Imran Khan: ಪಾಕ್ ಮಾಜಿ ಪ್ರಧಾನಿ ನಿವಾಸವನ್ನು ಸುತ್ತುವರಿದ ಭಾರೀ ಪೊಲೀಸ್ ಪಡೆ- ಬಂಧನಕ್ಕೆ ಕ್ಷಣಗಣನೆ, ಕಟ್ಟೆಚ್ಚರ
ಲಾಹೋರ್‌ನಲ್ಲಿರುವ ಇಮ್ರಾನ್ ಖಾನ್ ನಿವಾಸವನ್ನು ಪೊಲೀಸರು ಸುತ್ತುವರಿದಿದ್ದಾರೆ. ಅವರ ಬಂಧನವು ಯಾವುದೇ ಸಮಯದಲ್ಲಿ ಆಗಬಹುದೆಂದು ತಿಳಿದುಬಂದಿದೆ.
ಲಾಹೋರ್, ಮಾರ್ಚ್ 14: ತೋಷಖಾನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಉಚ್ಚಾಟಿತ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನಕ್ಕೆ ಆದೇಶಿಸಲಾಗಿದೆ. ಲಾಹೋರ್‌ನಲ್ಲಿರುವ ಇಮ್ರಾನ್ ಖಾನ್ ನಿವಾಸವನ್ನು ಪೊಲೀಸರು ಸುತ್ತುವರಿದಿದ್ದಾರೆ. ಅವರ ಬಂಧನವು ಯಾವುದೇ ಸಮಯದಲ್ಲಿ ಆಗಬಹುದೆಂದು ತಿಳಿದುಬಂದಿದೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷರೂ ಆಗಿರುವ ಇಮ್ರಾನ್ ಖಾನ್ ಮನೆಗೆ ಹೋಗುವ ಎಲ್ಲಾ ರಸ್ತೆಗಳನ್ನು ಪೊಲೀಸರು ಕಂಟೈನರ್‌ಗಳನ್ನು ಇರಿಸುವ ಮೂಲಕ ನಿರ್ಬಂಧಿಸಿದ್ದಾರೆ. ಇನ್ನೇನು ಕಾರ್ಯಾಚರಣೆ ಆರಂಭವಾಗಲಿದೆ. ಇದನ್ನು ವಿರೋಧಿಸಿ ಇಮ್ರಾನ್ ಖಾನ್ ನಿವಾಸದ ಹೊರಗೆ ಪಿಟಿಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇಮ್ರಾನ್ ಖಾನ್ ಮೇಲೆ ನಕಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಅವರು ಪೊಲೀಸರಿಗೆ ಶರಣಾಗುವುದಿಲ್ಲ ಎಂದು ಹಿರಿಯ ಪಿಟಿಐ ನಾಯಕ ಫಾರೂಖ್ ಹಬೀಬ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಮಹಿಳಾ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧನ ವಾರಂಟ್‌ಗಳನ್ನು ಇಸ್ಲಾಮಾಬಾದ್ ಹೈಕೋರ್ಟ್ ಇಂದು ಅಮಾನತುಗೊಳಿಸಿದೆ. ಪೊಲೀಸರು ಈಗ ಯಾವ ಹೊಸ ವಾರಂಟ್‌ಗಳನ್ನು ತಂದಿದ್ದಾರೆಂದು ನೋಡೋಣ' ಎಂಬುದಾಗಿ ಹಬೀಬ್ ಹೇಳಿದ್ದಾರೆ.
ಎಫ್‌ಐಆರ್‌ನಲ್ಲಿ ನಾಮನಿರ್ದೇಶನಗೊಂಡ ಖಾನ್ ಮತ್ತು ಇತರರನ್ನು ಪೊಲೀಸರು ಸರ್ಕಾರ ನಿರ್ದೇಶನದ ಮೇರೆಗೆ ಬಂಧಿಸಬಹುದು ಎಂದು ಅವರು ತಿಳಿಸಿದ್ದಾರೆ. ಮಾರ್ಚ್ 8 ರಂದು ಕ್ರೂರ ಚಿತ್ರಹಿಂಸೆ ನೀಡಿ ಪಿಟಿಐ ನಾಯಕರೊಬ್ಬರನ್ನು ಪೊಲೀಸರು ಅವರನ್ನು ಕೊಲೆ ಮಾಡಿದ್ದಾರೆ ಎಂದು ಪಿಟಿಐ ಆರೋಪಿಸಿತ್ತು.

ಅವಿಶ್ವಾಸ ನಿರ್ಣಯದ ಮೂಲಕ ಅವರ ಸರ್ಕಾರವನ್ನು ಉರುಳಿಸಿ 11 ತಿಂಗಳ ಹಿಂದೆ PML-N ನೇತೃತ್ವದ ಫೆಡರಲ್ ಒಕ್ಕೂಟವು ಅಧಿಕಾರಕ್ಕೆ ಬಂದ ನಂತರ ಖಾನ್ ವಿರುದ್ಧ ಇದು 81 ನೇ ಎಫ್‌ಐಆರ್ ಆಗಿದೆ.
ಕಳೆದ ವರ್ಷ ಎಪ್ರಿಲ್‌ನಲ್ಲಿ ಅವಿಶ್ವಾಸ ಮತದಲ್ಲಿ ಸೋತ ನಂತರ ಖಾನ್ ಅವರನ್ನು ಅಧಿಕಾರದಿಂದ ಹೊರಹಾಕಲಾಯಿತು. ರಷ್ಯಾ, ಚೀನಾ ಮತ್ತು ಅಫ್ಘಾನಿಸ್ತಾನದ ಮೇಲೆ ಅವರ ಸ್ವತಂತ್ರ ವಿದೇಶಾಂಗ ನೀತಿ ನಿರ್ಧಾರಗಳಿಂದಾಗಿ ಯುಎಸ್ ನನ್ನ ಮೇಲೆ ಪಿತೂರಿ ನಡೆಸಿದೆ ಎಂದು ಇಮ್ರಾನ್ ಖಾನ್ ಆರೋಪಿಸಿದ್ದರು.
ಅವರನ್ನು ಪದಚ್ಯುತಗೊಳಿಸಿದ ನಂತರ, ಖಾನ್ ಅವರು ಪ್ರಧಾನ ಮಂತ್ರಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವನ್ನು 'ಆಮದು ಮಾಡಿಕೊಂಡ ಸರ್ಕಾರ' ಎಂದು ಜರಿದಿದ್ದರು.
ಪಾಕ್ ಸಂಸತ್ತು ತನ್ನ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಲಿದೆ ಎಂದು ವರದಿಯಾಗಿದೆ.












Click it and Unblock the Notifications