸಲು ಆರಂಭಿಸಿತು. ಎರಡು ದೀರ್ಘ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿಕೊಂಡು, ರಷ್ಯನ್ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿತು.
ರಷ್ಯಾ ಸಹ ಉಕ್ರೇನ್ ದಾಳಿಯ ಬಳಿಕ ಹಿಂದೆ ಉಳಿಯದೆ, ತನ್ನ ನೂತನ, ಪ್ರಾಯೋಗಿಕ ಇಂಟರ್‌ಮೀಡಿಯಟ್ ವ್ಯಾಪ್ತಿಯ ಕ್ಷಿಪಣಿಗಳನ್ನು ಬಳಸಿ ಉಕ್ರೇನ್ ಮೇಲೆ ದಾಳಿ ನಡೆಸಿತು. ಈ ಕ್ಷಿಪಣಿಗಳನ್ನು 'ಇಂಟರ್‌ಕಾಂಟಿನೆಂಟಲ್' ಬ್ಯಾಲಿಸ್ಟಿಕ್ ಕ್ಷಿಪಣಿಗಳೆಂದು ಪರಿಗಣಿಸಬಹುದೇ ಎಂದು ಕೆಲವು ಚರ್ಚೆಗಳು ನಡೆದವು. ಆದರೆ ತಜ್ಞರು ಈ ಕ್ಷಿಪಣಿಗಳು ಡಿನಿಪ್ರೋ ಮೇಲೆ ದಾಳಿ ನಡೆಸಲು ಬಳಸಿದ ಸಾಂಪ್ರದಾಯಿಕ ಕ್ಷಿಪಣಿಗಳಿಗಿಂತ ಹೆಚ್ಚು ಪರಮಾಣು ಸಿಡಿತಲೆಗಳನ್ನು ಒಯ್ಯಲು ಸೂಕ್ತವಾದ ವಿನ್ಯಾಸ ಹೊಂದಿದ್ದವು ಎನ್ನಲಾಗಿದೆ.
ರಷ್ಯಾ ಈ ಬಾರಿ ಬಾಯಿ ಬಿಟ್ಟು ಹೇಳೆದೆಯೂ ತನ್ನ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದೆ: ಈ ಬಾರಿ ನಾವು ಕ್ಷಿಪಣಿಗಳೊಡನೆ ಯಾವುದೇ ಪರಮಾಣು ಸಿಡಿತಲೆಗಳನ್ನು ಪ್ರಯೋಗಿಸಿಲ್ಲ. ಆದರೆ, ಭವಿಷ್ಯದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಲೂ ನಾವು ಸಿದ್ಧತೆ ನಡೆಸುತ್ತಿದ್ದೇವೆ ಎನ್ನುವುದು ರಷ್ಯಾದ ಸ್ಪಷ್ಟ ಸಂದೇಶವಾಗಿದೆ.
ಆ ದಾಳಿ ನಡೆಸಿದ ಬಳಿಕ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಹೇಳಿಕೆ ನೀಡಿದ್ದು, "ನ್ಯಾಟೋ ಸದಸ್ಯ ರಾಷ್ಟ್ರಗಳು ರಷ್ಯಾದ ವಿರುದ್ಧ ತನ್ನ ಆಯುಧಗಳನ್ನು ಪ್ರಯೋಗಿಸಲು ಉಕ್ರೇನ್‌ಗೆ ಅನುಮತಿ ನೀಡಿವೆ. ಆದ್ದರಿಂದ ನ್ಯಾಟೋ ಸದಸ್ಯ ರಾಷ್ಟ್ರಗಳ ಸೇನಾ ನೆಲೆಗಳ ಮೇಲೆ ದಾಳಿ ನಡೆಸಲು ರಷ್ಯಾಗೆ ಹಕ್ಕಿದೆ" ಎಂದು ಹೇಳಿಕೆ ನೀಡಿದ್ದಾರೆ.
