ದೆಹಲಿಯ ಜಿ 20 ಶೃಂಗಸಭೆಗೆ ಬರಲ್ಲವೆಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್: ಭಾರತದಲ್ಲಿ ಬಂಧನ ಭೀತಿ?
ಮಾಸ್ಕೋ, ಆಗಸ್ಟ್ 26: ಸೆಪ್ಟೆಂಬರ್ 9 ಹಾಗೂ 10 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಜಿ 20 ಶೃಂಗಸಭೆ ನಡೆಯಲಿದೆ. ಈ ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾಗವಹಿಸುವುದಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಶುಕ್ರವಾರ ಮಾಹಿತಿ ನೀಡಿದ್ದಾರೆ.
ರಷ್ಯಾ ಅಧ್ಯಕ್ಷರ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುವ ಯಾವುದೇ ಯೋಜನೆಗಳಿಲ್ಲ ಎಂದು ಕ್ರೆಮ್ಲಿನ್ ವಕ್ತಾರರನ್ನು ಉಲ್ಲೇಖಿಸಿ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿನ್ನೆಯಷ್ಟೇ ಮುಕ್ತಾಯಗೊಂಡ ಬ್ರಿಕ್ಸ್ ಸಭೆಯಲ್ಲೂ ಪುಟಿನ್ ಗೈರುಹಾಜರಾಗಿದ್ದರು. ಪುಟಿನ್ ಅವರನ್ನು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಪ್ರತಿನಿಧಿಸಿದ್ದರು.
ಪುಟಿನ್ ಪ್ರತಿನಿಧಿಯಾಗಿ ಭಾರತಕ್ಕೆ ಯಾರು ಭೇಟಿ ನೀಡಲಿದ್ದಾರೆ ಎಂಬುದನ್ನು ನಂತರ ನಿರ್ಧರಿಸಲಾಗುವುದು ಎಂದು ಕ್ರೆಮ್ಲಿನ್ ವಕ್ತಾರರು ಹೇಳಿದ್ದಾರೆ.

ಉಕ್ರೇನಿಯನ್ ಮಕ್ಕಳನ್ನು ರಷ್ಯಾಕ್ಕೆ ಗಡೀಪಾರು ಮಾಡಿರುವ ಆಪಾದನೆ ಪುಟಿನ್ ಅವರ ಮೇಲಿದೆ. ಈ ಕಾರಣ, ಮಾರ್ಚ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಸಿ) ಅವರಿಗೆ ಬಂಧನ ವಾರಂಟ್ ಹೊರಡಿಸಿದೆ. ಕೋವಿಡ್ -19 ನಂತರ ಮೊದಲ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಅಧ್ಯಕ್ಷ ಪುಟಿನ್ ನಿರ್ಧರಿಸಿದ್ದರು.
ದಕ್ಷಿಣ ಆಫ್ರಿಕಾ ಐಸಿಸಿ ಅಡಿಯಲ್ಲಿ ಬರುವ ದೇಶವಾಗಿದ್ದು, ಪುಟಿನ್ ಅವರು ದಕ್ಷಿಣ ಆಪ್ರಿಕಾಕ್ಕೆ ಬಂದಿದ್ದರೆ ಅವರ ಬಂಧನವಾಗುವ ನಿರೀಕ್ಷೆ ಇತ್ತು.
ಪುಟಿನ್ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದಾರೆ ಎಂದು ಕ್ರೆಮ್ಲಿನ್ ಹೇಳಿಕೊಂಡಿದೆ.
ಪುಟಿನ್ ಅವರು ನಿರಂತರವಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈಗಾಗಲೇ ಅವರ ವೇಳಾಪಟ್ಟಿ ಬಿಡುಗಡೆಯಾಗಿದೆ. ಈ ಸಮಯದಲ್ಲಿ ಅವರ ಮುಖ್ಯ ಗಮನವು ನೆರೆಯ ಉಕ್ರೇನ್‌ನಲ್ಲಿ ನಡೆಯುತ್ತಿರುವ ರಷ್ಯಾದ ಯುದ್ಧದ ಮೇಲಿದೆ. ಈ ಕುರಿತು ಮೇಲ್ವಿಚಾರಣೆಯನ್ನು ಅವರು ಮಾಡುತ್ತಿದ್ದಾರೆ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಫೆಬ್ರವರಿ 2022 ರ ಉಕ್ರೇನ್ ಆಕ್ರಮಣದ ನಂತರ ಪುಟಿನ್ ಅಪರೂಪವಾಗಿ ರಷ್ಯಾವನ್ನು ತೊರೆದಿದ್ದಾರೆ. ವರ್ಷ ಇಂಡೋನೇಷ್ಯಾದಲ್ಲಿ ನಡೆದ ಜಿ-20 ಶೃಂಗಸಭೆಯನ್ನೂ ಅವರು ಭಾಗವಹಿಸಿರಲಿಲ್ಲ.
ದೆಹಲಿಯಲ್ಲಿ ಶೃಂಗಸಭೆ
ದೆಹಲಿಯಲ್ಲಿ G20 ಶೃಂಗಸಭೆಯನ್ನು ಆಯೋಜಿಸಲಾಗುತ್ತಿದೆ. ದೆಹಲಿ ಮೆಟ್ರೋ ರೈಲು ನಿಗಮವು (DMRC) G20 ಲೋಗೋ ಮತ್ತು ಥೀಮ್ ಅನ್ನು ಪ್ರದರ್ಶಿಸುವ ಮೂಲಕ ಪ್ರಮುಖ ನಿಲ್ದಾಣಗಳನ್ನು ಅಲಂಕರಿಸಲು ಸಜ್ಜಾಗಿದೆ.
ಶೃಂಗಸಭೆಯ ಸ್ಥಳದ ಬಳಿ ಅಂರೆ ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣದ ಪ್ರವೇಶದ್ವಾರದಲ್ಲಿ ಅತ್ಯಾಧುನಿಕ ಪಾದಚಾರಿ ಪ್ಲಾಜಾವನ್ನು ದೆಹಲಿ ಮೆಟ್ರೋ ರೈಲು ನಿಗಮವು ಅಭಿವೃದ್ಧಿಪಡಿಸಿದೆ. ಅಲ್ಲಿ ಆಸನ ಮತ್ತು ಬೆಳಕಿನ ಸೌಲಭ್ಯಗಳನ್ನು ಯೋಜಿಸಲಾಗಿದೆ.
G 20 ಶೃಂಗಸಭೆಯ ಕಾರಣ ಅನೇಕ ಇತರ ಪ್ರಮುಖ ಮೆಟ್ರೋ ನಿಲ್ದಾಣಗಳು ಫೇಸ್‌ಲಿಫ್ಟ್ ಅನ್ನು ಪಡೆದುಕೊಂಡಿವೆ. ಮಂಡಿ ಹೌಸ್, ಲಕ್ಷ್ಮಿ ನಗರ, ಪ್ರೀತ್ ವಿಹಾರ್, ಅಕ್ಷರಧಾಮ, ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಇತ್ಯಾದಿಗಳಲ್ಲಿ ಫೇಸ್‌ಲಿಫ್ಟ್ ಅನ್ನು ಅಳವಡಿಸಲಾಗಿದೆ.












Click it and Unblock the Notifications