Karnataka Highways: 1846 ಕಿಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5000 ಕೋಟಿ ರೂ ಘೋಷಣೆ
ಬೆಂಗಳೂರು: ಕರ್ನಾಟಕ ಸರ್ಕಾರ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ 1,846 ಕಿಲೋ ಮೀಟರ್ ರಾಜ್ಯ ಹೆದ್ದಾರಿ ಅಭಿವೃದ್ಧಿಪಡಿಸುವುದಾಗಿ ಬಜೆಟ್ 2026 ನಲ್ಲಿ ಘೋಷಿಸಿದೆ. ರಸ್ತೆ, ಮೇಲ್ಸೇತುವೆ ಹಾಗೂ ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿ ಬಗ್ಗೆಯು ಉಲ್ಲೇಖಿಸಿದೆ. ಈ ಮೂಲಕ ಪ್ರಸ್ತಕ ಸಾಲಿನಲ್ಲೂ ರಾಜ್ಯ ಹೆದ್ದಾರಿ ರಸ್ತೆ ಮೂಲಸೌಕರ್ಯಕ್ಕೆ ಆದ್ಯತೆ ನೀಡಿರುವುದಾಗಿ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
2026-27 ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ವಿವಿಧ ಯೋಜನೆಗಳಡಿ 2,200 ಕಿ.ಮೀ ಉದ್ದದ ರಾಜ್ಯ ಹೆದ್ದಾರಿಗಳನ್ನು ಹಾಗೂ 3,500 ಕಿ.ಮೀ. ಉದ್ದದ ಜಿಲ್ಲಾ ರಸ್ತೆಗಳನ್ನು 5,776 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ತಿರ್ಮಾನಿಸಲಾಗಿದೆ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (SHDP) ಹಂತ-5 ಘಟ್ಟ 1 ರಡಿ 1,512 ಕಿ.ಮೀ ಉದ್ದದ ರಸ್ತೆಯನ್ನು 4,000 ಕೋಟಿ ರೂ. ಮೊತ್ತದಲ್ಲಿ ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಇದೀಗ ಘಟ್ಟ-2ರಡಿ 1,846 ಕಿ.ಮೀ ಉದ್ದದ ರಸ್ತೆಯನ್ನು 5,000 ಕೋಟಿ ರೂ. ಮೊತ್ತದಲ್ಲಿ ಅಭಿವೃದ್ಧಿಪಡಿಸಲಾಗುವುದೆಂದು ಅವರು ಮಾಹಿತಿ ಕೊಟ್ಟರು.
875 ಕಿ.ಮೀ ಉದ್ದದ ರಸ್ತೆ ನಿರ್ಮಾಣ
ಒಟ್ಟು 5,736 ಕೋಟಿ ರೂ. ಯೋಜನಾ ವೆಚ್ಚದಲ್ಲಿ ರಾಜ್ಯದಾದ್ಯಂತ ಸುಮಾರು 875 ಕಿ.ಮೀ ಉದ್ದದ ರಸ್ತೆ ಕಾಮಗಾರಿಗಳ ವಿಸ್ತ್ರತ ಯೋಜನಾ ವರದಿ ಸಿದ್ಧಪಡಿಸಲಾಗುತ್ತದೆ. ಬಳಿಕ ಸಂಪುಟದಲ್ಲಿ ಅನುಮೋದನೆ ಪಡೆದು ಪಡೆದು ಟೆಂಡರ್ ಆಹ್ವಾನಿಸಲು ಕ್ರಮ ವಹಿಸಲಾಗುವುದು. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯ ಕಲ್ಮಲಾ-ಸಿಂಧನೂರು ರಸ್ತೆಯ ಒಟ್ಟು 77 ಕಿ.ಮೀ ಉದ್ದದ ಪೈಕಿ 60 ಕಿ.ಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಈ ರಸ್ತೆಯನ್ನು ಸಾರ್ವಜನಿಕರ ಉಪಯೋಗಕ್ಕೆ ಒದಗಿಸಲಾಗಿದೆ. ಉಳಿದಂತೆ 17 ಕಿ.ಮೀ ಉದ್ದದ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಲು ಸೂಚಿಸಲಾಗಿದೆ.
