America VS China: ಚೀನಾ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ ಎಂದ ಅಮೆರಿಕ!

ವಾಷಿಂಗ್ಟನ್: ಅಮೆರಿಕ ಮತ್ತು ಚೀನಾ ಸಂಬಂಧ ಹಳಸಿ ಚಿತ್ರಾನ್ನ ಆಗೋಗಿದೆ. ತೈವಾನ್ ಪರ ಅಮೆರಿಕ ನಿಂತಿದ್ದೇ ತಡ ದಕ್ಷಿಣ ಚೀನಾ ಸಮುದ್ರ ಕೂಡ ಬೆಂಕಿಯುಂಡೆ ಆಗಿದೆ. ಈ ಹೊತ್ತಲ್ಲೇ ಅಮೆರಿಕ ನೆಲದಿಂದ ಸ್ಫೋಟಕ ಆರೋಪ ಕೇಳಿಬಂದಿದ್ದು, ಚೀನಾ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಹಾಗಾದರೆ ಅಂತಹ ಗಂಭೀರ ಆರೋಪವಾದರೂ ಏನು?

ಚೀನಾ ಮತ್ತು ಅಮೆರಿಕ ನಡುವೆ ಆರ್ಥಿಕ ಹೊಂದಾಣಿಕೆ ಬಿಟ್ಟರೆ ಬೇರೆ ಏನೂ ಉಳಿದಿಲ್ಲ. ಎರಡೂ ದೇಶಗಳು ವ್ಯಾಪಾರದ ವಿಚಾರದಲ್ಲಿ ಮಾತ್ರವೇ ಹೊಂದಾಣಿಕೆ ತೋರಿಸುತ್ತಿದ್ದಾರೆ. ಇದನ್ನ ಬಿಟ್ಟು ಅತ್ತ ಅಮೆರಿಕ ನಾಯಕರು ತೈವಾನ್, ಜಪಾನ್ ಹಾಗು ದಕ್ಷಿಣ ಕೊರಿಯಾ ಪರ ನಿಲ್ಲುತ್ತಾ ಚೀನಾಗೆ ಕೋಪ ತರಿಸುತ್ತಿದ್ದಾರೆ. ಇದೇ ಹೊತ್ತಲ್ಲಿ ಚೀನಾ ಕೂಡ ಅಮೆರಿಕ ವಿರುದ್ಧ ಆಕ್ರೋಶ ಹೊರಹಾಕುತ್ತಿದೆ. ಇದೆಲ್ಲಾ ಸಾಲದು ಎಂಬಂತೆ, ಚೀನಾ ಯುದ್ಧಕ್ಕಾಗಿ ಸಿದ್ಧತೆ ನಡೆಸಿದೆ ಎಂಬ ಆರೋಪವನ್ನು ಅಮೆರಿಕದ ಪ್ರಮುಖ ರಾಜಕೀಯ ಪಕ್ಷದ ನಾಯಕಿ ಮಾಡಿದ್ದಾರೆ.

china-is-preparing-for-war-with-usa

ಭಾರತ ಮೂಲದ ನಿಕ್ಕಿ ಹ್ಯಾಲೆ ಹೇಳಿದ್ದೇನು?

ಹೌದು ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಂದಿನ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಹೀಗಾಗಿ ಅಮೆರಿಕದ ರಿಪಬ್ಲಿಕನ್ ಪಕ್ಷದಲ್ಲಿ ಉತ್ತಮ ಸ್ಥಾನ ಹೊಂದಿರುವ ಭಾರತ ಮೂಲದ ನಿಕ್ಕಿ ಹ್ಯಾಲೆ ಟ್ರಂಪ್ ಜಾಗಕ್ಕೆ ಬರಬಹುದು ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಹೊತ್ತಲ್ಲಿ ನಿಕ್ಕಿ ಚೀನಾ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ. ಅಮೆರಿಕ ಸೇರಿದಂತೆ ಇಡೀ ಜಗತ್ತಿಗೆ ಚೀನಾ ಬೆದರಿಕೆಯ ರಾಷ್ಟ್ರವಾಗಿ ಪರಿಣಮಿಸಿದೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಅಮೆರಿಕ ಸೇನೆಗೆ ಚೀನಾ ಸೇನೆ ಸಮ!

ಅಂದಹಾಗೆ 2024ರ ಅಮೆರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ನಿಕ್ಕಿ ಹ್ಯಾಲೆ ಅವರು, ಈಗ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹೀಗೆ ನ್ಯೂ ಹ್ಯಾಂಪ್‌ಶೈರ್‌ನಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಆರ್ಥಿಕ ನೀತಿ ಬಗ್ಗೆ ಮಾತನಾಡಿದರು ನಿಕ್ಕಿ ಹ್ಯಾಲೆ. ಈ ವೇಳೆ ಚೀನಾ ಬಗ್ಗೆ ನಿಕ್ಕಿ ಗಂಭೀರ ಸ್ವರೂಪದ ಆರೋಪ ಮಾಡಿದ್ದಾರೆ. ಚೀನಾ ಯುದ್ಧಕ್ಕೋಸ್ಕರ ಸಿದ್ಧತೆ ನಡೆಸುತ್ತಿದೆ. ಚೀನಾ ಮಿಲಿಟರಿಯ ಶಕ್ತಿ ಅಮೆರಿಕಗೆ ಸಮ ಎಂದು ನಿಕ್ಕಿ ಹ್ಯಾಲೆ ಹೇಳಿದ್ದೂ ಅಲ್ಲದೆ, ಚೀನಾ ನಮ್ಮನ್ನು ಸೋಲಿಸುವ ಪ್ರಯತ್ನದಲ್ಲಿ ಅರ್ಧ ಶತಮಾನ ಕಳೆದಿದೆ ಎಂದು ವ್ಯಂಗ್ಯವಾಡಿದ್ದಾರೆ.

china-is-preparing-for-war-with-usa

ಅವರು ಎಲ್ಲಾ ಕಿತ್ತುಕೊಂಡರು!

