ಕಲ್ಲಿನ ಮೇಲೆಯೇ ಬೆಳೆಯುವ ವಿಶಿಷ್ಟ ಜಾತಿಯ ಅಪರೂಪದ ಸಸ್ಯ: ಇವುಗಳಿಗೆ ಭಾರೀ ಬೇಡಿಕೆ
ಈ ಭೂಮಿಯ ಮೇಲೆ ಸಾವಿರಾರು ಜಾತಿಯ ಸಸ್ಯಗಳು ಇವೆ. ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಕೆಲವು ಸಸ್ಯಗಳು ಎಲೆಗಳ ಬಣ್ಣಗಳಿಂದ ತಮ್ಮತ್ತ ಸೆಳೆದರೆ ಇನ್ನು ಕೆಲವು ಅವುಗಳ ಎಲೆಯ ವಿನ್ಯಾಸದಿಂದ, ಹೂವಿನ ಸೌಂದರ್ಯದಿಂದ ವಿಶೇಷವಾಗಿರುತ್ತದೆ. ಇನ್ನು ಕೆಲವು ಸಸ್ಯಗಳ ಎಲೆಗಳು ನೋಡುವುದಕ್ಕೆ ಪ್ಲಾಸ್ಟಿಕ್ ಎಲೆಗಳಂತೆ ಕಾಣುತ್ತವೆ. ನಮೀಬಿಯಾದ ಎರೊಂಗೊ ಪರ್ವತಗಳ ಸಣ್ಣ ಪ್ರದೇಶದಲ್ಲಿ ಒಂದು ಸಸ್ಯ ಬೆಳೆಯುತ್ತದೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. ಈ ನೋಡುವುದಕ್ಕೆ ಕಲ್ಲಿನ ರೀತಿಯಲ್ಲಿಯೇ ಕಾಣಿಸುತ್ತದೆ. ಈ ಸಸ್ಯವು ಜಲ್ಲಿಕಲ್ಲಿನ ಅತ್ಯಂತ ತೆಳುವಾದ ಪದರದ ಮೇಲೆಯೇ ಬೆಳೆಯುವುದು.
ಅಳಿವಿನಂಚಿನಲ್ಲಿದೆ ಈ ವಿಶೇಷ ಸಸ್ಯ
ಜಾಗತಿಕ ವನ್ಯಜೀವಿ ಸಂರಕ್ಷಣಾ ಪ್ರಾಧಿಕಾರವಾದ ಐಯುಸಿಎನ್ ಪ್ರಕಾರ , ಈ ವಿಶಿಷ್ಟ ಜಾತಿಯ ಸಸ್ಯವನ್ನು ಲಿಥಾಪ್ಸ್ ವರ್ನೆರಿ ಎಂದು ಕರೆಯುತ್ತಾರೆ. ಇದು 4 ಚದರ ಕಿಲೋಮೀಟರ್ (1.5 ಚದರ ಮೈಲಿ) ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ.1981 ರಿಂದ ಈ ಸಸ್ಯದ ಸಂಖ್ಯೆಯಲ್ಲಿ ಶೇ.80ಕ್ಕಿಂತ ಹೆಚ್ಚು ಕುಸಿತ ಕಂಡು ಬಂದಿದೆ. ಈ ಜಾತಿಯ 200 ಕ್ಕಿಂತ ಕಡಿಮೆ ಸಸ್ಯಗಳು ಮಾತ್ರ ಕಾಡಿನಲ್ಲಿ ಉಳಿದಿದೆ ಎನ್ನಲಾಗಿದೆ. ಹಾಗಾಗಿ ಫೆಬ್ರವರಿ 2026 ರಲ್ಲಿ ಐಯುಸಿಎನ್ ಇದನ್ನು ಕೆಂಪು ಪಟ್ಟಿಗೆ ಸೇರಿಸಿದೆ. ಅಂದರೆ ಈ ಪ್ರಭೇದ ಅಳಿವಿನಂಚಿನಲ್ಲಿರುವ ಸಸ್ಯವಾಗಿದೆ.

