ಬಿಜೆಪಿಯಿಂದ ಜನರಿಗೆ ಬೆದರಿಕೆ, ಸರ್ಕಾರಿ ಸಂಸ್ಥೆಗಳ ದುರುಪಯೋಗ: ಅಮೆರಿಕದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ವಾಗ್ದಾಳಿ
ಸ್ಯಾನ್ ಫ್ರಾನ್ಸಿಸ್ಕೋ ( ಅಮೆರಿಕ ) ಮೇ 31: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಜನರಿಗೆ ಬೆದರಿಕೆ ಹಾಕುತ್ತಿದೆ ಮತ್ತು ಸರ್ಕಾರಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ದೇಶದಾದ್ಯಂತ ಕೇಂದ್ರ ತನಿಖಾ ಸಂಸ್ಥೆಗಳು ವಿರೋಧ ಪಕ್ಷದ ನಾಯಕರನ್ನು ಪ್ರಶ್ನಿಸುವುದು, ಅವರ ನಿವಾಸ, ಕಾರ್ಯಾಲಯಗಳ ಮೇಲೆ ದಾಳಿ ನಡೆಸಿರುವುದನ್ನು ರಾಹುಲ್ ಉಲ್ಲೇಖಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಲು ಸರ್ಕಾರ ತನ್ನ ಎಲ್ಲಾ ಶಕ್ತಿಯನ್ನು ಬಳಸಿದೆ ಎಂಬ ಗಂಭೀರ ಆರೋಪವನ್ನು ರಾಹುಲ್ ಗಾಂಧಿ ಮಾಡಿದ್ದಾರೆ.
'ಮಾಧ್ಯಮಗಳೂ ಸೇರಿದಂತೆ ನಾವು ಜನರೊಂದಿಗೆ ಸಂಪರ್ಕ ಸಾಧಿಸಲು ಬೇಕಾದ ಎಲ್ಲಾ ಸಾಧನಗಳನ್ನು ಬಿಜೆಪಿ-ಆರ್‌ಎಸ್‌ಎಸ್ ನಿಯಂತ್ರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸಲು ನಾನು ಭಾರತ್ ಜೋಡೋ ಯಾತ್ರೆಯನ್ನು ಕೈಗೊಂಡೆ' ಎಂದು ಅವರು ಹೇಳಿದ್ದಾರೆ.
'ನೀವು ಮೋದೀಜಿಯನ್ನು ದೇವರ ಪಕ್ಕದಲ್ಲಿ ಕೂರಿಸಿದರೆ, ಮೋದಿಜಿಯು ಬ್ರಹ್ಮಾಂಡವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ದೇವರಿಗೆ ವಿವರಿಸಲು ಪ್ರಾರಂಭಿಸುತ್ತಾರೆ' ಎಂದು ಕಾಂಗ್ರೆಸ್ ನಾಯಕ ಲೇವಡಿ ಮಾಡಿದ್ದಾರೆ.

