ಅಧ್ಯಕ್ಷರ ಜೊತೆ ದೇಶದ ಪ್ರತಿಯೊಬ್ಬ ನಾಗರಿಕ ಕೈಜೋಡಿಸಬೇಕು ಎಂದ ಪ್ರಧಾನಿ!
ರಾಷ್ಟ್ರಕ್ಕೆ ಸಂಕಟ ಎದುರಾದಾಗ ಎಲ್ಲರೂ ಒಗ್ಗಟ್ಟಾಗಿರಬೇಕು. ಈಗ ಅಂತಹದ್ದೇ ಪರಿಸ್ಥಿತಿ ಎದುರಾಗಿದ್ದು, ದೇಶದ ಪ್ರತಿಯೊಬ್ಬ ನಾಗರಿಕ ಕೂಡ ಅಧ್ಯಕ್ಷರ ಜೊತೆ ನಿಲ್ಲಬೇಕಾಗಿದೆ. ಆ ಮೂಲಕ ಶತ್ರುಗಳ ವಿರುದ್ಧದ ಹೋರಾಟದಲ್ಲಿ ಅಧ್ಯಕ್ಷರ ಕೈ ಬಲಪಡಿಸಿ ಎಂದು ಪ್ರಧಾನಿ ಮನವಿ ಮಾಡಿದ್ದಾರೆ. ಹಾಗಾದರೆ ಹೀಗೆ ಜನರಲ್ಲಿ ಮನವಿ ಮಾಡಿದ ಪ್ರಧಾನಿ ಯಾರು? ಯಾವ ದೇಶಕ್ಕೆ ಈಗ ಸಂಕಷ್ಟ ಎದುರಾಗಿದೆ? ಸಂಪೂರ್ಣ ಮಾಹಿತಿ ತಿಳಿಯಿರಿ.
ಕ್ಷಣಕ್ಷಣಕ್ಕೂ ತೀವ್ರವಾಗುತ್ತಿರುವ ಪರಿಸ್ಥಿತಿ & ಜೀವ ಭಯದಲ್ಲೇ ಬದುಕುತ್ತಿರುವ ಪ್ರಜೆಗಳು. ಇದು ರಷ್ಯಾದ ಈಗಿನ ಸ್ಥಿತಿ, ಏಕೆಂದರೆ ಖಾಸಗಿ ಸೇನೆ ದಂಗೆ ನಂತರ ಇಡೀ ರಷ್ಯಾ ಬೂದಿ ಮುಚ್ಚಿದ ಕೆಂಡವಾಗಿದೆ. ಅಲ್ಲಿ ನಾಗರಿಕರ ಹೋರಾಟ ಅಥವಾ ಹಿಂಸಾಚಾರ ಭುಗಿಲೇಳುವ ಸಾಧ್ಯತೆ ಕೂಡ ದಟ್ಟವಾಗಿದೆ. ಅದರಲ್ಲೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೀವಕ್ಕೂ ಅಪಾಯ ಇದೆ ಎನ್ನಲಾಗುತ್ತಿದೆ. ಹೀಗಾಗಿ ರಷ್ಯಾ ಪ್ರಧಾನಿ ಅಧ್ಯಕ್ಷರ ಬೆನ್ನಿಗೆ ನಿಂತಿದ್ದಾರೆ. ಹಾಗಾದ್ರೆ ಮಿಖಾಯಿಲ್ ಮಿಶುಸ್ಟಿನ್ ಹೇಳಿದ್ದೇನು? ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ಗೆ ಎದುರಾಗಿರುವ ಅಪಾಯ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ (Wagner Group Coup).

ಏಳಿ ಎದ್ದೇಳಿ, ಎಲ್ಲರೂ ಒಗ್ಗಟ್ಟಾಗಿ!
