ರಷ್ಯಾ ಮೇಲೆ ದಾಳಿ ಮಾಡಿದ್ದು ಐಎಸ್ ಉಗ್ರರು?
ರಷ್ಯಾದಲ್ಲಿ ರಕ್ತದೋಕುಳಿ ನಡೆಸಿರುವ ಪಾಪಿ ಉಗ್ರರು ಈವರೆಗೂ 143 ಅಮಾಯಕ ಜನರ, ಜೀವ ತೆಗೆದು ಅಟ್ಟಹಾಸ ಮೆರೆದಿದ್ದಾರೆ. ಹೀಗಿದ್ದಾಗ ರಷ್ಯಾ ಕೂಡ ರೊಚ್ಚಿಗೆದ್ದು ಉಗ್ರರನ್ನ ಫಿನಿಷ್ ಮಾಡಲು ಪಣತೊಟ್ಟಿದೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವ ಸಮಯದಲ್ಲಿಯೇ ಐಎಸ್ ಉಗ್ರರ ಕಿತಾಪತಿ ಇಡೀ ಜಗತ್ತಿಗೆ ಗೊತ್ತಾಗಿದೆ.
ರಷ್ಯಾ ರಾಜಧಾನಿ ಮಾಸ್ಕೊ ನಗರದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ನುಗ್ಗಿ, 143 ನಾಗರಿಕರನ್ನು ಗುಂಡಿಕ್ಕಿ ಹತ್ಯೆ ಮಾಡಿದ ನಾಲ್ವರು ಉಗ್ರರ ಚಿತ್ರವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ರಿಲೀಸ್ ಮಾಡಿದೆ. ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಐಎಸ್ ಉಗ್ರರ ಕೈವಾಡ ಇದೆ ಅನ್ನೋದನ್ನ ಹೇಳಿದ್ದರು. ಇದೀಗ ಅಧಿಕೃತವಾಗಿ ಉಗ್ರರೇ ಈ ಬಗ್ಗೆ ಫೋಟೋ ರಿಲೀಸ್ ಮಾಡಿ ಬೆಂಕಿ ಹೊತ್ತಿಸಿದ್ದಾರೆ. ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾಗೆ ಐಎಸ್ ಉಗ್ರರು ದಾಳಿಯ ಹೊಣೆ ಹೊತ್ತುಕೊಂಡ ನಂತರ ಮತ್ತೆ ಪಿತ್ತ ನೆತ್ತಿಗೇರಿದೆ.

