ಬೈಕ್‌ನಲ್ಲಿ ಬಾಂಬ್, ಜೀವ ತೆಗೆಯಲು ಉಗ್ರರ ಸ್ಕೆಚ್ ಏನು?
ಪಾಕಿಸ್ತಾನದಲ್ಲಿ ಸರಿಯಾಗಿ 3 ವಾರದ ಹಿಂದೆ ಸಂಸತ್ ಚುನಾವಣೆ ನಡೆದಿತ್ತು. ಹಲವು ದಿನಗಳ ಕಾಲ ಮತ ಎಣಿಕೆ ನಡೆದು ಚುನಾವಣೆಯ ಫಲಿತಾಂಶ ಹೊರಬಿದ್ದಿತ್ತು. ಆದರೆ ಪಾಕಿಸ್ತಾನದಲ್ಲಿ ಯಾರಿಗೂ ಬಹುಮತ ಸಿಕ್ಕಿಲ್ಲ. ಹೀಗಾಗಿ ಅಲ್ಲಿ ಅತಂತ್ರ ಸರ್ಕಾರ ಸೃಷ್ಟಿಯಾಗಿದೆ. ಹೀಗಿದ್ದಾಗಲೇ ಅಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಪಾಕಿಸ್ತಾನ ನಲುಗಿ ಹೋಗಿದೆ. ಈಗ ಉಗ್ರರು ಬೈಕ್‌ನಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಿದ್ದಾರೆ.
ಪಾಪಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವ ಪ್ರಾಂತ್ಯದಲ್ಲಿ ಮೋಟರ್ ಬೈಕ್‌ನಲ್ಲಿ ಅಡಗಿಸಿ ಇಟ್ಟಿದ್ದ ಬಾಂಬ್ ಬ್ಲಾಸ್ಟ್ ಆಗಿ, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಪೊಲೀಸರಿಂದ ಮಾಹಿತಿ ಹೊರಬಿದ್ದಿದೆ. ಪಾಕಿಸ್ತಾನದ ಇಸ್ಮಾಯಿಲ್ ಖಾನ್ ಜಿಲ್ಲೆಯ, ದರಜಿಂದ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಾಂಬ್ ಇಟ್ಟಿರುವ ಮೋಟರ್ ಬೈಕನ್ನು, ಹೋಟೆಲ್ ಒಂದರ ಮುಂದೆ ನಿಲ್ಲಿಸಲಾಗಿತ್ತು. ಸ್ಫೋಟದ ನಂತರ ಬೈಕ್‌ನ ಸಮೀಪ ಇದ್ದ ಮೂವರು ಗಾಯಗೊಂಡಿದ್ದಾರೆ. ಹೀಗಾಗಿ ಪರಿಸ್ಥಿತಿ ಸೂಕ್ಷ್ಮವಾಗಿದ್ದು, ಎಲ್ಲಿ ಏನಾಗುತ್ತೆ? ಅನ್ನೋ ಭಯ ಆವರಿಸಿದೆ.

ಸಮ್ಮಿಶ್ರ ಸರ್ಕಾರ ರಚನೆ ಪಕ್ಕಾ?
ಅಷ್ಟಕ್ಕೂ ನವಾಜ್ ಷರೀಫ್ ಅವರ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್ - ನವಾಜ್ ಅನ್ನ ಬೆಂಬಲಿಸಿ ಸರ್ಕಾರ ರಚನೆಗೆ ಸಪೋರ್ಟ್ ಮಾಡಲು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ, ಭರ್ಜರಿ ಡಿಮ್ಯಾಂಡ್ ಇಟ್ಟಿದೆ. ಆ ಪ್ರಕಾರ, ಪ್ರಧಾನಿ ಆಯ್ಕೆ & ಸರ್ಕಾರ ರಚನೆಗೆ ಬೆಂಬಲ ನೀಡುತ್ತೇವೆ. ಪ್ರತಿಯಾಗಿ ಅಧ್ಯಕ್ಷ ಸ್ಥಾನ ಒಳಗೊಂಡಂತೆ ಪ್ರಮುಖ ಸಾಂವಿಧಾನಿಕ ಸ್ಥಾನದ ಆಯ್ಕೆ ಪ್ರಕ್ರಿಯೆಯಲ್ಲಿ ನಮಗೆ ನೀವು ಬೆಂಬಲಿಸಬೇಕು ಎಂದು ಪಿಪಿಪಿ ಡಿಮ್ಯಾಂಡ್ ಇಟ್ಟಿದೆಯಂತೆ. ಈ ಕಾರಣಕ್ಕೆ ಈಗ ಪಿಪಿಪಿ ಪಕ್ಷಕ್ಕೆ ಅಧ್ಯಕ್ಷ ಪಟ್ಟ ಸಿಗಲಿದ್ದು, ನವಾಜ್ ಷರೀಫ್ ಪಕ್ಷಕ್ಕೆ ಪ್ರಧಾನಿ ಪಟ್ಟ ಸಿಗಲಿದೆ. ಹೀಗೆ ಪಾಕಿಸ್ತಾನದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಆಗುತ್ತಿದೆ.
ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಈಗ ಪಿಎಂಎಲ್-ಎನ್ 75 ಸ್ಥಾನ ಗೆದ್ದರೆ, ಪಿಪಿಪಿ 54 ಸ್ಥಾನ ಪಡೆದಿದೆ. ಈ ನಡುವೆ 17 ಸ್ಥಾನ ಗೆದ್ದ ಮುತ್ತಾಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ ಪಕ್ಷ ಕೂಡ, ಹೊಸ ಮೈತ್ರಿಗೆ ಬೆಂಬಲ ಸೂಚಿಸಿದೆ. ಆದರೂ ಇಮ್ರಾನ್ ಖಾನ್ ಅವರ ಬೆಂಬಲಿತ 'ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್' ಸ್ವತಂತ್ರ ಅಭ್ಯರ್ಥಿಗಳು 93 ಸ್ಥಾನ ಗೆದ್ದರೂ ಪ್ರಯೋಜನ ಇಲ್ಲವಾಗಿದೆ. ಇದು, ಪಾಕಿಸ್ತಾನದಲ್ಲಿ ಆಂತರಿಕ ಶಾಂತಿಗೆ ಭಂಗ ತರುವ ಆತಂಕ ಎದುರಾಗಿದೆ.
ಒಟ್ನಲ್ಲಿ ಪಾಕಿಸ್ತಾನ ಬದಲಾಗಲ್ಲ, ಅಲ್ಲಿನ ಸಾಮಾಜಿಕ & ರಾಜಕೀಯ ವ್ಯವಸ್ಥೆಯು ಕೂಡ ಬದಲಾಗಲ್ಲ ಅನ್ನೋದು ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಬಾಂಬ್ ಬ್ಲಾಸ್ಟ್ ಆಗಿರುವ ಹಿನ್ನೆಲೆ ಪರಿಸ್ಥಿತಿ ಗಂಭೀರವಾಗಿದೆ. ಪಾಕಿಸ್ತಾನದ ಹಲವು ಪ್ರದೇಶದಲ್ಲಿ ಈ ರೀತಿ ಹಿಂಸಾಚಾರ ಭುಗಿಲೆದ್ದಿದೆ. ಹೀಗಾಗಿ ಮುಂದೆ ಏನಾಗುತ್ತೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications