ಮೌಂಟ್ ಎವರೆಸ್ಟ್ ಅನ್ನು 26 ಬಾರಿ ಏರಿದ ವಿಶ್ವದ 2ನೇ ವ್ಯಕ್ತಿ ಇವರು!
ನೇಪಾಳಿ ಶೆರ್ಪಾ ಮಾರ್ಗದರ್ಶಿಯೊಬ್ಬರು ಭಾನುವಾರ 26 ನೇ ಬಾರಿಗೆ ಮೌಂಟ್ ಎವರೆಸ್ಟ್ ಅನ್ನು ಏರಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಎರಡನೇ ವ್ಯಕ್ತಿಯಾಗಿದ್ದಾರೆ ಎಂದು ಹೈಕಿಂಗ್ ಅಧಿಕಾರಿಗಳು ತಿಳಿಸಿದ್ದಾರೆ.
46 ವರ್ಷದ ಪಸಾಂಗ್ ದಾವಾ ಶೆರ್ಪಾ 8,849-ಮೀ (29,032-ಅಡಿ) ಶಿಖರವನ್ನು ಏರಿದ್ದಾರೆ. ಈ ಹಿಂದೆ ನೇಪಾಳದ ಕಾಮಿ ರೀಟಾ ಶೆರ್ಪಾ ಮೌಂಟ್ ಎವರೆಸ್ಟ್ ಅನ್ನು 26 ಬಾರಿ ಏರಿದ್ದಾರೆ. ಈ ಮೂಲಕ ಮೌಂಟ್ ಎವರೆಸ್ಟ್ ಅನ್ನು 26 ಬಾರಿ ಏರಿದ ಹೆಗ್ಗಳಿಕೆಯು ನೇಪಾಳಿಗರಿಗೆ ಸಲ್ಲುತ್ತದೆ ಎಂದು ಸರ್ಕಾರಿ ಪ್ರವಾಸೋದ್ಯಮ ಅಧಿಕಾರಿ ಬಿಗ್ಯಾನ್ ಕೊಯಿರಾಲಾ ಹೇಳಿದ್ದಾರೆ.

ಇದೀಗ ಎವರೆಸ್ಟ್ ಶಿಖರವನ್ನು ಕಾಮಿ ರೀಟಾ ಮತ್ತೊಮ್ಮೆ ಏರುತ್ತಿದ್ದಾರೆ. ಶಿಖರದ ಕೊನೆಯನ್ನು ತಲುಪಿದರೆ ಕಾಮಿ ರೀಟಾ ಮತ್ತೊಂದು ಹೊಸ ದಾಖಲೆಯನ್ನು ಬರೆದಂತೆ ಆಗುತ್ತದೆ. ಪಸಾಂಗ್ ದಾವಾ ತನ್ನ ಹಂಗೇರಿಯ ಕ್ಲೈಂಟ್‌ನೊಂದಿಗೆ ಶಿಖರದ ಕೊನೆಯನ್ನು ತಲುಪಿದ್ದಾರೆ ಎಂದು ಇಮ್ಯಾಜಿನ್ ನೇಪಾಲ್ ಟ್ರೆಕ್ಸ್ ಹೈಕಿಂಗ್ ಕಂಪನಿಯ ಅಧಿಕಾರಿ ಹೇಳಿದ್ದಾರೆ.
"ನೇಪಾಳಿಯ ಪಸಾಂಗ್ ದಾವಾ ಶೆರ್ಪಾ ಈಗ ಮೌಂಟ್ ಎವರೆಸ್ಟ್ ಶಿಖರದ ಮೇಲಿನಿಂದ ಕೆಳಕ್ಕೆ ಇಳಿಯುತ್ತಿದ್ದಾರೆ. ಅವರ ಆರೋಗ್ಯ ಉತ್ತಮವಾಗಿದೆ," ಎಂದು ಅಧಿಕಾರಿ ದಾವಾ ಫುಟಿ ಶೆರ್ಪಾ ರಾಯಿಟರ್ಸ್‌ಗೆ ಮಾಹಿತಿ ನೀಡಿದ್ದಾರೆ. ಶೆರ್ಪಾಗಳು ತಮ್ಮ ಕ್ಲೈಂಬಿಂಗ್ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಪರ್ವಾತರೋಹಿಗಳು ಹೆಚ್ಚಾಗು ಶೆರ್ಪಾಗಳಾಗಿದ್ದಾರೆ.
ಶಿಖರ ಏರಿದ ಮೊದಲ ವಿದೇಶಿ ಮಹಿಳೆ!
