Vladimir Putin: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸತ್ತು ಹೋದ್ರಾ?
ಆತ ಮಾಡಿದ್ದೇ ರೂಲ್ಸ್, ಇಟ್ಟಿದ್ದೇ ಹೆಜ್ಜೆ, ಅಕಸ್ಮಾತ್ ಹಿಂದೆ-ಮುಂದೆ ಡಬಲ್ ಗೇಮ್ ಆಡಿದ್ರೆ ಅವನು ಯಾವನೇ ಆಗಿರಲಿ ಕಥೆ ಫಿನಿಶ್! ಅರೆರೆ.. ಸ್ವಲ್ಪ ತಾಳಿ ಇದು ಯಾವುದೋ ಬಿಲ್ಡಪ್ ಮೂವಿ ಸೀನ್ ಅಲ್ಲ. ರಷ್ಯಾ ಅಧ್ಯಕ್ಷ ಮತ್ತು ರಷ್ಯನ್ನರ ಪಾಲಿನ ರಾಕಿಂಗ್ ಸ್ಟಾರ್ ವ್ಲಾದಿಮಿರ್ ಪುಟಿನ್ ಅವರ ರೂಲ್ಸ್. ಆದರೆ ಇಂತಿಪ್ಪ ಪುಟಿನ್ ಈಗ ದಿಢೀರ್ ಸತ್ತು ಹೋಗಿದ್ದಾರೆ ಅನ್ನೋ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದ್ದು, ತಲ್ಲಣ ಸೃಷ್ಟಿಸಿದೆ.
ಹೌದು, ಆಧುನಿಕ ಕಾಲದಲ್ಲಿ ಪುಟಿನ್ ರೀತಿಯ ಬಲಶಾಲಿ ಅಧ್ಯಕ್ಷನನ್ನು ಜಗತ್ತು ಕಂಡೇ ಇಲ್ಲ ಎಂಬ ಮಾತು ಅವರ ಬೆಂಬಲಿಗರದ್ದು. ಆದರೆ ವ್ಲಾದಿಮಿರ್ ಪುಟಿನ್ ರೀತಿಯ ಸರ್ವಾಧಿಕಾರಿನ ನಾವು ನೋಡೇ ಇಲ್ಲ ಅನ್ನೋ ಆರೋಪ ಅಮೆರಿಕದ ನಾಯಕರದ್ದು. ಹೀಗೆ ಒಬ್ಬರು ಹೊಗಳಿ ಹೊಗಳಿ ಅಟ್ಟಕ್ಕೆ ಏರಿಸುತ್ತಿದ್ದರೆ, ಮತ್ತೊಬ್ಬರು ಪುಟಿನ್ ವಿರುದ್ಧ ಏನೆಲ್ಲಾ ಸಾಧ್ಯವೋ ಅದೆಲ್ಲ ರೀತಿಯ ಆರೋಪ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ಪುಟಿನ್ ಸತ್ತು ಹೋಗಿದ್ದಾರೆಂಬ ಸುದ್ದಿ ಸಂಚಲನ ಸೃಷ್ಟಿಸಿದೆ.

