ಶ್ರೀಲಂಕಾ ಪ್ರಧಾನಿಯಾಗಿ ಮತ್ತೆ ರನಿಲ್ ವಿಕ್ರಮ್ ಸಿಂಘೆ ಪದವಿ ಸ್ವೀಕಾರ
ಕೊಲಂಬೋ (ಶ್ರೀಲಂಕಾ), ಡಿಸೆಂಬರ್ 16: ಯುನೈಟೆಡ್ ನ್ಯಾಷನಲ್ ಪಾರ್ಟಿ ನಾಯಕ ರನಿಲ್ ವಿಕ್ರಮ್ ಸಿಂಘೆ ಶ್ರೀಲಂಕಾ ಪ್ರಧಾನಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಲ್ಲಿಗೆ 51 ದಿನಗಳ ರಾಜಕೀಯ ಬಿಕ್ಕಟ್ಟಿಗೆ ಅಂತ್ಯ ಹಾಡಿದಂತಾಗಿದೆ. ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಕಚೇರಿಯಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಪದವಿ ಸ್ವೀಕರಿಸಿದರು.
ಮಹಿಂದಾ ರಾಜಪಕ್ಸೆ ಶನಿವಾರ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆ ಮೂಲಕ ವಿಕ್ರಮ್ ಸಿಂಘೆ ಮತ್ತೆ ಅಧಿಕಾರಕ್ಕೆ ಏರಿದರು. ಅಕ್ಟೋಬರ್ 26ರಂದು ವಿಕ್ರಮ್ ಸಿಂಘೆ ಅವರನ್ನು ಅಧ್ಯಕ್ಷ ಸಿರಿಸೇನ ಪದಚ್ಯುತಿಗೊಳಿಸಿದ್ದರು. ಇದರಿಂದ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಏರ್ಪಟ್ಟಿತ್ತು.

ಶುಕ್ರವಾರದಂದು ರನಿಲ್ ವಿಕ್ರಮ್ ಸಿಂಘೆ ಅವರ ಜತೆಗೆ ಅಧ್ಯಕ್ಷ ಸಿರಿಸೇನ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಆ ನಂತರ ಮತ್ತೆ ವಿಕ್ರಮ್ ಸಿಂಘೆ ಅವರನ್ನೇ ಪ್ರಧಾನಿ ಹುದ್ದೆಗೆ ನೇಮಿಸಲು ಒಪ್ಪಿಗೆ ಸೂಚಿಸಿದ್ದರು. ಅಂತೂ ಒಂದೂವರೆ ತಿಂಗಳ ರಾಜಕೀಯ ಹೈ ಡ್ರಾಮಾಗೆ ತೆರೆ ಬಿದ್ದಂತೆ ಆಗಿದೆ.












Click it and Unblock the Notifications