ರಷ್ಯಾ - ಉಕ್ರೇನ್ ಯುದ್ಧ ಆರಂಭವಾದ ದಿನದಿಂದಲೂ, ಕ್ರೆಮ್ಲಿನ್ ನಿರಂತರವಾಗಿ ಪರಮಾಣು ದಾಳಿಯ ಎಚ್ಚರಿಕೆ ನೀಡುತ್ತಾ ಬಂದಿದೆ. ಆದ್ದರಿಂದ ಬಹಳಷ್ಟು ಜನ ಪಾಶ್ಚಾತ್ಯ ತಜ್ಞರು ಪುಟಿನ್ ಅವರಿಗೆ ತಾನು ಜಗತ್ತಿನಲ್ಲಿ ಏಕಾಂಗಿಯಾದೆ ಎನಿಸಿದರೆ, ಅಥವಾ ಅವಮಾನವಾದರೆ, ಉಕ್ರೇನ್ ಮೇಲೆ ಪರಮಾಣು ದಾಳಿ ನಡೆಸುವ ಸಾಧ್ಯತೆಗಳಿವೆಯೇ ಎಂದು ಅನುಮಾನಿಸುತ್ತಿದ್ದಾರೆ. ಒಂದು ವೇಳೆ ರಷ್ಯಾ ಅಂತಹ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ನ್ಯಾಟೋ ರಷ್ಯಾಗೆ ಗಂಭೀರ ಪ್ರತಿಕ್ರಿಯೆ ನೀಡಿ, ಆ ಮೂಲಕ ಜಗತ್ತಿನ ಎರಡು ಅತಿದೊಡ್ಡ ಪರಮಾಣು ಶಕ್ತಿಗಳ ನಡುವೆ ನೇರ ಕದನ ಆರಂಭವಾಗಬಹುದೇ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದೊಂದು ಭಯಾನಕ ಆಲೋಚನೆಯಾಗಿದ್ದು, ರಷ್ಯಾದ ನೂತನ, ಹೆಚ್ಚು ಅನುಕೂಲಕರವಾದ ಪರಮಾಣು ನೀತಿಗೆ ಸಹಿ ಹಾಕುವ ಮೂಲಕ ಪುಟಿನ್ ಅವರು ಪರಮಾಣು ಯುದ್ಧದ ಸಾಧ್ಯತೆಯನ್ನು ಮುನ್ನಲೆಗೆ ತಂದಿದ್ದಾರೆ. ಒಂದು ವೇಳೆ ತನ್ನ ಮೇಲೆ ಪರಮಾಣು ಶಸ್ತ್ರಾಸ್ತ್ರಗಳಲ್ಲದೆ, ಇತರ ನೇರ ದಾಳಿ ನಡೆದರೂ ತಾನು ಪರಮಾಣು ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸುವುದಾಗಿ ರಷ್ಯಾ ಈಗ ಹೇಳಿಕೆ ನೀಡಿದೆ.
ಆದರೆ ಇವೆಲ್ಲದರ ನಡುವೆಯೂ ಒಂದು ಒಳ್ಳೆಯ ಸುದ್ದಿ ಇದೆ: ಪ್ರಸ್ತುತ ಸನ್ನಿವೇಶದಲ್ಲಿ, ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವಂತಹ ವಿನಾಶಕಾರಿ ನಿರ್ಧಾರವನ್ನು ಏನಾದರೂ ಉದ್ದೇಶಪೂರ್ವಕವಾಗಿ ಕೈಗೊಂಡರೆ, ಅದು ಎಲ್ಲರ ಮೇಲೂ ಅತ್ಯಂತ ಗಂಭೀರ ಪರಿಣಾಮ ಬೀರಲಿದೆ. ಇದು ಅತ್ಯಂತ ಕೆಟ್ಟ ನಿರ್ಧಾರವಾಗಲಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸದ್ಯದ ಸನ್ನಿವೇಶದಲ್ಲಿ ಪುಟಿನ್ ಅವರು ಹೆಚ್ಚು ಅನುಕೂಲಕರ ಪರಿಸ್ಥಿತಿ ಹೊಂದಿರುವಂತೆ ಕಾಣುತ್ತಿದ್ದಾರೆ. ಯುದ್ಧರಂಗದಲ್ಲಿ ನಿಧಾನವಾಗಿಯಾದರೂ, ರಷ್ಯನ್ ಪಡೆಗಳು ನಿರಂತರವಾಗಿ ಪ್ರಗತಿ ಸಾಧಿಸುತ್ತಿವೆ. ಇನ್ನೊಂದೆಡೆ, ಅಮೆರಿಕಾ ಸದ್ಯದಲ್ಲೇ ನೂತನ ಅಧ್ಯಕ್ಷರನ್ನು ಹೊಂದಲಿದ್ದು, ಅವರು ಹೆಚ್ಚು ರಷ್ಯಾ ಪರ ಇರುವ ನಿರೀಕ್ಷೆಗಳಿದ್ದು, ಪರಿಸ್ಥಿತಿ ಇನ್ನಷ್ಟು ಸುಧಾರಿಸುವ ಸಾಧ್ಯತೆಗಳಿವೆ.
