ಕ್ರಿಮಿಯಾ ಹತ್ತಿರದ ಖೆರ್ಸನ್ ನಗರ ವಶಕ್ಕೆ ಪಡೆದ ರಷ್ಯಾ
ಕೀವ್, ಮಾರ್ಚ್ 02: ಉಕ್ರೇನ್-ರಷ್ಯಾ ನಡುವಿನ ಸಮರವು ಇಂದು ಏಳನೇ ದಿನಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ರಷ್ಯಾವು ಉಕ್ರೇನ್‌ನ ಭಾಗವನ್ನು ವಶಪಡಿಸಿಕೊಳ್ಳುತ್ತಾ ಹೋಗುತ್ತಿದೆ.
ಉಕ್ರೇನ್ನ ದಕ್ಷಿಣ ಭಾಗದಲ್ಲಿರುವ ಖೆರ್ಸನ್ ನಗರವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದಾಗಿ ರಷ್ಯಾ ಸೇನೆ ಬುಧವಾರ ಹೇಳಿದೆ. ಪ್ರಸ್ತುತ ರಷ್ಯಾದ ಸೈನ್ಯ ಮತ್ತು ಸ್ಥಳೀಯ ಅಧಿಕಾರಿಗಳ ನಡುವೆ ಸಂಪರ್ಕ ಏರ್ಪಡಿಸುವುದು, ಜನರನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ಸೇವೆಗಳನ್ನು ಪುನಾರಂಭಿಸುವ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ರಷ್ಯಾ ಸಶಸ್ತ್ರ ಪಡೆಗಳು ಖೆರ್ಸನ್ ಪ್ರದೇಶವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿವೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಇಗೊರ್ ಕೊನಾಶೆಂಕೋವ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಖೆರ್ಸನ್ ನಗರವನ್ನು ವಶಕ್ಕೆ ತೆಗೆದುಕೊಂಡರೂ, ಸಾರ್ವಜನಿಕ ಸೇವೆಗಳು ಮತ್ತು ಸಾರಿಗೆ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಇಗೊರ್ ಕೊನಾಶೆಂಕೋವ್ ಸ್ಪಷ್ಟನೆ ನೀಡಿದ್ದು, ಖೆರ್ಸನ್ ನಗರದಲ್ಲಿ ಆಹಾರ ಮತ್ತು ಅಗತ್ಯವಸ್ತುಗಳ ಕೊರತೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಉಕ್ರೇನ್ ನಗರವನ್ನು ಕೈವಶ ಮಾಡಲೇಬೇಕೆಂದು ಹಠಕ್ಕೆ ಬಿದ್ದಿರುವ ರಷ್ಯಾ ಈಗ ಖೆರ್ಸನ್ ನಗರವನ್ನು ವಶಕ್ಕೆ ಪಡೆದಿದೆ. ನಗರವನ್ನು ವಶ ಪಡಿಸಿಕೊಳ್ಳಲು ಈಗ ಸರ್ಕಾರಿ ಕಟ್ಟಡದ ಮೇಲೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸುತ್ತಿದೆ. ಹೆರಿಗೆ ಆಸ್ಪತ್ರೆ, ಕೀವ್ ಸೇನಾ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್ ಸೇರಿ ಉಕ್ರೇನ್‍ನ ಮೇಲೆ ರಷ್ಯಾ ಏಕಕಾಲದಲ್ಲಿ ಮೂರು ಕಡೆ ದಾಳಿ ಮಾಡಿದೆ. ದಾಳಿಯಲ್ಲಿ 21 ಜನರು ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಉಕ್ರೇನಿನ ಮೇಲೆ ರಷ್ಯಾದ ಆಕ್ರಮಣ ಇಂದು 7ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ದಾಳಿಗೆ ಉಕ್ರೇನಿನ ಪ್ರಮುಖ ರಾಜ್ಯಗಳಾದ ಕೀವ್ ಮತ್ತು ಖಾರ್ಕಿವ್ ನಲುಗಿ ಹೋಗಿವೆ. ಇಂದು ರಷ್ಯಾ ಏಕಕಾಲದಲ್ಲಿ 3 ಕಡೆ ವೈಮಾನಿಕ ದಾಳಿ ನಡೆಸಿದೆ. ಕೀವ್, ಖಾರ್ಕಿವ್, ಖೆರ್ಸನ್‍ನಲ್ಲಿ ರಾಕೆಟ್, ಕ್ಷಿಪಣಿಗಳ ದಾಳಿ ನಡೆಸಿದೆ.
ಏರ್‌ಪೋರ್ಟ್, ಝಿಟೋಮಿರ್ ಹೆರಿಗೆ ಆಸ್ಪತ್ರೆ, ಮಿಲಿಟರಿ ಅಕಾಡಮಿ, ಪೊಲೀಸ್ ಹೆಡ್‍ಕ್ವಾಟರ್ಸ್‍ಗಳ ಮೇಲೆ ದಾಳಿ ನಡೆಸಿದೆ. ದಾಳಿ ವೇಳೆ 21ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, 112 ಜನರು ಗಾಯಗೊಂಡಿದ್ದಾರೆ. ಝಿಟೋಮಿರ್ ಹೆರಿಗೆ ಆಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 21 ಜನರಿಗೆ ಗಂಭೀರ ಗಾಯಗಳಾಗಿವೆ.
ಖೇರ್ಸನ್ ಏರ್‌ಪೋರ್ಟ್‍ನಲ್ಲಿ ಕ್ಷಿಪಣಿ ದಾಳಿ ಹಾಗೂ ಕೀವ್ ಸೆಂಟ್ರಲ್ ರೇಲ್ವೆ ಸ್ಟೇಶನ್‍ನಲ್ಲಿ ಗುಂಡಿನ ದಾಳಿ ನಡೆದಿದೆ. ಅಷ್ಟೇ ಅಲ್ಲದೇ ಜಲ ಮಾರ್ಗದಲ್ಲೂ ದಾಳಿ ತೀವ್ರಗೊಳಿಸಿದ್ದು, ಕಪ್ಪು ಸಮುದ್ರದಲ್ಲಿ ಸೇನೆಯನ್ನು ಹೆಚ್ಚಳ ಮಾಡಿದೆ.
ಈಗಾಗಲೇ ರಷ್ಯಾ ಪಡೆಗಳು ಉಕ್ರೇನ್‍ನ ಖೆರ್ಸನ್ ನಗರ ವಶಪಡಿಸಿಕೊಂಡಿದೆ. ನಗರದ ರೈಲ್ವೆ ನಿಲ್ದಾಣ ಮತ್ತು ಬಂದರು ವಶಕ್ಕೆ ಪಡೆದಿದೆ. ಇಡೀ ನಗರದ ಮೇಲೆ ಅಸ್ತಿತ್ವ ಸಾಧಿಸುತ್ತಿದ್ದಾರೆ. ಕೀವ್, ಚೆರ್ನಿಹಿವ್, ಒಬ್ಲಾಸ್ಟ್‍ನ ಪೈರಿಯಾಟಿನ್ ಮತ್ತು ಮೈರೋರೋಡ್ ನಗರಗಳಿಗೆ ರಷ್ಯಾ ಪಡೆಗಳು ಬಂಕರ್‌ಗೆ ತೆರಳುವಂತೆ ಜನರಿಗೆ ಸೈರನ್ ಮೂಲಕ ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications