khalistani attack: ಕೆನಡಾದಲ್ಲಿ ಹಿಂದೂಗಳನ್ನು ಅಟ್ಟಾಡಿಸಿ ಥಳಿಸಿದ ಖಲಿಸ್ತಾನಿ ಗುಂಪು!
ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರದ ಮೇಲೆ ಖಲಿಸ್ತಾನಿ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ದೇಶದಲ್ಲಿ ಹಿಂಸಾಚಾರ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ಈ ಘಟನೆಯನ್ನು ಕೆನಡಾದ ವಿರೋಧ ಪಕ್ಷದ ನಾಯಕ ಪಿಯರೆ ಪೊಲಿಯೆವ್ರೆ, ಟೊರೊಂಟೊ ಸಂಸದ ಕೆವಿನ್ ವುವಾಂಗ್ ಮತ್ತು ಸಂಸದ ಚಂದ್ರ ಆರ್ಯ ಸೇರಿದಂತೆ ಕೆನಡಾದ ರಾಜಕಾರಣಿಗಳು ವ್ಯಾಪಕವಾಗಿ ಖಂಡಿಸಿದ್ದಾರೆ.
ಅಲ್ಲದೆ ನಮ್ಮ ದೇಶದ ನಾಯಕರು ಹಿಂದೂಗಳನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಟೊರೊಂಟೊ ಸಂಸದರು ದೂರಿದ್ದಾರೆ. ದೇವಸ್ಥಾನದಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ಭಾರತ ಸರ್ಕಾರ ಕೂಡ ಖಂಡಿಸಿದೆ. ಅಲ್ಲದೆ ಈ ದಾಳಿ ಸಂಬಂಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೆನಡಾದ ಅಧಿಕಾರಿಗಳಿಗೂ ತಾಕೀತು ಮಾಡಿದೆ. ಭಾರತೀಯ ಹೈಕಮೀಷನ್ ಕೂಡ ಇದನ್ನು ತೀವ್ರವಾಗಿ ಖಂಡಿಸಿದೆ.

ಕೆನಡಾ ಮತ್ತು ಭಾರತ ನಡುವಿನ ಸಂಬಂಧಗಳು ಹದಗೆಟ್ಟಿರುವ ನಡುವೆ ಈ ದಾಳಿಯು ಮಹತ್ವದ ಸ್ವರೂಪ ಪಡೆದುಕೊಂಡಿದೆ. ಈ ದಾಳಿ ನಿನ್ನೆ ನಡೆದಿದೆ ಎಂದು ಹೇಳಲಾಗಿದೆ. ಹಿಂದೂ ದೇವಸ್ಥಾನದಲ್ಲಿ ಪೂಜೆಗೆ ಬಂದಿದ್ದ ಭಕ್ತರ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ. ಈ ವಿಡಿಯೋಗಳು ಹರಿದಾಡಿದ್ದು, ಇದರಲ್ಲಿ ಹಿಂದೂ ಸಭಾ ಮಂದಿರದ ಹೊರಗೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಎರಡು ವರ್ಷಗಳಲ್ಲಿ ಕೆನಡಾದಲ್ಲಿರುವ 20ಕ್ಕೂ ಹೆಚ್ಚು ದೇವಸ್ಥಾನಗಳ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರದಲ್ಲಿ ಆರಾಧಕರನ್ನು ಗುರಿಯಾಗಿಸಿಕೊಂಡು ನಡೆದಿರುವ ಹಿಂಸಾಚಾರ ಸ್ವೀಕಾರಾರ್ಹವಲ್ಲ. ಕೆನಡಾದಲ್ಲಿನ ಈ ಅವ್ಯವಸ್ಥೆಯ ವಾತಾವರಣವನ್ನು ನಿರ್ಮೂಲನೆ ಮಾಡುವುದಾಗಿ, ಶಾಂತಿ ಮಂತ್ರ ಪಠಿಸುವುದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ರಾಜಕೀಯ ಪ್ರತಿಸ್ಪರ್ಧಿ ಪೊಯಿಲಿವ್ರೆ ಪ್ರತಿಪಾದಿಸಿದ್ದಾರೆ.
ಎಲ್ಲ ಕೆನಡಿಯನ್ನರು ತಮ್ಮ ನಂಬಿಕೆ, ಆಚರಣೆಗಳನ್ನು ಶಾಂತಿಯಿಂದ ಪಾಲಿಸಲು ಮುಕ್ತರಾಗಿರಬೇಕು. ಸಂಪ್ರದಾಯವಾದಿಗಳು ಈ ಹಿಂಸೆಯನ್ನು ಖಂಡಿಸುತ್ತಾರೆ. ನಾನು ನಮ್ಮ ಜನರನ್ನು ಒಗ್ಗೂಡಿಸಿ ಈ ಅವ್ಯವಸ್ಥೆಯನ್ನು ಕೊನೆಗೊಳಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

ಕೆನಡಾದ ಸಂಸತ್ ಸದಸ್ಯ ಚಂದ್ರ ಆರ್ಯ ಕೂಡ ಹಿಂದೂ ದೇವಾಲಯದಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿದ್ದಾರೆ. ಕೆನಡಾದಲ್ಲಿ ಹಿಂಸಾತ್ಮಕ ಉಗ್ರವಾದದ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಖಲಿಸ್ತಾನಿ ಉಗ್ರಗಾಮಿಗಳು ಕೆಂಪು ಗೆರೆಯನ್ನು ದಾಟಿದ್ದಾರೆ ಎಂದಿದ್ದಾರೆ.
ಕೆನಡಾ ಮೂಲಭೂತವಾದಿಗಳಿಗೆ ಸುರಕ್ಷಿತವಾದ ಸ್ಥಳವಾಗಿದೆ. ದೇಶದ ನಾಯಕರು ಕೂಡ ಕ್ರೈಸ್ತರು ಮತ್ತು ಯಹೂದಿ ಕೆನಡಿಯನ್ನರನ್ನು ರಕ್ಷಿಸಲು ವಿಫಲರಾದಂತೆ ಹಿಂದೂಗಳನ್ನು ರಕ್ಷಿಸಲು ಫೇಲ್ ಆಗಿದ್ದಾರೆ ಎಂದು ಟೊರೊಂಟೊ ಸಂಸದ ಕೆವಿನ್ ವುಂಗ್ ಕೂಡ ಆಕ್ರೋಶ ಹೊರಹಾಕಿದ್ದಾರೆ.
ಹಿಂದೂ ಕೆನಡಿಯನ್ನರ ಮೇಲಿನ ದಾಳಿಯನ್ನು ನೋಡಿ ನನಗೆ ಗಾಬರಿಯಾಗಿದೆ. ಖಲಿಸ್ತಾನಿ ಉಗ್ರಗಾಮಿಗಳಿಂದ ಹಿಡಿದು ಭಯೋತ್ಪಾದಕರಿಗೆ, ಅವರಿಗೆ ಸಹಕಾರ ನೀಡುವವರಿಗೆ ಹಾಗೂ ಮೂಲಭೂತವಾದಿಗಳಿಗೆ ಕೆನಡಾ ಸುರಕ್ಷಿತ ತಾಣವಾಗಿದೆ. ನಮ್ಮ ನಾಯಕರು ಹಿಂದೂಗಳನ್ನು ರಕ್ಷಿಸಲು ವಿಫಲರಾಗಿದ್ದಾರೆ. ನಾವೆಲ್ಲರೂ ಶಾಂತಿಯಿಂದ ಪೂಜಿಸಲು ಅರ್ಹರು ಎಂದು ಪೋಸ್ಟ್ ಮಾಡಿದ್ದಾರೆ.











Click it and Unblock the Notifications