ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಬಂಧನಕ್ಕೆ ಸಿದ್ಧತೆ
ನವದೆಹಲಿ, ಜುಲೈ 13: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಮಗಳು ಮರ್ಯಮ್ ಅವರನ್ನು ಲಾಹೋರ್‌ನಲ್ಲಿ ಪೊಲೀಸರು ಬಂಧಿಸಲು ಸಿದ್ಧತೆ ನಡೆಸಿದ್ದಾರೆ.
ಲಂಡನ್‌ನಲ್ಲಿ ನಾಲ್ಕು ಫ್ಲಾಟ್‌ಗಳನ್ನು ಖರೀದಿಸಿದ ಕುಟುಂಬದ ಅವ್ಯವಹಾರ ಹಾಗೂ ಪನಾಮಾ ಪೇಪರ್ಸ್ ಹಗರಣದ ಎರಡು ಪ್ರಕರಣಗಳಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದ ನವಾಜ್ ಷರೀಫ್ ಅವರಿಗೆ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಅವರ ಮಗಳು ಮರ್ಯಮ್ ಅವರಿಗೂ ಏಳು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. ಲಂಡನ್‌ನಲ್ಲಿ ಇದ್ದ ಇಬ್ಬರೂ ಲಾಹೋರ್‌ಗೆ ಬಂದು ಇಳಿಯುತ್ತಿದ್ದಂತೆಯೇ ಪೊಲೀಸರು ಅವರನ್ನು ಬಂಧಿಸಲು ತಯಾರಿ ನಡೆಸಿದ್ದಾರೆ.

ಷರೀಫ್ ಹಾಗೂ ಮರ್ಯಮ್ ಅವರನ್ನು ವಿಮಾನದಲ್ಲಿಯೇ ಬಂಧಿಸುವ ಚಿಂತನೆಯೂ ನಡೆದಿದೆ. ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೊದ ತಂಡವೊಂದು ಅದಕ್ಕಾಗಿ ಅಬುದಾಬಿಗೆ ತೆರಳಿದೆ.
ಅಲ್ಲಿ ಷರೀಫ್ ಅವರು ಪ್ರಯಾಣಿಸುತ್ತಿರುವ ವಿಮಾನವನ್ನು ಏರಲಿದೆ. ಪಾಕಿಸ್ತಾನದ ವಾಯುಪ್ರದೇಶಕ್ಕೆ ಬರುತ್ತಿದ್ದಂತೆಯೇ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಲಂಡನ್‌ನಲ್ಲಿ ನೆಲೆಸಿರುವ ಷರೀಫ್ ಅವರ ಮೊಮ್ಮಕ್ಕಳಾದ ಜುನೈದ್ ಸಫ್ದಾರ್ ಮತ್ತು ಜಕಾರಿಯಾ ಷರೀಫ್ ಅವರನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪಾರ್ಕ್‌ಲೇನ್‌ನಲ್ಲಿರುವ ಅವೆನ್‌ಫೀಲ್ಡ್ ಹೌಸ್ ಎದುರು ಗುರುವಾರ ಸಂಜೆ ನೆರೆದಿದ್ದ ಪ್ರತಿಭಟನಾಕಾರರಲ್ಲಿ ಒಬ್ಬ ಅವಾಚ್ಯ ಶಬ್ದದಿಂದ ನಿಂದಿಸಿದ್ದಕ್ಕೆ ಆತನ ಮೇಲೆ ಷರೀಫ್ ಮೊಮ್ಮಕ್ಕಳು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.












Click it and Unblock the Notifications