ಫಿಲಿಪೈನ್ಸ್ ಪ್ರವಾಹ: ಚಂಡಮಾರುತದಿಂದ ಭೂಕುಸಿತ- 47 ಸಾವು, ಹಲವರು ನಾಪತ್ತೆ
ಫಿಲಿಪೈನ್ಸ್ ಅಕ್ಟೋಬರ್ 29: ದಕ್ಷಿಣ ಫಿಲಿಪೈನ್ಸ್ ಪ್ರಾಂತ್ಯದಲ್ಲಿ ಶನಿವಾರದಂದು ಧಾರಾಕಾರ ಮಳೆಯಿಂದ ಉಂಟಾದ ಭಾರಿ ಪ್ರವಾಹ ಮತ್ತು ಭೂಕುಸಿತದಲ್ಲಿ 47 ಜನರು ಮೃತಪಟ್ಟಿದ್ದಾರೆ. ಜೊತೆಗೆ 60 ಗ್ರಾಮಸ್ಥರು ಪ್ರವಾಹದಲ್ಲಿ ನಾಪತ್ತೆಯಾಗಿದ್ದಾರೆ. ಕೆಲವರು ಮಳೆನೀರು, ಮಣ್ಣು, ಕಲ್ಲುಗಳು ಮತ್ತು ಮರಗಳ ಕೆಳಗೆ ಹೂತುಹೋಗಿರುವುದು ವರದಿಯಾಗಿದೆ.
ಗುರುವಾರ ರಾತ್ರಿಯಿಂದ ಶುಕ್ರವಾರದ ಮುಂಜಾನೆಯವರೆಗೆ ಮಾಗುಯಿಂಡಾನಾವೊ ಪ್ರಾಂತ್ಯದ ಮೂರು ಪಟ್ಟಣಗಳಲ್ಲಿ ಸುರಿದ ಧಾರಾಕಾರ ಮಳೆಗೆ ಭೂಕುಸಿತ ಉಂಟಾಗಿದೆ. ಭಗ್ನಾವಶೇಷಗಳಲ್ಲಿ ಹಲವಾರು ಜನ ಸಿಲುಕಿದ್ದಾರೆ ಎಂದು ಐದು ಪ್ರಾಂತ್ಯದ ಮುಸ್ಲಿಂ ಸ್ವಾಯತ್ತ ಪ್ರದೇಶದ ಆಂತರಿಕ ಸಚಿವ ನಗುಯಿಬ್ ಸಿನಾರಿಂಬೊ ಹೇಳಿದ್ದಾರೆ. ಈ ಚಂಡಮಾರುತ ಪರಿಣಾಮ ಎಷ್ಟು ಗಂಭೀರವಾಗಿತ್ತು ಅಂದರೆ ಫಿಲಿಪೈನ್ಸ್‌ನ ಬುಡಕಟ್ಟು ಹಳ್ಳಿಯಾದ ಕುಸಿಯಾಂಗ್‌ನಲ್ಲಿ 60 ಕ್ಕೂ ಹೆಚ್ಚು ಜನರೊಂದಿಗೆ ಹಲವಾರು ಮನೆಗಳು ಹೂತುಹೋಗಿವೆ.
