ಮೋದಿಯವರನ್ನು ಹಾಡಿ ಹೊಗಳಿದ ಇಸ್ರೇಲಿ ದೈನಿಕ
ಜರುಸಲೇಂ(ಇಸ್ರೇಲ್), ಜೂನ್ 28: 'ಏಳಿ, ಜಗತ್ತಿನ ಅತ್ಯಂತ ಪ್ರಮುಖ ಪ್ರಧಾನಿ ಬರುತ್ತಿದ್ದಾರೆ...' ಇದು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಇಸ್ರೇಲಿ ದೈನಿಕವೊಂದು ಬರೆದ ಸಾಲು. ಮುಂದಿನ ವಾರ ಇಸ್ರೇಲಿಗೆ ಭೇಟಿ ನೀಡಲಿರುವ ನರೇಂದ್ರ ಮೋದಿಯವರನ್ನು ಹಾಡಿ ಕೊಂಡಾಡಿರುವ ದೈನಿಕ, ಅವರನ್ನು ಜಗತ್ತಿನ ಅತ್ಯಂತ ಪ್ರಭಾವಿ ಮತ್ತು ಪ್ರಮುಖ ನಾಯಕ ಎಂದು ಬಣ್ಣಿಸಿದೆ.
ಇಲ್ಲಿನ ದಿ ಮಾರ್ಕರ್ (The Marker) ಎಂಬ ವಾಣಿಜ್ಯ ದೈನಿಕದ ಹಿಬ್ರೂ ಭಾಷೆಯ ಆವೃತ್ತಿಯಲ್ಲಿ, ಭಾರತ ಮತ್ತು ಇಸ್ರೇಲ್ ಬಾಂಧವ್ಯದ ಕುರಿತು ಲೇಖನವೊಂದನ್ನು ಬರೆಯಲಾಗಿದೆ. 'Wake up: the most important PM of the world is coming' ಎಂಬ ತಲೆಬರಹದಲ್ಲಿ ಈ ಲೇಖನ ಮೂಡಿಬಂದಿದೆ.
ಮೋದಿಯವರ ಈ ಭೇಟಿ, ಭಾರತ ಮತ್ತು ಇಸ್ರೇಲ್ ನಡುವಿನ ಆರ್ಥಿಕ, ಭದ್ರತಾ ಕ್ಷೇತ್ರ ಮತ್ತು ರಾಜತಾಂತ್ರಿಕ ವ್ಯವಹಾರಗಳನ್ನು ಬಲಯುತಗೊಳಿಸಲಿದೆ ಎಂದು ಅಂದಾಜಿಸಲಾಗಿದೆ.

ಟ್ರಂಪ್ ಭೇಟಿ ನೀರಸವಾಗಿತ್ತು!
ಇತ್ತೀಚೆಗಷ್ಟೇ ಇಸ್ರೇಲಿಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುರಿತು ಇಸ್ರೇಲಿಯರು ಸಾಕಷ್ಟು ನಿರೀಕ್ಷೆ ಹೊಂದಿದ್ದರು. ಆದರೆ ಟ್ರಂಪ್ ಅವರ ನಿರೀಕ್ಷೆಗೆ ತಕ್ಕಂತೆ ಮಾತನಾಡಲಿಲ್ಲ. ಇದೀಗ ಭಾರತದ ಪ್ರಧಾನಿ ಮೋದಿಯವರ ಇಸ್ರೇಲ್ ಭೇಟಿ, ಟ್ರಂಪ್ ಭೇಟಿಯಂತೆ ನೀರಸವಾಗಲಾರದು ಎಂದು ದೈನಿಕ ವಿವರಿಸಿದೆ.

ದೈನಿಕದಲ್ಲಿ ಮೋದಿ ಬಣ್ಣನೆ
125 ಕೋಟಿ ಜನರನ್ನು ಪ್ರತಿನಿಧಿಸುತ್ತಿರುವ ನರೇಂದ್ರ ಮೋದಿ ಒಬ್ಬ ಜನಪ್ರಿಯ ನಾಯಕ, ಜಗತ್ತಿನಾದ್ಯಂತ ಅವರ ಬಗ್ಗೆ ಗೌರವವಿದೆ. ಮಾತ್ರವಲ್ಲ, ಅವರ ನಾಯಕತ್ವದಲ್ಲಿ ಭಾರತದ ಆರ್ಥಿಕತೆ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಬರೆಯಲಾಗಿದೆ.

ಇಸ್ರೇಲಿ ಪ್ರಧಾನಿ ಮೆಚ್ಚುಗೆ
'ಮುಂದಿನ ವಾರ ಭಾರತದ ಪ್ರಧಾನಿ, ನನ್ನ ಸ್ನೇಹಿತ ನರೇಂದ್ರ ಮೋದಿ ಇಸ್ರೇಲಿಗೆ ಆಗಮಿಸುತ್ತಿದ್ದಾರೆ. ಇದು ನಿಜಕ್ಕೂ ಐತಿಹಾಸಿಕ ಕ್ಷಣವಾಗಲಿದೆ. ಏಕೆಂದರೆ ಕಳೆದ 70 ವರ್ಷಗಳಲ್ಲಿ ಯಾವ ಭಾರತದ ಪ್ರಧಾನಿಯೂ ಇಸ್ರೇಲಿಗೆ ಬಂದಿರಲಿಲ್ಲ. ಆದ್ದರಿಂದ ಭಾರತ ಮತ್ತು ಇಸ್ರೇಲ್ ಬಾಂಧವ್ಯವನ್ನು ವೃದ್ಧಿಸುವಲ್ಲಿ ಮೋದಿ ಭೇಟಿ ಖಂಡಿತ ಮಹತ್ವದ ಪಾತ್ರ ವಹಿಸಲಿದೆ' ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆಟನ್ಯಾಹು ಹೇಳಿದ್ದಾರೆ.

ಜುಲೈ 4 ರಿಂದ ಇಸ್ರೇಲ್ ಪ್ರವಾಸ
ಜುಲೈ 4 ರಿಂದ ಮೂರು ದಿನಗಳ ಕಾಲ ಇಸ್ರೇಲ್ ಪ್ರವಾಸ ಕೈಗೊಳ್ಳಲಿರುವ ನರೇಂದ್ರ ಮೋದಿ, ಜು.5 ರಂದು ಸಂಜೆ ಇಲ್ಲಿನ ಟೆಲ್ ಅವಿವ್ ಎಂಬಲ್ಲಿ ಭಾರತೀಯ ಮೂಲದ 4000 ಹೆಚ್ಚು ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.












Click it and Unblock the Notifications