India & China: ಭಾರತ & ಚೀನಾ ಗಡಿ ಕಿತ್ತಾಟಕ್ಕೆ ಬೀಳುತ್ತಾ ಬ್ರೇಕ್?
ಎಲ್ಲಾ ಅಂದುಕೊಂಡ ರೀತಿ ನಡೆದಿದ್ದು, ಗಡಿ ವಿವಾದಕ್ಕೆ ಒಂದು ಅಂತ್ಯ ಕಾಣಿಸೋದಕ್ಕೆ ಭಾರತ & ಚೀನಾ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ. ಬ್ರಿಕ್ಸ್ (BRICS) ಶೃಂಗಸಭೆಯಲ್ಲೇ ಈ ಬಗ್ಗೆ ಸಿಹಿಸುದ್ದಿ ಸಿಕ್ಕಿದ್ದು, ಕಳೆದ 3 ವರ್ಷಗಳಿಂದ ಸೂಕ್ಷ್ಮ ಸ್ಥಿತಿಯಲ್ಲಿರುವ ಭಾರತದ ಗಡಿ ಭಾಗಕ್ಕೆ ಈಗಲಾದರೂ ನೆಮ್ಮದಿ ಸಿಗುತ್ತಾ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ಹಲವು ಪ್ರಮುಖ ಘಟನೆಗೆ ಸಾಕ್ಷಿಯಾಗಿತ್ತು. ಪ್ರಧಾನಿ ಮೋದಿ ಬ್ರಿಕ್ಸ್ ಶೃಂಗಸಭೆಯಲ್ಲಿ ಇದ್ದಾಗಲೇ ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಇದರ ಜೊತೆಗೆ ಜಗತ್ತಿನ ಹಲವು ದೇಶಗಳು ಇದೇ ಸಭೆಯಲ್ಲಿ ಭಾರತವನ್ನು ಶ್ಲಾಘಿಸಿವೆ. ಹಾಗೇ ಭಾರತ ಮತ್ತು ಚೀನಾ ಗಡಿ ವಿವಾದಕ್ಕೂ ಈ ಸಭೆ ಅಂತ್ಯ ಹಾಡುವ ಮುನ್ಸೂಚನೆ ನೀಡಿದೆ. ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಡುವೆ ಗಡಿ ವಿವಾದ ಇತ್ಯರ್ಥ ಕುರಿತು ಮಹತ್ವದ ಮಾತುಕತೆ ನಡೆದಿದೆ.

ಭಾರತದ ಗಡಿಯಿಂದ ಚೀನಾ ಸೇನೆ ವಾಪಸ್?
ಬ್ರಿಕ್ಸ್ ಶೃಂಗಸಭೆ ಆರಂಭವಾದ ದಿನವೇ ಪ್ರಶ್ನೆಯೊಂದು ಕಾಡುತ್ತಿತ್ತು. ಚೀನಾ & ಭಾರತದ ನಡುವೆ ಗಡಿ ವಿವಾದದ ಸಂಬಂಧ ಚರ್ಚೆ ನಡೆಯುತ್ತಾ? ಎರಡೂ ದೇಶಗಳು ಸಂಧಾನಕ್ಕೆ ಒಪ್ಪಿಗೆ ಸೂಚಿಸುತ್ತವಾ? ಎಂಬ ಕುತೂಹಲ ಹೆಚ್ಚಾಗಿತ್ತು. ಆದರೆ ಅಧಿಕೃತವಾಗಿ ಪ್ರಧಾನಿ ಮೋದಿ & ಚೀನಾ ಅಧ್ಯಕ್ಷ ಜಿನ್‌ಪಿಂಗ್ ನಡುವೆ ಗಡಿ ವಿವಾದದ ಬಗ್ಗೆ ಚರ್ಚೆ ನಡೆಯದೇ ಇದ್ದರೂ, ಗಡಿ ವಿವಾದ ಅಂತ್ಯಗೊಳಿಸಲು ಇಬ್ಬರೂ ನಾಯಕರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಚೀನಾ ಮತ್ತು ಭಾರತ ನಡುವಿನ ವಾಸ್ತವ ಗಡಿ ರೇಖೆಯ ಬಳಿ ಸೇನೆ ಹಿಂಪಡೆದು ಪರಿಸ್ಥಿತಿ ತಿಳಿಗೊಳಿಸಲು ಇಬ್ಬರೂ ನಾಯಕರು ಒಪ್ಪಿದ್ದಾರಂತೆ.
2020ರಲ್ಲಿ ಭೀಕರ ಘಟನೆಯೊಂದು ನಡೆದಿತ್ತು. ಗಲ್ವಾನ್ ವ್ಯಾಲಿ ಘರ್ಷಣೆ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಚೀನಾ ಮತ್ತು ಭಾರತ ಗಡಿಯಲ್ಲಿ ಉಭಯ ಸೇನೆಗಳು ಭಾರಿ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜನೆ ಮಾಡಿವೆ. ನಂತರ ಪರಿಸ್ಥಿತಿ ತಿಳಿಗೊಳಿಸಲು ಸೇನಾ ಮಟ್ಟದ ಮಾತುಕತೆ ನಡೆದಿದೆ. ಆದ್ರೆ ಅದು ಅಂದುಕೊಂಡ ನಿರೀಕ್ಷೆ ಮುಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಮುಖ್ಯಸ್ಥರೇ ಈಗ ತಮ್ಮ ವೈಯಕ್ತಿಕ ಮುನಿಸು ಮರೆತು ಮಾತನಾಡಿದ್ದಾರೆ. ಸೇನೆ ಹಿಂದಕ್ಕೆ ಪಡೆದು ಪರಿಸ್ಥಿತಿ ತಿಳಿಯಾಗಿಸಲು ಮುಂದಾಗಿದ್ದಾರೆ.

