ಮುಂಬೈ ದಾಳಿ: ಭಾರತಕ್ಕೆ ತಹವ್ವುರ್ ಹುಸೇನ್ ರಾಣಾ ಹಸ್ತಾಂತರಕ್ಕೆ ಒಪ್ಪಿಗೆ
ವಾಷಿಂಗ್ಟನ್, ಜನವರಿ 25: ಮಹತ್ವದ ಬೆಳವಣಿಗೆಯೊಂದರಲ್ಲಿ 2008ರ ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಭಾಗಿಯಾಗಿ, ದೋಷಿ ಎಂದು ಸಾಬೀತಾಗಿರುವ ತಹವ್ವುರ್ ಹುಸೇನ್ ರಾಣಾ ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಪಾಕಿಸ್ತಾನಿ-ಕೆನಡಾದ ಉದ್ಯಮಿ ತಹವ್ವುರ್ ಹುಸೇನ್ ರಾಣಾ ಹಸ್ತಾಂತರ ಮಾಡಬೇಕು ಎಂದು ಭಾರತಕ್ಕೆ ಹಲವು ವರ್ಷಗಳಿಂದ ಬೇಡಿಕೆ ಇಡುತ್ತಿತ್ತು.
ಶನಿವಾರ ಅಮೆರಿಕ ಸುಪ್ರೀಂಕೋರ್ಟ್ ತಹವ್ವುರ್ ಹುಸೇನ್ ರಾಣಾರನ್ನು ಭಾರತಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆಗಳಿಗೆ ಒಪ್ಪಿಗೆ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ. ತಹವ್ವುರ್ ಹುಸೇನ್ ರಾಣಾ ಭಾರತಕ್ಕೆ ಕರೆ ತಂದರೆ ಮುಂಬೈ ದಾಳಿಯ ಕುರಿತು ಇನ್ನಷ್ಟು ವಿಷಯಗಳು ಬೆಳಕಿಗೆ ಬರಲಿದೆ.

ಹಲವು ವರ್ಷಗಳಿಂದ ಭಾರತ ತಹವ್ವುರ್ ಹುಸೇನ್ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಬೇಕು ಎಂದು ಒತ್ತಾಯಿಸುತ್ತಿತ್ತು. ಪಾಕಿಸ್ತಾನಿ ಮೂಲದ ತಹವ್ವುರ್ ಹುಸೇನ್ ರಾಣಾ ಗಡಿಪಾರು ಮಾಡಲು ಈಗ ಒಪ್ಪಿಗೆ ಸಿಕ್ಕಿದೆ.
ಕಳೆದ ವರ್ಷವೇ ಹಸ್ತಾಂತರ: 2024ರಲ್ಲಿಯೇ ಭಾರತಕ್ಕೆ ತಹವ್ವುರ್ ಹುಸೇನ್ ರಾಣಾನನ್ನು ಹಸ್ತಾಂತರ ಮಾಡಲಾಗುತ್ತದೆ ಎಂಬ ಮಾಹಿತಿ ಇತ್ತು. ಆದರೆ ಈ ಪ್ರಕ್ರಿಯೆಗಳನ್ನು ಕೈಗೊಳ್ಳಲು ಯುಎಸ್ ಸುಪ್ರೀಂಕೋರ್ಟ್ ಒಪ್ಪಿಗೆ ಸಿಕ್ಕಿರಲಿಲ್ಲ.
ಡಿಸೆಂಬರ್‌ನಲ್ಲಿ ಭಾರತಕ್ಕೆ ತಹವ್ವುರ್ ಹುಸೇನ್ ರಾಣಾ ಕರೆತರಲಾಗುತ್ತದೆ ಎಂದು ಮುಂಬೈನ ಜೈಲಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಗಡಿಪಾರು ಮಾಡದಂತೆ ಕೋರಿ ತಹವ್ವುರ್ ಹುಸೇನ್ ರಾಣಾನನ್ನು ಸಲ್ಲಿಕೆ ಮಾಡಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿತ್ತು. ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಹಸ್ತಾಂತರ ಮಾಡಲು ಅವಕಾಶವಿದೆ ಎಂದು ಹೇಳಿತ್ತು.
ತಹವ್ವುರ್ ಹುಸೇನ್ ರಾಣಾ ವಿರುದ್ಧ ಅಮೆರಿಕದಲ್ಲಿಯೂ ಹಲವು ಪ್ರಕರಣಗಳ ವಿಚಾರಣೆ ನಡೆದಿದೆ. 2008ರ ಮುಂಬೈ ಭಯೋತ್ಪಾದಕ ದಾಳಿಯ ಕುರಿತು ತನಿಖೆ ಕೈಗೊಂಡಿದ್ದ ಎನ್‌ಐಎ ತಹವ್ವುರ್ ಹುಸೇನ್ ರಾಣಾ ಸೇರಿದಂತೆ ಇತರ 9 ಮಂದಿ ದಾಳಿಗೆ ಯೋಜನೆ ರೂಪಿಸಿದ ಆರೋಪ ಮಾಡಿತ್ತು. ಇದು ಕೋರ್ಟ್‌ನಲ್ಲಿಯೂ ಸಾಬೀತಾಗಿತ್ತು.
ಮುಂಬೈ ದಾಳಿಯ ಸಂಚು ಆರೋಪದ ಮೇಲೆ ಅಮೆರಿಕದಲ್ಲಿ ತಹವ್ವುರ್ ಹುಸೇನ್ ರಾಣಾನನ್ನು ಬಂಧಿಸಲಾಗಿತ್ತು. ಎನ್‌ಐಎ ತಹವ್ವುರ್ ಹುಸೇನ್ ರಾಣಾ ವಿರುದ್ಧ ಅಂತರಾಷ್ಟ್ರೀಯ ಬಂಧನದ ವಾರೆಂಟ್ ಅನ್ನು ಹೊರಡಿಸಿತ್ತು. ಮಾಹಿತಿಗಳ ಪ್ರಕಾರ ರಾಣಾ ತನ್ನ ಪಾಕಿಸ್ತಾನದ ಬಾಲ್ಯ ಸ್ನೇಹಿತ ಅಮೆರಿಕನ್ ಡೇವಿಡ್ ಕೋಲ್‌ಮನ್ ಹೆಡ್ಲಿ ಜೊತೆ ಸೇರಿಕೊಂಡು ಈ ಕೃತ್ಯದ ಯೋಜನೆ ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ.
ದಾಳಿಯ ಯೋಜನೆ, ಆ ಕುರಿತು ನಡೆದ ಸಭೆಗಳು, ಭಯೋತ್ಪಾದಕ ಕೃತ್ಯ ಎಸಗಲು ಮಾಡಿಕೊಂಡ ಸಿದ್ಧತೆಗಳ ಕುರಿತು ತಹವ್ವುರ್ ಹುಸೇನ್ ರಾಣಾಗೆ ಮಾಹಿತಿ ಇತ್ತು. ರಾಣಾ ಸಂಪೂರ್ಣ ಪಿತೂರಿಯ ಭಾಗವಾಗಿದ್ದರು ಎಂದು ಅಮೆರಿಕ ಪ್ರತಿಪಾದಿಸಿತ್ತು.
ತಹವ್ವುರ್ ಹುಸೇನ್ ರಾಣಾರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ ಭಾರತ ಸರ್ಕಾರ ಸಲ್ಲಿಸಿದ್ದ ಮನವಿಗೆ ಅಮೆರಿಕ ಸಕಾರಾತ್ಮಕವಾಗಿ ಸ್ಪಂದಿಸಿತ್ತು. ಅಮೆರಿಕದ ಸುಪ್ರೀಂಕೋರ್ಟ್‌ನಲ್ಲಿಯೂ ಅಲ್ಲಿನ ಸರ್ಕಾರ ಈ ತೀರ್ಮಾನದ ಪರವಾಗಿತ್ತು.












Click it and Unblock the Notifications