ಮೋದಿ ಮಾತನ್ನು ಕೇಳಿದ ದೇವರು ನಾನು ಏನನ್ನು ಸೃಷ್ಟಿಸಿದ್ದೇನೆ ಎಂದು ಗೊಂದಲಕ್ಕೊಳಗಾಗುತ್ತಾನೆ. ಇವು ತಮಾಷೆಯ ವಿಷಯಗಳು. ಆದರೆ ಇದು ಭಾರತದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ವಿಜ್ಞಾನವನ್ನು ವಿಜ್ಞಾನಿಗಳು, ಇತಿಹಾಸವನ್ನು ಇತಿಹಾಸಕಾರರು, ಯುದ್ಧವನ್ನು ಸೈನಿಕರು ಅರ್ಥ ಮಾಡಿಕೊಂಡಿರುತ್ತಾರೆ. ಆದರೆ, ಕೆಲವೊಬ್ಬರು ಎಲ್ಲವನ್ನೂ ಅರ್ಥ ಮಾಡಿಕೊಂಡಿದ್ದೇನೆಂದು ತಿಳಿದುಕೊಂಡಿರುತ್ತಾರೆ. ನಿಜವಾಗಿ ಅವರು ಏನನ್ನೂ ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಜೀವನದಲ್ಲಿ ಅವರು ಏನನ್ನೂ ಅರ್ಥಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಅವರು ಇನ್ನೊಬ್ಬರನ್ನು ಕೇಳಲು ಸಿದ್ಧರಿಲ್ಲ ಎಂದು ರಾಹುಲ್ ಗಾಂಧಿ ಮೋದಿ ವಿರುದ್ಧ ಹರಿಹಾಯ್ದರು.
ಭಾರತ ಯಾವುದೇ ವಿಚಾರವನ್ನು ತಿರಸ್ಕರಿಸಿಲ್ಲ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದರು. 'ಇದು ನೀವು ( ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ) ಪ್ರತಿನಿಧಿಸುವ ಭಾರತ, ನೀವು ಈ ಮೌಲ್ಯಗಳನ್ನು ಒಪ್ಪದಿದ್ದರೆ ನೀವು ಇಲ್ಲಿ ಇರುತ್ತಿರಲಿಲ್ಲ, ನೀವು ಕೋಪ, ದ್ವೇಷ ಮತ್ತು ದುರಹಂಕಾರವನ್ನು ನಂಬಿದ್ದರೆ, ನೀವು ಬಿಜೆಪಿ ಸಭೆಯಲ್ಲಿ ಕುಳಿತುಕೊಳ್ಳುತ್ತೀರಿ ಮತ್ತು ನಾನು 'ಮನ್ ಕಿ ಬಾತ್' ಮಾಡುತ್ತಿದ್ದೆ. ಆದ್ದರಿಂದ ಅಮೆರಿಕದಲ್ಲಿ ಭಾರತದ ಧ್ವಜವನ್ನು ಹಿಡಿದಿದ್ದಕ್ಕಾಗಿ ನಿಮಗೆ ತುಂಬಾ ಧನ್ಯವಾದಗಳು' ಎಂದು ರಾಹುಲ್ ಗಾಂಧಿ ಹೇಳಿದರು.

ಮಂಗಳವಾರ ಅಮೆರಿಕಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರು ಸಾಂತಾಕ್ರೂಜ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ಕಾರ್ಯಕರ್ತರು, ಶಿಕ್ಷಣ ತಜ್ಞರು ಮತ್ತು ನಾಗರಿಕ ಸಮುದಾಯಗಳೊಂದಿಗೆ ಸಂವಾದ ನಡೆಸಿದರು.
ಮಾಜಿ ವಯನಾಡ್ ಲೋಕಸಭಾ ಸಂಸದರೂ ಆಗಿರುವ ರಾಹುಲ್ ಗಾಂಧಿ ವಾಷಿಂಗ್ಟನ್ ಡಿಸಿಯಲ್ಲಿ ನಡೆಯಲಿರುವ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದರಲ್ಲಿ ಭಾರತೀಯ ಪ್ರಜಾಪ್ರಭುತ್ವದ ಭವಿಷ್ಯ, ವಾಕ್ ಸ್ವಾತಂತ್ರ್ಯ, ಸುಸ್ಥಿರ ಹಾಗೂ ಅಂತರ್ಗತ ಆರ್ಥಿಕ ಬೆಳವಣಿಗೆಯ ಕುರಿತು ನ್ಯಾಷನಲ್ ಪ್ರೆಸ್ ಕ್ಲಬ್‌ನಲ್ಲಿ ಅವರು ಭಾಷಣ ಮಾಡಲಿದ್ದಾರೆ.
ನಂತರ ಅವರು ನ್ಯೂಯಾರ್ಕ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದ ಹಾರ್ವರ್ಡ್ ಕ್ಲಬ್‌ನಲ್ಲಿ ಚಿಂತಕರನ್ನು ಭೇಟಿಯಾಗಲಿದ್ದಾರೆ. ರಾಹುಲ್ ಅವರು ಭೋಜನ ಕೂಟದಲ್ಲಿ ಭಾಗವಹಿಸಲಿದ್ದಾರೆ. ಸೃಜನಶೀಲ ಉದ್ಯಮದಲ್ಲಿ ಯಶಸ್ವಿಯಾಗಿರುವ ಭಾರತೀಯ-ಅಮೆರಿಕನ್ನರನ್ನು ಭೇಟಿಯಾಗಲಿದ್ದಾರೆ.
ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್ ಗಾಂಧಿ ಅವರು ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನು ಒಪ್ಪಿಸಬೇಕಾಯಿತು. ಆ ನಂತರ ಸಾಮಾನ್ಯ ಪಾಸ್‌ಪೋರ್ಟ್‌ನಲ್ಲಿ ಯುಎಸ್‌ಗೆ ಪ್ರಯಾಣಿಸಿದ್ದಾರೆ.












Click it and Unblock the Notifications