ಧೂಳಿಂದ ಎದ್ದು ಬರ್ತಾರಾ ಮಾಜಿ ಪ್ರಧಾನಿ? ಜೈಲಿನಿಂದಲೂ ಬಿಡುಗಡೆ?
ರಾಜಕೀಯ ಅಂದ್ರೆನೆ ಹೀಗೆ, ಇಲ್ಲಿ ಯಾರಿಗೂ ಅಧಿಕಾರಗಳು ಶಾಶ್ವತ ಅಲ್ಲ. ಅಧಿಕಾರದಲ್ಲಿ ಇದ್ದವರು ಒಂದಲ್ಲ ಒಂದು ದಿನ ನೆಲಕ್ಕೆ ಬಿದ್ದೇ ಬೀಳುತ್ತಾರೆ. ಹಾಗೇ ನೆಲಕ್ಕೆ ಬಿದ್ದವರಂತು ಮತ್ತೊಮ್ಮೆ ಪುಟಿದೇಳಲು ಅವಕಾಶ ಇರುತ್ತದೆ. ಇದಕ್ಕೆಲ್ಲಾ ಜನರ ಆಶೀರ್ವಾದ ಬೇಕಷ್ಟೇ. ಈ ಮಾತು ಮಾಜಿ ಪ್ರಧಾನಿ ವಿಚಾರದಲ್ಲೂ ನಿಜವಾಗುತ್ತಿದೆ. ಅದ್ರಲ್ಲೂ ಜೈಲು ಸೇರಿ ಪ್ರತಿ ಕ್ಷಣ ನರಳುತ್ತಿದ್ದ ಮಾಜಿ ಪ್ರಧಾನಿಗೆ ಈಗ ಜನರ ಆಶೀರ್ವಾದದಿಂದ, ಜೈಲಿನಿಂದಲೂ ಮುಕ್ತಿ ಸಿಗುವ ಮುನ್ಸೂಚನೆ ಕಾಣಿಸುತ್ತಿದೆ.
ನಾವು ಹೇಳುತ್ತಾ ಇರೋದು ಪಾಕಿಸ್ತಾನದ ಮಾಜಿ ಇಮ್ರಾನ್ ಖಾನ್ ಬಗ್ಗೆ. ಭ್ರಷ್ಟಾಚಾರವೂ ಸೇರಿದಂತೆ 100ಕ್ಕೂ ಹೆಚ್ಚು ಕೇಸ್ ಹಾಕಿಸಿಕೊಂಡು ಜೈಲು ಸೇರಿದ್ದರೂ ಪಾಕಿಸ್ತಾನ ಜನರು ಇಮ್ರಾನ್ ಖಾನ್ ಕೈಬಿಟ್ಟಿಲ್ಲ. ಅದರಲ್ಲೂ ಪಾಕಿಸ್ತಾನದ ಸೇನೆಯ ಎದುರು ಹಾಕಿಕೊಂಡು ವಿಲವಿಲ ಒದ್ದಾಡುತ್ತಿರುವ ಇಮ್ರಾನ್ ಖಾನ್‌ಗೆ ಈಗ ಪಾಕಿಸ್ತಾನದ ಜನರು ಬೆಂಬಲವಾಗಿದ್ದಾರೆ. ಅಂದಹಾಗೆ ಪಾಕಿಸ್ತಾನ ಸಂಸತ್ ಚುನಾವಣೆ ಫಲಿತಾಂಶ ಈಗಾಗಲೇ ಭಾಶಃ ಹೊರಬಿದ್ದಿದೆ. ಇನ್ನು ಈ ಫಲಿತಾಂಶದಲ್ಲಿ ಇಮ್ರಾನ್ ಬೆಂಬಲಿತ ಅಭ್ಯರ್ಥಿಗಳು ಭಾರಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಿದ್ದಾರೆ.

