ಅಮೆರಿಕದ ಸಹವಾಸ ಸಾಕಪ್ಪಾ ಸಾಕು ಅಂತಾ ಫಿಲಿಪೈನ್ಸ್?
ಮನಿಲಾ: ಅಮೆರಿಕದ ಜೊತೆ ಇದ್ದವರು ಒಂದಲ್ಲ ಒಂದು ದಿನ ಆ ದೇಶದಿಂದ ದೂರ ಆಗ್ತಾರೆ ಅನ್ನೋದಕ್ಕೆ ಫಿಲಿಪೈನ್ಸ್ ಉದಾಹರಣೆ ಆಯ್ತಾ? ಇಂತಹ ಅನುಮಾನ ಕೆಲ ದಿನಗಳಿಂದ ಕಾಡುತ್ತಿದೆ. ಏಕೆಂದರೆ ಅಮೆರಿಕದ ಜೊತೆ ಸೇರಿ ಜಂಟಿ ಸಮರಭ್ಯಾಸ ನಡೆಸಿ ಚೀನಾಗೆ ಎಚ್ಚರಿಕೆ ನೀಡಿದ್ದ ಫಿಲಿಪೈನ್ಸ್ ದಿಢೀರ್ ಸಂಧಾನಕ್ಕೆ ಮುಂದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.
ದಕ್ಷಿಣ ಚೀನಾ ಸಮುದ್ರದ ವಿವಾದವನ್ನೇ ದಾಳ ಮಾಡಿಕೊಂಡು ಒಂದೊಂದೇ ದೇಶವನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ ಅಮೆರಿಕ. ಈ ಪೈಕಿ ತೈವಾನ್ ಆಯ್ತು, ದಕ್ಷಿಣ ಕೊರಿಯಾ ಆಯ್ತು ಈ ದೇಶಗಳ ಜೊತೆ ಫಿಲಿಪೈನ್ಸ್ ಕೂಡ ಅಮೆರಿಕದ ಬುಟ್ಟಿಗೆ ಬೀಳುತ್ತಿತ್ತು. ಅದರಲ್ಲೂ ಅಮೆರಿಕ (America) ಸೇನೆ ಫಿಲಿಪೈನ್ಸ್ (Philippines) ಜೊತೆ ಸಮರಭ್ಯಾಸ ಆರಂಭ ಮಾಡಿ, ಚೀನಾ ಕಣ್ಣು ಕೆಂಪಾಗುವಂತೆ ಮಾಡಿದ್ದವು ಎರಡೂ ದೇಶಗಳು. 17,000 ಸೈನಿಕರ ಜೊತೆಯಲ್ಲಿ ಸಮರಭ್ಯಾಸ ಶುರುವಾದ ಕೆಲವೇ ದಿನದಲ್ಲಿ ಫಿಲಿಪೈನ್ಸ್ ಚೀನಾ ಜೊತೆ ರಾಜಿಗೆ ಮುಂದಾಗಿದೆ. ಅದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಫಿಲಿಪೈನ್ಸ್ & ಚೀನಾ ಫ್ರೆಂಡ್ಸ್!
ಫಿಲಿಪೈನ್ಸ್ ಅಧ್ಯಕ್ಷ ಮತ್ತು ಫಿಲಿಪೈನ್ಸ್ ವಿದೇಶಾಂಗ ಕಾರ್ಯದರ್ಶಿ ಚೀನಾ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ದಕ್ಷಿಣ ಚೀನಾ ಸಮುದ್ರದ ವಿಚಾರದಲ್ಲಿ ಇರುವ ಕಿತ್ತಾಟ ಕೊನೆಗೊಳಿಸಲು ಎರಡೂ ದೇಶಗಳು ಮಹತ್ವದ ಮಾತುಕತೆ ನಡೆಸಿವೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಒಗ್ಗಟ್ಟಿನಿಂದ ಇರಲು ಹಾಗೂ ಕಿತ್ತಾಟ ಬಿಟ್ಟು ಸ್ನೇಹ ಸಂಬಂಧ ಬೆಸೆಯಲು ಫಿಲಿಪೈನ್ಸ್ ಹಾಗೂ ಚೀನಾ ಒಪ್ಪಂದ ಮಾಡಿಕೊಂಡಿವೆ. ಸರಣಿ ಸಭೆಗಳ ಪರಿಣಾಮ ಎರಡೂ ದೇಶಗಳ ಮಧ್ಯೆ ಇರುವ ಬಿಕ್ಕಟ್ಟು ಭಾಗಶಃ ಮುಗಿದಂತೆ ಕಾಣುತ್ತಿದೆ. ಆದರೆ ಇದು ಅಮೆರಿಕಗೆ ಆಘಾತ ನೀಡಿದೆ.