ಮುಖ್ಯವಾಗಿ ಪರ್ವತಗಳಲ್ಲಿ ವಿದೇಶಿ ಗ್ರಾಹಕರಿಗೆ ಮಾರ್ಗದರ್ಶನ ನೀಡುವ ಮೂಲಕ ಜೀವನವನ್ನು ಶೆರ್ಪಾ ಸಮುದಾಯಗಳು ನಡೆಸುತ್ತದೆ. ಇನ್ನು ಭಾನುವಾರ ಶಿಖರವನ್ನು ಏರಿದ ಪಾಕಿಸ್ತಾನಿ ಮಹಿಳೆ ನೈಲಾ ಕಿಯಾನಿ ಶಿಖರವನ್ನು ಏರಿದ್ದಾರೆ. ಮಾರ್ಚ್‌ನಿಂದ ಮೇ ವರೆಗೆ ನಡೆಯುವ ಈ ವರ್ಷದ ಕ್ಲೈಂಬಿಂಗ್ ಋತುವಿನಲ್ಲಿ ಎವರೆಸ್ಟ್ ಅನ್ನು ಏರಿದ ಮೊದಲ ವಿದೇಶಿ ಮಹಿಳೆ ನೈಲಾ ಕಿಯಾನಿ ಆಗಿದ್ದಾರೆ ಎಂದು ಅಧಿಕಾರಿ ದಾವಾ ಫುಟಿ ಶೆರ್ಪಾ ಹೇಳಿದ್ದಾರೆ.
ಅನೇಕ ವಿದೇಶಿ ಆರೋಹಿಗಳು ಈಗಾಗಲೇ ಶಿಖರದತ್ತ ಸಾಗುತ್ತಿರುವ ಕಾರಣ ಈ ಮಾಹಿತಿಯು ದೃಢೀಕರಿಸಲಾಗದು. ಆದರೆ ಪಾಕಿಸ್ತಾನಿ ಮಹಿಳೆ ನೈಲಾ ಕಿಯಾನಿಯೇ ಮೊದಲ ಮಹಿಳೆ ಎಂದು ಅಧಿಕಾರಿ ದಾವಾ ಫುಟಿ ಶೆರ್ಪಾ ಹೇಳಿದ್ದಾರೆ. ದುಬೈ ಮೂಲದ 37 ವರ್ಷದ ಬ್ಯಾಂಕರ್ ಕಿಯಾನಿ, ಎವರೆಸ್ಟ್‌ಗಿಂತ ಮೊದಲು ವಿಶ್ವದ 14 ಎತ್ತರದ ಪರ್ವತಗಳಲ್ಲಿ ನಾಲ್ಕನ್ನು ಏರಿದ್ದರು ಎಂದು ಹಿಮಾಲಯನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಎವರೆಸ್ಟ್ ಶಿಖರವನ್ನು ತಲುಪಲು ಬಯಸುವ ವಿದೇಶಿ ಆರೋಹಿಗಳಿಗೆ ನೇಪಾಳವು ಈ ವರ್ಷ 467 ಪರವಾನಗಿಗಳನ್ನು ನೀಡಿದೆ. ಪ್ರತಿಯೊಬ್ಬ ಆರೋಹಿಯು ಸಾಮಾನ್ಯವಾಗಿ ಕನಿಷ್ಠ ಒಬ್ಬ ಶೆರ್ಪಾ ಮಾರ್ಗದರ್ಶಿಯೊಂದಿಗೆ ಪರ್ವತವನ್ನು ಏರಬಹುದು.
ಎವರೆಸ್ಟ್ ಅನ್ನು 1953 ರಲ್ಲಿ ಸರ್ ಎಡ್ಮಂಡ್ ಹಿಲರಿ ಮತ್ತು ಶೆರ್ಪಾ ಟೆನ್ಸಿಂಗ್ ನಾರ್ಗೆ ಮೊದಲ ಬಾರಿಗೆ ಏರಿದಾಗಿನಿಂದ ಈವರೆಗೆ ಆರೋಹಿಗಳು 11,000 ಕ್ಕೂ ಹೆಚ್ಚು ಬಾರಿ ಏರಿದ್ದಾರೆ. ಈ ಪ್ರಯತ್ನದಲ್ಲಿ ಸುಮಾರು 320 ಜನರು ಸಾವನ್ನಪ್ಪಿದ್ದಾರೆ ಎಂದು ಹಿಮಾಲಯದ ಡೇಟಾಬೇಸ್ ಮತ್ತು ನೇಪಾಳಿ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications