ಪಾಕಿಸ್ತಾನ ಐಎಂಎಫ್‌ಗೆ ಶರಣಾಗಿದೆ: ಜನತೆ ಆಕ್ರೋಶ
ಇಸ್ಲಾಮಾಬಾದ್, ಜನವರಿ 31: ಆರ್ಥಿಕ ದಿವಾಳಿಯತ್ತ ಹೊರಟಿರುವ ಪಾಕಿಸ್ತಾನ ಮಧ್ಯಂತರ ಬಜೆಟ್ ಮಂಡಿಸಿದೆ. ಇದು ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಐಎಂಎಫ್ (ಇಂಟರ್‌ನ್ಯಾಷನಲ್ ಮಾನೆಟರಿ ಫಂಡ್)ನ ಷರತ್ತುಗಳಿಗೆ ಪೂರಕವಾಗಿ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಬಜೆಟ್ ಮಂಡಿಸಿದೆ. ಇದರಿಂದ ಸಾರ್ವಜನಿಕರ ಮೇಲೆ ಭಾರಿ ಪ್ರಮಾಣದ ತೆರಿಗೆ ಹೊಡೆತ ಬೀಳಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.
ಹೀಗಾಗಿ ಪಾಕಿಸ್ತಾನೀಯರು ತಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ಪ್ರತಿಪಕ್ಷಗಳ ಆರೋಪಗಳ ಪ್ರಕಾರ ನೂತನ ಮಿನಿ ಬಜೆಟ್‌ನಿಂದ ದೇಶದ ಸಣ್ಣ ಪುಟ್ಟ ಆರ್ಥಿಕ ನೀತಿಯಲ್ಲೂ ಐಎಂಎಫ್ ಹೇಳಿದ ಹಾಗೆ ಕೇಳಬೇಕಾಗುತ್ತದೆ, ಇಮ್ರಾನ್ ಖಾನ್ ಸರ್ಕಾರವು ಪಾಕಿಸ್ತಾನದ ಆರ್ಥಿಕ ನೀತಿಯನ್ನು ಐಎಂಎಫ್‌ಗೆ ಬರೆದುಕೊಟ್ಟಂತಾಗಿದೆ ಎಂದು ಕಿಡಿಕಾರಿದ್ದಾರೆ.

ಪಾಕಿಸ್ತಾನದ ಆರ್ಥಿಕ ವಿಶ್ಲೇಷಕರ ಪ್ರಕಾರ, ಐಎಂಎಫ್‌ನ ಬೇಲ್ ಔಟ್ ನೀತಿಯನ್ನು ಒಪ್ಪಿಕೊಂಡಲ್ಲಿ ದೇಶವನ್ನು ಅವರ ಹಿಡಿತಕ್ಕೆ ಕೊಟ್ಟಂತಾಗುತ್ತದೆ, ದೇಶದ ಪ್ರತಿಯೊಂದು ಆರ್ಥಿಕ ನೀತಿಯಲ್ಲೂ ಅವರ ಹಸ್ತಕ್ಷೇಪ ಹೆಚ್ಚುತ್ತದೆ. ಇದರಿಂದ ಪಾಕಿಸ್ತಾನದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಪ್ರತಿಪಕ್ಷಗಳ ವಿಶ್ಲೇಷಕರ ಪ್ರಕಾರ ಇಮ್ರಾನ್ ಖಾನ್ ಸರ್ಕಾರವು ಪಾಕಿಸ್ತಾನದ ಜನರನ್ನು ಇನ್ನಷ್ಟು ಗುಲಾಮಗಿರಿಯತ್ತ ದೂಡಿದೆ ಎನ್ನುವ ಆರೋಪ ಕೇಳಿಬಂದಿದೆ.
ಐಎಂಎಫ್‌ನ ಈ ಷರತ್ತುಗಳನ್ನು ಒಪ್ಪಿಕೊಂಡಿರುವುದರಿಂದ ಪಾಕಿಸ್ತಾನದ ಸ್ಥಿತಿಯು ಅರ್ಜೆಂಟೀನಾ, ಈಕ್ವೆಡಾರ್, ಈಜಿಪ್ಟ್, ಗ್ರೀಸ್, ಕೀನ್ಯಾ, ಜೋರ್ಡನ್, ನೈಜೀರಿಯಾ ಸ್ಥಿತಿಗೆ ಬರಲಿದೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ.
ಅಂದಹಾಗೆ, ಶ್ರೀಲಂಕಾಗೂ ಐಎಂಎಫ್ ಇದೇ ರೀತಿಯ ಬೇಲ್ ಔಟ್ ಸೂತ್ರವನ್ನು ಪ್ರಸ್ತಾಪಿಸಿತ್ತು, ತನ್ನ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರೂ ಪ್ರಸ್ತಾಪವನ್ನು ತಿರಸ್ಕರಿಸಿತ್ತು, ಆದರೆ ಪಾಕಿಸ್ತಾನವು ಈ ಕೆಲಸ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.












Click it and Unblock the Notifications