ವ್ಲಾದಿಮಿರ್ ಪುಟಿನ್ ಜೀವಕ್ಕೆ ಅಪಾಯ?
ತಿಂಗಳಿಗೆ 30 ಸಾರಿ ಪುಟಿನ್ ಸತ್ತೋದ್ರು, ಪುಟಿನ್ ಸತ್ತೋದ್ರು ಅನ್ನೋ ಸುದ್ದಿ ಕೇಳಿ ಕೇಳಿ ಈಗ ಜಗತ್ತಿಗೇ ಸಾಕಾಗಿ ಹೋಗಿದೆ. ಅದರಲ್ಲೂ ಟೆಲಿಗ್ರಾಂನಲ್ಲಿ ಒಂದು ಚಾನೆಲ್ ಪದೇ ಪದೆ ಪುಟಿನ್ ಬಗ್ಗೆ ಸುಳ್ಳು ಮಾಹಿತಿ ನೀಡುತ್ತಿರುವ ಆರೋಪ ಕೇಳಿಬರುತ್ತಿದೆ. ಇದೇ ಟೆಲಿಗ್ರಾಂ ಚಾನೆಲ್ ಈಗ ಮತ್ತೊಮ್ಮೆ ಸುಳ್ಳು ಸುದ್ದಿ ನೀಡಿ, ನಗೆಪಾಟಲಿಗೆ ಗುರಿಯಾಗಿದೆ. ಮೊನ್ನೆ ಮೊನ್ನೆಯಷ್ಟೇ ಇದೇ ಚಾನೆಲ್ ಪುಟಿನ್‌ಗೆ ಕಾರ್ಡಿಯಕ್ ಅರೆಸ್ಟ್ ಅಂದ್ರೆ ಹೃದಯ ಸ್ತಂಭನವಾಗಿದೆ ಎಂದಿತ್ತು. ಆದ್ರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಪುಟಿನ್ ಅವರ ಸರ್ಕಾರಿ ನಿವಾಸ ಕ್ರೆಮ್ಲಿನ್ ಅಧಿಕಾರಿಗಳು, ಪುಟಿನ್‌ಗೆ ಏನೂ ಆಗಿಲ್ಲ ಎಂದಿದ್ದರು.
ಹಿಂದೆ ಕೂಡ ಇದೇ ಟೆಲಿಗ್ರಾಮ್ ಚಾನೆಲ್ ಒಂದರಲ್ಲಿ ಹರಿದಾಡಿದ್ದ ಸುದ್ದಿ ಸಂಚಲನ ಸೃಷ್ಟಿಸಿತ್ತು. ಅತ್ತ ರಷ್ಯಾ ಶತ್ರುಗಳಿಗೆ ಇದು ಅಲರ್ಟ್ ಆಗುವ ಸುದ್ದಿಯಾಗಿದ್ದರೆ, ರಷ್ಯಾದಲ್ಲಿ ದಿಢೀರ್ ಆತಂಕವೇ ಎದುರಾಗಿತ್ತು. ವ್ಲಾದಿಮಿರ್ ಪುಟಿನ್, ಮಲಗುವ ಕೋಣೆ ನೆಲದ ಮೇಲೆ ಬಿದ್ದಿದ್ದನ್ನ ಅಧಿಕಾರಿಗಳು ಗಮನಿಸಿದ್ದಾರೆ ಅಂತಾ ಹೇಳಲಾಗಿತ್ತು. ಪುಟಿನ್ ಆಹಾರ ತಿಂದ ನಂತರ, ಟೇಬಲ್ ಅನ್ನ ಕೈಯಿಂದ ತಳ್ಳಿ, ಬಳಿಕ ನೆಲದ ಮೇಲೆ ಮಗುಚಿ ಬಿದ್ದಿದ್ದಾರೆ. ಶಬ್ದ ಕೇಳಿದ ತಕ್ಷಣವೇ ಭದ್ರತಾ ಸಿಬ್ಬಂದಿ ಒಳಗೆ ಹೋಗಿ ವೈದ್ಯರಿಗೆ ತಕ್ಷಣ ಕರೆ ಮಾಡಿದ್ದರು ಎಂದು ಸುಳ್ಳು ಸುದ್ದಿ ಹರಡಿಸಿತ್ತು. ಇದಕ್ಕೆ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸ್ಪಷ್ಟನೆ ನೀಡಿದ್ದರು. ಸ್ಪಷ್ಟನೆ ನಂತರ ಮತ್ತೆ ಈಗ ಪುಟಿನ್ ಜೀವಕ್ಕೆ ಆಪತ್ತು ಎದುರಾಗಿದೆ ಅಂತಿದೆ ಅದೇ ಟೆಲಿಗ್ರಾಂ ಚಾನೆಲ್.

ಪುಟಿನ್ ರೀತಿಯೇ ಮತ್ತೊಬ್ಬ ವ್ಯಕ್ತಿ?
71ನೇ ವಸಂತಕ್ಕೆ ಕಾಲಿಟ್ಟಿರುವ ವ್ಲಾದಿಮಿರ್ ಪುಟಿನ್ ತಮ್ಮ ಜುಡೋ ಕಲೆ ಮೂಲಕ ಜಗತ್ತಿನಾದ್ಯಂತ ಹೆಸರು ಪಡೆದಿದ್ದರು. ಹಾಗೇ ಪುಟಿನ್ ಕರಡಿಯ ಮೇಲೆ ಸವಾರಿ ಮಾಡಿದ್ದು, ಕುದುರೆ ಏರಿ ಓಡಿದ್ದು ಸುದ್ದಿಯಾಗಿತ್ತು. ಆದರೆ ಪುಟಿನ್‌ಗೆ ಕ್ಯಾನ್ಸರ್ ಇದೆ, ಗಂಭೀರ ರೋಗ ಇದೆ ಅನ್ನೋ ಆರೋಪಗಳು ಪದೇ ಪದೆ ಕೇಳಿಬರುತ್ತಿವೆ. ಈ ಮಧ್ಯೆ ಪುಟಿನ್ ಅವರ ರೀತಿ ಇರುವ ಬೇರೆ ವ್ಯಕ್ತಿ ಈಗ ಪುಟಿನ್ ಅವರ ಜಾಗದಲ್ಲಿ ಆಡಳಿತ ನಡೆಸುತ್ತಿರುವ ಆರೋಪವೂ ಇದೆ. ಇದಕ್ಕೆಲ್ಲಾ ರಷ್ಯಾದ ಅಧ್ಯಕ್ಷರು ರಿಯಾಕ್ಟ್ ಮಾಡಲು ಹೋಗಿಲ್ಲ. ಇಷ್ಟಾದ್ರೂ ಪುಟಿನ್ ಸತ್ತಿದ್ದಾರೆ, ಪುಟಿನ್ ಬದುಕಿಲ್ಲ, ಪುಟಿನ್‌ಗೆ ಹಾರ್ಟ್ ಅಟ್ಯಾಕ್ ಆಗಿದೆ ಅಂತೆಲ್ಲಾ ಸುಳ್ಳು ಸುದ್ದಿಗಳು ಸದ್ದು ಮಾಡುತ್ತಿವೆ. ಇದರ ಜೊತೆ ರಷ್ಯಾದಲ್ಲಿ, ಪುಟಿನ್ ಸತ್ತ ಸುದ್ದಿ ಕೇಳಿ ಜನ ದಂಗೆ ಕೂಡ ಎದ್ದಿದ್ದಾರೆ ಎಂದಿದೆ ಟೆಲಿಗ್ರಾಂ ಚಾನೆಲ್.












Click it and Unblock the Notifications