ಲಕ್ ಬದಲಾಗೋದು ಅಂದ್ರೆ ಇದೇ ನೋಡಿ, ಬರೀ 5 ಸಾವಿರಕ್ಕೆ ಕೊಂಡ ಚೇರ್ 1 ಕೋಟಿಗೆ ಮಾರಾಟ
Leather Chair Auction : ಮನುಷ್ಯನ ಅದೃಷ್ಟ ರಾತ್ರಿ ಬೆಳಗಾಗುವುದರಲ್ಲಿಯೇ ಬದಲಾಗಬಹುದು. ಭಿಕ್ಷುಕನೊಬ್ಬನಿಗೆ ಲಾಟರಿ ಹೊಡೆದು ಕೋಟ್ಯಾಧೀಶ ಆಗೋದೂ ಸಾಧ್ಯ, ಸಿರಿವಂತನೊಬ್ಬನ ಕಂಪನಿ ಶೇರ್ಸ್ ನೆಲಕ್ಕೆ ಕುಸಿದು, ಭಿಕ್ಷುಕನೂ ಆಗಬಹುದು. ಯಾರಿಗೆ, ಯಾವ ಟೈಮಲ್ಲಿ ಲಕ್ ಖುಲಾಯಿಸುತ್ತೋ ಹೇಳಲು ಆಗುವುದಿಲ್ಲ. ಬಹುಶಃ ಈ ಕಂಟೆಂಟ್ ಕ್ರಿಯೇಟರ್ ಸಹ ತನ್ನ ವಿಧಿ ಹೀಗೂ ಇರಬಹುದೆಂದು ಕನಸಲ್ಲೂ ಊಹಿಸಿರಲಿಲ್ಲ. ಚಂದದ್ದೊಂದು ವೀಡಿಯೋ ಮಾಡಿ ಪೋಸ್ಟ್ ಮಾಡಿ ಸಿಕ್ಕಾಪಟ್ಟೆ ವೈರಲ್ ಆಗಿದ್ರೆ ಒಂದು ಕಥೆ ಇತ್ತು. ಆದರೆ, ಈತನಿಗೆ ಅಂತಿಂಥ ಅದೃಷ್ಟ ಒಲಿದಿದ್ದಲ್ಲ. ಬರೀ 5 ಸಾವಿರಕ್ಕೆ ಫೇಸ್‌ಬುಕ್ ಮಾರ್ಕೆಟ್ ಪ್ಲೇಸಲ್ಲಿ ಕೊಂಡ ಕುರ್ಚಿಯೊಂದು ಬರೋಬ್ಬರಿ ಕೋಟಿಗೆ ಮಾರಾಟವಾಗಿದೆ.

ಅದೃಷ್ಟ ಬದಲಿಸಿದ ಕುರ್ಚಿ :
ಲಾಸ್ ಏಂಜಲೀಸ್‌ನ ಹೋಮ್ ಡಿಸೈನ್ ಕಂಟೆಂಟ್ ಕ್ರಿಯೇಟರ್ ಜಸ್ಟಿನ್ ಮಿಲ್ಲರ್ ಅದೃಷ್ಟವನ್ನೇ ಫೇಸ್‌ಬುಕ್ ಮಾರ್ಕೆಟ್ ಪ್ಲೇಸ್ ಬದಲಾಯಿಸಿದೆ. ಸುಮ್ಮನೆ ಒಂದಿನ ಈ ಆನ್‌ಲೈನ್ ವೇದಿಕೆಯಲ್ಲಿ ಏನಾದರೂ ಕೊಳ್ಳಬಹುದಾ ಅಂತ ಸ್ಕ್ರೋಲ್ ಮಾಡುತ್ತಿದ್ದ ಮಿಲ್ಲರ್. ಅರ್ಧ ಗಂಟೆ ಸ್ಕ್ರಾಲ್ ಮಾಡಿದ್ರೂ ಏನೂ ಸಿಗಲಿಲ್ಲ. ತುಂಬಾ ದಿನ ಹೀಗೆಯೇ ಸುಮ್ಮನೆ ಸರ್ಚ್ ಮಾಡುವುದಲ್ಲೇ ಕಾಲ ಕಳೆದು ಹೋಗುತ್ತೆ. ಕೆಲವು ಹೋಮ್ ಡೆಕೋರ್ ಐಟಂಗಳು