ನೆಮ್ಮದಿ ಇರುವ ಜಾಗದಲ್ಲಿ ಅಮೆರಿಕದ ಎಂಟ್ರಿಯಾದರೆ ಎಡವಟ್ಟು ಗ್ಯಾರಂಟಿ ಎಂಬುದು ಜನಜನಿತ ಆರೋಪ. ಈಗಲೂ ಅಷ್ಟೇ ಏಷ್ಯಾದಲ್ಲಿ ನಡೆಯುತ್ತಿರುವ ಕಿತ್ತಾಟ, ತಿಕ್ಕಾಟಗಳಿಗೆ ಅಮೆರಿಕ ಕಾರಣ ಎಂಬ ಆರೋಪ ಕೇಳಿಬರುತ್ತಿದೆ. ಇತ್ತೀಚೆಗೆ ತೈವಾನ್ ಜೊತೆ ಜಂಟಿ ಸಮರಾಭ್ಯಾಸ ನಡೆಸಿ ತೈವಾನ್ (Taiwan) ನೆಮ್ಮದಿ ಕೆಡಿಸಿತ್ತು ದೊಡ್ಡಣ್ಣ. ನಂತರ ಫಿಲಿಪೈನ್ಸ್ ಸೇನೆ ಜೊತೆಗೂ ಮಿಲಿಟರಿ ಡ್ರಿಲ್‌ಗೆ ಶುರು ಮಾಡಿತ್ತು. ಆದರೆ ಇದೇ ಸಮಯಕ್ಕೆ ಕಿಲಾಡಿ ಚೀನಾ, ಫಿಲಿಪೈನ್ಸ್ ಮನವೊಲಿಸಿ ದೊಡ್ಡಣ್ಣ ಅಮೆರಿಕದ ಲೆಕ್ಕಾಚಾರ ಉಲ್ಟಾ ಮಾಡಿತಾ? ಅನ್ನೋ ಡೌಟ್ ಶುರುವಾಗಿದೆ.
ಹೊಸ ಒಪ್ಪಂದದ ಪ್ರಕಾರ ಚೀನಾ ಮತ್ತು ಫಿಲಿಪೈನ್ಸ್ ವಿವಾದ ಸೃಷ್ಟಿಯಾಗಿರುವ ಪ್ರದೇಶದಲ್ಲಿ ಶಾಂತಿ ಕಾಪಾಡಲು ನಿರ್ಧಾರ ಮಾಡಿವೆ. ಇದರ ಜೊತೆಗೆ ದಕ್ಷಿಣ ಚೀನಾ ಸಮುದ್ರದಲ್ಲಿ ತಮ್ಮ ತಮ್ಮ ದೇಶಗಳ ವ್ಯಾಪಾರ, ವಹಿವಾಟು ಸಲೀಸಾಗಿ ನೆರವೇರಲು ಒಪ್ಪಂದ ಮಾಡಿಕೊಂಡಿವೆ. ಈ ಮೂಲಕ ನೆರೆಹೊರೆ ದೇಶಗಳ ಜೊತೆ ಸಂಬಂಧ ವೃದ್ಧಿಗೆ ಚೀನಾ ಮುಂದಾಗಿದೆ. ಆದರೆ ಚೀನಾದ ಈ ನಡೆಯಿಂದ ಅಮೆರಿಕಗೆ ಆಘಾತ ಎದುರಾಗಿದೆ. ಹೇಗಾದರೂ ದಕ್ಷಿಣ ಚೀನಾ ಸಮುದ್ರದ ಮೇಲೆ ಹಿಡಿತ ಸಾಧಿಸಬೇಕು ಎನ್ನುವ ಅಮೆರಿಕದ ಆಸೆಗೆ ಪದೇಪದೆ ಹಿನ್ನಡೆಯಾಗುತ್ತಿದೆ.

ಅಮೆರಿಕಗೆ ಕೈಕೊಟ್ಟ ಫ್ರಾನ್ಸ್ ಅಧ್ಯಕ್ಷ!
ಒಂದು ಕಡೆ ಉಕ್ರೇನ್ ವಿರುದ್ಧ ರಷ್ಯಾ ತೊಡೆತಟ್ಟಿ ನಿಂತಿದೆ, ಇನ್ನೊಂದು ಕಡೆ ತೈವಾನ್ ವಿರುದ್ಧ ಯುದ್ಧ ಆರಂಭಿಸಲು ಚೀನಾ ಕೂಡ ಸಿದ್ಧತೆ ನಡೆಸಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ ಮತ್ತೊಂದು ಮಹಾಯುದ್ಧಕ್ಕೆ ಜಗತ್ತು ಸಜ್ಜಾದಂತೆ ಭಾಸವಾಗುತ್ತಿದೆ. ಈ ನಡುವೆ ಕೆಲವು ದಿನಗಳ ಹಿಂದೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಕೂಡ ಅಮೆರಿಕದ ವಿರುದ್ಧ ಮಾತನಾಡಿ ಶಾಕ್ ಕೊಟ್ಟಿದ್ದರು. ಈಗ ಫಿಲಿಪೈನ್ಸ್ ಕೂಡ ಚೀನಾ ಜೊತೆ ಫ್ರೆಂಡ್‌ಶಿಪ್ ಮಾಡಿ ದೊಡ್ಡಣ್ಣನಿಗೆ ಮತ್ತೊಂದು ಆಘಾತ ನೀಡಿದೆ.












Click it and Unblock the Notifications