Israel-Palestine Conflict: ಹಮಾಸ್ ಕಿರಾತಕರಿಗೆ ಇರಾನ್ ಬೆಂಬಲ- ಮಧ್ಯಪ್ರಾಚ್ಯದಲ್ಲಿ ರಕ್ತದೋಕುಳಿ ಪಕ್ಕಾ
ಇಸ್ರೇಲ್ ನೆಲದಲ್ಲಿ ಹಮಾಸ್ ಬಂಡುಕೋರರ ಪ್ರಭಾವದಿಂದ ಹೊತ್ತಿಕೊಂಡ ಬೆಂಕಿಗೆ ಈಗ ಇರಾನ್ ಬೆಂಬಲ ಸೂಚಿಸಿದೆ. ಈ ಮೂಲಕ ದಿಢೀರ್ ಉಗ್ರರ ಕೈಗೆ ಇಷ್ಟೊಂದು ಶಸ್ತ್ರಾಸ್ತ್ರ ಕೊಟ್ಟಿದ್ದು ಯಾರು? ಎಂಬ ಪ್ರಶ್ನೆಗೂ ಉತ್ತರ ಸಿಕ್ಕಂತಾಗಿದೆ. ಹಾಗಾದರೆ ಉಗ್ರರ ಕುರಿತು ಇರಾನ್ ಹೇಳಿದ್ದೇನು? ಇಸ್ರೇಲ್ ಈಗ ಇರಾನ್ ವಿರುದ್ಧವೂ ಯುದ್ಧ ಘೋಷಿಸುತ್ತಾ? ಬನ್ನಿ ತಿಳಿಯೋಣ.
ಇರಾನ್ ಮತ್ತು ಇಸ್ರೇಲ್ ಬದ್ಧವೈರಿಗಳು, ಎರಡೂ ದೇಶಗಳು ಹಾವು & ಮುಂಗುಸಿಯಂತೆ. ಹೀಗಿದ್ದಾಗ ಹಮಾಸ್ ಉಗ್ರರು ಇಂದು ಇಸ್ರೇಲ್ ಮೇಲೆ ದಾಳಿ ನಡೆಸಿದ ಕ್ರಮವನ್ನ ಇರಾನ್ ಕೊಂಡಾಡಿದೆ. ಅಲ್ಲದೆ ಇಸ್ರೇಲ್ ನೆಲದಲ್ಲಿ ರಕ್ತ ಚೆಲ್ಲಾಡಿರುವ ಹಮಾಸ್ ಬಂಡುಕೋರರಿಗೆ ಇರಾನ್ ಅಭಿನಂದನೆ ತಿಳಿಸಿದೆ. ಸ್ವತಃ ಇರಾನ್ ಸೇನಾ ಕಮಾಂಡರ್ ಹಮಾಸ್ ಉಗ್ರರ ಈ ಭೀಕರ ದಾಳಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದು, ಮೊದಲೇ ರೊಚ್ಚಿಗೆದ್ದಿದ್ದ ಇಸ್ರೇಲ್‌ಗೆ ಈ ಬೆಳವಣಿಗೆ ಮತ್ತಷ್ಟು ಕೋಪ ತರಿಸಿದೆ. ಹಮಾಸ್ ವಿರುದ್ಧ ಯುದ್ಧ ಸಾರಿರುವ ಸಮಯಕ್ಕೇ ಇರಾನ್ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಇರಾನ್ ಕಮಾಂಡರ್ ಹೇಳಿದ್ದೇನು?
ಹಮಾಸ್ ಉಗ್ರರು ಇಸ್ರೇಲ್ ವಿರುದ್ಧ ರಕ್ತಸಿಕ್ತ ಹೋರಾಟ ನಡೆಸುವ ಸಮಯದಲ್ಲಿ ಇರಾನ್ ಸೇನಾ ಕಮಾಂಡರ್ ರಹೀಮ್ ಸಫವಿ, ಹಮಾಸ್ ಬಂಡುಕೋರರನ್ನು ಕೊಂಡಾಡಿದ್ದಾರೆ. ಇಷ್ಟು ಸಾಲದು ಎಂಬಂತೆ ಪ್ಯಾಲೆಸ್ತೀನ್ & ಜೆರುಸಲೇಂಗೆ ವಿಮೋಚನೆ ಸಿಗುವವರೆಗೂ ಈ ಹೋರಾಟವನ್ನ ಹಾಗೂ ಪ್ಯಾಲೆಸ್ತೀನಿ ಹೋರಾಟಗಾರರನ್ನ ಬೆಂಬಲಿಸುತ್ತೇವೆ ಎಂದಿದ್ದಾರೆ. ಈ ಮೂಲಕ ಇಸ್ರೇಲ್ ಕೋಪ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ ಇರಾನ್.
ಶಸ್ತ್ರಾಸ್ತ್ರ ಕೊಟ್ಟಿದ್ದು ಇರಾನ್ ಸೇನೆ?
ಮೊದಲಿನಿಂದ ಇಸ್ರೇಲ್ ವಿರುದ್ಧವೇ ನಿಂತಿರುವ ಇರಾನ್ ನಡೆ ಅಚ್ಚರಿ ಮೂಡಿಸಿಲ್ಲ. ಆದ್ರೆ ಇರಾನ್ ಸೇನಾ ಕಮಾಂಡರ್ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ಈ ಮಟ್ಟಿಗೆ ದಿಢೀರ್ ಅಂತಾ ಹಾಮಾಸ್ ಉಗ್ರರ ಕೈಗೆ ಗನ್, ಬಾಂಬ್, ರಾಕೆಟ್ ಬಂದಿದ್ದೇಗೆ? ಎಂಬ ಪ್ರಶ್ನೆ ಬೆಳಗ್ಗೆಯಿಂದಲೂ ಕಾಡುತ್ತಿತ್ತು. ಇದೀಗ ಹಮಾಸ್ ಉಗ್ರರ ಹಿಂದೆ ಇರಾನ್‌ನ ಸೇನೆ ನಿಂತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇರಾನ್ ಸೇನೆ ಸಹಾಯದಿಂದಲೇ ಉಗ್ರರು ಹೀಗೆ ಇಸ್ರೇಲ್ ಮೇಲೆ ದಾಳಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದು ಒಂದು ಮುಖವಾದರೆ, ಮತ್ತೊಂದು ಭಾಗದಲ್ಲಿ ಭೀಕರ ಹಿಂಸಾಚಾರ ನಡೆಯುತ್ತಿದೆ. ಇಸ್ರೇಲ್ ಒಳಗೆ ನುಗ್ಗಿರುವ ಹಮಾಸ್ ಬಂಡುಕೋರರು ಇಸ್ರೇಲ್ ಯೋಧರ ಮೇಲೆ ಭೀಕರ ದಾಳಿ ಮಾಡುತ್ತಿದ್ದಾರೆ. ಚಿತ್ರಹಿಂಸೆ ನೀಡುತ್ತಾ, ಗಾಡಿಗಳಲ್ಲಿ ಅವರನ್ನು ಹೊತ್ತೊಯ್ಯುವ ದೃಶ್ಯ ಆತಂಕ ಹುಟ್ಟಿಸುತ್ತಿದೆ. ಇನ್ನೊಂದು ಕಡೆ ಇಸ್ರೇಲ್ ಸೇನೆ ಹಮಾಸ್ ಉಗ್ರರ ನೆಲೆಗಳ ಮೇಲೆ ತನ್ನ ವಾಯು ದಾಳಿಯನ್ನು ಮುಂದುವರಿಸಿದೆ.












Click it and Unblock the Notifications