ಉಕ್ರೇನ್ ಶಾಂತಿ ಒಪ್ಪಂದಕ್ಕೆ ಅಂತಿಮ ಹಂತದ ಸಿದ್ಧತೆ, ಪುಟಿನ್ ಮತ್ತು ಝೆಲೆನ್ಸ್ಕಿ ಭೇಟಿ ಶೀಘ್ರ?
ರಷ್ಯಾ ಮತ್ತು ಉಕ್ರೇನ್ ನಡುವೆ ಶುರುವಾಗಿರುವ ಭೀಕರ ಕಾಳಗಕ್ಕೆ ಇನ್ನೇನು 4 ವರ್ಷ ತುಂಬುತ್ತಿದೆ. 2022 ಫೆಬ್ರವರಿ 24 ಗುರುವಾರ ಈ ಭೀಕರ ಯುದ್ಧ ಶುರುವಾಗಿತ್ತು, ಕೆಲವೇ ದಿನಗಳಲ್ಲಿ ಮುಗಿದು ಹೋಗಬಹುದು ಎಂದು ಊಹಿಸಿದ್ದ ಯುದ್ಧ ಈಗಾಗಲೇ 4ನೇ ವರ್ಷ ಮುಗಿಸಿ 5ನೇ ವರ್ಷಕ್ಕೆ ಎಂಟ್ರಿ ಪಡೆಯಲು ಸಜ್ಜಾಗಿದೆ. ಆದರೆ ಹೇಗಾದರೂ ಮಾಡಿ 4ನೇ ವರ್ಷ ತುಂಬುವ ಮೊದಲೇ ಯುದ್ಧ ನಿಲ್ಲಿಸಬೇಕು ಎಂಬುದು ಅಮೆರಿಕದ ಗುರಿ. ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಮಧ್ಯೆ ಶಾಂತಿ ಒಪ್ಪಂದ ನಡೆಸಲು ಸಾಲು ಸಾಲು ಸಭೆಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಪುಟಿನ್ ಮತ್ತು ಝೆಲೆನ್ಸ್ಕಿ ಭೇಟಿ ಶೀಘ್ರ? ಎಂಬ ಪ್ರಶ್ನೆ ಮೂಡಿದೆ.
ಇಲ್ಲಿ ನಾವು ಅರಿಯಬೇಕಾದ ಮೊದಲ ವಿಚಾರ ಏನೆಂದರೆ, ಶಾಂತವಾಗಿದ್ದ ಜಗತ್ತಿನಲ್ಲಿ ಹೀಗೆಲ್ಲಾ ಸಾಲು ಸಾಲು ಯುದ್ಧಗಳು ಆರಂಭ ಆಗಿದ್ದೇ ರಷ್ಯಾ ಮತ್ತು ಉಕ್ರೇನ್ ನಡುವೆ ಕಾಳಗ ಶುರುವಾದ ನಂತರ. ಇದೇ ಕಾರಣಕ್ಕೆ ಮೊದಲು ಈ ಯುದ್ಧಕ್ಕೆ ಬ್ರೇಕ್ ಹಾಕಬೇಕು, ನಂತರ ಇಡೀ ಜಗತ್ತಿನಲ್ಲಿ ಶಾಂತಿ ನೆಲೆಸಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ. ಹೀಗಾಗಿಯೇ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಮ್ಮ ಅಧಿಕಾರಿಗಳನ್ನು ಪದೇ ಪದೇ ರಷ್ಯಾ ರಾಜಧಾನಿ ಮಾಸ್ಕೋಗೆ ಕಳಿಸಿದ್ದು, ನೇರವಾಗಿ ಪುಟಿನ್ ಅವರ ಜೊತೆಗೂ ಚರ್ಚೆ ಮಾಡಲಾಗಿದೆ. ಈ ಮಧ್ಯೆ ಯುಎಇ ನೆಲದಲ್ಲಿ ಈಗ ಮಹತ್ವದ ಸಭೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಮತ್ತೊಂದು ವಿಚಾರ ಗಮನ ಸೆಳೆಯುತ್ತಿದೆ.

ಶೀಘ್ರದಲ್ಲೇ ಯುದ್ಧ ಅಂತ್ಯವಾಗುತ್ತಾ?