ಮಳೆನೀರು, ಕಲ್ಲುಗಳು ಮತ್ತು ಮರಗಳಿಂದ ಮನೆಗಳು ಕಾಣದಂತಾಗಿವೆ. ಹಠಾತ್ ಪ್ರವಾಹ ಮತ್ತು ಮಣ್ಣಿನ ಕುಸಿತದಿಂದ ಬದುಕುಳಿದ ಕುಸಿಯಾಂಗ್ ಗ್ರಾಮಸ್ಥರ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ ಎಂದು ಸಿನಾರಿಂಬೊ ದೂರವಾಣಿ ಮೂಲಕ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದ್ದಾರೆ. ಈ ಚಂಡಮಾರುತದಿಂದ ನಮ್ಮ ಸಮುದಾಯ ನೆಲಸಮವಾಗಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರೆದ ರಕ್ಷಣಾ ಕಾರ್ಯಚರಣೆ
ಕುಸಿಯಾಂಗ್‌ನಲ್ಲಿ ರಕ್ಷಕರು ಸ್ಪೇಡ್‌ಗಳನ್ನು ಬಳಸಿ ಹನ್ನೊಂದು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಶನಿವಾರ ಮುಂಜಾನೆ ಪೂರ್ವ ಪ್ರಾಂತ್ಯದ ಕ್ಯಾಮರಿನ್ಸ್ ಸುರ್‌ಗೆ ಅಪ್ಪಳಿಸಿದ ಚಂಡಮಾರುತದಿಂದ ಅಪಾರ ಹಾನಿಯಾಗಿದೆ. ಭಾರೀ ಉಪಕರಣಗಳು ಮತ್ತು ಸೈನ್ಯ, ಪೊಲೀಸ್ ಮತ್ತು ಸ್ವಯಂಸೇವಕರು ಸೇರಿದಂತೆ ಹೆಚ್ಚಿನ ರಕ್ಷಣಾ ಕಾರ್ಯಕರ್ತರನ್ನು ಶೋಧ ಮತ್ತು ರಕ್ಷಣಾ ಕಾರ್ಯವನ್ನು ತೀವ್ರಗೊಳಿಸಲು ನಿಯೋಜಿಸಲಾಗಿದೆ. ದಶಕಗಳಲ್ಲಿ ದೇಶದ ದಕ್ಷಿಣಕ್ಕೆ ಅಪ್ಪಳಿಸಿದ ಕೆಟ್ಟ ಹವಾಮಾನ ಸಂಬಂಧಿತ ವಿಪತ್ತುಗಳಲ್ಲಿ ಇದು ಒಂದಾಗಿದೆ. ಆದರಿಂದ ಕುಸಿಯಾಂಗ್ ಗ್ರಾಮಸ್ಥರು ಹಠಾತ್ ಪ್ರವಾಹದಿಂದ ಅಕ್ಷರಶ: ನಕರ ಕಂಡಿದ್ದಾರೆ.

47 ಸಾವು, ಹಲವರು ನಾಪತ್ತ
ಮೇಯರ್‌ಗಳು, ಗವರ್ನರ್‌ಗಳು ಮತ್ತು ವಿಪತ್ತು-ಪ್ರತಿಕ್ರಿಯೆ ಅಧಿಕಾರಿಗಳ ವರದಿಗಳನ್ನು ಉಲ್ಲೇಖಿಸಿ, ಸಿನಾರಿಂಬೊ ಅವರು ಡಾಟು ಓಡಿನ್ ಸಿನ್‌ಸುತ್ ಪಟ್ಟಣದಲ್ಲಿ 27, ಡಾಟು ಬ್ಲಾ ಸಿನ್‌ಸುತ್ ಪಟ್ಟಣದಲ್ಲಿ 10 ಮತ್ತು ಉಪಿ ಪಟ್ಟಣದಲ್ಲಿ ಐದು ಜನರು ಮುಳುಗಿ ಮತ್ತು ಭೂಕುಸಿತದಿಂದ ಹೆಚ್ಚಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಅನೇಕ ತಗ್ಗು ಪ್ರದೇಶದ ಹಳ್ಳಿಗಳಲ್ಲಿ ಪ್ರವಾಹದ ನೀರು ವೇಗವಾಗಿ ಏರಿದೆ. ತಕ್ಷಣ ಕೆಲವು ನಿವಾಸಿಗಳು ತಮ್ಮ ಛಾವಣಿಯ ಮೇಲೆ ಏರಿದ್ದಾರೆ. ಅಲ್ಲಿ ಹಲವರನ್ನು ಸೇನಾ ಪಡೆಗಳು, ಪೊಲೀಸರು ಮತ್ತು ಸ್ವಯಂಸೇವಕರು ರಕ್ಷಿಸಿದರು ಎಂದು ಸಿನಾರಿಂಬೊ ಹೇಳಿದರು.