ಹೌದು, ರಷ್ಯಾದಲ್ಲಿ ಹಲವು ಕಾರಣಕ್ಕೆ ಖಾಸಗಿ ಸೇನೆ ದಂಗೆ ಎದ್ದಿತ್ತು. ಆದರೆ ಹೀಗೆ ದಂಗೆ ಎದ್ದ ನಂತರ ಖಾಸಗಿ ಸೇನೆ ಸೈಲೆಂಟ್ ಕೂಡ ಆಗೋಯ್ತು. ಹೀಗಾಗಿ ರಷ್ಯಾದಲ್ಲಿ ಪರಿಸ್ಥಿತಿ ಹಿಡಿತಕ್ಕೆ ಸಿಕ್ಕಿದೆ ಅಂತಾ ಯಾರೂ ನಂಬೋದಕ್ಕೆ ಆಗಲ್ಲ. ಯಾಕೆ ಗೊತ್ತಾ? ರಷ್ಯಾ ಖಾಸಗಿ ಸೇನೆ ದಂಗೆ ಬಳಿಕ ರಷ್ಯಾದ ಪ್ರಜೆಗಳು ಕೂಡ ದಂಗೆ ಏಳುವ ಸಾಧ್ಯತೆ ದಟ್ಟವಾಗಿದೆ. ಇದೇ ಹಿನ್ನೆಲೆ ಪುಟಿನ್ ಪಡೆ ಅಲರ್ಟ್ ಆಗಿದ್ದು, ಖುದ್ದಾಗಿ ರಷ್ಯಾ ಪ್ರಧಾನಿ ಜನರ ಬಳಿ ಮನವಿ ಮಾಡಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಬೆನ್ನಿಗೆ ನಿಲ್ಲೋಣ ಬನ್ನಿ ಎಂದು ಕರೆ ನೀಡಿದ್ದಾರೆ. ರಷ್ಯಾದ ಉಪಪ್ರಧಾನಿ & ಸಚಿವರ ಜೊತೆಗೆ ಸಭೆ ನಡೆಸಿ ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಈ ಮನವಿ ಮಾಡಿದ್ದಾರೆ.
ಮಿಖಾಯಿಲ್ ಮಿಶುಸ್ಟಿನ್ ಹೇಳಿದ್ದೇನು?
ವ್ಲಾದಿಮಿರ್ ಪುಟಿನ್ ಆಪ್ತರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಮಿಖಾಯಿಲ್ ಮಿಶುಸ್ಟಿನ್, ಇದೀಗ ಪುಟಿನ್ ಬೆಂಬಲಕ್ಕೆ ನಿಂತಿದ್ದಾರೆ. ತುರ್ತು ಸಭೆಯಲ್ಲಿ ರಷ್ಯಾದ ಸಚಿವರು ಹಾಗೂ ಉಪಪ್ರಧಾನಿಗಳ ಜೊತೆ ಮಾತನಾಡುತ್ತಾ, ಇದು ಅತಂತ್ಯ ಕಠಿಣವಾದ ಪರಿಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ನಮಗೆ ರಷ್ಯಾದ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯ, ನಾಗರಿಕರ ಸುರಕ್ಷತೆ ಮತ್ತು ಯೋಗಕ್ಷೇಮ ಮುಖ್ಯ. ಹೀಗಾಗಿ ನಾವು ರಾಷ್ಟ್ರದ ಅಧ್ಯಕ್ಷರ ಜೊತೆ ನಿಲ್ಲಬೇಕಿದ್ದು, ಸಂಕಷ್ಟವನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕಿದೆ ಎಂದಿದ್ದಾರೆ. ಈ ಮೂಲಕ ಪುಟಿನ್‌ಗೆ ಬೆಂಬಲ ನೀಡಲು ರಷ್ಯಾ ಪ್ರಜೆಗಳ ಬಳಿ ಮನವಿ ಮಾಡಿದ್ದಾರೆ.

ಸೇನಾ ದಂಗೆ ಶುರುವಾಗಿದ್ದು ಏಕೆ?
