ನೈಜೀರಿಯಾ ಚರ್ಚ್ ಮೇಲೆ ದಾಳಿ: 50 ಮಂದಿ ಹತ್ಯೆ
ಲಾಗೋಸ್ ಜೂನ್ 6: ನೈಜೀರಿಯಾದ ಕ್ಯಾಥೊಲಿಕ್ ಚರ್ಚ್‌ನಲ್ಲಿ ಭಾನುವಾರ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಬಂದೂಕುಧಾರಿಗಳು ಏಕಾಏಕಿ ದಾಳಿ ನಡೆಸಿದ ಪರಿಣಾಮ ಕನಿಷ್ಠ 50 ಮಂದಿ ಭಕ್ತರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ನೂರಾರು ಮಂದಿ ಗಾಯಗೊಂಡಿದ್ದಾರೆ.
ನೈರುತ್ಯ ನೈಜೀರಿಯಾದ ಒಂಡೋ ರಾಜ್ಯದ ಒವೊ ನಗರದ ಸೈಂಟ್ ಫ್ರಾನ್ಸಿಸ್ ಕ್ಯಾಥೊಲಿಕ್ ಚರ್ಚ್‌ನಲ್ಲಿ ಪೆಂಟೆಕೋಸ್ಟ್ ಸಂಡೇ ದಿನದ ಹಿನ್ನೆಲೆಯಲ್ಲಿ ವಿಶೇಷ ಪಾರ್ಥನೆ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಭಕ್ತರು ಚರ್ಚ್‌ಗೆ ಆಗಮಿಸಿದ್ದರು. ಇದೇ ವೇಳೆ ಶಸ್ತ್ರಸಜ್ಜಿತ ಬಂದೂಕುಧಾರಿಗಳು ಏಕಾಏಕಿ ಭಕ್ತರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಅಲ್ಲದೇ ಸ್ಫೋಟಕಗಳನ್ನು ಸಿಡಿಸಿದ್ದಾರೆ. ಇದರಿಂದ ಮಹಿಳೆಯರು, ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯ ಶಾಸಕ ಒಗುನ್ಮೊಳಸುಯಿ ಒಲುವೋಲೆ ತಿಳಿಸಿದ್ದಾರೆ.

"ಕ್ರೈಸ್ಥರ ವಿಶೇಷ ದಿನಗಳಲ್ಲಿ ಒಂದಾದ ಪೆಂಟೆಕೋಸ್ಟ್ ಸಂಡೇ ಯ ಪ್ರಾರ್ಥನೆ ವೇಳೆ ಈ ರೀತಿಯ ದಾಳಿ ದುರುದೃಷ್ಟಕರ. ಘಟನೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಅನೇಕರು ಮೃತಪಟ್ಟಿದ್ದಾರೆ. ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ನೋವು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರುತ್ತೇವೆ,'' ಎಂದು ಪೋಪ್ ಪ್ರಾನ್ಸಿಸ್ ಹೇಳಿದ್ದಾರೆ.
ಚರ್ಚ್‌ನ ಪ್ರಧಾನ ಪ್ರೀಸ್ಟ್ ಅಪಹರಣ
"ಫ್ರಾನ್ಸಿಸ್ ಕ್ಯಾಥೊಲಿಕ್ ಚರ್ಚ್‌ನ ಭಾನುವಾರದ ಪ್ರಾರ್ಥನೆ ವೇಳೆ ಬಂದೂಕುಧಾರಿಗಳು ಚರ್ಚ್‌ನ ಒಳಗೆ ಮತ್ತು ಹೊರಗೆ ಇದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದರು. ಇದೇ ವೇಳೆ ಬಂದೂಕುಧಾರಿಗಳು ಫ್ರಾನ್ಸಿಸ್ ಕ್ಯಾಥೊಲಿಕ್ ಚರ್ಚ್‌ನ ಪ್ರಧಾನ ಪ್ರೀಸ್ಟ್ ಅವರನ್ನು ಅಪಹರಿಸಿದ್ದಾರೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಗಾಯಗೊಂಡವರನ್ನು ಕೂಡಲೇ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಘಟನೆ ಹಿನ್ನೆಲೆಯಲ್ಲಿ ಬಂದೂಕುಧಾರಿಗಳ ಪತ್ತೆಗೆ ತನಿಖೆ ನಡೆಯುತ್ತಿದೆ,'' ಎಂದು ಒಂಡೋ ರಾಜ್ಯದ ಪೊಲೀಸ್ ವಕ್ತಾರ ಫನ್ಮಿಲಾಯ್ ಇಬುಕನ್ ಒಡುನ್ಲಾಮಿ ಮಾಹಿತಿ ನೀಡಿದ್ದಾರೆ.

ಪೊಲೀಸರಿಂದ ಸಮಗ್ರ ತನಿಖೆ
"ಇದೊಂದು ಹತ್ಯಾಕಾಂಡ. ಈ ರೀತಿಯ ಘಟನೆಗಳು ಮರುಕಳಿಸಲು ಬಿಡಬಾರದು. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ನಮ್ಮ ಸಾಂತ್ವನವಿದೆ. ಆ ಕುಟುಂಬಗಳ ಸಹಾಯಕ್ಕೆ ಸರಕಾರವಿದೆ. ಬಂದೂಕುಧಾರಿಗಳ ಗುರುತು ಮತ್ತು ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ಕೈಗೊಂಡಿದ್ದಾರೆ,'' ಎಂದು ಒಂಡೋ ರಾಜ್ಯದ ರಾಜ್ಯಪಾಲ ಅರಕುನ್ರಿನ್ ಒಲುವಾರೊಟಿಮಿ ಅಕೆರೆಡೊಲು ಹೇಳಿದರು.
ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆ
ಘಟನೆಯಲ್ಲಿ ಅನೇಕರು ಗಾಯಗೊಂಡಿದ್ದು, ಅವರು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಒವೊ ನಗರದ ನಾಲ್ಕು ದಿಕ್ಕುಗಳಿಗೂ ನಾಕಾಬಂದಿ ಹಾಕಲಾಗಿದೆ. ಘಟನೆ ಸಂಬಂಧ ಸರಕಾರ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಅಗತ್ಯ ನೆರವು ನೀಡುತ್ತಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications