North Korea: ಶತ್ರುಗಳ ಎದೆಯಲ್ಲಿ ಮತ್ತೊಮ್ಮೆ ನಡುಕ ಹುಟ್ಟಿಸಿದ ಉತ್ತರ ಕೊರಿಯಾದ ಕಿಮ್!
ಜಗತ್ತಿನಲ್ಲಿ ಯಾರನ್ನು ಬೇಕಾದರೂ ಎದುರು ಹಾಕಿಕೊಂಡು ಬಾಳಬಹುದು, ಆದರೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಎದುರು ಹಾಕಿಕೊಂಡು ಬಾಳುವುದು ಕಷ್ಟ ಅನ್ನೋ ಮಾತಿದೆ. ಅದರಲ್ಲೂ ಉತ್ತರ ಕೊರಿಯಾ ಬಳಿ ಭೀಕರ ಪರಮಾಣು ಬಾಂಬ್‌ಗಳ ರಾಶಿಯೇ ಇದ್ದು, ಶತ್ರುಗಳಿಗೆ ಇದೇ ಪರಮಾಣು ಬಾಂಬ್ ತೋರಿಸಿ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ ಕಿಮ್ ಜಾಂಗ್ ಉನ್. ಹೀಗೆ ಇದ್ದಾಗ ಮತ್ತೊಮ್ಮೆ ದಿಢೀರ್ ಖಡಕ್ ಸಂದೇಶ ನೀಡಿರುವ ಕಿಮ್, ಶತ್ರುಗಳಿಗೆ ಮಾನಸಿಕ ಸಂಕಟದ ಪರಿಸ್ಥಿತಿ ತರುವ ಎಚ್ಚರಿಕೆ ನೀಡಿದ್ದಾನೆ.
ಉತ್ತರ ಕೊರಿಯಾ ಬಳಿ ಈಗಾಗಲೇ ಪರಮಾಣು ಅಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಇರುವ, ನೂರಾರು ಮಿಸೈಲ್‌ಗಳು ಇವೆ. ಹೀಗಿದ್ದರೂ ಇನ್ನಷ್ಟು ಪರಮಾಣು ಅಸ್ತ್ರಗಳನ್ನು ತಯಾರಿಸಲು ಮತ್ತು ಆ ಮೂಲಕ ವಿರೋಧಿ ಪಡೆಯ ಬಾಯಿ ಮುಚ್ಚಿಸಲು ಪದೇ, ಪದೇ ಕಿಮ್ ಜಾಂಗ್ ಉನ್ ಪ್ರಯತ್ನ ಮಾಡುತ್ತಿರುವುದು ಆತಂಕ ಹೆಚ್ಚಿಸಿದೆ. ಮಧ್ಯಪ್ರಾಚ್ಯ ಭಾಗದಲ್ಲಿ ಸಾಲು ಸಾಲು ಯುದ್ಧಗಳು ಆರಂಭ ಆದ ನಂತರ ಕಿಮ್ ಜಾಂಗ್ ಉನ್ ಇನ್ನಷ್ಟು ಅಲರ್ಟ್ ಆಗಿದ್ದು, ತನ್ನ ಬಳಿ ಇರುವ ಪರಮಾಣು ಅಸ್ತ್ರ ಸಾಮರ್ಥ್ಯ ಹೆಚ್ಚು ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದಾನೆ. ಇದೇ ಸಮಯದಲ್ಲಿ, ಶತ್ರು ಪಡೆಗೆ ಮಾನಸಿಕ ಯಾತನೆಯ ಎಚ್ಚರಿಕೆ ನೀಡಲಾಗಿದೆ.

ಜಪಾನ್ & ದ.ಕೊರಿಯಾಗೆ ಆತಂಕ!