1950ರ ದಶಕದಲ್ಲಿ ಮೊದಲು ಪತ್ತೆ
ನಮೀಬಿಯಾದ ರಾಷ್ಟ್ರೀಯ ಸಸ್ಯಶಾಸ್ತ್ರ ಸಂಶೋಧನಾ ಸಂಸ್ಥೆಯ ಸೋಂಜಾ ಲೂಟ್ಸ್ ಪ್ರಕಾರ ಈ ಸಸ್ಯವು "ಯಾವಾಗಲೂ ಸೀಮಿತ ವ್ಯಾಪ್ತಿಯನ್ನು ಹೊಂದಿದೆ. 1950ರ ದಶಕದಲ್ಲಿ ಇದನ್ನು ಮೊದಲು ಮೊದಲ ಬಾರಿಗೆ ಇದನ್ನು ಪತ್ತೆ ಹಚ್ಚಿದ ನಂತರ ಈ ತಳಿಯನ್ನು ಯುರೋಪಿನ ತೋಟಗಾರಿಕಾ ಮಾರುಕಟ್ಟೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಕೊಯ್ಲು ಮಾಡಲಾಯಿತು. ಆವತ್ತಿನಿಂದ ಈ ಸಸ್ಯಕ್ಕಾಗಿ ಸಸ್ಯ ಪ್ರಿಯರು ಹುಡುಕಾಟ ನಡೆಸುತ್ತಲೇ ಇದ್ದಾರೆ. ಆದರೆ ಇದು ಅಷ್ಟಾಗಿ ಕಂಡು ಬರಲಿಲ್ಲ.
ಜೀವಂತ ಕಲ್ಲುಗಳು
ಒಂದು ಹಂತದಲ್ಲಿ ಈ ಸಸ್ಯ ಅಳಿದು ಹೋಗಿವೆ ಎಂದು ಭಾವಿಸಲಾಗಿತ್ತು. ಆದರೆ 2012ರಲ್ಲಿ ಮತ್ತೆ ಮೂಲ ಸ್ಥಳದಲ್ಲಿಯೇ ಈ ಸಸ್ಯವನ್ನು ಮತ್ತೆ ಕಂಡುಹಿಡಿಯಲಾಯಿತು. ಐಯುಸಿಎನ್ ಪ್ರಕಾರ, 2012 ರಲ್ಲಿ ನಡೆದ ಗಣತಿಯಲ್ಲಿ 659 ಸಸ್ಯಗಳು ಪತ್ತೆಯಾಗಿತ್ತು. ಆದರೆ ನಂತರದ ಸಮೀಕ್ಷೆಗಳಲ್ಲಿ ಅಂದರೆ 2019 ರಲ್ಲಿ ಕೇವಲ 118 ಸಸ್ಯಗಳು ಮತ್ತು 2020 ರಲ್ಲಿ 163 ಸಸ್ಯಗಳು ಕಂಡುಬಂದಿವೆ. ಇದನ್ನು ಸಾಮಾನ್ಯವಾಗಿ ಜೀವಂತ ಕಲ್ಲುಗಳು ಅಥವಾ ಬೆಣಚುಕಲ್ಲು ಸಸ್ಯಗಳು ಎಂದು ಕರೆಯಲಾಗುತ್ತದೆ. ಇದು ದಕ್ಷಿಣ ಆಫ್ರಿಕಾ, ನಮೀಬಿಯಾ ಮತ್ತು ಬೋಟ್ಸ್ವಾನಾದಾದ್ಯಂತ ಕಂಡುಬರುತ್ತದೆ.
ಕಲ್ಲಿನ ಮೇಲೆ ಮಾತ್ರ ಬೆಳೆಯುವ ಸಸ್ಯ
ಈ ಸಸ್ಯಗಳು ಕೆಲವು ಕಲ್ಲಿನ ಹೊರಪದರದಲ್ಲಿ ಮಾತ್ರ ಬೆಳೆಯುತ್ತವೆ. ಈ ಸಸ್ಯಗಳಿಗೆ ಆಳವಾದ ಬೇರುಗಳಿಲ್ಲ. ಬೇರುಗಳಿಗೆ ಜೋಡಿಸಲಾದ ಒಂದೇ ಜೋಡಿ ನೀರು ಸಂಗ್ರಹಿಸುವ ಎಲೆಗಳು ಈ ಸಸ್ಯಕ್ಕೆ ಇರುತ್ತವೆ. ಎಲ್. ವರ್ನೆರಿ ಗ್ರಾನೈಟ್ ಹಾಳೆಯ ಮೇಲೆ ಸುಮಾರು 2 ಸೆಂಟಿಮೀಟರ್ (0.8 ಇಂಚು) ದಪ್ಪವಿರುವ ಜಲ್ಲಿಕಲ್ಲುಗಳ ತೆಳುವಾದ ಪದರದಲ್ಲಿ ಬೆಳೆಯುತ್ತದೆ.
ಮೊದಲೇ ಹೇಳಿದಂತೆ ಈ ಸಸ್ಯಕ್ಕೆ ಆಳವಾದ ಬೇರುಗಳು ಇಲ್ಲ. ಬಲಿತ ಸಸ್ಯಗಳು ನೀರಿಲ್ಲದೆ ಕೆಲವೇ ವರ್ಷಗಳ ಕಾಲ ಬದುಕಬಲ್ಲವು. ಬೀಜಗಳು ಅವುಗಳ ಒಳಗೆ ದೀರ್ಘಕಾಲ ಬದುಕಬಲ್ಲವು. ಆದರೆ ಸಸಿಗಳು ಬದುಕಲು ಕಾಲ ಮಳೆಯ ಅಗತ್ಯವಿರುತ್ತದೆ. ಮಳೆ ಕಡಿಮೆಯಾಗಿ ಬರಗಾಲ ಬಂದಾಗ ಈ ಸಸ್ಯ ಬದುಕುವುದು ಕಷ್ಟವಾಗುತ್ತದೆ. ಅಲ್ಲದೆ, ಬರಗಾಲದಲ್ಲಿ ಪ್ರಾಣಿಗಳು ಸಾಮಾನ್ಯವಾಗಿ ಈ ಸಸ್ಯಗಳನ್ನು ತಿನ್ನುತ್ತವೆ.
ಸಂಪೂರ್ಣ ನಾಶವಾಗುವ ಭಯ
2012 ರಲ್ಲಿ ತೀವ್ರ ಬರಗಾಲ ಎದುರಾಗಿದ್ದ ಕಾರಣ ಈ ಸಸ್ಯ ಸಂತತಿ ಅಳಿಯುವುದಕ್ಕೆ ಕಾರಣವಾಗಿದೆ. ಇನ್ನು ಈ ಸಸ್ಯ ಒಂದೇ ಸ್ಥಳದಲ್ಲಿ ಕಂಡುಬಂದಿದೆ. ಅಂದರೆ ಈ ಸಸ್ಯದ ಶೇ ೧೦೦ರಷ್ಟು ಭಾಗ ಒಂದೇ ಸ್ಥಳದಲ್ಲಿ ಹರಡಿಕೊಂಡಿದೆ. ಹಾಗಾಗಿ ಒಂದು ಸಣ್ಣ ಪ್ರಕೃತಿ ವಿಕೋಪವಾದರೂ ಎಲ್ಲಾ ಸಸ್ಯಗಳು ಸಂಪೂರ್ಣವಾಗಿ ನಾಶವಾಗಿ ಹೋಗುವ ಭಯ ಇದೆ.
"ಕಳೆದ 5 ವರ್ಷಗಳಲ್ಲಿ ಸಸ್ಯದ ಕಳ್ಳ ಸಾಗಣೆ ತೀವ್ರವಾಗಿ ಹೆಚ್ಚಿದ್ದರೂ, ನಮೀಬಿಯಾ ಸರ್ಕಾರ ಮತ್ತು ಪ್ರಕೃತಿ ಪ್ರೇಮಿಗಳು ಇದರ ವಿರುದ್ದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.


Click it and Unblock the Notifications
