ಏರ್ ಇಂಡಿಯಾ ವಿಮಾನಗಳ ಮೇಲೆ ಆ ದಿನ ದಾಳಿಯಾಗುತ್ತೆ: ಖಲಿಸ್ತಾನಿ ಭಯೋತ್ಪಾದಕನ ಬೆದರಿಕೆ
ನವೆಂಬರ್ 1ರಿಂದ 19ರವರೆಗೆ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣ ಮಾಡಬೇಡಿ ಎಂದು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಕೆ ಕೊಟ್ಟಿದ್ದಾರೆ. ಸಿಖ್ಖರ ನರಮೇಧದ 40ನೇ ವಾರ್ಷಿಕೋತ್ಸವದ ಹಿನ್ನೆಲೆ ಈ ನಿಗದಿತ ದಿನಾಂಕಗಳಲ್ಲಿ ಏರ್ ಇಂಡಿಯಾ ವಿಮಾನದ ಮೇಲೆ ದಾಳಿಯಾಗಬಹುದು ಎಂದು ಪನ್ನುನ್ ಸುಳಿವು ನೀಡಿದ್ದಾರೆ.
ಕೆನಡಾ ಹಾಗೂ ಅಮೇರಿಕಾದಲ್ಲಿ ಪೌರತ್ವ ಹೊಂದಿರುವ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಸಂಘಟನೆಯ ಸ್ಥಾಪಕರು ಕಳೆದ ವರ್ಷವೂ ಇದೇ ಅವಧಿಯಲ್ಲಿ ಇಂತದ್ದೇ ಬೆದರಿಕೆ ಸಂದೇಶ ರವಾನಿಸಿದ್ದರು. ಈಗ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಕೂಡ ಬೆದರಿಕೆ ಹಾಕಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ಹಲವು ವಿಮಾನಯಾನ ಸಂಸ್ಥೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆ ಸಂದೇಶಗಳು ಬರುತ್ತಲೇ ಇವೆ. ಇದರ ನಡುವೆಯೇ ಪನ್ನುನ್ ಬೆದರಿಕೆ ಹಾಕಿರುವುದು ಆತಂಕ ಸೃಷ್ಟಿಸಿದೆ.
ಮತ್ತೊಬ್ಬ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯೂ ಸೇರಿದಂತೆ, ದೇಶದಲ್ಲಿ ಖಲಿಸ್ತಾನಿ ಅಂಶಗಳನ್ನು ಗುರಿಯಾಗಿಸಿಕೊಂಡು ಕೆನಡಾದ ಭಾರತ ಆರೋಪಗಳನ್ನು ಅನುಸರಿಸಿ ಭಾರತ ಮತ್ತು ಕೆನಡಾವು ರಾಜತಾಂತ್ರಿಕ ವಿವಾದದಲ್ಲಿ ತೊಡಗಿರುವ ಸಮಯದಲ್ಲಿ ಇದು ಸಂಭವಿಸಿದೆ.

ಒಂದೆಡೆ ಕೆನಡಾ ಹಾಗೂ ಭಾರತದ ನಡುವೆ ರಾಜತಾಂತ್ರಿಕ ವಿವಾದಗಳು ಭುಗಿಲೆದ್ದಿವೆ. ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಸೇರಿದಂತೆ ಕೆನಡಾದಲ್ಲಿ ಖಲಿಸ್ತಾನಿ ಅಂಶಗಳನ್ನು ಭಾರತ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪ ಮಾಡುತ್ತಿದೆ. ಇದರ ನಡುವೆಯೇ ಈ ಬೆದರಿಕೆ ಬಂದಿರುವುದು ಬಿಗುವಿನ ವಾತಾವರಣ ಸೃಷ್ಟಿಸಿದೆ.
ಕಳೆದ ನವೆಂಬರ್‌ನಲ್ಲೂ ಪನ್ನುನ್ ಅವರು ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮರುನಾಮಕರಣ ಮಾಡಲಾಗುವುದು ಹಾಗೂ ನವೆಂಬರ್ 19ರಂದು ಏರ್‌ಪೋರ್ಟ್ ಮುಚ್ಚುತ್ತೇವೆ ಎಂದು ವಿಡಿಯೋ ರಿಲೀಸ್ ಮಾಡಿದ್ದರು. ಆ ದಿನವೂ ಏರ್ ಇಂಡಿಯಾದಲ್ಲಿ ಪ್ರಯಾಣಿಸದಂತೆ ಜನರಿಗೆ ಎಚ್ಚರಿಕೆಯೂ ನೀಡಿದ್ದರು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕೂಡ ಈತನ ವಿರುದ್ಧ ಕ್ರಿಮಿನಲ್ ಪಿತೂರಿ, ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವುದು, ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆ (ಯುಎಪಿಎ) ಅಡಿಯಲ್ಲಿ ವಿವಿಧ ಅಪರಾಧಗಳಲ್ಲಿ ಈತನ ಕೈವಾಡವಿದೆ ಎಂದು ಆರೋಪಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಪನ್ನುನ್ ಡಿಸೆಂಬರ್ 13 ಅಥವಾ ಅದಕ್ಕಿಂತ ಮೊದಲು ಸಂಸತ್ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದರು. 2001ರ ಡಿಸೆಂಬರ್ 13ರಂದು ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ದಿನವನ್ನೇ ಈತ ಸೂಚಿಸಿದ್ದ. ಅಲ್ಲದೆ, ಈ ವರ್ಷದ ಗಣರಾಜ್ಯೋತ್ಸವದಂದು ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು.
ಪ್ರತ್ಯೇಕ ಸಿಖ್ ರಾಜ್ಯಕ್ಕಾಗಿ ಪ್ರತಿಪಾದಿಸುವ ಎಸ್‌ಎಫ್‌ಜೆ ಎಂಬ ಗುಂಪನ್ನು ಮುನ್ನಡೆಸುತ್ತಿರುವ ಕಾರಣ, ದೇಶದ್ರೋಹ ಮತ್ತು ಪ್ರತ್ಯೇಕತಾವಾದದ ಆರೋಪದ ಮೇಲೆ ಪನ್ನುನ್ ಅವರನ್ನು ಗೃಹ ಸಚಿವಾಲಯವು ಭಯೋತ್ಪಾದಕ ಎಂದು ಘೋಷಿಸಿದೆ. ಅಲ್ಲದೆ ರಾಷ್ಟ್ರ ವಿರೋಧಿ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಕ್ಕಾಗಿ ಈ ಸಂಘಟನೆಯನ್ನು ನಿಷೇಧ ಕೂಡ ಮಾಡಲಾಗಿದೆ.












Click it and Unblock the Notifications