ಒಂದೊಮ್ಮೆ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿದರೆ, ಸುದೀರ್ಘ ಕಾಲದಿಂದ ಚಾಲ್ತಿಯಲ್ಲಿರುವ ಅಂತಾರಾಷ್ಟ್ರೀಯ ನಿಯಮ ಮುರಿದಂತಾಗಲಿದೆ. ರಷ್ಯಾ ಏನಾದರೂ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದರೆ, ಪರಿಸ್ಥಿತಿ ವಿಕೋಪಕ್ಕೆ ತೆರಳಲಿದ್ದು, ಪಾಶ್ಚಾತ್ಯ ರಾಷ್ಟ್ರಗಳು ಮಾತ್ರವಲ್ಲದೆ, ಗ್ಲೋಬಲ್ ಸೌತ್‌ನ ರಷ್ಯಾದ ಮಿತ್ರ ರಾಷ್ಟ್ರಗಳು ಮತ್ತು ಚೀನಾ ಸಹ ಇದನ್ನು ಪ್ರತಿಭಟಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ರಷ್ಯಾ ಇಷ್ಟೊಂದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಮುಂದಾಗುವ ಸಾಧ್ಯತೆಗಳಿಲ್ಲ.
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಒಂದು ಕೆಟ್ಟ ಸುದ್ದಿಯೂ ಇದೆ: ಫುಟ್ಬಾಲ್ ಪಂದ್ಯದ ಅಂತಿಮ ನಿಮಿಷಗಳಲ್ಲಿ ತರ್ಕಬದ್ಧವಾಗಿ ಯೋಚಿಸಿ ಆಡುವುದು ಗಾಳಿಗೆ ತೂರಲ್ಪಡುತ್ತದೆ. ಆದ್ದರಿಂದ ತಪ್ಪುಗಳು ಮತ್ತು ತಪ್ಪಾಗಿ ಅರ್ಥ ಮಾಡಿಕೊಳ್ಳುವುದು ಅತ್ಯಂತ ಸಹಜವಾಗಿರುತ್ತದೆ. ಫುಟ್‌ಬಾಲ್ ವಿಚಾರದಲ್ಲಿ ಹಾಗಾದರೆ ಬಾಲ್ ಕಾಲಿನಿಂದ ತಪ್ಪಿ ಹೋಗಿ, ಕ್ಷಿಪ್ರ ಪ್ರತಿದಾಳಿ ಎದುರಾಗಿ, ಅಂತಿಮ ಹಂತದಲ್ಲಿ ಗೋಲ್ ದಾಖಲಾಗಿ, ಒಂದು ತಂಡಕ್ಕೆ ಖುಷಿ, ಇನ್ನೊಂದಕ್ಕೆ ನೋವು ತರಬಹುದು.
ಆದರೆ, ಪೂರ್ವ ಯುರೋಪ್‌ನಲ್ಲಿ ನಡೆಯುತ್ತಿರುವ, ಎರಡು ಅತ್ಯಂತ ದೊಡ್ಡ ಪರಮಾಣು ಶಕ್ತಿಗಳನ್ನು ಒಳಗೊಂಡಿರುವ ಗಂಭೀರ ಯುದ್ಧದಲ್ಲಿ ಇಂತಹ ತಪ್ಪುಗಳು ನಡೆದರೆ, ಪರಿಸ್ಥಿತಿ ಕೈಮೀರಿ ಹೋಗುವಂತಹ ಜಾಗತಿಕ ಅಪಾಯಗಳು ಎದುರಾಗಬಹುದು.
ಆದ್ದರಿಂದಲೇ ಮುಂದಿನ ಎರಡು ತಿಂಗಳ ಅವಧಿ ಇಡೀ ಜಗತ್ತಿಗೆ ಅತ್ಯಂತ ಸುದೀರ್ಘವಾದ, ಅತ್ಯಂತ ಅಪಾಯಕಾರಿಯಾದ ಅಂತಿಮ ಕ್ಷಣಗಳಂತೆಯೇ ಭಾಸವಾಗಲಿದೆ.












Click it and Unblock the Notifications