ಓಮಿಕ್ರಾನ್ ಅತ್ಯಂತ ಅಪಾಯಕಾರಿ: ಗಂಭೀರ ಪರಿಣಾಮದ ಎಚ್ಚರಿಕೆ ನೀಡಿದ WHO
ಜಿನಿವಾ, ನವೆಂಬರ್ 29: "ಕೊರೊನಾ ವೈರಸ್ ಸೋಂಕಿನ ಹೊಸ ರೂಪಾಂತರ ಓಮಿಕ್ರಾನ್ ಅತ್ಯಂತ ಅಪಾಯಕಾರಿ," ಎಂದಿರುವ ವಿಶ್ವ ಆರೋಗ್ಯ ಸಂಸ್ಥೆಯು "ಜಾಗತಿಕವಾಗಿ ಅತ್ಯಂತ ಗಂಭೀರ ಪರಿಣಾಮವನ್ನು ಈ ಹೊಸ ರೂಪಾಂತರವು ಉಂಟು ಮಾಡಲಿದೆ," ಎಂಬ ಎಚ್ಚರಿಕೆಯನ್ನು ಸೋಮವಾರ ನೀಡಿದೆ.
ಭಾನುವಾರವಷ್ಟೇ ಓಮಿಕ್ರಾನ್ ಬಗ್ಗೆ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯು ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಜಗತ್ತನ್ನು ತತ್ತರಿಸುವಂತೆ ಮಾಡಿರುವ ರೂಪಾಂತರ ತಳಿಗಳಲ್ಲೇ ಡೆಲ್ಟಾ ಅತ್ಯಂತ ಅಪಾಯಕಾರಿಯಾಗಿತ್ತು. ಆದರೆ ಈಗ ಪತ್ತೆಯಾಗಿರುವ ಓಮಿಕ್ರಾನ್ ರೂಪಾಂತರವು ಡೆಲ್ಟಾಗಿಂತಲೂ ಅಪಾಯಕಾರಿ ಎಂದು ತಿಳಿಸಿದೆ.
ಇನ್ನು ಸೋಮವಾರ ಮತ್ತೆ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್ ಬಗ್ಗೆ ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯು, ಈ ಓಮಿಕ್ರಾನ್ ಎಷ್ಟು ಅಪಾಯಕಾರಿ ಎಂಬುವುದನ್ನು ವಿವರಿಸಿದೆ. ಈ ಹೊಸ ರೂಪಾಂತರ ಓಮಿಕ್ರಾನ್ B.1.1.529 ಹೆಚ್ಚು ವಿಭಿನ್ನವಾದ ರೂಪಾಂತರವಾಗಿದೆ ಎಂದು ತಿಳಿಸಿದೆ.

ಗಂಭೀರ ಪರಿಣಾಮದ ಎಚ್ಚರಿಕೆ ನೀಡಿದ WHO
ಈ ಓಮಿಕ್ರಾನ್ ರೂಪಾಂತರವು ಅತಿ ಅಧಿಕವಾಗಿ ಹರಡುವ ಸಾಧ್ಯತೆಗಳು ಇದೆ ಹಾಗೂ ಓಮಿಕ್ರಾನ್ ಗಂಭೀರ ಪರಿಣಾಮವನ್ನು ಉಂಟು ಮಾಡುವ ಸಾಧ್ಯತೆಗಳು ಇದೆ ಎಂದು ಕೂಡಾ ವಿಶ್ವ ಆರೋಗ್ಯ ಸಂಸ್ಥೆಯು ಎಚ್ಚರಿಕೆಯನ್ನು ನೀಡಿದೆ. "ಈ ಓಮಿಕ್ರಾನ್‌ನಲ್ಲಿ ಬಹಳಷ್ಟು ಪ್ರಭೇದಗಳು ಕಂಡು ಬಂದಿದೆ. ಈ ಪೈಕಿ ಕೆಲವು ಅತೀ ಅಧಿಕ ಅಪಾಯಕಾರಿ ಆಗುವ ಸಾಧ್ಯತೆಗಳು ಇದೆ. ಒಟ್ಟಾರೆಯಾಗಿ ಈ ಹೊಸ ರೂಪಾಂತರ ಓಮಿಕ್ರಾನ್ ಜಾಗತಿಕವಾಗಿ ಒಂದು ಎಚ್ಚರಿಕೆಯ ಕರೆಗಂಟೆ," ಎಂದು ತಿಳಿಸಿದೆ.