ಐಎಸ್ ಉಗ್ರರು ದಾಳಿ ಮಾಡಿದ್ದೇಕೆ?
ಅಂದಹಾಗೆ ಇದೀಗ ತಾವು ದಾಳಿ ಮಾಡಿದ್ದು ಯಾಕೆ? ಎಂಬ ವಿಚಾರವನ್ನು ಕೂಡ ಐಎಸ್ ಉಗ್ರರು ತಿಳಿಸಿದ್ದಾರೆ. ಇಸ್ಲಾಂ ವಿರುದ್ಧ ಹೋರಾಟ ನಡೆಸುತ್ತಿರುವ ರಾಷ್ಟ್ರಗಳು ಹಾಗೂ ಐಎಸ್ ನಡುವೆ ಕದನ ವಿಪರೀತವಾದ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ಉಗ್ರರು ಹೇಳಿದ್ದಾರೆ. ಈ ಬಗ್ಗೆ ಉಗ್ರರ ಸಂಘಟನೆಯ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ರಷ್ಯಾ ಯಾವ ಕ್ಷಣದಲ್ಲೂ ಐಎಸ್ ಉಗ್ರರ ರುಂಡ ಚಂಡಾಡುವ ಸಾಧ್ಯತೆ ದಟ್ಟವಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಸೇರಿ ಒಟ್ಟು 11 ಶಂಕಿತರನ್ನು ಈವರೆಗೂ ಅರೆಸ್ಟ್ ಮಾಡಿ, ಬೆಂಡೆತ್ತಲಾಗಿದೆ.
ರಷ್ಯಾ ಇತಿಹಾಸದಲ್ಲಿ ಅತ್ಯಂತ ಭೀಕರ ಉಗ್ರ ದಾಳಿ ಇದಾಗಿದ್ದು, ಈ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ಐಎಸ್ ಹೊತ್ತುಕೊಂಡಿದೆ. ಹೀಗಿದ್ದರೂ ಐಎಸ್ ಉಗ್ರರ ಈ ದಾಳಿಯ ಹಿಂದೆ ಉಕ್ರೇನ್ ಸೇನೆಯ ಕೈವಾಡ ಇದೆ ಎಂಬ ಆರೋಪವನ್ನು ರಷ್ಯಾ ಮಾಡುತ್ತಿದೆ. ಹೀಗಾಗಿಯೆ ಈಗ ನಡೆಯುತ್ತಿರುವ ಯುದ್ಧವನ್ನು ರಷ್ಯಾ ಮತ್ತಷ್ಟು ಜೋರು ಮಾಡುತ್ತಾ? ಎಂಬ ಭಯ ಆವರಿಸಿದೆ.
Images: ISIS has posted alleged photos of the perpetrators of the latest terrorist attack in Moscow, along with a more detailed claim of responsibility from the Islamic State. The materials were published by the official ISIS media wing, Amaq News Agency. pic.twitter.com/zxlfq2C0KB
— Evan Kohlmann (@IntelTweet) March 23, 2024
ಯುದ್ಧದ ಭೀಕರತೆ ಮತ್ತಷ್ಟು ಜೋರು?
ರಷ್ಯಾ ರೊಚ್ಚಿಗೆದ್ದು ನಿಂತ್ರೆ ಯುದ್ಧ ಮತ್ತೊಂದು ಭೀಕರ ಹಂತಕ್ಕೆ ತಲುಪುವ ಆತಂಕ ಎಲ್ಲೆಲ್ಲೂ ಮನೆಮಾಡಿದೆ. ಯಾಕಂದ್ರೆ ರಷ್ಯಾ ಹೇಳುತ್ತಿರುವ ಪ್ರಕಾರ, ಮಾಸ್ಕೋದ ಗುಂಡಿನ ದಾಳಿ ಹಿಂದೆ ಉಕ್ರೇನ್ ಕೈವಾಡ ಇದ್ದರೆ ರಷ್ಯಾ ತನ್ನ ದಾಳಿಯ ತೀವ್ರಗೊಳಿಸಿ, ಯುದ್ಧ ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ. ಇದು ಸಾಲದು ಎನ್ನುವಂತೆ ಈಗಾಗಲೇ ಉಕ್ರೇನ್ ದೇಶದ ಪ್ರಮುಖ ನಗರಗಳಲ್ಲಿ ವಿದ್ಯುತ್ ಕೈಕೊಟ್ಟಿದ್ದು, ರಷ್ಯಾ ಸೇನೆ ತನ್ನ ದಾಳಿ ಮತ್ತಷ್ಟು ವೇಗವಾಗಿ ನಡೆಸುತ್ತಿದೆ. ವಿದ್ಯುತ್ ಇಲ್ಲದೆ ಈಗಾಗಲೇ ಉಕ್ರೇನ್‌ನ ಹಲವು ನಗರಗಳ ಜನರು ಪರದಾಡಿ ಹೋಗಿದ್ದು, ಯುದ್ಧ ಮತ್ತಷ್ಟು ಭೀಕರವಾಗುವ ಮುನ್ಸೂಚನೆ ಸಿಗುತ್ತಿದೆ.

ಉಗ್ರರು ಅಟ್ಯಾಕ್ ಮಾಡಿದ್ದು ಹೇಗೆ?
ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಉಗ್ರರ ದಾಳಿ ನಡೆದಿದೆ. ಮಾಸ್ಕೋ ಕ್ರಾಕಸ್ ಸಿಟಿ ಹಾಲ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ನುಗ್ಗಿದ್ದ ಉಗ್ರರು, ಮನಸ್ಸಿಗೆ ಬಂದಂತೆ ಗುಂಡು ಹಾರಿಸಿ ನೂರಾರು ಜನರ ಹತ್ಯೆ ಮಾಡಿದ್ದಾರೆ. ಸಾವಿರಾರು ಜನ ಸೇರಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 143 ಜನರನ್ನು ಐಎಸ್ ಉಗ್ರರು ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ 187 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ಸಮಯದಲ್ಲಿ, ದಾಳಿ ನಡೆಸಿರುವ ಒಟ್ಟು 11 ಉಗ್ರರನ್ನು ರಷ್ಯಾ ಸೇನೆ ಅರೆಸ್ಟ್ ಮಾಡಿದೆ.












Click it and Unblock the Notifications