ಸಿಕ್ಕಾಪಟ್ಟೆ ಕೆಲಸ ಮಾಡೋರು ಈ ಕಥೆ ಓದಲೇಬೇಕು!
ಜಕಾರ್ತಾ, ಡಿ.18: ಸುಮಾರು 30 ಗಂಟೆಗಳ ಕಾಲ ನಿರಂತರವಾಗಿ ಕೆಲಸ ನಿರತರಾಗಿದ್ದ ಮಹಿಳೆಯೊಬ್ಬರು ತಮ್ಮ ಸ್ಥಿತಿ ಬಗ್ಗೆ ಟ್ವೀಟ್ ಮಾಡಿ ನಂತರ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
"30 hours of working and still going strong" ಎಂದು ಮೈಕ್ರೋ ಬ್ಲಾಗಿಂಗ್ ತಾಣ ಟ್ವೀಟರ್ ನಲ್ಲಿ ಸಂದೇಶ ಹಾಕಿದ್ದ ಮಹಿಳೆ ನಂತರ ಕುಸಿದು ಬಿದ್ದಿದ್ದಾರೆ. ಕೂಡಲೆ ಸಹದ್ಯೋಗಿಗಳು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಒಂದು ದಿನದ ನಂತರ ಆಕೆ ಸಾವನ್ನಪ್ಪಿದ್ದಾರೆ.
ಇಂಡೋನೇಷಿಯಾದ ವೈದ್ಯರು ಆಕೆ ಸಾವಿನ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದಿದ್ದಾರೆ.ಅಧಿಕವಾದ ಮಾನಸಿಕ ಒತ್ತಡ, ವಿಪರೀತ ಕೆಲಸದ ಕಾರಣದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ಮಹಿಳೆಗೆ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳಿರಲಿಲ್ಲ ಎಂದು ತಿಳಿದು ಬಂದಿದೆ.

ಮಿತಾ ಡಿರಾನ್ ಸಾಮಾನ್ಯವಾಗಿ ಹೆಚ್ಚು ಕಾಲ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಅನುಭವ ಹೊಂದಿದ್ದರು. ಅಕೆ ಕಚೇರಿ ಸಮಯ ಮುಗಿದ ಮೇಲೆ ಕಚೇರಿಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
ಮಿತಾ ಅವರು ಕಾಪಿ ರೈಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರನ್ನು ಕಳೆದುಕೊಂಡು ಕಂಪನಿ ತುಂಬಾ ದುಃಖ ಅನುಭವಿಸುತ್ತಿದೆ. ಆಕೆ ಸಾವು ನಿಜಕ್ಕೂ ನಮಗೆ ಶಾಕ್ ತಂದಿದೆ ಎಂದು ಯಂಗ್ ಅಂಡ್ ರೂಬಿಕಾಮ್ ಸಂಸ್ಥೆ ಹೇಳಿಕೆ ನೀಡಿದೆ.
ಆದರೆ, ಕಳೆದ ಅಕ್ಟೋಬರ್ ನಲ್ಲಿ ಆಕೆಗೆ ಏನೋ ನೋವು ತೊಂದರೆ ಇರುವ ಸುಳಿವು ಸಿಕ್ಕಿತ್ತು. ಸುಮಾರು ಮೂರು ದಿನಗಳ ಜ್ವರದಿಂದ ಬಳಲಿದ್ದ ಮಿತಾ ನಂತರ ಸತತ 12 ಗಂಟೆಗಳ ಕಾಲ ಕೆಲಸ ನಿರ್ವಹಿಸಿ ಅಚ್ಚರಿ ಮೂಡಿಸಿದ್ದರು.
ಸಾವಿಗೂ ಮುನ್ನ ಕೋಮಾಕ್ಕೆ ಜಾರಿದ್ದ ಮಗಳನ್ನು ಕಂಡು ಆಕೆ ತಂದೆ ಆಕೆ ವಿಪರೀತ ಕೆಲಸದ ಹುಚ್ಚು ಹೊಂದಿದ್ದಳು. ಆಕೆಯನ್ನು ಕಳೆದುಕೊಂಡು ದುಃಖ ತಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದರು.
ಸುಮಾರು ಏಳು ತಿಂಗಳುಗಳ ಹಿಂದೆ ಒಗಿಲ್ವಿ ಪಿಆರ್ ಸಂಸ್ಥೆ 24 ವರ್ಷ ವಯಸ್ಸಿನ ಉದ್ಯೋಗಿ ಗ್ಯಾಬ್ರಿಲ್ ಲಿ ಅವರು ಇದೇ ರೀತಿ ವಿಪರೀತ ಕೆಲಸ ಮಾಡಿ ಬೀಜಿಂಗ್ ನ ಕಚೇರಿಯಲ್ಲಿ ಹೃದಯಾಘಾತಕ್ಕೊಳಗಾಗಿ ಡೆಸ್ಕ್ ಮೇಲೆ ಪ್ರಾಣಬಿಟ್ಟಿದ್ದರು.












Click it and Unblock the Notifications