ಪೂರ್ವ ಲಿಬಿಯಾ ಡ್ಯಾಂ ಸ್ಫೋಟಗೊಂಡು 20,000 ಜನರು ಬಲಿ?
ಭೀಕರ ಚಂಡಮಾರುತ ಅಪ್ಪಳಿಸಿದ ಕಾರಣ 2 ಡ್ಯಾಂ ಸ್ಫೋಟಗೊಂಡ ಪೂರ್ವ ಲಿಬಿಯಾ ಭಾಗದಲ್ಲಿ ರಾಶಿ ರಾಶಿ ಶವಗಳು ಪತ್ತೆಯಾಗಿವೆ. ಈ ಪೈಕಿ ಇಲ್ಲಿಯವರೆಗೆ 3000ಕ್ಕೂ ಹೆಚ್ಚು ಶವ ಪತ್ತೆಯಾಗಿದ್ದು ಸಾವಿನ ಸಂಖ್ಯೆಯು 20,000 ಮೀರುವ ಭೀತಿ ಆವರಿಸಿದೆ. ಹಗಲು & ರಾತ್ರಿ ಲೆಕ್ಕಿಸದೆ ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಲಿಬಿಯಾದಲ್ಲಿ ಎಲ್ಲೆಲ್ಲೂ ಸಾವಿನ ಸುದ್ದಿಯೇ ಆವರಿಸಿದೆ.
ಮತ್ತೊಂದು ಕಡೆ ಪ್ರವಾಹದ ಪರಿಣಾಮ ರಕ್ಷಣಾ ಸಿಬ್ಬಂದಿ ಡೆರ್ನಾ ನಗರಕ್ಕೆ ತಲುಪುವುದಕ್ಕೂ ಆಗುತ್ತಿಲ್ಲ. ಹೀಗಾಗಿ ಜನರನ್ನು ರಕ್ಷಣೆ ಮಾಡುವುದು ಕೂಡ ಕಷ್ಟವಾಗುತ್ತಿದೆ. ಹೀಗಾಗಿಯೇ ಕಟ್ಟಡಗಳ ಅವಶೇಷ ಮತ್ತು ಮಣ್ಣಿನ ಕೆಳಗೆ ಸಿಲುಕಿದವರು ಬದುಕಿರುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗುತ್ತಿದೆ. 2 ಪ್ರಮುಖ ಡ್ಯಾಂಗಳು ಒಂದೇ ಬಾರಿಗೆ ಕೊಚ್ಚಿಕೊಂಡು ಹೋದ ಕಾರಣ ಸಾವಿನ ಸಂಖ್ಯೆಯು 20,000ದ ಗಡಿ ದಾಟಬಹುದು ಎನ್ನಲಾಗುತ್ತಿದೆ. ಈ ನಡುವೆ ಬದುಕಿ ಉಳಿದಿರುವ ಜನರು ಅನ್ನ ಹಾಗೂ ನೀರಿಗೂ ಪರದಾಡುವ ಸ್ಥಿತಿ ಎದುರಾಗಿದೆ. ಈ ಪರಿಸ್ಥಿತಿ ಲಿಬಿಯಾ ಇತಿಹಾಸದಲ್ಲೇ ಅತ್ಯಂತ ಭೀಕರ ಎನ್ನಲಾಗಿದೆ.

ಎಲ್ಲಿ ನೋಡಿದರೂ ಪ್ರವಾಹದ ಭೀಕರತೆ
ಡ್ಯಾಂ ಕಟ್ಟೆ ಹೊಡೆದು ಹೋದ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕಸ ಹಾಗೂ ಇತರ ವಸ್ತುಗಳು ತಗ್ಗು ಪ್ರದೇಶಕ್ಕೆ ಕೊಚ್ಚಿಕೊಂಡು ಬಂದಿವೆ. ಅದರಲ್ಲೂ ಸಾವಿರಾರು ಕಾರುಗಳು ತೇಲಿ ಬಂದಿದ್ದು, ಎಲ್ಲೆಂದರಲ್ಲಿ ಮನುಷ್ಯರ ಶವ ಸಿಗುತ್ತಿದೆ. ಹೀಗಾಗಿ ಬದುಕಿ ಉಳಿದವರು ಯಾರು, ಮೃತಪಟ್ಟವರು ಯಾರು ಅಂತಾ ಗುರುತಿಸುವುದು ಕೂಡ ಸವಾಲಾಗಿದೆ. ಹೀಗಾಗಿ ಅವಶೇಷಗಳ ಅಡಿಯೇ ಹಲವು ಜನ ಜೀವ ಬಿಟ್ಟಿದ್ದು, ಲಿಬಿಯಾ ನರಕದ ರೀತಿ ಕಾಣುತ್ತಿದೆ. ಪರಿಹಾರ ಕಾರ್ಯಾಚರಣೆ ತಡವಾಗುತ್ತಿರುವುದು ಮತ್ತಷ್ಟು ತಲೆನೋವು ತರಿಸಿದೆ.
ಎಲ್ಲಿ ನೋಡಿದರೂ ಬರೀ ಕೆಸರು
ಮೃತಪಟ್ಟವರ ಸಂಖ್ಯೆ ಒಂದು ಕಡೆಯಾದರೆ, ಈಗ ಗಾಯಗೊಂಡು ಆಸ್ಪತ್ರೆಗೆ ಸೇರಿದವರು 10 ಸಾವಿರಕ್ಕೂ ಹೆಚ್ಚು. ಹೀಗಾಗಿ ಪೂರ್ವ ಲಿಬಿಯಾದ ಕೆಲವೇ ಕೆಲವು ಆಸ್ಪತ್ರೆಗಳು ಕೂಡ ಈಗ ತುಂಬಿ ತುಳುಕುತ್ತಿವೆ. ಮುಂದಿನ ದಿನಗಳಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಹಾಗೇ 15000ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ. ಇದೀಗ ರಕ್ಷಣಾ ಕಾರ್ಯ ನಡೆಸುತ್ತಿರುವ ಸಿಬ್ಬಂದಿಗೂ ಸೂಕ್ತ ಸೌಲಭ್ಯ ಒದಗಿಸುವುದು ಕಷ್ಟವಾಗಿದೆ. ಎಲ್ಲಿ ನೋಡಿದರೂ, ಕೆಸರು ತುಂಬಿದ ಪ್ರದೇಶ ಹಾಗೂ ಮರಳು ಕಾಲಿಗೆ ಸಿಗುತ್ತಿದೆ.
ನಿರಾಶ್ರಿತರ ಬದುಕು ಮುಂದೇನು?
ಲಿಬಿಯಾ ನಗರದಲ್ಲಿ ಈ ತನಕ 3 ಸಾವಿರಕ್ಕೂ ಹೆಚ್ಚು ಶವ ಅವಶೇಷಗಳ ಅಡಿಯಿಂದ ಹೊರ ತೆಗೆಯಲಾಗಿದೆ. ನಗರದಲ್ಲಿ ಒಟ್ಟು 30 ಸಾವಿರಕ್ಕು ಹೆಚ್ಚು ಜನ ನಿರಾಶ್ರಿತರಾಗಿದ್ದು ವಿಶ್ವಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದೆ. ಈ ಮಧ್ಯೆ ಸಾಧ್ಯವಾದಷ್ಟು ಜನರನ್ನ ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ. ಆದರೂ ಪರಿಸ್ಥಿತಿ ಸಂಪೂರ್ಣ ಹಿಡಿತಕ್ಕೆ ಸಿಗುತ್ತಿಲ್ಲ. ಲಿಬಿಯಾ ಸರ್ಕಾರವು ಕೂಡ ಆಂತರಿಕ ಹಿಂಸಾಚಾರ ನಿಯಂತ್ರಿಸಿ ನಿತ್ರಾಣವಾಗಿ ಹೋಗಿದ್ದು, ಈಗಿನ ಪರಿಸ್ಥಿತಿಯ ವೇಳೆ ಖರ್ಚು ಮಾಡಲು ಕೈಯಲ್ಲಿ ಕಾಸೂ ಇಲ್ಲದೆ ಕೈಚೆಲ್ಲಿದೆ. ಬೇರೆ ದೇಶಗಳು ನೆರವಿಗೆ ಮುಂದೆ ಬರುತ್ತಿದ್ದು, ಜನರ ಆಕ್ರಂದನ ಮುಗಿಲು ಮುಟ್ಟಿದೆ.

ಲಿಬಿಯಾಗೆ ಯಾರಿಂದ ಸಿಗುತ್ತಿದೆ ನೆರವು?
ನೆರೆ ದೇಶಗಳಾದ ಈಜಿಪ್ಟ್, ಟರ್ಕಿ, ಅಲ್ಜೀರಿಯಾ, ಟ್ಯುನಿಶಿಯಾ ಮತ್ತು ಯುಎಇ ರಕ್ಷಣಾ ಪಡೆಗಳು ಲಿಬಿಯಾಗೆ ತಲುಪಿವೆ. ಅಮೆರಿಕ ಕೂಡ ವಿಪತ್ತು ನಿರ್ವಹಣಾ ಪಡೆ ರವಾನಿಸಿದ್ದು, ಪರಿಹಾರ ಸಾಮಗ್ರಿ ಒದಗಿಸುವ ಭರವಸೆ ನೀಡಿದೆ. ಆದ್ರೆ ತೈಲ ಸಂಪತ್ತು ಹೊಂದಿದ್ದರು ಕೂಡ ಲಿಬಿಯಾ ಬಡರಾಷ್ಟ್ರವಾಗಿ ನರಳುತ್ತಿದೆ. ಭೀಕರ ಸೈಕ್ಲೋನ್ ಅಬ್ಬರಕ್ಕೆ ತತ್ತರಿಸಿದ್ದು, ಡೆರ್ನಾ ಹಾಗೂ ಇತರ ಪಟ್ಟಣಗಳಿಂದ 40,000 ಜನರ ಸ್ಥಳಾಂತರವಾಗಿದೆ. ಹಾಗೇ ವಿವಿಧ ದೇಶಗಳು ಲಿಬಿಯಾಗೆ ನೆರವಿನ ಹಸ್ತ ಚಾಚಿದ್ದು ಜನರ ರಕ್ಷಣೆಗೆ ಮುಂದೆ ಬಂದಿವೆ.












Click it and Unblock the Notifications