ಕಳೆದ ಬಾರಿ (2025-26) ರಾಜ್ಯದಲ್ಲಿ ಒಟ್ಟು 2,000 ಕೋಟಿ ಮೊತ್ತದ216 ಸೇತುವೆಗಳ ನಿರ್ಮಾಣ, 288 ಸೇತುವೆ ದುರಸ್ತಿ ಹಾಗೂ 386 ಕಾಲುಸಂಕಗಳ (Foot Bridge) ನಿರ್ಮಾಣ ಕಾಮಗಾರಿಗಳ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಈ ವರ್ಷ ಅದೇ ಯೋಜನೆ ಮುಂದುವರೆಸಿ ಸೇತುವೆಗಳ ನಿರ್ಮಾಣಕ್ಕಾಗಿ ಮುಂದಿನ ಎರಡು ವರ್ಷಗಳಲ್ಲಿ 2,000 ಕೋಟಿ ರೂ. ಮೊತ್ತವನ್ನು ನೀಡಲಾಗುವುದೆಂದು ತಿಳಿಸಿದರು.
ಕಲ್ಯಾಣ ಕರ್ನಾಟಕಕ್ಕೆ 5,000 ಕೋಟಿ ರೂ.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರವು ಬದ್ಧವಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕಳೆದ ಮೂರು ವರ್ಷಗಳ ಅವಧಿಯಲ್ಲಿ 13,000 ಕೋಟಿ ರೂ.ವೆಚ್ಚದ ಅಭಿವೃದ್ಧಿ ಯೋಜನೆಗಳ ಕ್ರಿಯಾ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುವ ಪ್ರಕ್ರಿಯೆ ನಡೆದಿದೆ. ಪ್ರಸಕ್ತ ಸಾಲಿನಲ್ಲೂ 5,000 ಕೋಟಿ ರೂ.ಗಳ ಕ್ರಿಯಾ ಯೋಜನೆಯನ್ನು ರೂಪಿಸಿ ಅಭಿವೃದ್ದಿಗೊಳಿಸಲಾಗುವುದು.
ರಾಜ್ಯದಲ್ಲಿ 400 ಕೋಟಿ ರೂ. ಅಂದಾಜು ಮೊತ್ತದ 135 ಕಿ.ಮೀ. ಉದ್ದದ ವಾಗ್ದಾರಿ-ರಿಬ್ಬನ್‌ಪಲ್ಲಿ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಬೆಂಗಳೂರಿನಲ್ಲೂ ರಸ್ತೆ ಯೋಜನೆ, ಅಭಿವೃದ್ಧಿ
ರಾಜಧಾನಿ ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆಯನ್ನು ಬಿಎಂಆರ್‌ಡಿಎ ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಆರ್ಥಿಕ ಸಹಕಾರದಲ್ಲಿ ನಿರ್ಮಿಸಲಾಗುವುದು. ಹೆಬ್ಬಾಳ ಜಂಕ್ಷನ್‌ನಿಂದ ಮೇನ್ರಿ ಸರ್ಕಲ್ ವರೆಗೆ ರಸ್ತೆ ಸುರಂಗ ಮಾರ್ಗ ಹಾಗೂ ಮೇಲು ಸೇತುವೆ ರಸ್ತೆ ನಿರ್ಮಿಸಲು 2,250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲು ಪ್ಲ್ಯಾನ್ ಮಾಡಿದ್ದೇವೆ. ಈ ಯೋಜನೆ ಟೆಂಡರ್‌ನಲ್ಲಿ ನಾಲ್ಕು ಪ್ರಮುಖ ಕಂಪನಿಗಳು ಬಿಡ್ ಸಲ್ಲಿಸಿವೆ.
ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ 73 ಕಿ.ಮೀ ಉದ್ದದ ಬೆಂಗಳೂರು ಬಿಸ್‌ನೆಸ್ ಕಾರಿಡಾರ್ ಭಾಗ-1 ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ರೈತರಿಗೆ ತ್ವರಿತವಾಗಿ ಪರಿಹಾರ ವಿತರಿಸಲಾಗುತ್ತಿದೆ. ಈ ರಸ್ತೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.












Click it and Unblock the Notifications