ಕಣ್ಣಿಗೆ ಬಿದ್ದರೂ ಅದನ್ನು ಖರೀದಿಸಲು ಮನಸ್ಸು ಬರೋಲ್ಲ. ಆದರೆ ಫೆಬ್ರವರಿ 2023 ರಲ್ಲಿ, ಅದೊಂದು ಖುರ್ಚಿ ಅವರ ಮನಸ್ಸಿಗೆ ಹಿಡಿಸುತ್ತದೆ. ಇದರಲ್ಲೇನೋ ವಿಶೇಷ ಇದೆ ಎಂದು ಮನಸ್ಸು ಹೇಳುತ್ತದೆ. ಮನದ ಮಾತಿಗೆ ಕಿವಿಗೊಟ್ಟು ಅದನ್ನು ಖರೀದಿಸುತ್ತಾರೆ. ಆದರೆ ಆ ಕುರ್ಚಿ ಇವನ ಅದೃಷ್ಟವನ್ನೇ ಬದಲಾಯಿಸಬಹುದು ಎಂಬುದನ್ನು ಕನಸು ಮನಸಲ್ಲೂ ಊಹಿಸಿರಲಿಲ್ಲ. ಕೇವಲ 50 ಡಾಲರ್ (ಸುಮಾರ್ 5 ಸಾವಿರ ರೂ)ಗೆ ಕೊಂಡ ಈ ಕುರ್ಚಿ ಬಿಕರಿಯಾಗಿದ್ದು ಬರೋಬ್ಬರಿ 107,950 ಡಾಲರ್ (ಸುಮಾರು 1.2 ಕೋಟಿ ರೂಗೆ).
Leather Chair Auction : ಅಂಥದ್ದೇನಿತ್ತು ಈ ಚೇರಲ್ಲಿ?
ಇದು ಲೆದರ್ ಆರ್ಮ್ ಚೇರ್. ಇದನ್ನು ಮಾರುವವರು 50 ಡಾಲರ್ ಫಿಕ್ಸ್ ಮಾಡಿದ್ದರು. ಇದನ್ನು ನೋಡಿದ ತಕ್ಷಣ 33 ವರ್ಷದ ಮಿಲ್ಲರ್‌ಗೆ ಈ ಚೇರಿನ ಲೆದರ್ ಮತ್ತು ಬಣ್ಣ ಯಾಕೋ ವಿಶೇಷ ಪ್ರೀತಿ ಹುಟ್ಟಿದೆ. ಸಾಮಾನ್ಯ ಕುರ್ಚಿಗಿಂತ ಇದು ಖಂಡಿತವಾಗಿಯೂ ಭಿನ್ನವಾಗಿ, ಡಿಸೈನ್ ಸಹ ಎಲ್ಲಾ ಚೇರಿನ ತರಹ ಇರಲಿಲ್ಲ ಎನ್ನುವುದು ಪಕ್ಕಾ ಆಯಿತು. ಏನಾದರೂ ಆಗಲಿ 50 ಡಾಲರ್‌ಗೆ ಈ ಲೆದರ್ ಕುರ್ಚಿ ಎಂಬ ಸುಂದರಿಯನ್ನು ಖರೀದಿಸಿಯೇ ಬಿಡುತ್ತಾನೆ. ಹೇಳಿ ಕೇಳಿ ಹೋಮ್ ಡಿಸೈನ್ ಕಂಟೆಂಟ್ ಕ್ರಿಯೇಟರ್. ಎಲ್ಲವನ್ನೂ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಹಪಾಹಪಿ ಸಹಜ. ಇವನಿಗೆ ದಕ್ಕಿದ ಸುಂದ್ರಿ ಬಗ್ಗೆಯೂ ಟಿಕ್‌ಟಾಕಿನಲ್ಲಿ ಪೋಸ್ಟ್ ಮಾಡಿಯೇ ಬಿಡುತ್ತಾನೆ.
ವಿಶೇಷ ವಿಭಿನ್ನ ಅನನ್ಯ ಕುರ್ಚಿ :
ಇನ್ನು ಈ ಚೇರನ್ನು ಮನೆಗೆ ತೆಗದುಕೊಂಡು ಹೋಗುವುದಕ್ಕೆ ತಯಾರಿ ನಡೆಸುತ್ತಿದ್ದಾಗ ಇದನ್ನು ಸ್ವಲ್ಪ ರಿಪೇರಿ ಮಾಡಿದರೆ ಈ ಕುರ್ಚಿಗೆ ಒಳ್ಳೆಯ ರೇಟ್ ಇದೆ ಎನ್ನುವ ಕಮೆಂಟ್ ಬರುತ್ತೆ ಪೋಸ್ಟಿಗೆ. ಹೌದೆನಿಸಿತು ಮಿಲ್ಲರ್‌ಗೆ. ಅದರ ನಟ್ ಬೋಲ್ಟ್ ಟೈಟ್ ಮಾಡಿಸಿದ್ದಷ್ಟೇ. 'ಷೋಡಶ ಸುಂದರಿ'ಯಂತೆ ಮತ್ತಷ್ಟು ಕಂಗೊಳಿಸುತ್ತದೆ ಈ ಕುರ್ಚಿ. ಯಾಕೋ ಮಿಲ್ಲರ್‌ಗೆ ಈ ಸುಂದರಿ ಮೇಲೆ ವಿಶೇಷ ವ್ಯಾಮೋಹ ಹುಟ್ಟಿ ಬಿಡುತ್ತೆ. ಆನ್‌ಲೈನ್‌ನಲ್ಲಿ (online) ಏನಾದ್ರೂ ಮಾಹಿತಿ ಸಿಗಬಹುದಾ ಅಂತ ಚೆಕ್ ಮಾಡಿದಾಗ ಅದರ ವಿಶೇಷತೆ ಏನೆಂಬುವುದು ಸ್ಪಷ್ಟವಾಗುತ್ತದೆ. ಓಕ್ ಮತ್ತು ಲೆದರ್ ಕುರ್ಚಿಯನ್ನು 1930ರಲ್ಲಿ ಡ್ಯಾನಿಶ್ ವಿನ್ಯಾಸಕ ಫ್ರಿಟ್ಸ್ ಹೆನ್ನಿಂಗ್ಸ್ ಡಿಸೈನ್ ಮಾಡಿದ್ದ. ಇಂತಹ 50 ಕುರ್ಚಿಗಳನ್ನು ಮಾತ್ರ ತಯಾರಿಸಿದ್ದು, ಅವೆಲ್ಲವೂ ಆಗಲೇ ಆರು ಅಂಕದ ಬೆಲೆಗೆ ಮಾರಾಟವಾದ ಮಾಹಿತಿ ಮಿಲ್ಲರ್‌ಗೆ ದಕ್ಕಿತ್ತು.
ಆಕ್ಶನ್ ಹೌಸ್‌ನಲ್ಲಿ ಕುರ್ಚಿ :
ಮಿಲ್ಲರ್ ಸೋಶಿಯ್ ಮಿಡಿಯಾದಲ್ಲಿ ತನಗೆ ಸಿಕ್ಕ ಅಪ್ರತಿಮ ಸುಂದರಿ ಬಗ್ಗೆ ಮತ್ತೊಂದು ಪೋಸ್ಟ್ ಹಾಕುತ್ತಾನೆ. ಈ ಪೋಸ್ಟ್ ವೈರಲ್ ಆಗಿ ಬಿಡುತ್ತೆ. ಕಮೆಂಟ್ಸ್, ಸಲಹೆಗಳು ಉಕ್ಕಿ ಹರಿಯಲು ಶುರುವಾಗುತ್ತದೆ. ಅನೇಕರು ಆಕ್ಷನ್ ಹೌಸ್ ಸಂಪರ್ಕಿಸಲೂ ಹೇಳಿದ್ದಕ್ಕೆ, ಮಿಲ್ಲರ್ ಸೋಥೆಬಿಗೆ ಹೋಗುತ್ತಾನೆ. ಕುರ್ಚಿಯನ್ನು ರಿಪೇರಿ ಮಾಡಿಸಿ, ಹರಾಜಿಗಿಡಲು ನಿರ್ಧರಿಸುತ್ತಾನೆ. ಅಬ್ಬಬ್ಬಾ ಅಂದ್ರೆ 30-50 ಸಾವಿರ ಡಾಲರ್ ಸಿಗಬಹುದೆಂಬುವುದು ಮಲ್ಲರ್ ನಿರೀಕ್ಷೆಯಾಗಿತ್ತು.
ಜೂನ್7ರಂದು ನಡೆದ ಹರಾಜು ನಡೆದಿದ್ದು ಬರೀ ಮೂರು ನಿಮಿಷ. ಚೇರ್ ಮೇಲೆ ಆದ ಬಿಡ್ ಮಿಲ್ಲರ್ ನಿರೀಕ್ಷೆಗೂ ಮೀರಿತ್ತು. ಕುರ್ಚಿ 85,000 ಡಾಲರ್‌ಗೆ ಮಾರಾಟವಾಯಿತು. ಖರೀದಿದಾರರ ಪ್ರೀಮಿಯಂನೊಂದಿಗೆ, ಇದರ ಫೈನಲ್ ಮೊತ್ತ 107,950 ಡಾಲರ್ ವರೆಗೆ ಕೈ ಸೇರಿತು.
ಮಿಲ್ಲರ್ ಈ ಹರಾಜನ್ನು ನೇರವಾಗಿ ವೀಕ್ಷಿಸಿ ಅವರ ರಿಯಾಕ್ಷನ್ ರೆಕಾರ್ಡ್ ಮಾಡಿಕೊಳ್ಳುತ್ತಾನೆ. ಈ ವೀಡಿಯೊ ವೈರಲ್ (viral video) ಆಗಿದ್ದು, ಕೆಲವೇ ಗಂಟೆಗಳಲ್ಲಿ ಇದಕ್ಕೆ 4 ಮಿಲಿಯನ್ ವ್ಯೂವ್ಸ್ ಬರುತ್ತದೆ. 50 ಡಾಲರ್ ಲೆದರ್ ಕುರ್ಚಿ ಎಂಬ ತ್ರಿಪುರ ಸುಂದರಿ ಮಿಲ್ಲರ್ ಅದೃಷ್ಟವನ್ನೇ ಖುಲಾಯಿಸುವಂತೆ ಮಾಡುತ್ತದೆ. ಫೇಸ್ ಬುಕ್ ಮಾರ್ಕೆಟ್ ಪ್ಲೇಸ್ ನಲ್ಲಿ ಒಳ್ಳೆಯ ಸರಕು ಸಿಗಲ್ಲ ಎನ್ನುವುದು ತುಂಬಾ ಜನರ ಅಭಿಪ್ರಾಯ. ಆದರೆ ಮಿಲ್ಲರ್ ವಿಷಯದಲ್ಲಿ ಇದು ಸುಳ್ಳಾಗಿದೆ. ಇದೀಗ ಮಿಲ್ಲರ್ ಮತ್ತೆ ಫೇಸ್ ಬುಕ್ ಮಾರ್ಕೆಟ್ ಪ್ಲೇಸಿನಲ್ಲಿ ಮತ್ತೊಬ್ಬ ಅಪ್ರತಿಮ ಸುಂದರಿ ಸಿಗಬಹುದಾ ಅಂತ ಹುಡುಕುತ್ತಿದ್ದಾರಂತೆ!


Click it and Unblock the Notifications