ಇನ್ನು ಇದಕ್ಕೂ ಮುನ್ನ ಓಮಿಕ್ರಾನ್ ಬಗ್ಗೆ ಮಾಹಿತಿ ನೀಡಿದ್ದ ವಿಶ್ವ ಆರೋಗ್ಯ ಸಂಸ್ಥೆಯು, "ಹೊಸದಾಗಿ ಪತ್ತೆಯಾದ ಕೊರೊನಾ ವೈರಸ್‌ನ ರೂಪಾಂತರ ಓಮಿಕ್ರಾನ್, ಕೊರೊನಾ ವೈರಸ್‌ನ ಬೇರೆ ರೂಪಾಂತರಗಳಿಗಿಂತ, ಬಹು ಮುಖ್ಯವಾಗಿ ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚು ಸಾಂಕ್ರಾಮಿಕವೇ ಅಥವಾ ಹೆಚ್ಚು ಅಪಾಯಕಾರಿ, ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆಯೇ ಎಂಬುವುದು ತಿಳಿದು ಬಂದಿಲ್ಲ," ಎಂದು ಸ್ಪಷ್ಟನೆ ನೀಡಿದ್ದವು. ಕೊರೊನಾವೈರಸ್‌ನ ಡೆಲ್ಟಾ ರೂಪಾಂತರವು ಭಾರತದಲ್ಲಿ ಎರಡನೇ ಕೋವಿಡ್ ಅಲೆಗೆ ಕಾರಣವಾಗಿತ್ತು. ಭಾರೀ ಆರೋಗ್ಯ ಬಿಕ್ಕಟ್ಟು ಸೃಷ್ಟಿ ಮಾಡಿತ್ತು ಎಂಬುವುದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದು.
"ಈ ಹೊಸ ರೂಪಾಂತರ ಓಮಿಕ್ರಾನ್ ಪತ್ತೆಯಾದ ದಕ್ಷಿಣ ಆಫ್ರಿಕಾದಲ್ಲಿ ಸಂಶೋಧಕರು ಈ ರೂಪಾಂತರ ಬಗ್ಗೆ ಸಂಶೋಧನೆಯನ್ನು ಮಾಡುತ್ತಿದ್ದಾರೆ. ವಿಶ್ವದ ಎಲ್ಲೆಡೆ ಈ ರೂಪಾಂತರದ ಬಗ್ಗೆ ಸಂಶೋಧನೆಯು ನಡೆಯುತ್ತಿದೆ. ಓಮಿಕ್ರಾನ್ ಬಗ್ಗೆ ಹೆಚ್ಚಾಗಿ ತಿಳಿಯುವ ನಿಟ್ಟಿನಲ್ಲಿ ಈ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾದ ಬಳಿಕ ನಾವು ಜನರಿಗೆ ಮಾಹಿತಿಯನ್ನು ಹಂಚುತ್ತೇವೆ," ಎಂದು ಕೂಡಾ ವಿಶ್ವ ಆರೋಗ್ಯ ಸಂಸ್ಥೆಯು ಹೇಳಿದೆ.
ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಅನುಸರಿಸಿ
"ಜನರು ಕೋವಿಡ್ ಮಾರ್ಗಸೂಚಿಉನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಮಾಸ್ಕ್ ಅನ್ನು ಧರಿಸಿ, ದೈಹಿಕ ಅಂತರವನ್ನು ಕಾಯ್ದುಕೊಳ್ಳಿ, ಹೆಚ್ಚು ಜನಸಂದಣಿ ಇರುವ ಕಡೆ ಹೋಗದಿರಿ, ಸ್ವಚ್ಛವಾಗಿರಿ. ಈ ಮೂಲಕ ಓಮಿಕ್ರಾನ್‌ನಿಂದ ನಿಮ್ಮನ್ನು ನೀವು ಸುರಕ್ಷಿತವಾಗಿರಿಸಿಕೊಳ್ಳಿ," ಎಂದು ಕೂಡಾ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಓಮಿಕ್ರಾನ್ ಕಾಣಿಸಿಕೊಂಡ ಆರಂಭದಲ್ಲೇ ವಿಶ್ವ ಆರೋಗ್ಯ ಸಂಸ್ಥೆಯು ಈ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. B.1.1.529 ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯಲು ಹೆಚ್ಚಿನ ಸಂಶೋಧನೆ ನಡೆಸಬೇಕಾಗಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿತ್ತು. ಜನರಿಗೆ ಲಸಿಕೆ ನೀಡುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿತ್ತು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications