ಹೆಣ ಹೂತುಹಾಕಲು ಹೋದವರ ಮೇಲೆ ಬಾಂಬ್ ದಾಳಿ, 38 ಜನ...
ಕೀವ್: ಯುದ್ಧ ಎಂಬ ಮಾತು ಬಂದರೆ ಮನುಷ್ಯತ್ವಕ್ಕೆ ಬೆಲೆಯೇ ಇರಲ್ಲ. ಅದರಲ್ಲೂ 2 ಮಹಾಯುದ್ಧಗಳನ್ನ ಕಣ್ಣಾರೆ ಕಂಡರೂ ಮನುಷ್ಯ ಬುದ್ಧಿ ಕಲಿಯುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ರಷ್ಯಾ & ಉಕ್ರೇನ್ ಯುದ್ಧ. ಕೋಳಿ ಜಗಳದಂತೆ ಶುರುವಾದ ಈ ಗಲಾಟೆಯ ಬಗ್ಗೆ ಈಗೀಗ ಭಯ ಶುರುವಾಗಿದೆ. ರಷ್ಯಾ & ಉಕ್ರೇನ್ ಯುದ್ಧ ಅದೆಷ್ಟು ಭೀಕರವಾಗುತ್ತಿದೆ ಎಂದರೆ, ಅಂತ್ಯಸಂಸ್ಕಾರಕ್ಕೆ ಹೋಗುತ್ತಿದ್ದವರ ಮೇಲೆಯೇ ಬಾಂಬ್ ದಾಳಿ ನಡೆದುಬಿಟ್ಟಿದೆ.
ಹೌದು, ಉಕ್ರೇನ್ ಗಡಿಯ ಸಣ್ಣ ಹಳ್ಳಿಯಲ್ಲಿ ಭೀಕರ ಘಟನೆ ನಡೆದಿದೆ. ತನ್ನ ದೇಶದಲ್ಲಿನ ಖಾಸಗಿ ಸೇನೆ ದಂಗೆ ಬಳಿಕ ರಷ್ಯಾ ರೊಚ್ಚಿಗೆದ್ದಿದೆ. ಹೀಗಾಗಿ ಮನಸ್ಸಿಗೆ ಬಂದಂತೆ ಮಿಸೈಲ್ ದಾಳಿ ನಡೆಸುತ್ತಿದೆ. ಇದೇ ರೀತಿ ಉಕ್ರೇನ್ ಮೇಲೆ ರಷ್ಯಾ ಇದೀಗ ನಡೆಸಿರುವ ದಾಳಿ ದೊಡ್ಡ ಮಟ್ಟಿಗೆ ಹಾನಿ ಮಾಡಿದೆ. ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದವರ ಮೇಲೆ ರಷ್ಯಾ ಹಾರಿಸಿದ್ದ 1 ಮಿಸೈಲ್ ಬಿದ್ದಿದ್ದು 38 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮಕ್ಕಳು ಕೂಡ ಸೇರಿದ್ದಾರೆ. ಈ ಘಟನೆ ಬಳಿಕ ಉಕ್ರೇನ್ ಕೂಡ ಆಕ್ರೋಶ ಹೊರಹಾಕಿದೆ. ರಷ್ಯಾ ಮಾತ್ರವಲ್ಲ ಉಕ್ರೇನ್ ಕೂಡ ಡ್ರೋನ್ ದಾಳಿ ನಡೆಸಿ, ವಿಮಾನಗಳ ಹಾರಾಟವನ್ನೇ ಬಂದ್ ಮಾಡಿಸಿದ ಆರೋಪ ರಷ್ಯಾ ಕಡೆಯಿಂದ ಕೇಳಿಬಂದಿದೆ.

ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿ?
ಇನ್ನೊಂದ್ಕಡೆ ರಷ್ಯಾ ರಾಜಧಾನಿ ಮಾಸ್ಕೋ ಸಮೀಪದಲ್ಲಿ ಉಕ್ರೇನ್‌ನ ಡ್ರೋನ್‌ಗಳು ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಕೂಡಲೇ ಮಾಸ್ಕೋದ 3 ವಿಮಾನ ನಿಲ್ದಾಣಗಳ ಪೈಕಿ 1 ವಿಮಾನ ನಿಲ್ದಾಣವನ್ನ ರಷ್ಯಾ ಸಂಪೂರ್ಣವಾಗಿ ಬಂದ್ ಮಾಡಿತ್ತು. ಅಲ್ದೆ ತನ್ನ ಏರ್ ಡಿಫೆನ್ಸ್ ಸಿಸ್ಟಮ್ ಮೂಲಕ ಉಕ್ರೇನ್‌ಗೆ ಸೇರಿದ ಡ್ರೋನ್‌ಗಳನ್ನು ಉಡಾಯಿಸಿದ್ದೇವೆ ಎಂದು ರಷ್ಯಾ ಹೇಳಿಕೊಂಡಿದೆ. ಹೀಗೆ ಇವರಿಬ್ಬರ ನಡುವೆ ಕಿತ್ತಾಟ ಬಲು ಜೋರಾಗುತ್ತಿದೆ. ಆದರೆ ರಷ್ಯಾ ಮತ್ತು ಉಕ್ರೇನ್ ಸೇನೆ ನಡೆಸುತ್ತಿರುವ ದಾಳಿಯಿಂದ ಅಮಾಯಕರು ಪ್ರಾಣ ಬಿಡುವಂತಾಗಿದೆ. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆ ಶುರುವಾಗಿದೆ.
ಅಮೆರಿಕಗೆ ಪುಟಿನ್ ಪರೋಕ್ಷ ಎಚ್ಚರಿಕೆ?
ರಷ್ಯಾ & ಉಕ್ರೇನ್ ಮಧ್ಯೆ ಭೀಕರ ಯುದ್ಧ ನಡೆಯುತ್ತಿದ್ರೆ ಅಮೆರಿಕ & ಪಾಶ್ಚಿಮಾತ್ಯ ರಾಷ್ಟ್ರಗಳು ಉಕ್ರೇನ್ ಪರ ನಿಂತಿವೆ. ಹೀಗೆ ರಷ್ಯಾ ವಿರುದ್ಧ ಸಾಕಷ್ಟು ಒತ್ತಡ ಹೇರುತ್ತಿರುವ ಆರೋಪ ಇದೆ. ಈ ಆರೋಪಗಳಿಗೆ ತಕ್ಕ ಉತ್ತರ ನೀಡಲು ರಷ್ಯಾದ ಅಧ್ಯಕ್ಷ ಪುಟಿನ್ ಬಳಸಿಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು. ಇಂದು ನಡೆದ ಶಾಂಘೈ ಸಹಕಾರ ಸಂಘಟನೆ ಸಭೆ ಅಧ್ಯಕ್ಷತೆಯನ್ನ ಭಾರತ ಮೊದಲ ಬಾರಿ ವಹಿಸಿಕೊಂಡಿದ್ದು, ಈ ಸಭೆಯಲ್ಲೇ ಪರೋಕ್ಷವಾಗಿ ಅಮೆರಿಕಗೆ ಎಚ್ಚರಿಕೆ ನೀಡಿದಂತೆ ಪುಟಿನ್ ಮಾತನಾಡಿದ್ರು. ಹಾಗಾದರೆ ವಿಶ್ವದ ದೊಡ್ಡಣ್ಣನಿಗೆ ಪುಟಿನ್ ಕೊಟ್ಟ ಮೆಸೇಜ್ ಏನು? ಮುಂದೆ ಓದಿ.

