ಪಾಕ್ ಪ್ರಧಾನಿ ಇಮ್ರಾನ್ ಖಾನ್ ರಿಂದ ಮತ್ತೊಮ್ಮೆ ರಾಜತಾಂತ್ರಿಕ ಶಿಷ್ಟಾಚಾರ ಉಲ್ಲಂಘನೆ
ಬಿಷ್ಕೆಕ್ (ಕಿರ್ಗಿಸ್ತಾನ್), ಜೂನ್ 14: ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತೊಮ್ಮೆ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಮುರಿದಿದ್ದಾರೆ. ಕಿರ್ಗಿಸ್ತಾನದ ಬಿಷ್ಕೆಕ್ ನಲ್ಲಿ ಗುರುವಾರ ಶಾಂಘೈ ಸಹಕಾರ ಸಂಘಟನೆ (ಎಸ್ ಸಿಒ) ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ, ವಿವಿಧ ದೇಶಗಳ ಪ್ರಮುಖರು ಸಭಾಂಗಣ ಪ್ರವೇಶಿಸುವಾಗ ಇತರರು ಎದ್ದು ನಿಂತು ಗೌರವ ನೀಡಿದರೆ, ಇಮ್ರಾನ್ ಖಾನ್ ಕೂತಿರುವುದು ಕಂಡುಬರುತ್ತದೆ. ಕೊನೆಗೆ ಇತರರು ನಿಂತೇ ಇರುವುದನ್ನು ಕಂಡು, ಸ್ವಲ್ಪ ಹೊತ್ತು ನಿಂತು, ಆ ಮೇಲೆ ಕೂತುಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಹದಿನಾಲ್ಕನೇ ಒಐಸಿ ಸಮಾವೇಶದಲ್ಲೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಮುರಿದಿದ್ದರು. ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲ್ ಅಜೀಜ್ ಅವರ ಜತೆ ಸಂವಹನ ನಡೆಸುವ ವೇಳೆ, ಸಲ್ಮಾನ್ ರ ದುಭಾಷಿ ಜತೆಗೆ ಮಾತನಾಡಿ, ಸೌದಿ ರಾಜನಿಗೆ ಅನುವಾದ ಮಾಡುವ ಮೊದಲೇ ಇಮ್ರಾನ್ ಹೊರಟುಬಿಟ್ಟಿದ್ದರು.

ಆ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿ, ಇಮ್ರಾನ್ ಖಾನ್ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಸೌದಿ ರಾಜರನ್ನು ಅವಮಾನಿಸಿದ ಕಾರಣಕ್ಕೆ ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾ ಎರಡೂ ಕಡೆ ಅಸಮಾಧಾನ ವ್ಯಕ್ತವಾಗಿತ್ತು. ಇಮ್ರಾನ್ ಖಾನ್, ಎಸ್ ಸಿಒ ಸದಸ್ಯ ರಾಷ್ಟ್ರಗಳು, ಪ್ರಧಾನಿ ನರೇಂದ್ರ ಮೋದಿ ಅವರು ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್ ನಲ್ಲಿ ನಡೆಯುತ್ತಿರುವ ಎರಡು ದಿನದ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.












Click it and Unblock the Notifications