ಸಾವಿರಾರು ವರ್ಷಗಳ ಹಳೆ ವಾದ್ಯಗಳಿಗೆ ಜೀವ: MIT ಸಂಶೋಧಕರಿಂದ ಇತಿಹಾಸದ ಸಂಗೀತ ಪುನರುತ್ಥಾನ
ಶತಮಾನಗಳ ಕಾಲ ಕೇವಲ ವಸ್ತುಸಂಗ್ರಹಾಲಯಗಳ ಗಾಜಿನ ಪೆಟ್ಟಿಗೆಗಳೊಳಗೆ ಮೌನವಾಗಿ ಉಳಿದಿದ್ದ ಪ್ರಾಚೀನ ಸಂಗೀತ ವಾದ್ಯಗಳು ಇದೀಗ ಮತ್ತೆ ಜೀವಂತವಾಗಲಿವೆ. ಅಮೆರಿಕದ ಪ್ರತಿಷ್ಠಿತ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT) ಸಂಶೋಧಕರ ತಂಡವು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಸಾವಿರಾರು ವರ್ಷಗಳ ಹಿಂದೆ ಮೊಳಗಿದ್ದ ವಾದ್ಯಗಳ ಮೂಲ ಧ್ವನಿಯನ್ನು ಮರುಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.
ಪುರಾತತ್ವ ಅಧ್ಯಯನ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಅಭಿವೃದ್ಧಿಪಡಿಸಲಾದ ಈ ಯೋಜನೆ, ಪ್ರಾಚೀನ ಕಾಲದ ಸಂಗೀತ ಲೋಕವನ್ನು ಮತ್ತೆ ಜೀವಂತಗೊಳಿಸಿದೆ. ಇದರ ಪರಿಣಾಮವಾಗಿ, ನಮ್ಮ ಪೂರ್ವಜರ ಕಾಲದ ಸಂಗೀತ ಹೇಗಿತ್ತು ಎಂಬುದನ್ನು ಇಂದಿನ ಜನರು ಸ್ವತಃ ಆಲಿಸಿ ಅನುಭವಿಸುವ ಅಪರೂಪದ ಅವಕಾಶ ದೊರೆತಿದೆ.

ಇತಿಹಾಸದ ರಹಸ್ಯಗಳನ್ನು ಅರಿಯಲು ಸಂಶೋಧಕರು ಇದೀಗ ಸಂಗೀತದ ಹಾದಿ ಹಿಡಿದಿದ್ದಾರೆ. ಅಮೆರಿಕದ ಬೋಸ್ಟನ್‌ನ 'ಮ್ಯೂಸಿಯಂ ಆಫ್ ಫೈನ್ ಆರ್ಟ್ಸ್' ಸಂಗ್ರಹದಲ್ಲಿರುವ ಅತ್ಯಂತ ಪ್ರಾಚೀನ ವಾದ್ಯಗಳನ್ನು ಹೊಸ ಸಂಶೋಧನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಈ ಅಪರೂಪದ ಸಂಗ್ರಹಾಲಯದಲ್ಲಿ 1,450ಕ್ಕೂ ಹೆಚ್ಚು ವಿಶಿಷ್ಟ ವಾದ್ಯಗಳಿದ್ದು, ಇವುಗಳಲ್ಲಿ ಕೆಲವು ವಾದ್ಯಗಳು ಕ್ರಿ.ಪೂ. 1550ರಷ್ಟು ಹಳೆಯದಾಗಿವೆ. ಈ ವಾದ್ಯಗಳ ಮೂಲಕ ಅಂದಿನ ಕಾಲದ ತಂತ್ರಜ್ಞಾನ ಮತ್ತು ಧ್ವನಿಯನ್ನು ಮರುಸೃಷ್ಟಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
ಇವುಗಳಲ್ಲಿ ವಿವಿಧ ಬಗೆಯ ಕೊಳಲುಗಳು, ಶಿಳ್ಳೆ ವಾದ್ಯಗಳು ಸೇರಿದಂತೆ ಮಣ್ಣು ಮತ್ತು ಸೆರಾಮಿಕ್‌ನಿಂದ ತಯಾರಿಸಲಾದ ಅಪರೂಪದ ವಾದ್ಯಗಳು ಸೇರಿವೆ.
CT ಸ್ಕ್ಯಾನಿಂಗ್ ಮೂಲಕ ಒಳಹೊರಗಿನ ರಹಸ್ಯ ಬಯಲು
ಈ ವಾದ್ಯಗಳು ಅತ್ಯಂತ ಸೂಕ್ಷ್ಮ ಮತ್ತು ದುರ್ಬಲ ಸ್ಥಿತಿಯಲ್ಲಿವೆ, ಯಾವುದೇ ಹಾನಿಯಿಲ್ಲದೆ ಅಧ್ಯಯನ ಮಾಡಲು ಸಂಶೋಧಕರು ಲ್ಯೂಮಾಫೀಲ್ಡ್ ಕಂಪನಿಯ ಅತ್ಯಾಧುನಿಕ CT ಸ್ಕ್ಯಾನರ್ ಬಳಸಿದ್ದಾರೆ.
ಈ ಸ್ಕ್ಯಾನಿಂಗ್ ತಂತ್ರಜ್ಞಾನದ ಮೂಲಕ ವಾದ್ಯಗಳ ಹೊರಭಾಗ ಮಾತ್ರವಲ್ಲ, ಒಳಭಾಗದ ರಚನೆ, ಗಾಳಿಯ ದ್ವಾರಗಳು, ಬೆರಳುಗಳ ರಂಧ್ರಗಳು, ಗೋಡೆಯ ದಪ್ಪ ಹಾಗೂ ಕಣ್ಣಿಗೆ ಕಾಣದ ಸಣ್ಣ ದೋಷಗಳನ್ನೂ ಸಹ ತಂತ್ರಜ್ಞಾನ ಡಿಜಿಟಲ್ ರೂಪದಲ್ಲಿ ನಿಖರವಾಗಿ ದಾಖಲಿಸಿದೆ.
ಮೊದಲು ಕಂಪ್ಯೂಟರ್್ನಲ್ಲಿ ಕೇಳಿದ ಪ್ರಾಚೀನ ಸ್ವರ
ಸ್ಕ್ಯಾನಿಂಗ್ ಮೂಲಕ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ಸಂಶೋಧಕರು ಕಂಪ್ಯೂಟರ್ ಮಾಧರಿಗಳನ್ನು ಸಿದ್ದಪಡಿಸಿದ್ದಾರೆ. ನಂತರ ಕಂಪನ ಪರೀಕ್ಷೆ ಮತ್ತು ಸುಧಾರಿತ ಸಿಮ್ಯುಲೇಷನ್ ತಂತ್ರಜ್ಙಾನ ಬಳಸಿಕೊಂಡು ಆ ವಾದ್ಯಗಳು ಯಾವ ರೀತಿ ದ್ವನಿಯನ್ನು ಹೊರಡಿಸುತ್ತಿದವು ಎಂಬುದಬನ್ನು ಪತ್ತೆ ಮಾಡಲಾಗಿದೆ. ಈ ಮೂಲಕ ಸಾವಿರಾರು ವರ್ಷಗಳ ಹಿಂದೆ ಮೊಳಗಿದ್ದ ಸ್ವರಗಳನ್ನು ಮೊದಲು ಡಿಜಿಟಲ್ ರೂಪದಲ್ಲಿ ಆಲಿಸಲು ಸಾಧ್ಯವಾಯಿತು.
ಡಿಜಿಟಲ್ ಮಾದರಿಗಳ ಆಧಾರದ ಮೇಲೆ ಸಂಶೋಧಕರು 3D ಪ್ರಿಂಟರ್ ಮೂಲಕ ವಾದ್ಯಗಳ ಪ್ರತಿರೂಪಗಳನ್ನು ಸಿದ್ಧಪಡಿಸಿದರು. ಬಳಿಕ ಅವುಗಳಿಂದ ಪ್ಲಾಸ್ಟರ್ ಅಚ್ಚುಗಳನ್ನು ತಯಾರಿಸಿ, ಮೂಲ ವಾದ್ಯಗಳ ಗುಣಲಕ್ಷಣಗಳಿಗೆ ಹೋಲುವ ವಿಶೇಷ ವಸ್ತುಗಳನ್ನು ಬಳಸಿ ಅಂತಿಮ ಪ್ರತಿಗಳನ್ನು ನಿರ್ಮಿಸಿದ್ದಾರೆ. ಈ ವಿಧಾನದಿಂದ ಸಂಶೋಧಕರು ಹಲವು ಮಣ್ಣಿನ ಹಾಗೂ ಸೆರಾಮಿಕ್ ವಾದ್ಯಗಳನ್ನು ಮತ್ತೆ ನುಡಿಸಲು ಸಾಧ್ಯವಾಯಿತು ಎಂದು ಹೆಳಿದ್ದಾರೆ.
ಶತಮಾನಗಳ ಬಳಿಕ ಮೊಳಗಿದ ನಾದ
ಈ ಐತಿಹಾಸಿಕ ಸಂಶೋಧನಾ ಯೋಜನೆಯ ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಒಂದು ಪೆರುವಿನ ಪರಾಕಾಸ್ (Paracas) ಸಂಸ್ಕೃತಿಗೆ ಸೇರಿದ ವಿಶಿಷ್ಟವಾದ ಶಿಳ್ಳೆ ವಾದ್ಯದ ಮರುಸೃಷ್ಟಿಯಾಗಿದೆ. ಕ್ರಿ.ಪೂ. 600ರಿಂದ 175ರ ಅವಧಿಗೆ ಸೇರಿದ ಈ ವಾದ್ಯದ ಧ್ವನಿಯನ್ನು ಶತಮಾನಗಳ ಬಳಿಕ ಮತ್ತೆ ಕೇಳಲು ಸಾಧ್ಯವಾಗಿದೆ.
ಈಗಾಗಲೇ 30 ಪ್ರಾಚೀನ ವಾದ್ಯಗಳ ಪುನರುತ್ಥಾನ
ಸಂಶೋಧಕರ ತಂಡ ಇದುವರೆಗೆ ಸುಮಾರು 30 ಪ್ರಾಚೀನ ವಾದ್ಯಗಳನ್ನು ಯಶಸ್ವಿಯಾಗಿ ಮರುಸೃಷ್ಟಿಸಿದೆ. ಮುಂದಿನ ದಿನಗಳ ಹಂತದಲ್ಲಿ ಕನಿಷ್ಠ 100 ವಾದ್ಯಗಳ ಡಿಜಿಟಲ್ ಗ್ರಂಥಾಲಯ ನಿರ್ಮಿಸುವ ಗುರಿ ಹೊಂದಿದ್ದಾರೆ. ಇದರಲ್ಲಿ ವಾದ್ಯಗಳ ಆಕಾರ, ಧ್ವನಿ ಹಾಗೂ ವೈಜ್ಞಾನಿಕ ಮಾಹಿತಿಯನ್ನು ಸಂಗ್ರಹಿಸಿ ಭವಿಷ್ಯದ ಅಧ್ಯಯನಗಳಿಗೆ ನೆರವಾಗುವ ಯೋಜನೆಯಿದೆ.
ಇನ್ನು ಮರದ ವಾದ್ಯಗಳತ್ತ ಮುಂದಿನ ಹೆಜ್ಜೆ
ಮಣ್ಣಿನ ವಾದ್ಯಗಳಲ್ಲೇ ಈ ಯೋಜನೆ ಸೀಮಿತವಾಗುವುದಿಲ್ಲ. ಸ್ಥಳೀಯ ವಾದ್ಯ ತಯಾರಕರ ಸಹಯೋಗದಲ್ಲಿ ವಯಲಿನ್, ಮರದ ಕೊಳಲುಗಳಂತಹ ಮರದ ವಾದ್ಯಗಳನ್ನೂ ಇದೇ ತಂತ್ರಜ್ಞಾನ ಬಳಸಿ ಮರುಸೃಷ್ಟಿಸುವ ಉದ್ದೇಶವನ್ನು ಸಂಶೋಧಕರು ವ್ಯಕ್ತಪಡಿಸಿದ್ದಾರೆ.














Click it and Unblock the Notifications