ಏಟಿಗೆ ಎದಿರೇಟು ಕೊಡೋದು ಪಕ್ಕಾ!
ರಷ್ಯಾ ಮೇಲೆ ಅಮೆರಿಕ & ನ್ಯಾಟೋ ಪಡೆಯ ಮಿತ್ರ ರಾಷ್ಟ್ರಗಳು ಸಾಕಷ್ಟು ನಿರ್ಬಂಧ ಹೇರಿವೆ. ಅದರಲ್ಲೂ ಆರ್ಥಿಕವಾಗಿ ರಷ್ಯಾ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿವೆ. ಹೀಗಾಗಿ ಪುಟಿನ್ ಇಂದು ಗರಂ ಆಗಿದ್ದರು, ಅಲ್ಲದೆ ಭಾರತದ ಸಹಾಯ ನೆನೆದಿದ್ದಾರೆ. ಈ ಬಗ್ಗೆ ಮಾತನಾಡಿದ ಪುಟಿನ್, 'ಉಕ್ರೇನ್ ವಿರುದ್ಧ ಸೇನಾ ಕಾರ್ಯಾಚರಣೆ ಕೈಗೊಂಡ ನಂತರ ರಷ್ಯಾ ಮೇಲೆ ಪಶ್ಚಿಮದ ರಾಷ್ಟ್ರಗಳು ಹೇರುತ್ತಿರುವ ಒತ್ತಡ ಹಾಗೂ ನಿರ್ಬಂಧಗಳಿಗೆಲ್ಲ ರಷ್ಯಾ ತಕ್ಕ ಉತ್ತರ ನೀಡಲಿದೆ' ಎಂದಿದ್ದಾರೆ ಪುಟಿನ್. ಈ ಮೂಲಕ ಅಮೆರಿಕದ ಒತ್ತಡಗಳಿಗೆ ನಾವು ಬಗ್ಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್.
ಹಾಗೇ ರಷ್ಯಾದಲ್ಲಿ ಕಳೆದ ವಾರ ಖಾಸಗಿ ಸೇನೆ ದಂಗೆ ಎದ್ದು ನೇರ ಪುಟಿನ್ ವಿರುದ್ಧವೇ ಯುದ್ಧ ಘೋಷಣೆ ಮಾಡಿತ್ತು. ಹೀಗೆ ರಷ್ಯಾ ರಾಜಧಾನಿ ಮಾಸ್ಕೋ ಕಡೆ ನುಗ್ಗಿ ಬರುತ್ತಿದ್ದ ಖಾಸಗಿ ಸೇನೆ, ದಿಢೀರ್ ನಿಲುವು ಬದಲಾಯಿಸಿ ಎಸ್ಕೇಪ್ ಆಗಿತ್ತು. ಆದರೆ ಆ ಸಂದರ್ಭದಲ್ಲಿ ಹಲವು ದೇಶಗಳು ರಷ್ಯಾಗೆ ಧೈರ್ಯ ತುಂಬಿವೆ. ಅದ್ರಲ್ಲೂ 'ಶಾಂಘೈ ಸಹಕಾರ ಸಂಘಟನೆ' ಒಕ್ಕೂಟದ ಸದಸ್ಯ ರಾಷ್ಟ್ರಗಳ ಸಹಾಯ ನೆನಪು ಮಾಡಿಕೊಂಡ ಪುಟಿನ್ 'ರಷ್ಯಾದಲ್ಲಿ ಖಾಸಗಿ ಮಿಲಿಟರಿ ಪಡೆಗಳು ದಂಗೆ ಎದ್ದಿದ್ದ ಸಂದರ್ಭದಲ್ಲಿ ಬೆಂಬಲಕ್ಕೆ ನಿಂತ ಎಸ್‌ಸಿಒ ಸದಸ್ಯ ರಾಷ್ಟ್ರಗಳಿಗೆ ಧನ್ಯವಾದ' ಎಂದಿದ್ದಾರೆ.












Click it and Unblock the Notifications