ಟ್ವಿಟ್ಟರ್ ಚಿತ್ರ ಎತ್ತಿದ್ದಕ್ಕೆ ಮಿಲಿಯನ್ ಡಾಲರ್ ದಂಡ
ಬೆಂಗಳೂರು, ನ.25: ಸಾಮಾಜಿಕ ಜಾಲ ತಾಣಗಳಲ್ಲಿ ಸ್ವಚ್ಛಂದವಾಗಿ ವಿಹರಿಸಬಹುದಾದರೂ ಕಂಡಕಂಡವರ ಖಾತೆಗೆ ಕೈ ಹಾಕಿ ಚಿತ್ರಗಳನ್ನು ಕದಿಯುವುದು ದೊಡ್ಡ ಅಪರಾಧ ಎಂಬುದು ಈ ಪ್ರಕರಣದಿಂದ ಸಾಬೀತಾಗಿದೆ. ಭೂಕಂಪದ ಬಗ್ಗೆ ವ್ಯಕ್ತಿಯೊಬ್ಬರು ಹಾಕಿದ್ದ ಚಿತ್ರವನ್ನು ಸುದ್ದಿ ಸಂಸ್ಥೆಗಳು ಬಳಸಿಕೊಂಡ ತಪ್ಪಿಗೆ ಭಾರಿ ದಂಡ ತೆತ್ತಿವೆ.
Agence France Presse ಮತ್ತು Getty Images ಸಂಸ್ಥೆ ಗಳ ಮೇಲೆ ಹಕ್ಕುಸ್ವಾಮ್ಯತೆ ಕಾಯಿದೆ ಪ್ರಕಾರ 1.2 ಮಿಲಿಯನ್ ಡಾಲರ್ ದಂಡ ತೆರಬೇಕು ಎಂದು ಅಮೆರಿಕ ನ್ಯಾಯಾಲಯ ಅದೇಶಿಸಿದೆ.
2010ರಲ್ಲಿ ಹೈತಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ 250,000ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಈ ಭೂಕಂಪದ ಚಿತ್ರಗಳನ್ನು ತೆಗೆದಿದ್ದ ಫ್ರೀಲ್ಯಾನ್ಸ್ ಫೋಟೋ ಜರ್ನಲಿಸ್ಟ್ ಡೇನಿಯಲ್ ಮೊರೆಲ್ ಅವರು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಚಿತ್ರಗಳನ್ನು ಎಎಫ್ ಪಿ ಹಾಗೂ ಗೆಟ್ಟಿ ಇಮೇಜಸ್ ಸಂಸ್ಥೆಗಳು ಅನುಮತಿ ಇಲ್ಲದೆ ಬಳಸಿಕೊಂಡ ಆರೋಪ ಹೊತ್ತಿದ್ದವು.

ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ಪ್ರಕಟಿಸಿದ ಚಿತ್ರಗಳನ್ನು ಸಂಸ್ಥೆಗಳು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿರುವುದು ಫೊಟೋಗ್ರಾಫಿ ಡಿಜಿಟಲ್ ಲೈಸನ್ಸ್, ಹಕ್ಕುಸ್ವಾಮ್ಯತೆ ಕಾಯಿದೆ ಪ್ರಕಾರ ದಂಡಕ್ಕೆ ಆಹ್ವಾನ ನೀಡಿದಂತೆ ಎಂದು ಮೊರೆಲ್ ಅವರ ವಕೀಲರಾದ ಜೋಸೆಫ್ ಬಾಯಿಯೊ ಹೇಳಿದ್ದಾರೆ.
ಎಎಫ್ ಪಿ, ಗೆಟ್ಟಿ ಇಮೇಜಸ್ ಅಲ್ಲದೆ, ವಾಷಿಂಗ್ಟನ್ ಪೋಸ್ಟ್, ಸಿಬಿಎಸ್, ಎಬಿಸಿ ಹಾಗೂ ಸಿಎನ್ ಎನ್ ಕೂಡಾ ಮೊರೆಲ್ ಅವರ ಚಿತ್ರವನ್ನು ಬಳಕೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಮೊರೆಲ್ ಅವರು ಸಾರ್ವಜನಿಕ ವಿತರಣೆ ವ್ಯವಸ್ಥೆ ಅಡಿಯಲ್ಲಿ ಚಿತ್ರವನ್ನು ಹಾಕಿದ್ದಾರೆ. ಹಕ್ಕು ಸ್ವಾಮ್ಯತೆ ಉಲ್ಲಂಘನೆ ಮಾಡುವ ಉದ್ದೇಶ ನಮಗಿಲ್ಲ ಎಂದು ಎಎಫ್ ಪಿ ಸಂಸ್ಥೆ ಸಂಪಾದಕ ಕಾಫ್ ಮನ್ ಪ್ರತಿಕ್ರಿಯಿಸಿದ್ದಾರೆ.
ಮೊದಲಿಗೆ ಟ್ವಿಟ್ಟರ್ ನಿಯಮಗಳೇ ಸರಿಯಿಲ್ಲ ಎಂದು ಎಎಫ್ ಪಿ ವಾದಿಸಿತ್ತು ಆದರೆ, ಟ್ವಿಟ್ಟರ್ ನಲ್ಲಿ retweet ಮಾತ್ರ ಮಾಡಬಹುದು ಆದರೆ, ಚಿತ್ರಗಳನ್ನು ಅನುಮತಿ ಇಲ್ಲದೆ ವಾಣಿಜ್ಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳಲು ಅನುಮತಿ ಇಲ್ಲ ಎಂದು ಟ್ವಿಟ್ಟರ್ ಸಂಸ್ಥೆ ಸ್ಪಷ್ಟನೆ ನೀಡಿದ್ದು ಎಎಫ್ ಪಿ ಗೆ ಮುಳುವಾಯಿತು.
ಕೇಸ್ ಪರಾಮರ್ಶನೆ : Agence France-Presse v. Morel, U.S. District Court for the Southern District of New York, No. 10-02730.












Click it and Unblock the Notifications