ಅನಿರೀಕ್ಷಿತ ಹಾಗೂ ಭಯಾನಕ ಪ್ರವಾಹ
ಕೋಸ್ಟ್ ಗಾರ್ಡ್ ತನ್ನ ರಕ್ಷಕರ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಎದೆಯ ಎತ್ತರದ ಪ್ರವಾಹದಲ್ಲಿ ಮಾಗಿಂಡನಾವೊದಲ್ಲಿ ವೃದ್ಧರು ಮತ್ತು ಮಕ್ಕಳನ್ನು ರಕ್ಷಿಸುತ್ತಿರುವ ಫೋಟೋಗಳು ವೈರಲ್ ಆಗಿವೆ. ಕೋಟಾಬಾಟೊ ನಗರ ಸೇರಿದಂತೆ ಹಲವು ಪ್ರದೇಶಗಳು ವರ್ಷಗಳಿಂದ ಪ್ರವಾಹಕ್ಕೆ ಒಳಗಾಗಿರಲಿಲ್ಲ. ಆದರೆ ಇದು ಅನಿರೀಕ್ಷಿತ ಹಾಗೂ ಭಯಾನಕವಾಗಿದೆ ಎಂದು ಹೇಳಲಾಗುತ್ತಿದೆ.
ಅಪಾಯಕಾರಿ ಬಿರುಗಾಳಿ ಸಮುದ್ರ ಪ್ರಯಾಣವನ್ನು ನಿಷೇಧಿಸಿದೆ. ಹಲವಾರು ದೇಶೀಯ ವಿಮಾನಗಳನ್ನು ಸಹ ರದ್ದುಗೊಳಿಸಲಾಗಿದ್ದು, ಸಾವಿರಾರು ಪ್ರಯಾಣಿಕರು ಸಿಲುಕಿದ್ದಾರೆ. ಸದ್ಯ ರಾಜಧಾನಿ ಮನಿಲಾ ಸೇರಿದಂತೆ ಡಜನ್‌ಗಟ್ಟಲೆ ಪ್ರಾಂತ್ಯಗಳು ಮತ್ತು ನಗರಗಳು ಚಂಡಮಾರುತದ ಎಚ್ಚರಿಕೆಯ ಅಡಿಯಲ್ಲಿವೆ. ಶನಿವಾರದ ನಂತರವೂ ಚಂಡಮಾರುತ ಅಪ್ಪಳಿಸಬಹುದು ಎಂದು ಸರ್ಕಾರದ ಹವಾಮಾನ ಏಜೆನ್ಸಿ ಮುಖ್ಯಸ್ಥ ವಿಸೆಂಟೆ ಮನಾಲೊ ಎಪಿಗೆ ತಿಳಿಸಿದರು. ಹೀಗಾಗಿ ಚಂಡಮಾರುತದ ಹಾದಿಯಿಂದ 7,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ಚಂಡಮಾರುತ- ಜ್ವಾಲಾಮುಖಿ ಸ್ಫೋಟದ ಸ್ಥಳ
ಪ್ರತಿ ವರ್ಷ ಸುಮಾರು 20 ಚಂಡಮಾರುತಗಳು ಫಿಲಿಪೈನ್ ದ್ವೀಪಸಮೂಹಕ್ಕೆ ಅಪ್ಪಳಿಸುತ್ತವೆ. ಇದು ಪೆಸಿಫಿಕ್ "ರಿಂಗ್ ಆಫ್ ಫೈರ್" ನಲ್ಲಿ ನೆಲೆಗೊಂಡಿದೆ. ಇದು ಪೆಸಿಫಿಕ್ ಮಹಾಸಾಗರದ ಅಂಚಿನಲ್ಲಿ ಅನೇಕ ಜ್ವಾಲಾಮುಖಿ ಸ್ಫೋಟಗಳು ಮತ್ತು ಭೂಕಂಪಗಳು ಸಂಭವಿಸುವ ಪ್ರದೇಶವಾಗಿದ್ದು ವಿಶ್ವದ ಅತ್ಯಂತ ವಿಪತ್ತು ಪೀಡಿತ ರಾಷ್ಟ್ರವಾಗಿದೆ.











Click it and Unblock the Notifications