ಜನವರಿ 24 ಶನಿವಾರ ತನಕ ಯುಎಇ ನೆಲದಲ್ಲಿ ಭಾರಿ ಮಹತ್ವದ ಚರ್ಚೆಗಳು ನಡೆದಿವೆ. ಸಭೆ ನಡೆಯುವಾಗ ರಷ್ಯಾ ಮತ್ತು ಉಕ್ರೇನ್ ನಡುವೆ ಅಮೆರಿಕದ ಅಧಿಕಾರಿಗಳು ಕೂಡ ಭಾವಹಿಸಿದ್ದರು. ಅಲ್ಲದೆ ರಷ್ಯಾ ಮತ್ತು ಉಕ್ರೇನ್ ಸಂಧಾನಕ್ಕೆ ಅಮೆರಿಕದ ಅಧಿಕಾರಿಗಳು ಸಲಹೆ & ಸೂಚನೆಗಳನ್ನ ಕೂಡ ನೀಡಿದ್ದಾರೆ. ವ್ಲಾದಿಮಿರ್ ಪುಟಿನ್ ಮತ್ತು ಝೆಲೆನ್ಸ್ಕಿ ಸಭೆಗೆ ಬಹಳ ಹತ್ತಿರದಲ್ಲಿದ್ದೇವೆ ಎಂದು ಉನ್ನತ ಅಧಿಕಾರಿಗಳ ಮಾಹಿತಿ ಆಧರಿಸಿ ಈಗ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಇದೀಗ ರಷ್ಯಾ ಮತ್ತು ಉಕ್ರೇನ್ ನಡುವಿನ ಘೋರ ಕದನ ಪ್ರಮುಖ ಹಂತವನ್ನು ಪ್ರವೇಶ ಮಾಡಿದೆ.
ನಿಲ್ಲದ ದಾಳಿ & ನಲುಗಿದ ಉಕ್ರೇನ್
ಉಕ್ರೇನ್ ವಿರುದ್ಧ ರಷ್ಯಾ ತನ್ನ ಘೋರ ದಾಳಿಯನ್ನು ನಿಲ್ಲಿಸಿಲ್ಲ. ಹೀಗೆ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಉಕ್ರೇನ್ ನೆಲದಲ್ಲಿ ಭೀಕರ ಚಳಿ ಆರಂಭವಾಗಿ, ಜನ ಬದುಕಲು ಆಗದ ಪರಿಸ್ಥಿತಿ ಎದುರಾಗಿದೆ. -10 ಡಿಗ್ರಿ ಸೆಲ್ಸಿಯಸ್ ಆಸುಪಾಸಿನ ಚಳಿ ಅಲ್ಲಿದೆ. ಆದರೆ ವಿದ್ಯುತ್ ಇಲ್ಲದೇ ಜೀವನ ಮಾಡುವುದೇ ಕಷ್ಟದ ಕೆಲಸ. ಇಷ್ಟೆಲ್ಲದರ ಮಧ್ಯೆ ದಿಢೀರ್ ದಾಳಿ ಮಾಡಿರುವ ರಷ್ಯಾ ಸೇನೆ ಮತ್ತಷ್ಟು ಭಾಗದಲ್ಲಿ ವಿದ್ಯುತ್ ಕೈಕೊಡುವ ರೀತಿ ಮಾಡಿದೆ. ಹೀಗಾಗಿ ಉಕ್ರೇನ್ ರಾಜಧಾನಿ ಕೀವ್ ಭಾಗದಲ್ಲಿ ಸುಮಾರು 6,000 ಕಟ್ಟಡಗಳು ಹೀಟರ್ ಸಿಗದೆ ನರಳಿವೆ. ಜನರಿಗೆ ಒಳಗೆ ಬದಕಲು ಆಗದೆ, ಹೋರಗೆ ಹೋಗಲು ಆಗದೆ ಒದ್ದಾಟ ಹೆಚ್ಚಾಗುತ್ತಿದೆ. ಆದಷ್ಟು ಬೇಗ ಈ ಯುದ್ಧ ನಿಲ್ಲಬೇಕು ಎಂದು ಜನರು ಕೂಡ ಬಯಸುತ್ತಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಮತ್ತು ಉಕ್ರೇನ್ ಯುದ್ಧ ವಿಚಾರದಲ್ಲಿ ಭಾರಿ ಗಟ್ಟಿ ನಿರ್ಧಾರ ಕೈಗೊಂಡಿದ್ದು, ಅತಿ ಶೀಘ್ರದಲ್ಲೇ ಈ ಯುದ್ಧ ನಿಲ್ಲಿಸಲು ಬೇಕಾದ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಪೂರಕವಾದ ವಾತಾವರಣ ಕೂಡ ಸೃಷ್ಟಿಯಾಗಿದ್ದು, ರಷ್ಯಾ ಗೆದ್ದಿರುವ ಜಾಗ ವಾಪಸ್ ಕೊಡುವ ವಿಚಾರದಲ್ಲೇ ಕಿರಿಕ್ ಹೆಚ್ಚಾಗಿದೆ. ಆದರೆ ಅದನ್ನು ಹೇಗೋ ಸರಿ ಮಾಡಿ ಇಬ್ಬರ ನಡುವೆ ಶಾಂತಿ ಒಪ್ಪಂದ ಮಾಡಿಸಬೇಕು ಎಂದು ಅಮೆರಿಕ ಸಭೆಗಳನ್ನು ನಡೆಸುತ್ತಿದೆ.












Click it and Unblock the Notifications