World War: 3ನೇ ಮಹಾಯುದ್ಧಕ್ಕೆ ಸರ್ವಾಧಿಕಾರಿ ಸಿದ್ಧತೆ ಬಲು ಜೋರು?
ಜಗತ್ತು 2 ಮಹಾಯುದ್ಧ ನೋಡಿ ಬೆಚ್ಚಿಬಿದ್ದಿತ್ತು, ಹೀಗಾಗಿ ಮುಂದೆ ಎಂದೂ ಮತ್ತೊಂದು ಮಹಾಯುದ್ಧ ನೋಡುವುದಿಲ್ಲ ಎನ್ನಲಾಗಿತ್ತು. ಆದರೆ ಸತ್ಯವಾಗಿಯೂ ಆ ಮಾತು ಸುಳ್ಳು ಎನ್ನುವ ಕಾಲ ಹತ್ತಿರ ಬರುತ್ತಿದೆ. ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧ ಇದೀಗ 3ನೇ ಮಹಾಯುದ್ಧಕ್ಕೆ ದಾರಿ ಮಾಡಿಕೊಟ್ಟಿದೆ. ಅದರಲ್ಲೂ ಇರಲಾರದೆ ಅದೇನೋ ಬಿಟ್ಟುಕೊಂಡರು ಅನ್ನೋ ಹಾಗೆ ಸರ್ವಾಧಿಕಾರಿ ಮಹಾಯುದ್ಧಕ್ಕೆ ಮುಹೂರ್ತ ಇಟ್ಟಂತಿದೆ.
ಉತ್ತರ ಕೊರಿಯಾ ಹಾಗೂ ಅಮೆರಿಕ ನಡುವೆ ಬೆಂಕಿ ಹೊತ್ತಿಕೊಂಡಿದೆ. ಆದರೆ ಇದೇ ಬೆಂಕಿ ಈಗ ಜಗತ್ತನ್ನು ಸುಡುವ ಮುನ್ಸೂಚನೆ ನೀಡಿದೆ. ಏಕೆಂದರೆ ಉಕ್ರೇನ್ & ರಷ್ಯಾ ಯುದ್ಧ ಮಾಡುವಾಗ ಉತ್ತರ ಕೊರಿಯಾ ಕೂಡ ಮಧ್ಯಪ್ರವೇಶ ಮಾಡಿದೆ. ಉಕ್ರೇನ್ ಪರ ಅಮೆರಿಕ ನಿಂತಿರುವ ಕಾರಣಕ್ಕೆ ರಷ್ಯಾ ಪರ ಉತ್ತರ ಕೊರಿಯಾ ನಿಲ್ಲುತ್ತಿದೆ. ಇದೀಗ ರಷ್ಯಾ ಸೇನೆಯ ಬಳಿ ಶಸ್ತ್ರಾಸ್ತ್ರ ಖಾಲಿಯಾದ ಕಾರಣ ಉತ್ತರ ಕೊರಿಯಾ ತನ್ನಲ್ಲಿರುವ ಅಸ್ತ್ರ ರಷ್ಯಾ ಸೇನೆಗೆ ನೀಡಲು ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ.

ರಷ್ಯಾಗೆ ಹೋಗುತ್ತಾನಾ ಸರ್ವಾಧಿಕಾರಿ?
ಹೌದು, ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ರಷ್ಯಾ ಕಡೆ ಪ್ರಯಾಣ ಬೆಳೆಸುತ್ತಾನೆ ಎನ್ನಲಾಗಿದೆ. ರಷ್ಯಾ ಜೊತೆ ಸೇರಿ ಶಸ್ತ್ರಾಸ್ತ್ರ ಪೂರೈಕೆಗೆ ಮಾತುಕತೆ ನಡೆಸಲಿದ್ದಾನೆ ಎನ್ನಲಾಗಿದೆ. ಉತ್ತರ ಕೊರಿಯಾ ಗಡಿ ಸಮೀಪ ಇರುವ ವ್ಲಾಡಿವೋಸ್ಟೋಕ್ ಪ್ರದೇಶದಲ್ಲಿ ಪುಟಿನ್ ಜೊತೆ ಕಿಮ್ ಜಾಂಗ್ ಉನ್ ಚರ್ಚೆ ನಡೆಸುತ್ತಾನಂತೆ. ಈ ಮೂಲಕ ಧಗಧಗಿಸುತ್ತಿರುವ ಉಕ್ರೇನ್ & ರಷ್ಯಾ ನಡುವಿನ ಯುದ್ಧದ ಬೆಂಕಿ ಈಗ ಜಗತ್ತನ್ನೇ ಸುಡುವ ಸೂಚನೆ ನೀಡಿದೆ. ಅದರಲ್ಲೂ ಉತ್ತರ ಕೊರಿಯಾ ನಡೆ ಬಗ್ಗೆ ಅಮೆರಿಕ ರೊಚ್ಚಿಗೆದ್ದಿದೆ.
ಉತ್ತರ ಕೊರಿಯಾ ಬಳಿ ಪರಮಾಣು ಅಸ್ತ್ರ
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಚರ್ಚೆ ನಡೆದು ಒಪ್ಪಂದಕ್ಕೆ ಸಹಿ ಬಿದ್ದರೆ ಮುಗೀತು ಕಥೆ. ಯಾಕಂದ್ರೆ ಉತ್ತರ ಕೊರಿಯಾ ಬಳಿ ಪರಮಾಣು ಅಸ್ತ್ರಗಳು ಇವೆ. ಅಕಸ್ಮಾತ್ ಈ ಪರಮಾಣು ಅಸ್ತ್ರಗಳ ಪೂರೈಕೆ ನಡೆದು, ಉಕ್ರೇನ್ ಮೇಲೆ ನ್ಯೂಕ್ಲಿಯರ್ ದಾಳಿ ನಡೆದರೆ ಅದು ಜಗತ್ತಿನ ಅಂತ್ಯವಾಗಲಿದೆ. ಹೀಗಾಗಿ ಪ್ರಪಂಚಕ್ಕೆ ಮತ್ತೆ ಕಂಟಕ ಎದುರಾಗಿದೆ. ಅದರಲ್ಲೂ ಉತ್ತರ ಕೊರಿಯಾ ಮಧ್ಯಪ್ರವೇಶ ಮಾಡಿರುವುದು ಈಗ ಭಯ ಹುಟ್ಟಿಸಿದೆ.