ಕಿಮ್ ಜಾಂಗ್ ಉನ್ ಅಧಿಕಾರಕ್ಕೆ ಬಂದ ನಂತರ ಉತ್ತರ ಕೊರಿಯಾ ಶತ್ರುಗಳ ವಿರುದ್ಧ ಮತ್ತಷ್ಟು ಕ್ರೂರ ನಿರ್ಧಾರಗಳಿಗೆ ಮುಂದಾಗುತ್ತಿದೆ. ಹೀಗಿದ್ದಾಗ ಇನ್ನೇನು ಉತ್ತರ ಕೊರಿಯಾದಲ್ಲಿ ಬೃಹತ್ ವಾರ್ಷಿಕ ಸಭೆ ನಡೆಯಲಿದೆ, ಈ ಸಭೆಯಲ್ಲಿ ಪರಮಾಣು ಪಡೆಗಳನ್ನು ಮತ್ತಷ್ಟು ಬಲಪಡಿಸುವ ಯೋಜನೆ ಘೋಷಿಸಲು ತಯಾರಿ ನಡೆಸಿದ್ದೇವೆ ಎಂದು ಕಿಮ್ ತಿಳಿಸಿರುವುದು ಸಹಜವಾಗಿ ಶತ್ರುಗಳಿಗೆ ನಡುಕ ತಂದಿದೆ. ಆ ಕಡೆ ದಕ್ಷಿಣ ಕೊರಿಯಾ & ಈ ಕಡೆ ಜಪಾನ್ ದೇಶಗಳಿಗೆ ಇದು ಭಯ ಹೆಚ್ಚು ಮಾಡಿದೆ. ಉತ್ತರ ಕೊರಿಯಾ ನೆಲದಿಂದ ಈ ಎರಡೂ ದೇಶಗಳು ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಇವೆ. ಹೀಗಾಗಿ ಸಾಕಷ್ಟು ಆತಂಕ ಕಾಡುತ್ತಿದೆ ಈ ದೇಶಗಳಿಗೆ.
ಸಾಲು ಸಾಲು ಕ್ಷಿಪಣಿ ಪರೀಕ್ಷೆ
ಉತ್ತರ ಕೊರಿಯಾಗೆ ಚೀನಾ ಬೆನ್ನೆಲುಬಾಗಿ ನಿಂತಿರುವ ಕಾರಣಕ್ಕೆ ಅಮೆರಿಕ ವಿರುದ್ಧ ಪದೇ ಪದೇ ಈ ದೇಶ ಗುಡುಗುತ್ತಿದೆ. ಇದೀಗ ಮತ್ತಷ್ಟು ಕ್ಷಿಪಣಿಗಳನ್ನು ತಯಾರಿಸಲು ಮತ್ತು ಆ ಮೂಲಕ ದೊಡ್ಡದಾಗಿ ಭಯ ಹುಟ್ಟಿಸಲು ಸಜ್ಜಾಗಿದೆ ಉತ್ತರ ಕೊರಿಯಾ. ಕೇವಲ ಎರಡು ದಿನಗಳ ಹಿಂದಷ್ಟೇ ಮತ್ತೊಂದು ಮಿಸೈಲ್ ಟೆಸ್ಟ್ ನಡೆಸಿತ್ತು ಉತ್ತರ ಕೊರಿಯಾ. ಉತ್ತರ ಕೊರಿಯಾ ಈಗ ಪರಮಾಣು ಯುದ್ಧ ನಿರೋಧಕ ಶಕ್ತಿ ಬಲಪಡಿಸುವ ಮುಂದಿನ ಹಂತದ ಯೋಜನೆ ಸಿದ್ಧವಾಗಿದೆ ಎಂದು ಕಿಮ್ ಹೇಳಿರುವುದು ಸಹಜವಾಗಿ ಶತ್ರುಗಳಿಗೆ ಚಿಂತೆ ಹೆಚ್ಚಾಗುವಂತೆ ಮಾಡಿದೆ. ಆ ಕಡೆ ಅಮೆರಿಕ ಕೂಡ ಈಗಾಗಲೇ ಉತ್ತರ ಕೊರಿಯಾ ವಿರುದ್ಧ ನೂರಾರು ನಿರ್ಬಂಧ ಹೇರಿಕೆ ಮಾಡಿದ್ದರೂ ಪರಿಸ್ಥಿತಿ ಮಾತ್ರ ಹಿಡಿತಕ್ಕೆ ಸಿಗದಷ್ಟು ಕೈಮೀರಿ ಹೋಗಿದೆ. ಇರಾನ್ ಜೊತೆಗೆ ಅಮೆರಿಕ ಕಿರಿಕ್ ಮಾಡುತ್ತಿರುವ ಸಮಯದಲ್ಲೇ ಕಿಮ್ ಜಾಂಗ್ ಉನ್ ಕೂಡ ಅಮೆರಿಕ ಮತ್ತು ಇತರ ದೇಶಗಳಿಗೆ ತಲೆನೋವಾಗುವ ಮುನ್ಸೂಚನೆ ಸಿಗುತ್ತಿದೆ.












Click it and Unblock the Notifications