ವ್ಯಾಗ್ನರ್ ಗುಂಪು ಅಥವಾ ರಷ್ಯಾ ಖಾಸಗಿ ಸೈನಿಕ ಪಡೆ ರಷ್ಯಾದ ಸರ್ಕಾರಿ ಸೇನಾ ಪಡೆಯಷ್ಟೇ ಬಲವಾಗಿದೆ. ಪುಟಿನ್‌ರ ಅಧಿಕಾರ ಅವಧಿಯಲ್ಲಿ ಈ ಖಾಸಗಿ ಸೇನೆ ಸ್ಥಾಪನೆ ಆಗಿದ್ದು. ಯೆವ್ಗೆನಿ ಪ್ರಿಗೊಝಿನ್ ಅಂದ್ರೆ ಹಲವು ದಶಕಗಳಿಂದ ವ್ಲಾದಿಮಿರ್ ಪುಟಿನ್ ಜೊತೆಗೇ ಇರುವ ಈ ವ್ಯಕ್ತಿಯೇ ಖಾಸಗಿ ಸೇನೆ ಮುಖ್ಯಸ್ಥ. 2014ರಲ್ಲಿ ಪುಟಿನ್‌ರ ಅನುಮತಿ ಪಡೆದು ರಷ್ಯಾದಲ್ಲಿ ಖಾಸಗಿ ಸೇನೆ ಸ್ಥಾಪನೆ ಮಾಡಿದ್ದ. ಆದರೆ ಇತ್ತೀಚೆಗೆ ಉಕ್ರೇನ್ ವಿರುದ್ಧ ಯುದ್ಧದ ವಿಚಾರದಲ್ಲಿ ಪ್ರಿಗೊಝಿನ್ ಮತ್ತು ರಷ್ಯಾ ರಕ್ಷಣಾ ಸಚಿವನ ನಡುವೆ ಫೈಟ್ ಶುರುವಾಗಿತ್ತು.
ಉಕ್ರೇನ್‌ನ ಯುದ್ಧದಲ್ಲಿ ತನ್ನ ಖಾಸಗಿ ಸೇನೆ ಸೈನಿಕರು ಸಾಯುತ್ತಿದ್ದಿದ್ದು ಯೆವ್ಗೆನಿ ಪ್ರಿಗೊಝಿನ್ ಪಿತ್ತ ನೆತ್ತಿಗೇರಿಸಿತ್ತು. ಹಾಗೇ ಉಕ್ರೇನ್ ವಿರುದ್ಧ ಹೋರಾಡೋಕೆ ಖಾಸಗಿ ಸೈನಿಕರಿಗೆ ಸರಿಯಾಗಿ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಲಾಗಿತ್ತು. ಹೀಗಾಗಿ ದಂಗೆ ಶುರುವಾಗಿತ್ತು ಎನ್ನಲಾಗಿದೆ. ಆದರೆ ದಂಗೆಯ ನಡುವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಮತ್ತೊಬ್ಬ ಮಿತ್ರ ಎಂಟ್ರಿ ಕೊಟ್ಟಿದ್ದ. ಬೆಲಾರಸ್ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಪರಿಸ್ಥಿತಿಯನ್ನ ನಿಭಾಯಿಸಿ, ಖಾಸಗಿ ಸೇನೆಯ ಜೊತೆ ಸಂಧಾನ ಮಾಡಿ ಸೇನಾ ದಂಗೆ ಶಮನಗೊಳಿಸಿದ್ದಾರೆ ಎನ್ನಲಾಗಿದೆ. ಆದರೆ ಈವರೆಗೆ ರಷ್ಯಾದಲ್ಲಿ ಪರಿಸ್ಥಿತಿ ಮಾತ್ರ ಹಿಡಿತಕ್ಕೆ ಸಿಗುತ್ತಿಲ್ಲ. ಹೀಗಾಗಿ ಖುದ್ದು ರಷ್ಯಾ ಪ್ರಧಾನಿ, ಅಧ್ಯಕ್ಷ ಪುಟಿನ್ ಪರ ನಿಂತು ಜನರಲ್ಲಿ ಮನವಿ ಮಾಡಿದ್ದಾರೆ.












Click it and Unblock the Notifications