ಗೆದ್ದು ಬೀಗುತ್ತಿರುವ ಇಮ್ರಾನ್ ಖಾನ್!
ಪಾಕಿಸ್ತಾನದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಮ್ರಾನ್ ಖಾನ್ ಅವರನ್ನ ಕುತಂತ್ರ ಮಾಡಿ ಜೈಲಿಗೆ ಹಾಕಿದ್ದಾರೆ ಎಂದು ಅವರ ಬೆಂಬಲಿಗರು ರೊಚ್ಚಿಗೆದ್ದಿದ್ದರು. ಹೀಗಾಗಿ ಪಾಕಿಸ್ತಾನದ ಮೂಲೆ ಮೂಲೆಯಲ್ಲೂ ಹಿಂಸಾಚಾರ ನಡೆದಿತ್ತು.
ಇಷ್ಟೆಲ್ಲದರ ಮಧ್ಯೆ ಹೇಗಾದರೂ ಮಾಡಿ ಪಾಕಿಸ್ತಾನದಲ್ಲಿ ಸರ್ಕಾರ ರಚಿಸಬೇಕು ಅನ್ನೋದು ನವಾಜ್ ಷರೀಫ್ ಪ್ಲ್ಯಾನ್ ಆಗಿತ್ತು. ಈ ಎಲ್ಲಾ ಬೆಳವಣಿಗೆ ಮಧ್ಯೆ ಇದೀಗ ಪಾಕಿಸ್ತಾನದ ಚುನಾವಣೆ ಫಲಿತಾಂಶ ಇಮ್ರಾನ್ ಖಾನ್‌ಗೆ ಬೆಂಬಲ ನೀಡುವ ರೀತಿ ಬಂದಿದೆ. ಇಮ್ರಾನ್ ಖಾನ್ ಬೆಂಬಲಿತ ಅಭ್ಯರ್ಥಿಗಳಿಗೆ ಈಗ ಭಾರಿ ದೊಡ್ಡ ಗೆಲುವು ಸಿಗುತ್ತಿದ್ದು, ಇಮ್ರಾನ್ ಖಾನ್‌ಗೆ ಜೈಲಿನಿಂದ ಮುಕ್ತಿ ಸಿಗುವ ನಿರೀಕ್ಷೆ ಇದೆ.

ಎಷ್ಟು ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ?
ನಿನ್ನೆ ಪಾಕ್ ಸಂಸತ್‌ಗೆ ಚುನಾವಣೆ ನಡೆದಿತ್ತು. ಹಾಗೇ ಸ್ಥಳೀಯ ಪ್ರಾಂತ್ಯದ ವಿಧಾನಸಭೆಗಳಿಗೂ ಎಲೆಕ್ಷನ್ ನಡೆದು ಮತ ಎಣಿಕೆ ಶುರುವಾಗಿತ್ತು. ಪಾಕಿಸ್ತಾನ ಚುನಾವಣೆ ಆಯೋಗ ಪ್ರಕಾರ ಪಾಕ್ ಸಂಸತ್ 266 ಸ್ಥಾನ ಪೈಕಿ 265 ಸ್ಥಾನಕ್ಕೆ ಚುನಾವಣೆ ನಡೆಸಲಾಗಿದೆ. ಹೀಗೆ 5,121 ಅಭ್ಯರ್ಥಿಗಳು & 4 ಪ್ರಾಂತೀಯ ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ 12,695 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಮುಕ್ಕಾಲು ಭಾಗ ಫಲಿತಾಂಶ ಹೊರಬಿದ್ದಿದ್ದು ಬಹುಮತ ಸಿಗದೆ ಪಾಕಿಸ್ತಾನ ಸಂಸತ್ ಚಿತ್ರಾನ್ನಾ ಆಗೋದು ಪಕ್ಕಾ ಆಗುತ್ತಿದೆ. ಆದರೂ ಇಮ್ರಾನ್ ಖಾನ್ ಬೆಂಬಲಿತ ಅಭ್ಯರ್ಥಿಗಳಿಗೆ ಭಾರಿ ಮುನ್ನಡೆ ಸಿಗುತ್ತಿದೆ.
ಈವರೆಗೆ ಪಾಕಿಸ್ತಾನದ ಸಂಸತ್‌ನ 236 ಸ್ಥಾನದ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ, ಇಮ್ರಾನ್ ಖಾನ್ ಪಕ್ಷವನ್ನು ಬೆಂಬಲಿಸುವವರು ಸೇರಿ ಪಕ್ಷೇತರ ಅಭ್ಯರ್ಥಿಗಳು ಬರೋಬ್ಬರಿ 96 ಸ್ಥಾನದಲ್ಲಿ ಗೆದ್ದಿದ್ದಾರೆ. ನವಾಜ್ ಷರೀಫ್ ಅವರ PML-Nಗೆ 66 ಸ್ಥಾನ ಸಿಕ್ಕಿದ್ದರೆ, PPP ಪಕ್ಷಕ್ಕೆ 51 ಸ್ಥಾನಗಳು ಸಿಕ್ಕಿದೆಯಂತೆ. ಇತರರು ಒಟ್ಟಾರೆ 23 ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಇನ್ನೂ 29 ಸ್ಥಾನ ಫಲಿತಾಂಶ ಬಾಕಿ ಉಳಿದಿದೆ. ಇಮ್ರಾನ್ ಖಾನ್‌ಗೆ ಬಹುತೇಕ ಭಾರಿ ದೊಡ್ಡ ಗೆಲುವು ಸಿಕ್ಕಂತಾಗಿದ್ದು, ಇಮ್ರಾನ್ ಅಭಿಮಾನಿಗಳು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.












Click it and Unblock the Notifications