ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು - ರವಿಕೃಷ್ಣಾ ರೆಡ್ಡಿ ಬರಹ
ಕೈಚೆಲ್ಲಿ ನಿಂತ ಸಿಂಗಂ ಪೊಲೀಸರು, ದೈನೇಸಿ ಸ್ಥಿತಿಗೆ ಜನಸಾಮಾನ್ಯರು: ಪುಂಡರಿಗೆ ಹೆದರಿದ ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ ಅವರ ವಿಶೇಷ ಬರಹ ಇಲ್ಲಿದೆ.
ಬೆಂಗಳೂರಿನ ರಸ್ತೆಗಳಲ್ಲಿ ಬೈಕ್‌ಗಳಲ್ಲಿ (two-wheeler)ಗಳಲ್ಲಿ ಓಡಾಡುವ ಕೆಲವು ಸ್ಥಳೀಯ ಪುಂಡ-ಪೋಕರಿ-ಗೂಂಡಾಗಳಿಗೆ ಪೊಲೀಸರೇ ಹೆದರಿ ದೂರ ನಿಲ್ಲುತ್ತಾರೆ. ಇನ್ನು ಜನಸಾಮಾನ್ಯರೇನು ಮಾಡಬಲ್ಲರು. ರಾಜ್ಯದಲ್ಲಿ ಒಂದೊಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಕೆಲವೊಂದು ಏರಿಯಾಗಳಲ್ಲಿ ಕೆಲವು Particular ವರ್ಗ / ಸಮುದಾಯಗಳಿಗೆ ಸೇರಿದ ಪುಂಡರು ಪುಂಡಾಟಿಕೆ ಮಾಡಲು ರಸ್ತೆಗೆ ಇಳಿಯುತ್ತಾರೆ. ಆದರೆ ಕಾಂಗ್ರೆಸ್ ಕಾಲದಲ್ಲಿಯಂತೂ ಎಲ್ಲಾ ವರ್ಗ-ಸಮುದಾಯಗಳ ಪುಂಡರಿಗೂ ಮದ ನೆತ್ತಿಗೇರುತ್ತದೆ. ಇದರ ಬಗ್ಗೆ ವಿಶೇಷ ಅಧ್ಯಯನ ನಡೆಸಬೇಕಿದೆ.

ಬೇರೆಲ್ಲಿಯೂ ಬೇಡ, ಬೆಂಗಳೂರಿನ ಪೊಲೀಸ್ ಠಾಣೆಗಳ ಮುಂದೆ ನಿಂತು ನಮ್ಮ ಸಿಂಗಂ ಪೊಲೀಸರು ಅವರ ಠಾಣೆಯ ಮುಂದೆ ಭರ್ರೋ ಎಂದು ಹೆಲ್ಮೆಟ್ ಇಲ್ಲದೆ, ಲೈಸನ್ಸ್ ಇಲ್ಲದೆ ಗಾಡಿ ಓಡಿಸಿಕೊಂಡು ಹೋಗುವ ಅಪ್ರಾಪ್ತ ಹುಡುಗರನ್ನು ಮತ್ತು ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸುವ ಸ್ಥಳೀಯ ಪುಡಾರಿಗಳನ್ನು ಅಲ್ಲಿಯೇ ನಿಲ್ಲಿಸಿ ದಂಡ ವಿಧಿಸಿ, ಅಪ್ರಾಪ್ತರು ಓಡಿಸುವ ಗಾಡಿಗಳನ್ನು ಸೀಜ್ ಮಾಡಿದರೆ ಸಾಕು. ಬೆಂಗಳೂರಿನ ನಾಗರಿಕರು ನಿರಾಳವಾಗಿ ರಸ್ತೆಗಳಲ್ಲಿ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ಅಂದರೆ, ಕಾನೂನುಬಾಹಿರವಾಗಿ ದ್ವಿಚಕ್ರ-ವಾಹನ ಚಲಾಯಿಸುವವರನ್ನು ತಡೆಯುವ ನಿಮ್ಮ ಕರ್ತವ್ಯ ನಿಭಾಯಿಸಿ ಅದರ ಪರಿಣಾಮ ನೋಡಿ, ಅದೂ ನಿಮ್ಮ ಠಾಣೆಯ ಮುಂದೆಯೇ ನಿಂತು ಎಂದಷ್ಟೇ ನಾನು ಪೋಲೀಸರಿಗೆ ಕೇಳುತ್ತಿರುವುದು.
ಆದರೆ, ಪೊಲೀಸರು ಅದನ್ನು ಮಾಡುವುದಿಲ್ಲ ಯಾಕೆಂದರೆ ಅವರಲ್ಲಿ ಇಂತಹ ಕೆಲಸಕ್ಕೆ ಈಗ ಯಾವುದೇ ಧೈರ್ಯ ಉಳಿದಿಲ್ಲ ಮತ್ತು ಇದ್ದರೂ ಅವರಿಗೆ ಅವರ ಕರ್ತವ್ಯ ನೆನಪಾಗುತ್ತಿಲ್ಲ. ಭ್ರಷ್ಟಾಚಾರ, ಅಕ್ರಮ, ಅವ್ಯವಹಾರ ಹಾಗೂ ಕರ್ತವ್ಯ ಲೋಪಗಳಲ್ಲಿ ಮುಳುಗಿರುವವರಿಗೆ ನಾವು ಕೇಳುವುದೆಲ್ಲವೂ ಜುಜುಬಿ ವಿಚಾರ. ಅದೇ ಕಾನೂನು ಪಾಲನೆಯನ್ನು ಆಗ್ರಹಿಸುವ KRS ಪಕ್ಷದವರು ಕಂಡರೆ ಸಾಕು ಅವರ ಮೇಲೆ ಯಾವುದಾದರೂ ಸುಳ್ಳು ಕೇಸ್ ಫಿಟ್ ಮಾಡಬಹುದೇ ಎಂಬ ದೂರಾಲೋಚನೆಯಲ್ಲಿ ಎಲ್ಲಿಲ್ಲದ ಚುರುಕುತನ ಅವರ ಮೈಯನ್ನು ಆವರಿಸುತ್ತದೆ.
ಪುಂಡರಿಗೆ ಪೊಲೀಸರೇ ಹೆದರಿ ಏನೂ ಮಾಡಲಾಗದ ದೈನೇಸಿ ಸ್ಥಿತಿಯಲ್ಲಿರುವಾಗ ಜನಸಾಮಾನ್ಯರು ಮಾತ್ರ ಸದ್ಯ ಯಾರಿಂದಲೂ ಬೈಸಿಕೊಳ್ಳದೆ, ಹಲ್ಲೆಗೊಳಗಾಗದೆ, ಯಾವುದೇ ತಾಪತ್ರಯ ಇಲ್ಲದೆ ಮನೆಗೆ ಹೋದರೆ ಸಾಕು ಎಂದು ತಲೆತಗ್ಗಿಸಿಕೊಂಡು ಮುಂದುವರಿಯುತ್ತಾರೆ. ಅವರು ಮತ್ತೇನು ತಾನೇ ಮಾಡಲು ಸಾಧ್ಯ. ತಪ್ಪು ಮಾಡಿದ ಯಾರನ್ನಾದರೂ ಪ್ರಶ್ನಿಸಿದರೆ ಗೂಂಡಾಗಳು ಮೈಮೇಲೆ ಬರುತ್ತಾರೆ. ಪೊಲೀಸರಿಗೆ ಕರೆ ಮಾಡಿದರೆ ಅವರು ರಾಜಿ ಮಾಡಿ ಕಳುಹಿಸುತ್ತಾರೆ ಅಥವಾ ಅಮಾಯಕನ ಮೇಲೆಯೇ ಕೇಸ್ ಹಾಕುತ್ತಾರೆ.
ಇಷ್ಟರಲ್ಲಿಯೇ ಬೆಂಗಳೂರಿನ ಎಲ್ಲಾ ಪೊಲೀಸ್ ಠಾಣೆಗಳ ಮುಂದೆ KRS ಪಕ್ಷದ ಸೈನಿಕರನ್ನು ನಿಲ್ಲಿಸಿ ಠಾಣೆಯ ಮುಂದೆಯೇ ನಿಯಮಬಾಹಿರವಾಗಿ ವಾಹನ ಚಲಾಯಿಸುವವರ ವಿಡಿಯೋ ಮಾಡಿಸಬೇಕು ಎಂದು ಆಲೋಚಿಸುತ್ತಿದ್ದೇನೆ. ಆಗಲಾದರೂ ಒಂದಷ್ಟು ಅವಮಾನವಾಗಿ ಅಥವಾ ನಾಚಿಕೆಪಟ್ಟುಕೊಂಡು ನಮ್ಮ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಲು ಮುಂದಾಗುತ್ತಾರೇನೋ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ; ಮಾಡುತ್ತಲೇ ಇರಿ.












Click it and Unblock the Notifications