ಗಡಿಯಲ್ಲಿ ಅಂತೂ ಮೂಡುತ್ತಾ ಶಾಂತಿ?
ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಜಿನ್‌ಪಿಂಗ್ ಮಾತುಕತೆ ಬಗ್ಗೆ ಭಾರತ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಮಾಹಿತಿ ನೀಡಿದ್ದಾರೆ. ಬ್ರಿಕ್ಸ್ ಸಭೆ ಸಂದರ್ಭ ಕ್ಸಿ ಜಿನ್‌ಪಿಂಗ್ ಅವರ ಜೊತೆ ಮಾತನಾಡಿದ ಪ್ರಧಾನಿ ಮೋದಿ, ಲಡಾಖ್ ಗಡಿ ಬಳಿ ಉಂಟಾಗಿರುವ ಉದ್ವಿಗ್ನ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವೇಳೆ ಗಡಿ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿ ಸ್ಥಿತಿ ತಿಳಿಗೊಳಿಸಲು ಸೂಚಿಸಲಾಗಿದೆ. ಅಲ್ಲದೆ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲು ಭಾರತ ಹಾಗೂ ಚೀನಾ ನಾಯಕರು ಒಪ್ಪಿದ್ದಾರೆ ಎನ್ನಲಾಗಿದೆ. ಹೀಗಾಗಿ ಅಂತೂ ಭಾರತದ ಮತ್ತು ಚೀನಾ ಗಡಿಯಲ್ಲಿ ಶಾಂತಿ ಮೂಡುವ ಲಕ್ಷಣ ಗೋಚರಿಸಿದೆ.
ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧ ನಡೆವಾಗ ಬ್ರಿಕ್ಸ್ ಒಕ್ಕೂಟದ 15ನೇ ಶೃಂಗಸಭೆ ಕುತೂಹಲ ಮೂಡಿಸಿತ್ತು. ಅಮೆರಿಕ & ನ್ಯಾಟೋ ಒಕ್ಕೂಟದ ದೇಶಗಳನ್ನು ಈ ಒಕ್ಕೂಟ ಒಳಗೊಂಡಿಲ್ಲ. ಅದರಲ್ಲೂ ಬ್ರಿಕ್ಸ್ ಒಕ್ಕೂಟದಲ್ಲಿ ಅಮೆರಿಕದ ದೊಡ್ಡ ಶತ್ರು ರಷ್ಯಾ ಇದ್ದು ಜೊತೆಯಲ್ಲಿ ಚೀನಾ ಕೂಡ ಕೈಜೋಡಿಸಿದೆ. ಇಷ್ಟೆಲ್ಲಾ ಮಹತ್ವದ ಬೆಳವಣಿಗೆಯ ನಡುವೆ ಬ್ರಿಕ್ಸ್ ಒಕ್ಕೂಟದ 15ನೇ ಶೃಂಗಸಭೆಗೆ ತೆರೆ ಬಿದ್ದಿದೆ. ಮತ್ತಷ್ಟು ದೇಶಗಳು ಬ್ರಿಕ್ಸ್ ಒಕ್ಕೂಟ ಸದಸ್ಯತ್ವಕ್ಕೆ ಮುಂದಾಗಿವೆ. ಹೀಗೆ ಬ್ರಿಕ್ಸ್ ಒಕ್ಕೂಟ ಮುಂದಿನ ದಿನಗಳಲ್ಲಿ ಇನ್ನಷ್ಟು ಬಲವಾಗುವ ಮುನ್ಸೂಚನೆ ಸಿಕ್ಕಿದೆ.












Click it and Unblock the Notifications