ರಷ್ಯಾ ವಿರುದ್ಧ ಹೋರಾಟಕ್ಕೆ ಉಕ್ರೇನ್ ಸೇನೆಗೆ ಅಮೆರಿಕ ನೆರವು ನೀಡಿದೆ. ಉಕ್ರೇನ್ ವಿರುದ್ಧ ರಷ್ಯಾ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಕೂಡ ಭಾರಿ ಸಹಾಯವನ್ನೇ ಮಾಡ್ತಿದೆ. ರಷ್ಯಾ ದೀರ್ಘ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ. ಈವರೆಗೆ ಅಮೆರಿಕ ಸುಮಾರು 3ರಿಂದ 4 ಲಕ್ಷ ಕೋಟಿ ರೂಪಾಯಿ ನೆರವನ್ನು ಉಕ್ರೇನ್‌ಗೆ ಕಲ್ಪಿಸಿದೆ. ಇದರ ಜೊತೆಗೆ ರಷ್ಯಾ ಪರವಾಗಿ ಉತ್ತರ ಕೊರಿಯಾ ಮತ್ತು ಚೀನಾ ನಿಂತಿವೆ. ಆದರೆ ರಷ್ಯಾ ಬಳಿ ಮುಂದೆ ಹೋರಾಟ ನಡೆಸಲು ಶಸ್ತ್ರಾಸ್ತ್ರ ಖಾಲಿಯಾಗುತ್ತಿದೆ.
ಉತ್ತರ ಕೊರಿಯಾ ಪರಿಸ್ಥಿತಿ ಗೊತ್ತಾ?
ಕಿಮ್ ಜಾಂಗ್ ಉನ್ ಅಲಿಯಾಸ್ ಉತ್ತರ ಕೊರಿಯಾ ಸರ್ವಾಧಿಕಾರಿ ವಿರುದ್ಧ ಹಲವು ಆರೋಪ ಇದೆ. ಚಿಕ್ಕಪ್ಪನನ್ನೇ ಕೊಂದಿದ್ದು, ತನ್ನ ವಿರೋಧಿಗಳನ್ನು ಒಬ್ಬೊಬ್ಬರಾಗಿ ಮುಗಿಸಿದ್ದು. ಹೀಗೆ ಹೇಳುತ್ತಾ ಹೋದರೆ ಅದಕ್ಕೆ ಸಮಯ ಸಾಲದು. ಇಂತಿಪ್ಪ ಕಿಮ್ ಜಾಂಗ್ ಉನ್ ತನ್ನ ದೇಶದಲ್ಲಿ ಪ್ರಜೆಗಳಿಗೆ ಅನ್ನವಿಲ್ಲದಿದ್ದರೂ ತೆಲೆ ಕೆಡಿಸಿಕೊಳ್ಳೋದಿಲ್ಲ. ಉತ್ತರ ಕೊರಿಯಾ ಜನ ಹಸಿವಿನಿಂದ ನರಳಿ ಸಾಯುತ್ತಾರೆ ಅನ್ನೋ ಮಾತಿದೆ. ಇದು ಸಾಲದು ಎಂಬಂತೆ ಇದೀಗ ರಷ್ಯಾ ಪರವಾಗಿ ಹೋರಾಟ ನಡೆಸಲು ಶಸ್ತ್ರಾಸ್ತ್ರ ನೀಡುತ್ತಾನೆ ಕಿಮ್ ಎಂಬ ಆರೋಪ ಕೂಡ ಕೇಳಿಬಂದಿದೆ.












Click it and Unblock the Notifications