ತಮ್ಮ ಭಾಷಣದಲ್ಲಿ ಚೀನಾ ಆರ್ಥಿಕತೆ ಬೆಳವಣಿಗೆ ಬಗ್ಗೆಯು ನಿಕ್ಕಿ ಹ್ಯಾಲೆ ಪ್ರಸ್ತಾಪಿಸಿದ್ದಾರೆ. ಈ ವೇಳೆ, ಚೀನಾ ಅಮೆರಿಕದ ಉದ್ಯೋಗ ಕಸಿದುಕೊಂಡು, ನಮ್ಮ ವ್ಯಾಪಾರ ರಹಸ್ಯಗಳನ್ನ ತಿಳಿದುಕೊಂಡು ಔಷಧದಿಂದ ಹಿಡಿದು ಟೆಕ್ನಾಲಜಿ ತನಕ ಹಿಡಿತ ಸಾಧಿಸಿದೆ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ ಈ ಮೂಲಕ ಆರ್ಥಿಕವಾಗಿ ಹಿಂದುಳಿದಿದ್ದ ಚೀನಾ ಇಂದು ಜಗತ್ತಿನಲ್ಲೇ 2ನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ನಿಕ್ಕಿ ಹೇಳಿದ್ದಾರೆ.

ದಿಢೀರ್ ನಿಕ್ಕಿ ಹ್ಯಾಲೆ ಹೀಗೆ ಹೇಳಿದ್ದೇಕೆ?

ರಿಪಬ್ಲಿಕನ್ ಪಕ್ಷದಲ್ಲಿ ಈ ಬಾರಿ ಸಾಕಷ್ಟು ಪೈಪೋಟಿ ಇದ್ದು, ಭಾರತ ಮೂಲದ ಹಲವರ ಕಣ್ಣು ಅಧ್ಯಕ್ಷೀಯ ಚುನಾವಣೆಯ ಮೇಲೆ ಇದೆ. ಈ ಪೈಕಿ ರಿಪಬ್ಲಿಕನ್ ಪಕ್ಷದ ನಿಕ್ಕಿ ಅವರ ಪ್ರತಿಸ್ಪರ್ಧಿ ವಿವೇಕ್‌ ರಾಮಸ್ವಾಮಿ ಕೂಡ ಚೀನಾ ವಿಚಾರ ಪ್ರಸ್ತಾಪಿಸಿದ್ದರು. ಅಲ್ಲದೆ ಚೀನಾ ಬಗ್ಗೆ ವಿವೇಕ್‌ ರಾಮಸ್ವಾಮಿ ಮಾತನಾಡಿ ಗಮನ ಸೆಳೆದಿದ್ದರು. ಹೀಗೆ ವಿವೇಕ್‌ ರಾಮಸ್ವಾಮಿ ಚೀನಾ ಬಗ್ಗೆ ಮಾತನಾಡಿ ಒಂದೆರಡು ದಿನ ಕಳೆಯುವ ಒಳಗೆ ನಿಕ್ಕಿ ಕೂಡ ಚೀನಾ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹಾಗೇ ನಿಕ್ಕಿ ಹ್ಯಾಲೆ ನೀಡಿದ ಹೇಳಿಕೆ ಈಗಾಗಲೇ ಹಳಸಿರುವ ಅಮೆರಿಕ ಮತ್ತು ಚೀನಾ ಸಂಬಂಧಕ್ಕೆ ಇನ್ನಷ್ಟು ಹುಳಿ ಹಿಂಡಿದಂತಾಗಿದೆ.

ಅಂದಹಾಗೆ ಅಮೆರಿಕದಲ್ಲಿ ಭಾರತೀಯರು ಶಕ್ತಿಯುತವಾಗಿ ಬೆಳೆದಿದ್ದು ರಾಜಕೀಯ ಪಕ್ಷಗಳ ಪ್ರಮುಖ ಹುದ್ದೆ ಅಲಂಕರಿಸಿದ್ದಾರೆ. ಈಗಿನ ಅಮೆರಿಕ ಉಪಾಧ್ಯಕ್ಷರಾದ ಕಮಲಾ ಹ್ಯಾರಿಸ್ ಕೂಡ ಭಾರತ ಮೂಲದವರು. ಅದೇ ರೀತಿ ನಿಕ್ಕಿ ಹ್ಯಾಲೆ ಕೂಡ ಭಾರತ ಮೂಲದವರು. 51 ವರ್ಷದ ನಿಕ್ಕಿ ಹ್ಯಾಲೆ, ಅಮೆರಿಕದ ಸೌತ್ ಕೆರೊಲಿನಾದಲ್ಲಿ ಗವರ್ನರ್ ಆಗಿದ್ದರು. ಇದೀಗ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಹೆಸರು ಕೂಡ ಮುನ್ನೆಲೆಯಲ್ಲಿ ಇದೆ. ಈ ಸಂದರ್ಭದಲ್ಲೇ ನಿಕ್ಕಿ ಹ್ಯಾಲೆ ಚೀನಾ ನಾಯಕರ ವಿರುದ್ಧ ಗುಡುಗಿದ್ದು ಗಮನ ಸೆಳೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+